ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಳಿಕೆರೆ ಅಭಿವೃದ್ಧಿ; ಸದಸ್ಯರ ವಾಗ್ವಾದ

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆ
Published 29 ಫೆಬ್ರುವರಿ 2024, 15:50 IST
Last Updated 29 ಫೆಬ್ರುವರಿ 2024, 15:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್- 8ರ ಹೊಸಯಲ್ಲಾಪುರದ ಕೋಳಿಕೆರೆ ಅಭಿವೃದ್ಧಿ ವಿಷಯವು ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ವಾಗ್ವಾದಕ್ಕೆ ಕಾರಣವಾಯಿತು.

ಸಭೆ ಆರಂಭವಾಗುತ್ತಿದ್ದಂತೆ ಗಮನಸೆಳೆಯುವ ಸೂಚನೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಶಂಕರ ಶೆಳಕೆ, ‘ಕೋಳಿಕೆರೆ ಅಭಿವೃದ್ದಿ ಕಾರ್ಯ ನನ್ನ ಗಮನಕ್ಕೆ ಬಾರದೆ ನಡೆಯುತ್ತಿದೆ. ಹೂಳು ತುಂಬಿಕೊಂಡು ಸಾಗುವ ಟಿಪ್ಪರ್‌ಗಳು ಅಪಾಯಕಾರಿ ರೀತಿಯಲ್ಲಿ ಸಂಚರಿಸುತ್ತಿವೆ. ದೂಳು ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ’ ಎಂದರು.

‘ಕಾಮಗಾರಿ ಬಗ್ಗೆ ಮಾಹಿತಿ ಕೇಳಿದ್ದಕ್ಕೆ ನನಗೆ ಬೆದರಿಕೆ ಹಾಕಿದ್ದಾರೆ. ಅಧಿಕಾರಿಗಳು ಕೆಲವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ವಾರ್ಡ್‌ಗೆ ಸಂಬಂಧ ಇಲ್ಲದ ಪ್ರಭಾವಿಗಳು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸಮರ್ಪಕವಾಗಿ ಉತ್ತರ ನೀಡಬೇಕು’ ಎಂದು ಪ‍ಟ್ಟು ಹಿಡಿದರು.

ಈ ವೇಳೆ ಹಿರಿಯ ಸದಸ್ಯ ಈರೇಶ ಅಂಚಟಗೇರಿ ಮಾತನಾಡಿ, ‘ಪಾಲಿಕೆ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಆದರೆ, ವಾರ್ಡ್‌ ಸದಸ್ಯರನ್ನು ಕರೆಯದೆ ಕಾಮಗಾರಿಗಳನ್ನು ಆರಂಭಿಸಿದರೆ ಅವರಿಗೆ ಅಗೌರವ ತೋರಿದಂತಾಗುತ್ತದೆ’ ಎಂದರು.

‘ಈ ಹಿಂದೆ ನಮ್ಮ ವಾರ್ಡ್‌ಗಳಲ್ಲಿಯೂ ಈ ರೀತಿ ಆಗಿದೆ. ಆ ಬಗ್ಗೆಯೂ ಚರ್ಚೆಗೆ ಅವಕಾಶ ನೀಡಬೇಕು ಹಾಗೂ ಈ ರೀತಿ ಮಾಡಿದ ಅಧಿಕಾರಿಗಳ ಮೇಲೆ ಕ್ರಮ‌ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ ವಿಪಕ್ಷದ ಸದಸ್ಯರು, ಮೇಯರ್ ಪೀಠದ ಎದುರು ಹೋಗಿ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ‘ಕೋಳಿಕೆರೆ 42 ಎಕರೆ ಪ್ರದೇಶದಲ್ಲಿದ್ದು, 30 ವರ್ಷಗಳಿಂದ ಹೂಳು ತುಂಬಿಕೊಂಡಿದೆ. ಹೂಳು ತೆಗೆಯುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ಸುಭಾಷ್‌ ಬಿ. ಅಡಿ ಅವರು ಸೂಚಿಸಿದ್ದರು. ಕೆರೆ ಅಭಿವೃದ್ಧಿ ಪ್ರಾಧಿಕಾರ ಸಹ ಇದಕ್ಕೆ ನಿರಾಕ್ಷೇಪಣಾ (ಎನ್‌ಒಸಿ) ಪತ್ರ ನೀಡಿತ್ತು’ ಎಂದರು.

ಈ ವೇಳೆ ಶೆಳಕೆ, ‘ಕೆರೆ ಅಭಿವೃದ್ಧಿ ಪ್ರಾಧಿಕಾರ ನೀಡಿದ ಎನ್‌ಒಸಿ ಬಗ್ಗೆ ನನಗೆ ಏಕೆ ಮಾಹಿತಿ ನೀಡಲಿಲ್ಲ’ ಎಂದು ಹರಿಹಾಯ್ದರು. ಈ ಕುರಿತು ಎರಡೂ ಪಕ್ಷಗಳ ಸದಸ್ಯರ ನಡುವೆ ವಾಗ್ವಾದ ತಾರಕಕ್ಕೇರಿದಾಗ ಮೇಯರ್ ಸಭೆಯನ್ನು 15 ನಿಮಿಷ ಮುಂದೂಡಿದರು.

ಸಭೆ ಮತ್ತೆ ಆರಂಭವಾಗ, ‘ರೈತರು ಸ್ವಯಂಪ್ರೇರಿತವಾಗಿ ಹೂಳು ತೆಗೆದುಕೊಂಡು ಹೋಗುತ್ತಿದ್ದಾರೆ. ಅವರು ತೆಗೆದುಕೊಂಡು ಹೋದ ನಂತರ ಉಳಿದ ಹೂಳು ತೆಗೆಯಲು ಟೆಂಡರ್ ಕರೆಯಲಾಗುವುದು’ ಎಂದು ಅಧಿಕಾರಿ ತಿಳಿಸಿದರು.

ಎಐಎಂಐಎಂ ಸದಸ್ಯ ನಜೀರ್ ಅಹ್ಮದ್ ಹೊನ್ಯಾಳ ಮಾತನಾಡಿ, ‘ಮಹಾನಗರ ಪಾಲಿಕೆಯ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳುವಾಗ ಶಿಷ್ಟಾಚಾರದ ಪ್ರಕಾರ ಪಾಲಿಕೆ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಸದಸ್ಯರನ್ನು ಬಿಟ್ಟು ಭೂಮಿಪೂಜೆ ನೆರವೇರಿಸುವುದು ಇಲ್ಲಿಗೇ ಕೊನೆಯಾಗಬೇಕು. ಈ ಬಗ್ಗೆ ಸಭೆಯಲ್ಲಿ ಠರಾವು ಪಾಸು‌ ಮಾಡಬೇಕು’ ಎಂದರು.

‘ಇನ್ನು ಮುಂದೆ ಕಡ್ಡಾಯವಾಗಿ ಮಹಾನಗರ ಪಾಲಿಕೆ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಭೂಮಿಪೂಜೆ ನೆರವೇರಿಸಬೇಕು’ ಎಂದು ಮೇಯರ್ ಆದೇಶ ನೀಡಿದರು.

ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ ವಿಪಕ್ಷ ಸದಸ್ಯೆ ಸುನಿತಾ ಬುರಬುರೆ, ‘ವಾರ್ಡ್ ನಂ.65ರ ಮೇದಾರ ಓಣಿಯಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಯಂತ್ರ ಅಳವಡಿಸುವ ಕುರಿತು ಏಳು ತಿಂಗಳ ಹಿಂದೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಲಾಗಿತ್ತು. ಈವರೆಗೂ ಅಳವಡಿಸಿಲ್ಲ. ವಿಳಂಬ ಮಾಡದಂತೆ ಮೇಯರ್ ಆದೇಶ ನೀಡಬೇಕು’ ಎಂದರು.

‘ಸ್ಮಾರ್ಟ್‌ಸಿಟಿಯಿಂದ ಮಹಾನಗರ ಪಾಲಿಕೆಗೆ ಆಸ್ಪತ್ರೆಯ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ. ಹಸ್ತಾಂತರವಾದ ನಂತರ 15 ದಿನಗಳಲ್ಲಿ ಯಂತ್ರವನ್ನು ಅಳವಡಿಸಲಾಗುವುದು’ ಎಂದು ಕಮಿಷನರ್‌ ಹೇಳಿದರು.

ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ ಶಂಕರ ಶೆಳಕೆ, ‘ಕೋಳಿಕೆರೆ ಅಭಿವೃದ್ಧಿಗೆ 2013–14ರಲ್ಲಿ ₹3 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಮತ್ತೆ 2017–18ರಲ್ಲಿ ₹15 ಲಕ್ಷ ಖರ್ಚು ತೋರಿಸಿದ್ದಾರೆ. ಈ ರೀತಿ ಮಾಡಿ ಅಧಿಕಾರಿಗಳು ಜನರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆ’ ಎಂದು ದೂರಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್ ಪ್ರತಿಕ್ರಿಯಿಸಿದರು.

ನೀರಿನ ವಿಷಯ ಚರ್ಚೆ; ಮುಂದೂಡಿಕೆ: ಎಲ್‌ ಆ್ಯಂಡ್ ಟಿ ಕಂಪನಿಯಿಂದ ನಳಗಳಿಗೆ ಮೀಟರ್ ಅಳವಡಿಸಲು ₹9 ಸಾವಿರ ಶುಲ್ಕ ನಿಗದಿಪಡಿಸಿದ್ದು, ಸರಿಯಲ್ಲ ಎಂದು ಸದಸ್ಯರು ಆಕ್ರೋಶ ಹೊರಹಾಕಿದರು.

‘ಮೂಲ ಒಪ್ಪಂದದಲ್ಲಿ ಏನಾಗಿದೆ ಎಂದು ಅಧಿಕಾರಿಗಳಿಗೆ ಸರಿಯಾಗಿ ಮಾಹಿತಿ ಇಲ್ಲ. ಸದಸ್ಯರ ಗಮನಕ್ಕೆ ತರದೆ ಈ ವಿಷಯವನ್ನು ಚರ್ಚೆಗೆ ತರಲಾಗಿದೆ. ಈ ಬಗ್ಗೆ ಠರಾವು ಪಾಸು ಮಾಡಿದರೆ ಮುಂದಿನ ದಿನಗಳಲ್ಲಿ ಪಾಲಿಕೆಗೆ ತೊಂದರೆಯಾಗುತ್ತದೆ. ಹೀಗಾಗಿ ಈ ವಿಷಯ ಕೈಬಿಡಬೇಕು’ ಎಂದು ಸದಸ್ಯರು ಒತ್ತಾಯಿಸಿದರು. ನಂತರ ಈ ವಿಷಯ ಕೈಬಿಡಲಾಯಿತು.

ಕೋರಂ ಕೊರತೆ ಕಾರಣ ಬೆಳಿಗ್ಗೆ ಅರ್ಧ ಗಂಟೆ ತಡವಾಗಿ ಸಭೆ ಆರಂಭವಾಯಿತು. ಈಚೆಗೆ ನಿಧನರಾದ ಯಾದಗಿರಿ ಜಿಲ್ಲೆಯ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT