ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಕ್ಷೇತ್ರ: ಜಾತಿಗಿಂತ ಪಕ್ಷ, ಅಭ್ಯರ್ಥಿ ಮುಖ್ಯವೇ?

ಕ್ಷೇತ್ರದಲ್ಲಿ ಕಡಿಮೆ ಮತಗಳನ್ನು ಹೊಂದಿದ ಸಮುದಾಯದ ಅಭ್ಯರ್ಥಿಗಳಿಗೆ ಮಣೆ
Last Updated 26 ಏಪ್ರಿಲ್ 2019, 10:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದ ಮತದಾರರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ವಿಧಾನಸಭೆ ಚುನಾವಣೆಯಲ್ಲಿ ಅದೇ ಸಮಾಜದವರೇ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರಾಗಿ ಆಯ್ಕೆಯಾಗುತ್ತಾರೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಮಾತ್ರ ಕ್ಷೇತ್ರದಲ್ಲಿ ಕಡಿಮೆ ಮತಗಳನ್ನು ಹೊಂದಿದ ಸಮುದಾಯಕ್ಕೆ ಸೇರಿದವರು ಹೆಚ್ಚಿನ ಬಾರಿ ಆಯ್ಕೆಯಾಗಿದ್ದಾರೆ.

1952 ರಿಂದ ಇಲ್ಲಿಯವರೆಗೆ 16 ಚುನಾವಣೆಗಳು ನಡೆದಿವೆ. ಐವರು ಸಂಸದರಾಗಿ ಆಯ್ಕೆಯಾಗಿದ್ದು, ಅದರಲ್ಲಿ ಮೂವರು ಬ್ರಾಹ್ಮಣ ಸಮಾಜಕ್ಕೆ ಸೇರಿದ್ದರೆ, ಒಬ್ಬರು ಕುರುಬ ಹಾಗೂ ಇನ್ನೊಬ್ಬರು ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದವರಾಗಿದ್ದಾರೆ. ಬಹುಸಂಖ್ಯೆಯಲ್ಲಿರುವ ಲಿಂಗಾಯತ ಸಮಾಜಕ್ಕೆ ಸೇರಿದ ಅಭ್ಯರ್ಥಿ ಸ್ಪರ್ಧಿಸಿದ್ದರೂ, ಕಡಿಮೆ ಮತ ಹೊಂದಿದ ಸಮುದಾಯದ ಅಭ್ಯರ್ಥಿಯನ್ನೇ ಗೆಲ್ಲಿಸಿದ್ದಾರೆ.

ಸಂಸದರಾಗಿ ಆಯ್ಕೆಯಾಗಿರುವವರ ಜಾತಿಯನ್ನು ಗಮನಿಸಿದಾಗ ಧಾರವಾಡ ಕ್ಷೇತ್ರದ ಮತದಾರರು ಜಾತಿಗಿಂತ ಪಕ್ಷ, ಅಭ್ಯರ್ಥಿ ಹಾಗೂ ಇತರ ಅಂಶಗಳನ್ನು ನೋಡುತ್ತಾರೆ ಎಂಬುದು ಗೊತ್ತಾಗುತ್ತದೆ.

ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಕ್ಷೇತ್ರದಲ್ಲಿರುವ ಮತದಾರರ ಜಾತಿ ಲೆಕ್ಕಾಚಾರ ಹಾಕಿಯೇ ಟಿಕೆಟ್‌ ನೀಡುತ್ತವೆ. ಹೆಚ್ಚು ಮತ ಹೊಂದಿದ ಅಭ್ಯರ್ಥಿಗಳಿಗೇ ಮಣೆ ಹಾಕಲಾಗುತ್ತದೆ. ಇಲ್ಲಿ ಮಾತ್ರ ಪಕ್ಷಗಳು ಕಡಿಮೆ ಮತ ಹೊಂದಿದ ಸಮುದಾಯದವರಿಗೂ ಟಿಕೆಟ್‌ ನೀಡಿವೆ. ಮತದಾರರೂ ಅಂತವರನ್ನು ಗೆಲ್ಲಿಸಿದ್ದಾರೆ. ಆ ಮೂಲಕ ಜಾತಿಗೆ ಸೊಪ್ಪು ಹಾಕುವುದಿಲ್ಲ ಎಂದು ಸಾಬೀತು ಪಡಿಸಿದ್ದಾರೆ.

ಧಾರವಾರ ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ಆರಂಭವಾಗಿ 66 ವರ್ಷಗಳಾಗಿದೆ. ಅದರಲ್ಲಿ 44 ವರ್ಷಗಳ ಕಾಲ ಬ್ರಾಹ್ಮಣ ಸಮಾಜಕ್ಕೆ ಸೇರಿದ ಮೂವರು ಆಯ್ಕೆಯಾಗಿದ್ದರೆ, ಕುರುಬ ಸಮಾಜಕ್ಕೆ ಸೇರಿದ ಒಬ್ಬರು 16 ವರ್ಷ ಹಾಗೂ ಲಿಂಗಾಯತ (ವೀರಶೈವ ಲಿಂಗಾಯತ) ಸಮಾಜಕ್ಕೆ ಸೇರಿದ ಒಬ್ಬರು ಎಂಟು ವರ್ಷಗಳ ಕಾಲ ಆಯ್ಕೆಯಾಗಿದ್ದರು.

1952ರಲ್ಲಿ ನಡೆದ ಮೊದಲ ಚುನಾವಣೆಗೆ ಬ್ರಾಹ್ಮಣ ಸಮಾಜಕ್ಕೆ ಸೇರಿದ ಡಿ.ಪಿ. ಕರಮಕರ ಎರಡು ಬಾರಿ 10 ವರ್ಷ ಆಯ್ಕೆಯಾಗಿದ್ದರು. 1962 ರಿಂದ 1980ರವರೆಗೆ 18 ವರ್ಷಗಳ ಕಾಲ ಬ್ರಾಹ್ಮಣ ಸಮಾಜಕ್ಕೆ ಸೇರಿದ ಸರೋಜಿನಿ ಮಹಿಷಿ ಅವರು ಸಂಸದರಾಗಿದ್ದರು. ರಾಜಕೀಯ ಸ್ಥಿತ್ಯಂತರ ಹಿನ್ನೆಲೆಯಲ್ಲಿ ನಾಲ್ಕು ಬಾರಿ ಆಯ್ಕೆಯಾಗಿದ್ದ ಮಹಿಷಿ ಅವರನ್ನು ಕೈಬಿಟ್ಟು ಕಾಂಗ್ರೆಸ್‌ ಪಕ್ಷ ಕುರುಬ ಸಮಾಜಕ್ಕೆ ಸೇರಿದ ಡಿ.ಕೆ. ನಾಯ್ಕರ್‌ ಅವರಿಗೆ 1980 ಚುನಾವಣೆಯಲ್ಲಿ ಟಿಕೆಟ್‌ ನೀಡುತ್ತದೆ.

ಡಿ.ಕೆ. ನಾಯ್ಕರ್‌ ವಿರುದ್ಧ ಮಹಿಷಿ ಅವರು ಜನತಾ ಪಕ್ಷದಿಂದ ಸ್ಪರ್ಧಿಸುತ್ತಾರೆ. ಜನರು ಮಹಿಷಿ ಅವರನ್ನು ಬಿಟ್ಟು ನಾಯ್ಕರ್‌ ಅವರನ್ನು ಆಯ್ಕೆ ಮಾಡುತ್ತಾರೆ. ಅವರು 1996ರವರೆಗೂ ಸಂಸರಾಗಿದ್ದರು. ಇವರ ವಿರುದ್ಧ ವೀರಶೈವ ಹಾಗೂ ಲಿಂಗಾಯತ ಸಮಾಜಕ್ಕೆ ಸೇರಿದವರು ಸ್ಪರ್ಧಿಸಿದರೂ ಮತದಾರರು ನಾಯ್ಕರ್‌ ಅವರನ್ನೇ ಗೆಲ್ಲಿಸಿದ್ದರು.

1996ರಲ್ಲಿ ಮೊದಲ ಬಾರಿಗೆ ಬಹುಸಂಖ್ಯಾತ ಜಾತಿಗೆ ಸೇರಿದ ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದ ವಿಜಯ ಸಂಕೇಶ್ವರ ಆಯ್ಕೆಯಾಗಿದ್ದರು. ಮುಂದೆ ಎರಡು ಚುನಾವಣೆಗಳಲ್ಲಿಯೂ ಆಯ್ಕೆಯಾಗಿದ್ದರು. 2004ರಲ್ಲಿ ಬ್ರಾಹ್ಮಣ ಸಮಾಜಕ್ಕೆ ಸೇರಿದ ಪ್ರಹ್ಲಾದ ಜೋಶಿ ಸ್ಪರ್ಧಿಸಿ ಗೆದ್ದರು. ಅಲ್ಲಿಂದ ಮೂರು ಬಾರಿ ಆಯ್ಕೆಯಾಗಿದ್ದಾರೆ. ಅವರ ವಿರುದ್ಧ ಲಿಂಗಾಯತ ಸಮಾಜಕ್ಕೆ ಸೇರಿದವರು ಸ್ಪರ್ಧಿಸಿದ್ದರೂ ಮತದಾರರು ಜೋಶಿ ಅವರಿಗೇ ಮಣೆ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT