ಬುಧವಾರ, ಜೂನ್ 29, 2022
25 °C
ಪ್ರಮುಖ ಪ್ರದೇಶಗಳಲ್ಲಿ ಬಿರುಬಿಸಿಲು, ಮಳೆ ಲೆಕ್ಕಿಸದೆ ರಸ್ತೆಯಲ್ಲೇ ನಿಂತು ಬಸ್ ಹತ್ತಬೇಕಾದ ಸ್ಥಿತಿ

ಹುಬ್ಬಳ್ಳಿ ನಗರದಲ್ಲಿ ತಂಗುದಾಣವಿಲ್ಲದೆ ಪ್ರಯಾಣಿಕರು ಹೈರಾಣ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದಲ್ಲಿ ಬಸ್‌ಗಾಗಿ ಕಾಯುವ ಪ್ರಯಾಣಿಕರು ಮಳೆ, ಗಾಳಿ, ಬಿಸಿಲೆನ್ನದೆ ರಸ್ತೆಯಲ್ಲೇ ಕಾಯಬೇಕಾದ ಸ್ಥಿತಿ ಇದೆ. ನಗರದ ಹೃದಯಭಾಗವಾದ ಚನ್ನಮ್ಮ ವೃತ್ತದಿಂದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಬಹುತೇಕ ರಸ್ತೆಗಳಲ್ಲಿ ತಂಗು
ದಾಣಗಳಿಲ್ಲದೆ ಪ್ರಯಾಣಿಕರು ಹೈರಾಣಾಗಿದ್ದಾರೆ. ನಗರದಲ್ಲಿ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಬಹು
ತೇಕ ತಂಗುದಾಣಗಳು ಕಣ್ಮರೆಯಾಗಿವೆ.

ಹಳೇ ಬಸ್ ನಿಲ್ದಾಣ, ನೀಲಿಜಿನ್ ರಸ್ತೆ, ಗದಗ ರಸ್ತೆ, ವಿಜಯಪುರ ರಸ್ತೆ, ಬೆಂಗಳೂರು ರಸ್ತೆ, ಕಾರವಾರ ರಸ್ತೆ, ಧಾರವಾಡ (ಬಿಆರ್‌ಟಿಎಸ್ ಕಾರಿಡಾರ್ ಹೊರತುಪಡಿಸಿ) ರಸ್ತೆ ಸೇರಿದಂತೆ ನಗರದೊಳಗಿನ ಪ್ರಮುಖ ರಸ್ತೆಗಳಲ್ಲೂ ಪ್ರಯಾಣಿಕರ ತಂಗುದಾಣವಿಲ್ಲ. ನಗರದಿಂದ ದಶದಿಕ್ಕುಗಳಿಗೂ ಸಂಪರ್ಕ ಕಲ್ಪಿಸುವ ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಹಾಗೂ ಖಾಸಗಿ ಬಸ್‌ಗಳಿಗೂ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಹಲವೆಡೆ ನಿಗದಿತ ಸ್ಥಳಗಳಿಲ್ಲ.

ಸಂಚಾರ ದಟ್ಟಣೆ

ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಗದಿತ ಸ್ಥಳಗಳಲ್ಲಿ ತಂಗುದಾಣಗಳು ಇಲ್ಲದಿದ್ದರಿಂದ ಬಸ್‌ಗಳು ಎಲ್ಲೆಂದರಲ್ಲಿ ನಿಲ್ಲುತ್ತವೆ. ಚನ್ನಮ್ಮ ವೃತ್ತದ ಬಳಿಯೇ ಬಸ್‌ಗಳು ನಿಲ್ಲುವುದರಿಂದ ಇಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ.

ವೃತ್ತಕ್ಕೆ ಹೊಂದಿಕೊಂಡಿರುವ ನೀಲಿಜಿನ್ ರಸ್ತೆ ಸಿಗ್ನಲ್ ಬಳಿ ವಿಜಯಪುರ ಮತ್ತು ಬಾಗಲಕೋಟೆ ಕಡೆಗೆ ಹೋಗುವ ಬಸ್‌ಗಳು, ಉಪನಗರ ಪೊಲೀಸ್ ಠಾಣೆಯ ಸಿಗ್ನಲ್ ಬಳಿ ಗದಗ ಕಡೆಗೆ ಹೋಗುವ ಬಸ್‌ಗಳು, ಕಾರವಾರ ಮತ್ತು ಬೆಂಗಳೂರು ಕಡೆಗೆ ಹೋಗುವ ರಸ್ತೆಯ ಆರಂಭದಲ್ಲೇ ಬಸ್‌ಗಳು ನಿಲ್ಲುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಪ್ರಯಾಣಿಕರು ಸಹ ಅಪಾಯ ಲೆಕ್ಕಿಸದೆ ತಮ್ಮ ಸರಕು–ಸರಂಜಾಮುಗಗಳನ್ನು ಹೊತ್ತುಕೊಂಡು ಬಸ್‌ಗಳನ್ನು ಹತ್ತಬೇಕಾದ ಅನಿವಾರ್ಯ ಇದೆ.

‘ಹಳೇ ಬಸ್‌ ನಿಲ್ದಾಣ ಕೆಡವಿದರೂ, ಎಲ್ಲಾ ಬಸ್‌ಗಳು ಈಗಲೂ ನಿಲ್ದಾಣದ ಮುಂಭಾಗವನ್ನು ಹಾದು ಹೋಗುತ್ತವೆ. ಆದರೆ, ಅಲ್ಲಿ ತಾತ್ಕಾಲಿಕವಾಗಿ ಒಂದು ಸಣ್ಣ ತಂಗುದಾಣವೂ ಇಲ್ಲ. ಆ ಸ್ಥಳದ ಅಕ್ಕಪಕ್ಕದಲ್ಲಿ ಜನ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ಇಡೀ ಸ್ಥಳ ಗಬ್ಬೆದ್ದು ಹೋಗಿದೆ’ ಎಂದು ಗದುಗಿನ ವೀರಪ್ಪ ನಾಯಕ ಅಸಮಾಧಾನ ವ್ಯಕ್ತಪಡಿಸಿದರು.

ಪಾಲಿಕೆ ಕರ್ತವ್ಯ

‘ಬಿಆರ್‌ಟಿಎಸ್ ಕಾರಿಡಾರ್ ಹೊರತುಪಡಿಸಿದ ಸರ್ವೀಸ್ ರಸ್ತೆಯಲ್ಲಿ ತಂಗುದಾಣ ನಿರ್ಮಿಸುವ ಜವಾಬ್ದಾರಿ ನಮ್ಮದಲ್ಲ. ಅದು ಮಹಾನಗರ ಪಾಲಿಕೆಯ ಕರ್ತವ್ಯ. ಒಂದು ವೇಳೆ ಜಾಗ ಕೊಟ್ಟರೆ ನಿರ್ಮಿಸಬಹುದು’ ಎಂದು ಬಿಆರ್‌ಟಿಸ್‌ನ ವಿಭಾಗೀಯ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಸ್ ಹತ್ತೋಕೆ ತ್ರಾಸಾಗೈತ್ರಿ’

‘ಬಸ್‌ಗಳು ಎಲ್ಲಿ, ಯಾವಾಗ ನಿಲ್ಲುತ್ತವೆ ಎಂಬುದೇ ಗೊತ್ತಾಗುವುದಿಲ್ಲ. ಹುಬ್ಬಳ್ಳಿಗೆ ಬಂದರೆ, ಬಸ್ ಹತ್ತುವುದೇ ದೊಡ್ಡ ತ್ರಾಸಾಗೈತಿ. ಅಧಿಕಾರಿಗಳು ಇದಕ್ಕೆ ಏನಾದ್ರು ಪರಿಹಾರ ಮಾಡ್ಬೇಕ್ರಿ’ ಎಂದು ತಾಲ್ಲೂಕಿನ ಸುಳ್ಳ ಗ್ರಾಮದ ಗಂಗಪ್ಪ ಇಂಚಲ ಅಸಮಾಧಾನ ವ್ಯಕ್ತಪಡಿಸಿದರು.

‘ಸಿಗ್ನಲ್‌ಗಳ ಬಳಿ ಸ್ವಲ್ಪ ಹೊತ್ತು ಮಾತ್ರ ಬಸ್‌ಗಳನ್ನು ನಿಲ್ಲಿಸುತ್ತಾರೆ. ಆಗ ಮಕ್ಕಳು, ಮಹಿಳೆಯರು, ವಯಸ್ಕರು ಹಾಗೂ ಲಗೇಜ್‌ನೊಂದಿಗೆ ಬಸ್‌ ಹತ್ತುವುದೇ ದೊಡ್ಡ ಸವಾಲು’ ಎಂದು ಗದುಗಿನ ರಮೇಶ ಮಡಿವಾಳ ಹೇಳಿದರು.

‘ಅಗತ್ಯವಿರುವೆಡೆ ತಂಗುದಾಣ ನಿರ್ಮಿಸಲು ನಿರ್ಧರಿಸಲಾಗಿದೆ. ಚುನಾವಣಾ ನೀತಿಸಂಹಿತೆ ಅಂತ್ಯಗೊಂಡ ಬಳಿಕ ಟೆಂಡರ್ ಕರೆಯಲಾಗುವುದು’ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು