ಬಯೋಗ್ಯಾಸ್ ಬಳಕೆಗೆ ಮುಂದಾದ ಪಾಲಿಕೆ

7
ಹಸಿ ತ್ಯಾಜ್ಯದಿಂದ ಜೈವಿಕ ಇಂಧನ ಉತ್ಪಾದನೆ: ರೆಸ್ಟೋರೆಂಟ್, ಹೋಟೆಲ್‌ ಮಾಲೀಕರಿಗೆ ಪ್ರಾತ್ಯಕ್ಷಿಕೆ

ಬಯೋಗ್ಯಾಸ್ ಬಳಕೆಗೆ ಮುಂದಾದ ಪಾಲಿಕೆ

Published:
Updated:
Prajavani

ಹುಬ್ಬಳ್ಳಿ: ತ್ಯಾಜ್ಯವನ್ನು ಮರುಬಳಕೆ ಮಾಡುವತ್ತ ಚಿತ್ತ ಹರಿಸಿರುವ ಮಹಾನಗರ ಪಾಲಿಕೆ ಈಗಾಗಲೇ ಎರಡು ಕಾಂಪೋಸ್ಟ್‌ ಘಟಕಗಳ ನಿರ್ಮಾಣದಲ್ಲಿ ತೊಡಗಿದೆ. ಹಸಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನೆ ಮಾಡಲು ಸಹ ಮುಂದಾಗಿದೆ.

ಜೆ.ಎಂ.ಎಸ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿರುವ ಪಾಲಿಕೆ, ಸಮೀಪದ ಉದ್ಯಾನದ ಬಳಿ ಮೂರು ತಿಂಗಳ ಹಿಂದೆ ಪ್ರಾಯೋಗಿಕವಾಗಿ ಬಯೋಗ್ಯಾಸ್ ಘಟಕ ಅಳವಡಿಸಿ ಯಶಸ್ಸು ಕಂಡಿದೆ. ಅಲ್ಲದೆ, ಮಹಾನಗರ ವ್ಯಾಪ್ತಿಯ ಹೋಟೆಲ್ ಮಾಲೀಕರ ಜತೆ ಸಭೆ ನಡೆಸಿ, ಬಯೋಗ್ಯಾಸ್ ಅಳವಡಿಸಿಕೊಳ್ಳುವಂತೆ ಮನವೊಲಿಸುತ್ತಿದೆ.

‘ಹಸಿ ತ್ಯಾಜ್ಯವನ್ನು ಎಸೆಯುವ ಬದಲು, ಅದನ್ನು ಬಯೋಗ್ಯಾಸ್ ಆಗಿ ಪರಿವರ್ತಿಸಿದರೆ ಅನುಕೂಲಗಳೇ ಹೆಚ್ಚು. ಹಾಗಾಗಿ, ಪಾಲಿಕೆ ಆವರಣದಲ್ಲಿ ಪ್ರಾಯೋಗಿಕವಾಗಿ ಒಂದು ಘಟಕವನ್ನು ಅಳವಡಿಸಿ, ಅಧಿಕಾರಿಗಳ ತಂಡದಿಂದ ಪರಿಶೀಲಿಸಲಾಯಿತು. ಇದೊಂದು ಉತ್ತಮ ಪ್ರಯೋಗ ಎನಿಸಿದ್ದರಿಂದ, ಅದನ್ನು ಪಕ್ಕದ ಚಿಟಗುಪ್ಪಿ ಆಸ್ಪತ್ರೆಯ ಹೆರಿಗೆ ವಾರ್ಡ್‌ಗೆ ಸ್ಥಳಾಂತರಿಸಿ, ಅಲ್ಲಿ ಬಿಸಿ ನೀರು ಕಾಯಿಸಲು ಬಳಸಲಾಗುತ್ತಿದೆ’ ಎಂದು ಪಾಲಿಕೆಯ ಘನ ತ್ಯಾಜ್ಯ ವಿಭಾಗದ ಪರಿಸರ ಎಂಜಿನಿಯರ್ ನಯನಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾರವಾರ ರಸ್ತೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪಾಲಿಕೆ ಎರಡು ವರ್ಷದ ಹಿಂದೆಯೇ ಬಯೋಗ್ಯಾಸ್ ಅಳವಡಿಸಿದೆ. ಸದ್ಯ ಕಸಾಯಿಖಾನೆಯಲ್ಲಿ ಪಾಲಿಕೆಯೇ ಬಯೋಗ್ಯಾಸ್ ಅಳವಡಿಸಲು ಚಿಂತನೆ ನಡೆಸಿದೆ. ಇದರಿಂದ ಅಲ್ಲಿನ ಕಾರ್ಮಿಕರಿಗೆ ಅನುಕೂಲವಾಗುತ್ತದೆ. ಜತೆಗೆ, ಬಯೋಗ್ಯಾಸ್ ಯಂತ್ರದಿಂದ ಉಳಿಯುವ ಮಡ್ಡಿಯನ್ನು ಬೆಳೆಗಳಿಗೆ ಗೊಬ್ಬರವಾಗಿಯೂ ಬಳಸಬಹುದಾಗಿದೆ’ ಎಂದು ತಿಳಿಸಿದರು.

ಕನಿಷ್ಠ ಬಂಡವಾಳ, ಸುಲಭ ನಿರ್ವಹಣೆ:

‘ಕನಿಷ್ಠ 3 ಕ್ಯುಬಿಕ್ ಮೀಟರ್ ಸಾಮರ್ಥ್ಯದ ಪೋರ್ಟಬಲ್ ಅಥವಾ ಮಾಡ್ಯೂಲರ್ ಬಯೋಗ್ಯಾಸ್ ಘಟಕ ಅಳವಡಿಕೆಗೆ ಕನಿಷ್ಠ ₹ 1.25 ಲಕ್ಷ ಬಂಡವಾಳ ಹಾಕಬೇಕು. ಉದಾಹರಣೆಗೆ ನಿತ್ಯ 25 ಕೆ.ಜಿ. ಹಸಿ ತ್ಯಾಜ್ಯವನ್ನು ಯಂತ್ರಕ್ಕೆ ಹಾಕಿದರೆ, 1.3 ಕ್ಯು.ಮೀ ಅನಿಲ ಉತ್ಪಾದನೆಯಾಗುತ್ತದೆ. ಇದನ್ನು ಎಲ್‌ಪಿಜಿಗೆ ಪರಿವರ್ತಿಸಿದಾಗ ಅರ್ಧ ಕೆ.ಜಿ.ಯಷ್ಟಾಗುತ್ತದೆ’ ಎಂದು ಜೆ.ಎಂ.ಎಸ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪ್ರತಿನಿಧಿ ನವೀನ್ ಎಸ್.ಡಿ. ಹೇಳಿದರು.

‘ಹಸಿ ತ್ಯಾಜ್ಯ ಎಷ್ಟು ಉತ್ಪಾದನೆಯಾಗುತ್ತದೊ ಅಷ್ಟು ಪ್ರಮಾಣದ ಅನಿಲ ಸಿಗುತ್ತದೆ. ಹಾಕಿದ ಬಂಡವಾಳ ಎರಡೂವರೆ ವರ್ಷದೊಳಗೆ ಕೈ ಸೇರುತ್ತದೆ. ನಿರ್ವಹಣೆಯೂ ಸುಲಭ. ದಿನಕ್ಕೆ ಮೂರು ಬಾರಿ ಹಸಿ ತ್ಯಾಜ್ಯವನ್ನು ಯಂತ್ರದಲ್ಲಿ ಹಾಕಿದರೆ ಸಾಕು. ಅದು ಜೈವಿಕ ಅನಿಲವನ್ನು ಉತ್ಪಾದಿಸುತ್ತದೆ. ನಿರ್ವಹಣಾ ಸಾಮರ್ಥ್ಯಕ್ಕೆ ತಕ್ಕಂತೆ ಯಂತ್ರ ಬಾಳಿಕೆ ಬರುತ್ತದೆ’ ಎಂದು ವಿವರಿಸಿದರು.

‘ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ ಮೈಸೂರು, ಬೆಂಗಳೂರು, ಶಿವಮೊಗ್ಗ ಘಟಕ, ಬೆಂಗಳೂರಿನ ಆರ್‌ಬಿಐ ಬ್ಯಾಂಕ್, ಕುಂದೂರು ಮಠ, ಬೆಂಗಳೂರಿನ ಇಂದಿರಾ ಕ್ಯಾಂಟೀನ್, ಉಡುಪಿಯ ಡೇರಿ ಫಾರ್ಮ್ ಹಾಗೂ ಶ್ರವಣಬೆಳಗೋಳದಲ್ಲಿ ಬಯೋಗ್ಯಾಸ್ ಘಟಕಗಳನ್ನು ಅಳವಡಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !