ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಫೋನ್‌ ಇನ್‌ ಕಾರ್ಯಕ್ರಮ: ಮೂಳೆ ರೋಗಕ್ಕೆ ವ್ಯಾಯಾಮ ಮದ್ದು

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 4 ಜನವರಿ 2020, 15:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಚಳಿಗಾಲದಲ್ಲಿ ದೇಹದಲ್ಲಿ ರಕ್ತಪರಿಚಲನೆ ಸರಾಗವಾಗಿ ಆಗದಿರುವುದರಿಂದ ಎಲುಬು, ಕೀಲು ಸಂಬಂಧಿತ ಕಾಯಿಲೆಗಳು ಹೆಚ್ಚು ಬಾಧಿಸುತ್ತವೆ. ಸಂಧಿವಾತ, ಹಿಮ್ಮಡಿನೋವು, ಮಂಡಿನೋವಿನಂಥ ಸಮಸ್ಯೆಯಿದ್ದವರು ಈ ಸಮಯದಲ್ಲಿ ಹೆಚ್ಚು ಬಾಧೆಯನ್ನು ಅನುಭವಿಸುತ್ತಾರೆ.

ಹುಬ್ಬಳ್ಳಿ ಕಚೇರಿಯಲ್ಲಿ ಶುಕ್ರವಾರ ನಡೆದ ‘ಪ್ರಜಾವಾಣಿ ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಇಲ್ಲಿನ ಸುಚಿರಾಯು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೂಳೆರೋಗ ತಜ್ಞ ಡಾ.ಸುರೇಶ ಕೊರ್ಲಹಳ್ಳಿ ಹಾಗೂ ಕೀಲು ಜೋಡಣಾ ತಜ್ಞ ಡಾ.ವಿವೇಕ ಪಾಟೀಲ ಅವರು, ಮೂಳೆ ಸಮಸ್ಯೆ (Orthipedic) ಹಾಗೂ ಕೀಲು ನೋವಿನಿಂದ (Joint Pain) ಬಳಲುತ್ತಿರುವವರು ಕೇಳಿದ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿದರು.

ಧಾರವಾಡ, ಬೆಂಗಳೂರು, ಚಿತ್ರದುರ್ಗ, ಕೊಪ್ಪಳ, ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ ಜಿಲ್ಲೆಯ ವಿವಿಧೆಡೆಗಳಿಂದ ಬಂದ ಕರೆಗಳಲ್ಲಿ ಮಂಡಿ, ಸೊಂಟ ಹಾಗೂ ಪಾದದ ಕೀಲು ನೋವುಗಳಿಗೆ ಸಂಬಂಧಿಸಿದ ಪ್ರಶ್ನೆಗಳೇ ಹೆಚ್ಚಿದ್ದವು. ನಿಯಮಿತ ವ್ಯಾಯಾಮ, ಯೋಗ, ನಡಿಗೆ ಜೊತೆಗೆ ಸಮಸ್ಯೆಗೆ ಸೂಕ್ತ ಚಿಕಿತ್ಸೆಗಳನ್ನು, ಅಗತ್ಯವಿದ್ದಾಗ ಶಸ್ತ್ರಚಿಕಿತ್ಸೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಮುಂದುವರಿದ ವೈದ್ಯಕೀಯ ಕ್ಷೇತ್ರದಲ್ಲಿ ಕಾಯಿಲೆಗಳಿಗೆ ಪರಿಹಾರವಿದ್ದೇ ಇದೆ. ಮೂಳೆ, ಕೀಲುಗಳಿಗೆ ಸಂಬಂಧಿಸಿ ಯಾವುದೇ ರೀತಿಯ ನೋವು, ಸಮಸ್ಯೆ ಕಂಡುಬಂದಾಗ ತಜ್ಞವೈದ್ಯರನ್ನು ಸಂಪರ್ಕಿಸಿ ಎಂದು ಡಾ.ಸುರೇಶ ಕೊರ್ಲಹಳ್ಳಿ ಹಾಗೂ ಡಾ.ವಿವೇಕ ಪಾಟೀಲ ಸಲಹೆ ನೀಡಿದರು.

ಸೂಕ್ತ ಆಹಾರ ಕ್ರಮ, ಜೀವನಕ್ರಮದಿಂದ ರೋಗಗಳನ್ನು ದೂರವಿಡಬಹುದು. ಬೇರೆಲ್ಲ ಅಗತ್ಯಗಳಿಗೆ ಹಣವನ್ನು ಎತ್ತಿಡುವ ಜನರು, ಬಹುಮುಖ್ಯವೆನಿಸುವ ಆರೋಗ್ಯದ ವಿಚಾರದಲ್ಲಿ ಹಣವನ್ನು ಮೀಸಲಿಡುತ್ತಿಲ್ಲ. ಆರೋಗ್ಯ ಸಮಸ್ಯೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಆರೋಗ್ಯಕ್ಕಾಗಿ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದು ಅತೀ ಅಗತ್ಯ. ಸರ್ಕಾರದಿಂದಲೂ ಆರೋಗ್ಯಭಾಗ್ಯಕ್ಕಾಗಿ ಸಾಕಷ್ಟು ಯೋಜನೆಗಳು ಜಾರಿಯಲ್ಲಿದ್ದರೂ ಜನರು ಆರೋಗ್ಯ ವಿಮೆಗಾಗಿ ದುಡಿಮೆಯ ಹಣವನ್ನು ವಿನಿಯೋಗಿಸುವುದು ಅವಶ್ಯ. ಹೆಚ್ಚಿನ ಆಸ್ಪತ್ರೆಗಳಲ್ಲಿ ಆರೋಗ್ಯ ವಿಮಾ ಸೌಲಭ್ಯಗಳಿರುವುದರಿಂದ ಅನಾರೋಗ್ಯದ ಸಮಯದಲ್ಲಿ ಆರೋಗ್ಯ ವಿಮೆಗಳು ಸಹಾಯಕ್ಕೆ ಬರಲಿವೆ ಎಂಬ ಕಿವಿಮಾತನ್ನೂ ಹೇಳಿದರು.

ಪಾಲಕರು ಮಕ್ಕಳನ್ನು ಹೊರಗಡೆ ಆಡಲು ಕಳುಹಿಸದೇ ಮನೆಯಲ್ಲೇ ಕೂಡಿಹಾಕುವುದರಿಂದ ಮಕ್ಕಳಿಗೆ ದೈಹಿಕ ವ್ಯಾಯಾಮ ಸಿಗುತ್ತಿಲ್ಲ. ಹೆಚ್ಚಿನ ಶಾಲೆಗಳಲ್ಲೂ ಮಕ್ಕಳಿಗೆ ವ್ಯಾಯಾಮ ಸಿಗದಂತಾಗಿದೆ. ಶಾಲೆ, ಓದು, ಟ್ಯೂಷನ್‌ ಬಿಟ್ಟರೆ ಮನೆಯಲ್ಲಿ ಟಿ.ವಿ, ಮೊಬೈಲ್‌ಗಳಿಗೆ ಅಂಟಿಕೊಂಡಿರುತ್ತಾರೆ. ಇದರಿಂದ ಮಕ್ಕಳಲ್ಲಿ ಕೊಬ್ಬು ಹೆಚ್ಚಿ ಸ್ಥೂಲಕಾಯ ಹೊಂದುತ್ತಾರೆ. ಇದರಿಂದ ಚಿಕ್ಕ ವಯಸ್ಸಿನಲ್ಲೇ ಮಂಡಿನೋವು, ಕೀಲು ನೋವಿನಿಂದ ಬಾಧೆಯನ್ನನುಭವಿಸುತ್ತಾರೆ. ಅವರು ವಯಸ್ಕರಾದಾಗ ಬಾಧೆ ಇನ್ನಷ್ಟು ಉಲ್ಬಣಗೊಳ್ಳಲಿದೆ. ಆದ್ದರಿಂದ ಮಕ್ಕಳನ್ನು ಇಂಥ ಸಮಸ್ಯೆಗಳಿಂದ ದೂರವಿಡಲು ಹೊರಾಂಗಣ ಆಟದಲ್ಲಿ ತೊಡಗಿಸುವ ಹೊಣೆ ಪಾಲಕರದ್ದು ಎಂಬುದನ್ನು ಅವರು ಒತ್ತಿ ಹೇಳಿದರು.

ತೂಕವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಈಜು, ಸೈಕ್ಲಿಂಗ್‌, ನಡಿಗೆ ಉತ್ತಮ ವ್ಯಾಯಾಮ. ಜೊತೆಗೆ ಡಯಟ್‌ ಕೂಡ ಅನುಕೂಲವೆನಿಸಲಿದೆ. ನಿಯಮಿತ ಆರೋಗ್ಯ ತಪಾಸಣೆ, ಅಗತ್ಯ ಚಿಕಿತ್ಸೆ ಪಡೆಯುವುದರಿಂದ ಮೂಳೆ ಸಂಬಂಧಿತ ಕಾಯಿಲೆಗಳನ್ನು ದೂರವಿಡಬಹುದು. ಆಟ– ಓಟದಲ್ಲೂ ಎಚ್ಚರಿಕೆ ವಹಿಸುವುದು ತೀರಾ ಅಗತ್ಯ. ಪ್ರತಿ ವ್ಯಕ್ತಿಯ 45ನೇ ವಯಸ್ಸಿನ ನಂತರ ಸಹಜವಾಗಿ ಎಲುಬಿನಲ್ಲಿನ ಸಾಂದ್ರತೆ ಕಡಿಮೆಯಾಗಿ, ಮೂಳೆ ಸವಕಳಿಗೆ ಕಾರಣವಾಗಲಿದೆ. ಕ್ಯಾಲ್ಸಿಯಂ ಕೊರತೆಯಿಂದಲೂ ಮೂಳೆ ಸಂಬಂಧಿ ಕಾಯಿಲೆ ಹುಟ್ಟಿಕೊಳ್ಳಲಿದೆ. ಎಳೆ ಬಿಸಿಲು ನಮ್ಮ ಮೈಯನ್ನು ಸೋಕಿದಾಗ ವಿಟಮಿನ್‌–ಡಿ ನೈಸರ್ಗಿಕವಾಗಿ ಸಿಗಲಿದೆ. ಇದು ಎಲುಬನ್ನು ಸದೃಢಗೊಳಿಸಲಿದೆ ಎಂಬ ಸಲಹೆಗಳನ್ನೂ ನೀಡಿದರು.

ಮೂಳೆ ರೋಗ ತಜ್ಞ ಡಾ.ಸುರೇಶ ಕೊರ್ಲಹಳ್ಳಿ ಪ್ರಶ್ನೋತ್ತರ

* ಗುಂಡೂರಾವ್‌, ಬೆಂಗಳೂರು: 2016ರಲ್ಲಿ ಅಪಘಾತದಲ್ಲಿ ಕಾಲಿನ ಮೂಳೆ ಮುರಿದಿತ್ತು. ಶಸ್ತ್ರಚಿಕಿತ್ಸೆ ಮಾಡಿ, ರಾಡ್‌ ಹಾಕಲಾಗಿದೆ. ರಾಡ್‌ ತೆಗೆಸಿಲ್ಲ. ಈಗ ಎಡಗಾಲು ನೋವಿದೆ.

– ರಾಡ್‌ನಿಂದ ಯಾವುದೇ ಸಮಸ್ಯೆಯಿಲ್ಲ. ಆಗೊಮ್ಮೆ ಸ್ಕ್ರೂ ಕಳಚಿ, ನೋವು ಕಾಣಿಸಿಕೊಂಡರೆ ಮಾತ್ರ ತೆಗೆಯಬೇಕಾಗುತ್ತದೆ. ಎಡಗಾಲು ನೋವು ಶಮನಕ್ಕೆ ನಿತ್ಯ ವ್ಯಾಯಾಮ ಮಾಡಿ. ಮೆತ್ತನೆಯ ಚಪ್ಪಲಿ ಧರಿಸಿ. ನೋವಿರುವ ಜಾಗದಲ್ಲಿ ಬಿಸಿ ನೀರು, ತಣ್ಣೀರು ಹಾಕುತ್ತಿರಿ.

* ಸಂಜೀವ ತಳವಾರ, ಇಂಡಿ (ವಿಜಯಪುರ): 10 ವರ್ಷದಿಂದ ಬೆನ್ನುನೋವಿದೆ. ಎಂಆರ್‌ಐ ಸ್ಕ್ಯಾನಿಂಗ್‌ನಲ್ಲಿ 4–5 ಮೂಳೆ ಸವೆದಿವೆ ಎಂದಿದೆ. ಗುಳಿಗೆ ತೆಗೆದುಕೊಂಡರೂ ನೋವು ಕಡಿಮೆಯಾಗುತ್ತಿಲ್ಲ.

– ಬೆನ್ನುಹುರಿಯಲ್ಲಿನ ನರ ಹೊರಳಿದರೂ ನೋವು ಬರುತ್ತದೆ. ನಿತ್ಯ ವ್ಯಾಯಾಮ ಮಾಡಿ. ಸ್ಪರ್ಶಜ್ಞಾನ ಕಡಿಮೆಯಾದರೆ ಶಸ್ತ್ರಚಿಕಿತ್ಸೆ ಮಾಡಬೇಕಾಗಬಹುದು. ಆಸ್ಪತ್ರೆಗೆ ಭೇಟಿ ನೀಡಿ.

* ರೇವಣಪ್ಪ ಆನಪ್ಪನವರ್‌, ಶಿರಹಟ್ಟಿ (ಗದಗ): 2 ವರ್ಷದಿಂದ ಇಮ್ಮಡಿ ನೋವಿದೆ. ಇಂಜೆಕ್ಷನ್‌ ತೆಗೆದುಕೊಂಡಾಗ ನೋವು ಕಡಿಮೆಯಾಗುತ್ತದೆ.

– ಹಿಮ್ಮಡಿ ಕೆಳಗೆ ಸಣ್ಣ ನರದಲ್ಲಿ ಬಾವು ಕಾಣಿಸಿಕೊಂಡಾಗ ಈ ರೀತಿಯ ನೋವು ಕಾಣುತ್ತದೆ. ಪರೀಕ್ಷಿಸಿಕೊಳ್ಳಿ. ಅಗತ್ಯವೆನಿಸಿದರೆ ಶಸ್ತ್ರಚಿಕಿತ್ಸೆ ಮಾಡಬೇಕಾಗಬಹುದು.

* ಮಾರುತಿ ಖಾನಾಪುರ, ರಾಮದುರ್ಗ(ಬೆಳಗಾವಿ): ನನಗೀಗ 65 ವರ್ಷ. 55ನೇ ವಯಸ್ಸಿನಿಂದ ಮೊಣಕಾಲು ನೋವಿದೆ. ನಿತ್ಯ ವಾಕಿಂಗ್‌ ಮಾಡಿದರೂ ನೋವು ಕಡಿಮೆಯಾಗಿಲ್ಲ. ಕುಳಿತರೆ ಮೇಲೇಳಲು ಕಷ್ಟ.

– ಮೊಣಕಾಲು ಸವಕಳಿ ಆಗಿರಬಹುದು. 1, 2 ಹಂತದಲ್ಲಿದ್ದರೆ ಗುಳಿಗೆ, ವ್ಯಾಯಾಮದ ಮೂಲಕವೇ ಗುಣ ಮಾಡಬಹುದು. 3 ಮತ್ತು 4ನೇ ಹಂತದಲ್ಲಿದ್ದರೆ ಅಥವಾ ಕಾಲು ಬೆಂಡಾಗಿದ್ದರೆ ಶಸ್ತ್ರಚಿಕಿತ್ಸೆ ಬೇಕಾಗುತ್ತದೆ. ಪರೀಕ್ಷೆ ಮಾಡಿಸಿಕೊಳ್ಳಿ.

* ವೀರೇಶ್, ಹುಬ್ಬಳ್ಳಿ: ಎರಡು ಮೂರು ಹೆಜ್ಜೆ ನಡೆದರೆ ಎಡಗಾಲಿನ ಪಾದ ಬಹಳ ನೋವಾಗುತ್ತದೆ

- ಇದಕ್ಕೆ ಪ್ಲಾಂಟಾ ಫೆಶೈಟಿಸ್ ಎನ್ನುತ್ತಾರೆ. ಮೃದುವಾಗಿರುವ ಚಪ್ಪಲಿಯನ್ನು ಬಳಸಿ. ಉಪ್ಪು ಹಾಕಿದ ಬಿಸಿ ನೀರಿನಲ್ಲಿ ಪಾದ ಇಡಿ. ವೈದ್ಯರ ಸಲಹೆ ಮೇರೆಗೆ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳಿ

* ರಮೇಶ್ ಬಳ್ಳಾರಿ: ಕೆಲ ತಿಂಗಳುಗಳ ಹಿಂದೆ ಅಪಘಾತವಾಗಿ ಪಾದಕ್ಕೆ ಪೆಟ್ಟಾಗಿತ್ತು. ಓಡಾಡಿದರೆ ನೋವಾಗುತ್ತದೆ

- ಪ್ಲಾಸ್ಟರ್ ಹಾಕಿದ ನಂತರ ಕಾಲನ್ನು ಎತ್ತರದಲ್ಲಿಯೇ ಇಟ್ಟುಕೊಳ್ಳಬೇಕು. ಕೆಳಗೆ ಬಿಟ್ಟರೆ ನೋವು ಕಡಿಮೆಯಾಗದು. ಸ್ವಲ್ಪವೂ ಸುಧಾರಣೆಯಾಗಿಲ್ಲ ಅನಿಸಿದರೆ ಮತ್ತೊಮ್ಮೆ ವೈದ್ಯರನ್ನು ಸಂಪರ್ಕಿಸಿ

* ಕಲ್ಲವೀರಪ್ಪ ಕೆರವಡಿ, ಹಾವೇರಿ: ಬಲ ಭುಜ ನೋವು ಹೆಚ್ಚಾಗಿದೆ, ಚಿಕಿತ್ಸೆ ಪಡೆದರೂ ನೋವು ಕಡಿಮೆಯಾಗುತ್ತಿಲ್ಲ

- ಔಷಧದ ಜತೆಗೆ ವ್ಯಾಯಾಮ ಮಾಡಿದರೆ ನೋವು ಕಡಿಮೆಯಾಗುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡಿ

* ಸುಷ್ಮಾ, ಬೆಂಗಳೂರು: ಟ್ರೆಪೇಸಿಯಸ್‌ನಿಂದ ಬಳಲುತ್ತಿದ್ದೇನೆ, ಎರಡು ತಿಂಗಳಿನಿಂದ ಸ್ಟ್ರೆಚ್‌ ವ್ಯಾಯಾಮ ಮಾಡಿದರೂ ಕಡಿಮೆಯಾಗುತ್ತಿಲ್ಲ

- ವ್ಯಾಯಾಮ ಮಾಡಿದರೆ ಸಾಮಾನ್ಯವಾಗಿ ನೋವು ಕಡಿಮೆಯಾಗುತ್ತದೆ. ಇನ್ನೊಮ್ಮೆ ವೈದ್ಯರನ್ನು ಸಂಪರ್ಕಿಸಿ ಟ್ರಿಗರ್ ಪಾಯಿಂಟ್‌ಗೆ ಒಂದು ಇಂಜೆಕ್ಷನ್ ನೀಡಿದರೆ ನೋವು ಕಡಿಮೆಯಾಗುತ್ತದೆ

* ಯಾಸೀನ್ ಮುಲ್ಲಾ. ಧಾರವಾಡ: ಕೆಲ ದಿನಗಳ ಹಿಂದೆ ಎತ್ತರದಿಂದ ಕೆಳಗೆ ಬಿದ್ದಾಗ ಹಿಮ್ಮಡಿ ನೋವಾಗಿದೆ. ಚಿಕಿತ್ಸೆ ಪಡೆದರೂ 15 ದಿನವಾದರೂ ಕಡಿಮೆಯಾಗಿಲ್ಲ, ಊತ ಸಹ ಇದೆ

- 15 ದಿನಗಳ ಅವಧಿಯಲ್ಲಿ ನೋವು ಕಡಿಮೆಯಾಗಬೇಕು. ಆಗಿಲ್ಲ ಎಂದರೆ ಇನ್ನೊಮ್ಮೆ ತೋರಿಸಿ

* ಧನರಾಜ್ ಕೆಂಗ್ನಾಳ್, ಅಫ್ಜಲ್‌ಪುರ (ಕಲಬುರ್ಗಿ): ಕೆಲ ದಿನಗಳಿಂದ ಬೆನ್ನು ನೋವು. ಕೆಎಸ್‌ಆರ್‌ಟಿಸಿಯಲ್ಲಿ ಚಾಲಕನಾಗಿದ್ದೇನೆ. ಪ್ರತಿದಿನ ಸುಮಾರು 120 ಕಿ.ಮೀ ವರೆಗೆ ಬಸ್ ಚಲಾಯಿಸುತ್ತೇನೆ. ಇದರಿಂದ ಸಮಸ್ಯೆಯೇ?

– ದಿನವಿಡೀ ಬಸ್ಸಿನಲ್ಲಿ ಕೂತು ಚಾಲನೆ ಮಾಡುವುದರಿಂದ ಬೆನ್ನು ನೋವು ಸಹಜ. ಕಾಲಿನಲ್ಲಿಯೂ ಸಮಸ್ಯೆ ಕಾಣಿಸಿಕೊಳ್ಳಬಹುದು. ಅಗತ್ಯವಾಗಿ ವ್ಯಾಯಾಮ ಮಾಡಬೇಕು.

* ನಾಗರಾಜಯ್ಯ ಮಠದ್, ಉಕ್ಕಡಗಾತ್ರಿ: 5 ವರ್ಷದಿಂದ ಮೊಣಕಾಲು ನೋವು, ಇಮ್ಮಡಿ ನೋವು ಹಾಗೂ ಸೊಂಟ ನೋವಿದೆ. ಇಮ್ಮಡಿ ನೋವಿಗೆ ಆಪರೇಷನ್ ಆಗಬೇಕೆಂದು ವೈದ್ಯರು ಹೇಳಿದ್ದಾರೆ. ಏನು ಮಾಡಲಿ?

–ಮಂಡಿನೋವು ಅತಿಯಾಗಿದ್ದರೆ ಆಪರೇಷನ್ ಅಗತ್ಯ. ಇಮ್ಮಡಿ ನೋವಿಗೆ ಆಪರೇಷನ್ ಬೇಡ. ಸಮಸ್ಯೆಯನ್ನು ಪರೀಕ್ಷಿಸಿದ ನಂತರವೇ ಚಿಕಿತ್ಸೆ ಬಗ್ಗೆ ತಿಳಿಸಬಹುದು.

* ಮುತ್ತಮ್ಮ, ನೂಲ್ವಿ: ಜೋರಾಗಿ ಕೆಮ್ಮಿದಾಗ ಎದೆನೋವು ಉಂಟಾಗುತ್ತೆ. ಉಸಿರಾಟಕ್ಕೆ ತೊಂದರೆಯಾಗುತ್ತಿದೆ.

–ಎದೆಯ ಎಲುಬಿನಲ್ಲಿ ಶಕ್ತಿ ಕಡಿಮೆಯಾದರೆ ಈ ಸಮಸ್ಯೆ ಉಂಟಾಗುತ್ತದೆ. ದೊಡ್ಡದಾಗಿ ಉಸಿರು ತೆಗೆದುಕೊಂಡರೂ ನೋವುಂಟಾದರೆ ವೈದ್ಯರನ್ನು ಸಂಪರ್ಕಿಸಬೇಕು. ಮಾತ್ರೆಯಲ್ಲೇ ಗುಣಮುಖವಾಗುತ್ತದೆ.

* ಶ್ರೀಶೈಲ ಬೆಳವಲ, ಬಾಗಲಕೋಟೆ: 2 ವರ್ಷಗಳಿಂದ ಮೊಣಕಾಲು ಹಾಗೂ ಕೈಬೆರಳುಗಳಲ್ಲಿ ನೋವುಂಟಾಗುತ್ತಿದೆ. 6 ವರ್ಷದಿಂದ ಮಂಡಿ ನೋವು ಸಹ ಇದೆ. ಚಳಿಗಾಲದಲ್ಲಿ ಹೊಟ್ಟೆ ನೋವು ಬಾಧಿಸುತ್ತದೆ.

– ವೈದ್ಯರ ಮಾರ್ಗದರ್ಶನದಂತೆ ವ್ಯಾಯಾಮ ಮಾಡಿ. ಎರಡೂ ಮೊಣ ಕಾಲುಗಳಿಗೆ ‘ನೀ–ಕ್ಯಾಪ್’ ಹಾಕಿಕೊಳ್ಳಿ. ರಕ್ತ ಪರೀಕ್ಷೆ ಮಾಡಿಸಿದರೆ ಸಂಧಿವಾತ ಇದೆಯೇ ಎಂಬುದು ತಿಳಿಯುತ್ತದೆ. ಅದರ ಅನುಸಾರ ಚಿಕಿತ್ಸೆ ಪಡೆಯಬಹುದು.

* ಬಿ.ಆರ್‌. ಮುನೇಗೌಡ, ಬಾಗಲಕೋಟೆ: ಕಾಲುಗಳ ಎಲುಬುಗಳು ಸವೆದಿವೆ. ಮೊದಲು ವೈದ್ಯರು ಆಪರೇಷನ್ ಮಾಡಿಸಿಕೊಳ್ಳುವಂತೆ ತಿಳಿಸಿದ್ದರೂ ಮಾಡಿಸಿಕೊಂಡಿಲ್ಲ. ಈಗ ಅವಶ್ಯವೇ?

–ಕಾಲುಗಳ ನೋವು ವಿಪರೀತವಾಗಿದ್ದರೆ ಆಪರೇಷನ್ ಮಾಡಿಸಿಕೊಳ್ಳಬೇಕು. ನೋವನ್ನು ಆಧರಿಸಿಯೇ ಆಪರೇಷನ್ ನಿರ್ಧರಿಸಬಹುದು. ಓಡಾಡಲು ತೊಂದರೆ ಇಲ್ಲದಿದ್ದರೆ ಆಪರೇಷನ್ ಅಗತ್ಯವಿಲ್ಲ.

* ಸಿದ್ದಪ್ಪ, ವಿಜಯಪುರ: ಕುತ್ತಿಗೆ, ಬೆನ್ನಿನಲ್ಲಿ ನೋವಿದೆ. ವೈದ್ಯರು ವ್ಯಾಯಾಮ ಮಾಡಲು ಹೇಳಿದ್ದರು, ಆದರೂ ನೋವು ಕಡೆಮೆಯಾಗಿಲ್ಲ.

– ನಾವು ಮಾಡುವ ಕೆಲಸ ಆಧರಿಸಿ ಇಂತಹ ನೋವು ಕಾಣಿಸಿಕೊಳ್ಳುತ್ತವೆ. ವ್ಯಾಯಾಮ ಮಾಡುತ್ತಿರಬೇಕು. ಮಾತ್ರೆಗಳನ್ನೂ ತೆಗೆದುಕೊಳ್ಳಬೇಕು.

* ಶಂಕರಪ್ಪ ಬಿ. ಗೋಗಿ, ಬಾಗಲಕೋಟೆ:‌ ಬೆನ್ನಿನ ನೋವು, ಕಾಲುಗಳಲ್ಲಿ ನರಗಳ ಸೆಳೆತ ಉಂಟಾಗಿದೆ. ನಡೆದಾಡುವಾಗ ತೀವ್ರ ಸಮಸ್ಯೆಯಾಗುತ್ತದೆ.

– ಪ್ರತಿದಿನ ಸಾಮಾನ್ಯ ವ್ಯಾಯಾಮ ಮಾಡುತ್ತಿರಬೇಕು. ಮಾತ್ರೆಯಿಂದಲೇ ನೋವು ಗುಣಮುಖವಾಗುತ್ತದೆ. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು.

ಆರೋಗ್ಯ ವಿಮೆ ಮಾಡಿಸಿ...

‘ನಮ್ಮ ಜನರು ಇತರೆ ಖರ್ಚು–ವೆಚ್ಚಗಳಿಗೆ ಹಣ ತೆಗೆದಿಡುತ್ತಾರೆ. ಆದರೆ ವೈದ್ಯಕೀಯ ವೆಚ್ಚಗಳಿಗಾಗಿ ಪ್ರತ್ಯೇಕ ಹಣ ತೆಗೆದಿರಿಸುವುದಿಲ್ಲ. ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಹೀಗಾಗಿ ಅದಕ್ಕಾಗಿ ಎಲ್ಲರೂ ಹಣ ತೆಗೆದಿರಿಸಲೇಬೇಕು. ಸರ್ಕಾರವೇ ಎಲ್ಲವನ್ನೂ ಮಾಡಲಿಕ್ಕಾಗುವುದಿಲ್ಲ. ಇದಕ್ಕಾಗಿ ಖಾಸಗಿ ವಿಮಾ ಕಂಪನಿಗಳಿವೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಮಾಸಿಕ, ವಾರ್ಷಿಕ ವಿಮಾ ಕಂತುಗಳನ್ನು ಕಟ್ಟುವ ಮೂಲಕ ಆರೋಗ್ಯ ವಿಮೆಯನ್ನು ಮಾಡಿಸಿಕೊಳ್ಳಬೇಕು. ಇದರಿಂದ ದೊಡ್ಡ ದೊಡ್ಡ ವೈದ್ಯಕೀಯ ವೆಚ್ಚಗಳನ್ನು ಭರಿಸಲು ಸಹಾಯವಾಗುತ್ತದೆ’ ಎನ್ನುತ್ತಾರೆ ಮೂಳೆ ರೋಗ ತಜ್ಞ ಡಾ.ಸುರೇಶ ಕೊರ್ಲಹಳ್ಳಿ ಅವರು.

ಫೋನ್‌ ಇನ್‌: ಕೀಲು ಜೋಡಣೆ ತಜ್ಞ ಡಾ.ವಿವೇಕ ಪಾಟೀಲ ಪ್ರಶ್ನೋತ್ತರ

* ರಾಕೇಶ್ವರ, ವಿಜಯಪುರ: ವಯಸ್ಸು 18, ಈಗಲೇ ಮೊಣಕಾಲು, ಕೀಲು ನೋವು ಆರಂಭವಾಗಿದೆ. ನಡೆದರೆ ತ್ರಾಸಾಗುತ್ತದೆ...

– ಡಾ.ವಿವೇಕ ಪಾಟೀಲ: ನೀವು ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ನಿಮ್ಮ ಮಂಡಿ ಎಕ್ಸ್‌ರೇ ಮಾಡಿಸಬೇಕು. ಬಳಿಕ ಸೂಕ್ತವಾದ ವ್ಯಾಯಾಮ, ಫಿಸಿಯೋಥೆರಪಿ, ಔಷಧ, ಗುಳಿಗೆ ನೀಡಲಾಗುತ್ತದೆ. ನೀವು ವೈದ್ಯರನ್ನು ಭೇಟಿ ಮಾಡಿ.

* ಮಂಜುನಾಥ ನಾಡಿಗೇರ, ಹಳೇ ಹುಬ್ಬಳ್ಳಿ: ನನಗೆ 38 ವರ್ಷ. ಮೊಣಕಾಲು ಚಿಪ್ಪಿನ ಕೆಳಗೆ ನೋವು ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಏನು ಪರಿಹಾರ?

– ಬಹುಶಃ ಇದು ಸಂಧಿವಾತ ಇರಬಹುದು. ಮೂಳೆ ಸವಕಳಿ ಅಲ್ಲ. ರಕ್ತ ಪರೀಕ್ಷೆ ಮಾಡಿದ ಬಳಿಕ ಕಾರಣ ತಿಳಿಯಬಹುದು. 3 ರಿಂದ 6 ತಿಂಗಳು ಚಿಕಿತ್ಸೆ ಪಡೆದರೆ ಸಾಕು ಸಮಸ್ಯೆ ಬಗೆಹರಿಯುತ್ತದೆ.

* ಅನಿಲ್‌ಕುಮಾರ್, ಚಡಚಣ: ವಯಸ್ಸು 43, 88 ಕೆಜಿ ತೂಕ; ನಿರಂತರವಾಗಿ ಮೊಣಕಾಲು ನೋವು ಕಾಣಿಸಿಕೊಳ್ಳುತ್ತದೆ...

– ನೀವು ಮೊದಲು ತೂಕ ಇಳಿಸಿಕೊಳ್ಳಬೇಕು, ನಿರಂತರವಾಗಿ ವಾಕಿಂಗ್, ವ್ಯಾಯಾಮ, ಆಹಾರ ಕ್ರಮದಲ್ಲಿ ಬದಲಾವಣೆ, ಬೆಣ್ಣೆ, ಎಣ್ಣೆ, ತುಪ್ಪ ಸೇವನೆ ಕಡಿಮೆ ಮಾಡಿ. ಯೋಗಾಸನ ಮಾಡಿ.

* ಮರಳುಸಿದ್ಧನಗೌಡ ಕೆ.ಎಸ್‌., ಹೂವಿನಹಡಗಲಿ: ಕಳೆದ ಎರಡು ವರ್ಷಗಳಿಂದ ವಿಶೇಷವಾಗಿ ಎಡಗಾಲು ನೋವಿದೆ. ಸಕ್ಕರೆ ಕಾಯಿಲೆಯೂ ಇದೆ. ಕೆಲವಷ್ಟು ದೂರ ನಡೆದರೂ ಕಷ್ಟವಾಗುತ್ತದೆ...

– ಕಾಲು ನೋವು ಬರಲು ಮೂಲ ಕಾರಣ ಬೆನ್ನುಹುರಿಯಲ್ಲಿ ನರಕ್ಕೆ ಬಾವು ಬಂದಿರುತ್ತದೆ. ಅಲ್ಲಿಂದಲೇ ಕಾಲಿನ ನರಗಳ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ನಿಯಮಿತ ವ್ಯಾಯಾಮ, ವಾಕಿಂಗ್‌ ಅಗತ್ಯ. ಮಾತ್ರೆಗಳನ್ನು ನಿಗದಿತವಾಗಿ ಕೆಲ ದಿನ ತೆಗೆದುಕೊಳ್ಳಬೇಕು. ಅಷ್ಟಕ್ಕೂ ಕಡಿಮೆ ಆಗದಿದ್ದರೆ ವೈದ್ಯರನ್ನು ಸಂಪರ್ಕಿಸಿ.

* ರಮೇಶಬಾಬು, ಶಿರಗುಪ್ಪ: ಹಿಮ್ಮಡದಲ್ಲಿ ನೋವಿದ್ದು ಬಾವು ಬಂದಿದೆ. ಮಾತ್ರೆ ತೆಗೆದುಕೊಂಡರೆ ಕಡಿಮೆ ಅನ್ನಿಸುತ್ತದೆ. ಭಾರ ಹಾಕಿದರೆ ಕಷ್ಟವಾಗುತ್ತದೆ...

– ಇದಕ್ಕೆ ಮಾತ್ರೆ, ಇಂಜೆಕ್ಷನ್‌ ತೆಗೆದುಕೊಳ್ಳಬೇಕು. ಎಕ್ಸ್ ರೇ ಮಾಡಿಸಿಕೊಳ್ಳಿ.

* ಆರ್‌.ಆರ್‌.ಸವದತ್ತಿ, ಬೆಳಗಾವಿ: ಮೊಣಕಾಲು ನೋವಿದೆ. ಅಡ್ಡಾಡಲು ಕಷ್ಟವಾಗುತ್ತದೆ. ಗುಳಿಗೆ ಔಷಧಿಯಿಂದಲೂ ಕಡಿಮೆ ಆಗಿಲ್ಲ. ಎಂಆರ್‌ಐ ಮಾಡಿಸಿದ್ದೇನೆ...

– ನರದ ಸಮಸ್ಯೆಯಿಂದ ಹೀಗಾಗುತ್ತದೆ. ಸರಿಯಾದ ವ್ಯಾಯಾಮ, ಆಹಾರ ಕ್ರಮವೂ ಬೇಕು. ವೈದ್ಯರನ್ನು ಸಂಪರ್ಕಿಸಿ.

* ರಾಜಶೇಖರ ಜಾವೂರು, ನಾಲತವಾಡ: ನನಗೆ 49 ವರ್ಷ, 3– 4 ವರ್ಷಗಳಿಂದ ಮಂಡಿನೋವಿದೆ. ಕಡಿಮೆ ಆಗುತ್ತಿಲ್ಲ...

– ಮಂಡಿನೋವಿಗೆ ಗುಳಿಗೆ, ಔಷಧಿಗಳಿವೆ. ಫಿಸಿಯೋಥೆರಪಿ ಇದೆ. ಅದಕ್ಕೂ ಕಡಿಮೆ ಆಗದಿದ್ದರೆ ಮಂಡಿಚಿಪ್ಪು ಬದಲಾವಣೆ ಆಪರೇಷನ್‌ ಇದೆ. ಮೊದಲು ಎಕ್ಸ್‌ ರೇ ಮಾಡಿಸಿಕೊಂಡು ನೋಡಿ.

* ಬಸಮ್ಮ ಕುಂದಗೋಳ: ನನಗೆ ಕತ್ತುನೋವು, ಕೆಮ್ಮು ನಿರಂತರವಾಗಿ ಕಾಡುತ್ತದೆ, ಪರಿಹಾರವೇನು?

– ನಿರಂತರವಾಗಿ ಕತ್ತು ನೋವಿದ್ದರೆ ಎಂಆರ್‌ಐ ಮಾಡಿಸಿಕೊಳ್ಳಬೇಕು. ಕೆಮ್ಮಿಗೂ ಅದಕ್ಕೂ ಸಂಬಂಧವಿಲ್ಲ.

* ತೋಟಗಂಟಿ ಸಿದ್ದಪ್ಪ, ರಟ್ಟೀಹಳ್ಳಿ: ವಯಸ್ಸು 65, ನನ್ನ ಕೈ ಕಾಲುಗಳು ಸಣ್ಣಗಿವೆ, ಹೊಟ್ಟೆ ಡುಮ್ಮಕ್ಕಿದೆ. ಏಕೆ ಹೀಗೆ?

– ನೀವು ಪೌಷ್ಟಿಕ ಆಹಾರ ತೆಗೆದುಕೊಳ್ಳಬೇಕು. ಆಹಾರದಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿ ಇರುವಂತೆ ನೋಡಿಕೊಳ್ಳಬೇಕು. ರಾಗಿ, ಮೊಟ್ಟೆ, ಹಾಲು, ಮೀನು ಸೇವನೆ ಮಾಡಿದರೆ ಒಳ್ಳೆಯ ಕ್ಯಾಲ್ಸಿಯಂ ಸಿಗುತ್ತದೆ. ಮೂಳೆ ಗಟ್ಟಿಯಾಗಿರುವಂತೆ ನೋಡಿಕೊಳ್ಳಬೇಕು.

* ನರಸವ್ವ ಬೇವಿನಕಟ್ಟೆ, ನವನಗರ: 5 ವರ್ಷದಿಂದ ಮಂಡಿ ನೋವು ಇದೆ. 2 ವರ್ಷದಿಂದ ಗುಳಿಗೆ ಬಿಟ್ಟಿದ್ದೇನೆ. ಏನು ಮಾಡಬೇಕು.

– ಗುಳಿಗೆ ತೆಗೆದುಕೊಂಡರೂ ನೋವು ಶಮನವಾಗದಿದ್ದರೆ ಮತ್ತೊಮ್ಮೆ ಪರೀಕ್ಷಿಸಿಕೊಳ್ಳಿ. ಸಾಮಾನ್ಯವಾಗಿ 2 ವರ್ಷದ ಒಳಗೆ ನೋವು ಶಮನವಾಗುತ್ತದೆ. ನೀವು ಸುಚಿರಾಯು ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಿ.

* ಟಿ.ಎನ್‌.ಮಾಡಳ್ಳಿ, ನವಲಗುಂದ: ನನಗೆ 75 ವರ್ಷ. ಮೊಣಕಾಲು ಚಿಪ್ಪು ಬದಲಿಗೆ ಸ್ಪ್ರಿಂಗ್‌ ಹಾಕಿಸಿಕೊಳ್ಳಬಹುದಾ ತಿಳಿಸಿ

– 40–50 ವರ್ಷದವರಿಗೆ ಸ್ಪ್ರಿಂಗ್‌ ಹಾಕಿದರೆ ಅನುಕೂಲ ಆಗಲಿದೆ. ನಿಮ್ಮ ವಯಸ್ಸು 75 ಆಗಿರುವುದರಿಂದ ಉಪಯೋಗವಿಲ್ಲ. ಚಿಪ್ಪು ಹಾಕಿಸಿಕೊಳ್ಳಬಹುದು. ಇದಕ್ಕೆ ₹1ರಿಂದ 2.5 ಲಕ್ಷದವರೆಗೂ ಖರ್ಚಾಗಬಹುದು. ಸರ್ಕಾರದ ಆರೋಗ್ಯ ಯೋಜನೆ ಕಾರ್ಡ್‌ಗಳಿದ್ದರೆ ಉಚಿತವಾಗಿ ಮಾಡಲಾಗುವುದು.

* ರಂಗಪ್ಪ ಹುಲಕುಂದ, ಕೊಪ್ಪಳ: ನಡೆದರೆ ಮೊಣಕಾಲು ಮೇಲೆ ನೋವು ಕಾಣಿಸಿಕೊಳ್ಳುತ್ತದೆ. ಏನು ಮಾಡಬೇಕು?

– ನಿಯಮಿತ ವ್ಯಾಯಾಮ ಮಾಡಿ, ಎಲುಬಿನ ವೈದ್ಯರಿಗೆ ತೋರಿಸಿ ಗುಳಿಗೆ ಪಡೆಯಿರಿ. ಗುಣ ಕಾಣಬಹುದು

* ಗಂಗಾಧರ ಪೂಜಾರ್, ಹರಿಹರ: ಹೋಟೆಲ್‌ನಲ್ಲಿ ಕೆಲಸ ಮಾಡುತ್ತೇನೆ. ಸಾಮಾನ್ಯವಾಗಿ ನಿಂತೇ ಕೆಲಸ ಮಾಡಬೇಕಾಗುತ್ತದೆ. ಕೆಲ ದಿನಗಳಿಂದ ಕಾಲಿನ ಹಿಮ್ಮಡಿ ವಿಪರೀತ ನೋವಾಗುತ್ತಿದೆ

- ಹಿಮ್ಮಡಿಯಲ್ಲಿ ನರವಿರುತ್ತದೆ. ಚಪ್ಪಲಿ ಹಾಕದೆ, ಬಹಳ ಹೊತ್ತು ನಿಂತೇ ಕೆಲಸ ಮಾಡಿದರೆ ನೋವು ಕಾಣಿಸಿಕೊಳ್ಳುತ್ತದೆ. ಮೆತ್ತನೆ ಚಪ್ಪಲಿಯನ್ನು ಬಳಸಿ, ಮಾತ್ರೆಯನ್ನು ಸಹ ತೆಗೆದುಕೊಳ್ಳಿ

* ಶಂಕರಪ್ಪ, ಲಕ್ಷ್ಮೇಶ್ವರ (ಗದಗ): ಕೀಲು ಹಾಗೂ ಸೊಂಟ ನೋವಿದೆ. ಬಲಗಾಲ ಮಂಡಿಗೆ ಆಪರೇಷನ್ ಸಹ ಆಗಿದೆ. ಎಡಗಾಲು ಮಂಡಿಯಲ್ಲಿ ನೋವಿದೆ

– ಈಗಾಗಲೇ ಆಪರೇಷನ್ ಆಗಿರುವುದರಿಂದ ನೋವು ಕಡಿಮೆಯಾಗಿದ್ದರೆ, ಎಡಗಾಲಿಗೂ ಆಪರೇಷನ್ ಮಾಡಿಸಿ. ಇಲ್ಲವಾದರೆ ಔಷಧ ಸೇವನೆಯಿಂದ ಸರಿ ಮಾಡಿಕೊಳ್ಳಿ.

* ಉಸ್ಮಾನ್, ಬಳ್ಳಾರಿ: 15 ದಿನಗಳಿಂದ ಬೆನ್ನಿನ ಒಂದು ಭಾಗದಲ್ಲಿ ನೋವು ಕಾಣಿಸಿಕೊಂಡಿದೆ. ಓದಲಿಕ್ಕೆ ಕೂತಾಗ ಬೆನ್ನು ಹಿಡಿದುಕೊಳ್ಳುತ್ತದೆ.

– ಕುಳಿತುಕೊಳ್ಳುವ ಹಾಗೂ ಮಲಗುವ ಭಂಗಿ ಸರಿಯಾಗಿಲ್ಲದಿದ್ದರೆ ಇಂತಹ ನೋವು ಸಹಜ. ಕೂತಾಗ ಬೆನ್ನಿಗೆ ಏನಾದರೂ ಸಪೋರ್ಟ್‌ ತೆಗೆದುಕೊಳ್ಳಿ. ವ್ಯಾಯಾಮ ಮಾಡಿ. ವೈದ್ಯರಿಂದ ಗುಳಿಗೆ ಪಡೆಯಿರಿ.

* ಶೇಖರ್‌ರಾಜ್, ರಾಣೆಬೆನ್ನೂರು (ಹಾವೇರಿ): 15 ವರ್ಷಗಳಿಂದ ಮಂಡಿನೋವು. ಕಾಲುಗಳ ಕೀಲುಗಳಲ್ಲಿ ಶಬ್ದ ಬರುತ್ತೆ. ಓಡಾಡಲು, ಕುಳಿತುಕೊಳ್ಳಲು ಕಷ್ಟ.

– ಇದು ಮೊಣಕಾಲು ಚಿಪ್ಪಿನ ಸವಕಳಿ. ಚಿಪ್ಪು ಬದಲಾವಣೆ ಅವಶ್ಯ. ಶುಗರ್ ಸಮತೋಲದಲ್ಲಿದ್ದರೆ ಆಪರೇಷನ್ ಮಾಡಿಸಬಹುದು. ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳಡಿ ಆಪರೇಷನ್ ಮಾಡಿಸಿಕೊಳ್ಳಲು ಅವಕಾಶವಿದೆ.

* ಶಿವಜಾತ ಜಿ. ಹಿರೇಮಠ್‌, ಸಿಂಧಗಿ: ಎರಡ್ಮೂರು ವರ್ಷಗಳಿಂದ ಬಲ ಮೊಣಕಾಲಿನಲ್ಲಿ ನೋವಿದೆ. ವೈದ್ಯರ ಸಲಹೆಯಂತೆ ಮಾತ್ರೆ ಪಡೆದಿದ್ದೇನೆ. ವ್ಯಾಯಾಮ ಸಹ ಮಾಡುತ್ತಿದ್ದೇನೆ.

– ಮತ್ತೊಮ್ಮೆ ವೈದ್ಯರ ಬಳಿ ಪರೀ‌ಕ್ಷಿಸಿಕೊಳ್ಳಿ. ಅವರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ.

ಕ್ಯಾಲ್ಸಿಯಂ ಯುಕ್ತ ಆಹಾರ ಸೇವಿಸಿ

ಭಾರತೀಯರ ಆಹಾರ ಶೈಲಿಯಲ್ಲಿ ಕ್ಯಾಲ್ಸಿಯಂ ಪ್ರಮಾಣ ತೀರಾ ಕಡಿಮೆ ಇರುತ್ತದೆ. ಆದ ಕಾರಣ ಕ್ಯಾಲ್ಸಿಯಂ ಪ್ರಮಾಣ ಅಧಿಕವಿರುವ ಆಹಾರ ಪದಾರ್ಥಗಳ ಸೇವನೆಗೆ ಆದ್ಯತೆ ನೀಡಬೇಕು. ಹಾಲು, ತುಪ್ಪ, ಮೊಟ್ಟೆ, ಮೀನು, ತರಕಾರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಆದರೆ, ಸಂದಿವಾತ, ಮಂಡಿನೋವು ಇರುವವರು ಆದಷ್ಟು ಈ ಪದಾರ್ಥಗಳಿಂದ ದೂರವಿರಬೇಕು.

ಮೂಳೆ, ಕೀಲು ನೋವಿಗೆ ನಿರ್ದಿಷ್ಟ ಕಾರಣವಿಲ್ಲ

ಮೂಳೆ ಮತ್ತು ಕೀಲು ನೋವು ಕಾಣಿಸಿಕೊಳ್ಳಲು ನಿರ್ದಿಷ್ಟ ಕಾರಣವಿಲ್ಲ. ನಮ್ಮ ಜೀವನ ಮತ್ತು ಆಹಾರ ಶೈಲಿ ಮತ್ತು ವಯಸ್ಸು ಆಧರಿಸಿ ಬರುತ್ತವೆ. ಬಹುತೇಕ 45 ವರ್ಷ ಮೇಲ್ಪಟ್ಟವರಿಗೆ ನಿಧಾನವಾಗಿ ಮೂಳೆ ಸವಕಳಿ ಬರುತ್ತದೆ. ಜಾಸ್ತಿ ಓಡಾಡುವುದರಿಂದ, ಕೆಲಸ ಮಾಡುವುದರಿಂದ ಬರುವುದಿಲ್ಲ. ಮಂಡಿನೋವು ಇರುವವರು ತೂಕ ಇಳಿಸಬೇಕು. ಪ್ರತಿನಿತ್ಯ ನಿಯಮಿತ ಆಹಾರ ಸೇವನೆ ಜೊತೆಗೆ ವ್ಯಾಯಾಮ ಮಾಡಬೇಕು.

ಮಂಡಿನೋವು ಹೆಚ್ಚಿರುವವರು ಹತ್ತುವುದು, ಇಳಿಯುವುದು, ಓಡುವುದು ಕಡಿಮೆ ಮಾಡಬೇಕು. ಬದಲಿಗೆ ಇಡೀ ದೇಹಕ್ಕೆ ಶ್ರಮ ನೀಡುವ ಈಜು, ಸೈಕ್ಲಿಂಗ್‌ ಮಾಡುವುದು ಉತ್ತಮ. ವಾಕಿಂಗ್‌, ಜಾಗಿಂಗ್‌ ಮಾಡುವುದರಿಂದ ಮಂಡಿನೋವು ಬರುವುದಿಲ್ಲ. ಆದರೆ, ಮಂಡಿ ನೋವು ಇರುವವರು ವಾಕಿಂಗ್‌, ಜಾಗಿಂಗ್‌ ಅತಿಯಾಗಿ ಮಾಡುವುದು ಒಳಿತಲ್ಲ. ಸರಳ ವ್ಯಾಯಾಮ ಮಾಡಬೇಕು.

ಮಂಡಿ ಚಿಪ್ಪು ಬದಲಾವಣೆಗೆ ವಯಸ್ಸಿನ ಮಿತಿ ಇಲ್ಲ

55 ವರ್ಷದಿಂದ 96 ವರ್ಷ ವಯಸ್ಸಾದವರಿಗೂ ಮಂಡಿ ಚಿಪ್ಪು ಬದಲಾವಣೆ ಮಾಡಿದ್ದೇವೆ. ಮಂಡಿ ಚಿಪ್ಪು ಶಸ್ತ್ರ ಚಿಕಿತ್ಸೆಗೆ ವಯಸ್ಸಿನ ಇತಿಮಿತಿ ಇಲ್ಲ. ಯಾರಿಗೆ ಅಡ್ಡಾಡಲು, ತಮ್ಮ ಕೆಲಸವನ್ನು ತಾವು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಅವರಿಗೆ ಮಂಡಿ ಚಿಪ್ಪು ಬದಲಾವಣೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT