ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ: ಹಿರಿಯರ ಮೇಲೆಯೂ ಕಣ್ಣು

Published 1 ಡಿಸೆಂಬರ್ 2023, 4:19 IST
Last Updated 1 ಡಿಸೆಂಬರ್ 2023, 4:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: 27 ವರ್ಷಗಳ ಹಿಂದೆ ಕಳೆದುಕೊಂಡ ಧಾರವಾಡ ಲೋಕಸಭಾ ಕ್ಷೇತ್ರ ಪುನಃ ತನ್ನದಾಗಿಸಿಕೊಳ್ಳಲು ಪಣ ತೊಟ್ಟಿರುವ ಕಾಂಗ್ರೆಸ್‌, ಈ ಸಲ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ. ಈ ಬಾರಿ ಯುವಕರಿಗೆ ಆದ್ಯತೆ ಸಿಗಬೇಕು ಎಂಬ ಬೇಡಿಕೆ ಒಂದೆಡೆಯಿದ್ದರೆ, ಮತ್ತೊಂದೆಡೆ ಹಿರಿಯರನ್ನೇ ಕಣಕ್ಕಿಳಿಸಬೇಕು ಎಂಬ ಒತ್ತಾಯವೂ ಪಕ್ಷದಲ್ಲಿ ಚರ್ಚೆಯಾಗುತ್ತಿದೆ.

ಸಂತೋಷ ಲಾಡ್‌, ಜಗದೀಶ ಶೆಟ್ಟರ್, ವಿನಯ ಕುಲಕರ್ಣಿ, ಮೋಹನ ಲಿಂಬಿಕಾಯಿ, ಮಲ್ಲಿಕಾರ್ಜುನ ಅಕ್ಕಿ, ಬಸವರಾಜ ಗುರಿಕಾರ, ಎಸ್.ಐ. ಚಿಕ್ಕನಗೌಡ್ರ ಅವರ ಹೆಸರು ಚಾಲ್ತಿಯಲ್ಲಿವೆ. ಒಬ್ಬೊಬ್ಬ ನಾಯಕರು ಒಂದೊಂದು ರೀತಿ ಸಾಮರ್ಥ್ಯ ಹೊಂದಿದ್ದಾರೆ.

ಕಲಘಟಗಿ ಶಾಸಕ ಸಂತೋಷ ಲಾಡ್‌ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಜಿಲ್ಲೆಯಲ್ಲಿ ಹಿಡಿತ ಸಾಧಿಸಿದ್ದಾರೆ. 013ರ ಸಿದ್ದರಾಮಯ್ಯ ಸರ್ಕಾರದಲ್ಲೂ ಸಚಿವರಾಗಿದ್ದ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪುನಃ ಜಯಗಳಿಸಿದ್ದಾರೆ. ಈಗ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಾರೆ. ಇದು ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಜನರನ್ನು ಕೇಂದ್ರದ ವಿರುದ್ಧ ಸಂಘಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಧಾರವಾಡ ಶಾಸಕ ವಿನಯ ಕುಲಕರ್ಣಿ ಅವರು ಹಿಂದಿನ ಎರಡು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಪ್ರಬಲ ಪೈಪೋಟಿ ನೀಡಿದ್ದರು. ಕ್ಷೇತ್ರದಲ್ಲಿ ಚಿರಪರಿಚಿತರು. 2013ರ ಸಿದ್ದರಾಮಯ್ಯ ಸರ್ಕಾರದಲ್ಲಿ ಗಣಿ ಸಚಿವರಾಗಿದ್ದರು. ಪಕ್ಷ ಸಂಘಟನೆಯಲ್ಲಿ ಹಿಡಿತ ಹೊಂದಿದ್ದಾರೆ. ತಮ್ಮದೇ ಆದ ಕಾರ್ಯಕರ್ತರ ಪಡೆಯನ್ನು ಹೊಂದಿದ್ದಾರೆ. ಮೇಲ್ನೋಟಕ್ಕೆ ಇವರಿಗೆ ಲೋಕಸಭೆಗೆ ಸ್ಪರ್ಧಿಸಲು ಇಷ್ಟವಿಲ್ಲ. ಆದರೆ, ಪಕ್ಷದ ಹೈಕಮಾಂಡ್ ಸೂಚನೆ ಮೇಲೆ ಎಲ್ಲವೂ ಅವಲಂಬಿಸಿದೆ ಎನ್ನಲಾಗುತ್ತಿದೆ.

ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದ ಕಾರಣ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿ ವಿಧಾನ ಪರಿಷತ್ ಸದಸ್ಯರಾಗಿರುವ ಜಗದೀಶ ಶೆಟ್ಟರ್‌ ಅವರ ಹೆಸರೂ ಕೇಳಿಬರುತ್ತಿದೆ. ಸತತ ಆರು ಬಾರಿ ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌ ಕ್ಷೇತ್ರದ ಶಾಸಕರಾಗಿದ್ದ ಅವರು ಬಿಜೆಪಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ ಎದುರಿಸುರುವ ಲಿಂಗಾಯತ ಸಮುದಾಯದ ನಾಯಕರ ಕೊರತೆಯನ್ನು ಇವರು ತುಂಬಲು ಯತ್ನಿಸುತ್ತಿದ್ದಾರೆ. ಲಿಂಗಾಯತ ಸಮುದಾಯವನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್‌ ಶೆಟ್ಟರ್‌ ಅವರನ್ನು ಕಣಕ್ಕಿಳಿಸಲೂ ಬಹುದು ಎಂದು ಎನ್ನುತ್ತವೆ ಪಕ್ಷದ ಮೂಲಗಳು. 

ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್‌ ಸೇರಿದ ಮತ್ತೊಬ್ಬ ನಾಯಕ ಮೋಹನ ಲಿಂಬಿಕಾಯಿ ಕೂಡ ಲೋಕಸಭೆ ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. 2008ರಲ್ಲಿ ಬಿಜೆಪಿಯಲ್ಲಿದ್ದಾಗ ವಿಧಾನ ಪರಿಷತ್ ಸದಸ್ಯರಾಗಿದ್ದರು. ನಂತರ ಯಡಿಯೂರಪ್ಪ ಜೊತೆ ಕೆಜೆಪಿ ಸೇರಿದರು. ಪುನಃ ಬಿಜೆಪಿಗೆ ವಾಪಸ್‌ ಬಂದು, ವಿಧಾನ ಪರಿಷತ್‌ ಸದಸ್ಯರಾಗಲು ಬಯಸಿದ್ದರು. ಆದರೆ, ಅವರಿಗೆ 2–3 ಬಾರಿ ಟಿಕೆಟ್‌ ನಿರಾಕರಿಸಿ, ಜೆಡಿಎಸ್‌ನಿಂದ ಬಂದ ಬಸವರಾಜ ಹೊರಟ್ಟಿ ಅವರಿಗೆ ನೀಡಲಾಯಿತು. ಇದರಿಂದ ನಿರಾಶರಾಗಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದರು. ಆದರೆ, ಟಿಕೆಟ್‌ ಸಿಗಲಿಲ್ಲ.

ಇನ್ನುಳಿದಂತೆ ಕುಂದಗೋಳ ಕ್ಷೇತ್ರದಿಂದ ಎರಡು ಬಾರಿ ಶಾಸಕರಾದ ಮಲ್ಲಿಕಾರ್ಜುನ ಅಕ್ಕಿ ಹಾಗೂ ವಿಧಾನ ಪರಿಷತ್‌ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ ಅನುಭವ ಹೊಂದಿರುವ ಬಸವರಾಜ ಗುರಿಕಾರ ಅವರು ಕೂಡ ಕಣಕ್ಕಿಳಿಯಲು ಆಸಕ್ತಿ ಹೊಂದಿದ್ದಾರೆ.

ವಿನಯ ಕುಲಕರ್ಣಿ
ವಿನಯ ಕುಲಕರ್ಣಿ
ಬಸವರಾಜ ಗುರಿಕಾರ 
ಬಸವರಾಜ ಗುರಿಕಾರ 
ಮೋಹನ ಲಿಂಬಿಕಾಯಿ 
ಮೋಹನ ಲಿಂಬಿಕಾಯಿ 
ಮಲ್ಲಿಕಾರ್ಜುನ ಅಕ್ಕಿ
ಮಲ್ಲಿಕಾರ್ಜುನ ಅಕ್ಕಿ

ಹಲವು ನಾಯಕರು ಚುನಾವಣೆ ಸ್ಪರ್ಧಿಸಲು ಆಸಕ್ತಿ ತೋರಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದ ವೀಕ್ಷಕಿಯಾಗಿರುವ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸದ್ಯದಲ್ಲಿಯೇ ಪಕ್ಷದ ಮುಖಂಡರ ಸಭೆ ನಡೆಸಲಿದ್ದಾರೆ.

– ಅನಿಲಕುಮಾರ್‌ ಪಾಟೀಲ ಧಾರವಾಡ ಜಿಲ್ಲಾ (ಗ್ರಾಮೀಣ) ಕಾಂಗ್ರೆಸ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT