ಶುಕ್ರವಾರ, ಅಕ್ಟೋಬರ್ 22, 2021
21 °C
ಕೈಗಾರಿಕೋದ್ಯಮ, ಶಿಕ್ಷಣ, ಪ್ರವಾಸೋದ್ಯಮ, ವೈದ್ಯಕೀಯ ಕ್ಷೇತ್ರದ ಪ್ರಗತಿಗೆ ಅನುಕೂಲ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಲೋಹದ ಹಕ್ಕಿಗಳ ಕಲರವ

ಪ್ರಮೋದ‌ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ವಾಣಿಜ್ಯ ನಗರಿ ಎಂದೇ ಹೆಸರಾದ ಹುಬ್ಬಳ್ಳಿಯಿಂದ ನಾಲ್ಕೈದು ವರ್ಷಗಳಲ್ಲಿ ನೇರ ವಿಮಾನಯಾನದಲ್ಲಿ ಆದ ಪ್ರಗತಿಯಿಂದಾಗಿ ಇಲ್ಲಿನ ಕೈಗಾರಿಕೋದ್ಯಮ ಮತ್ತು ವಾಣಿಜ್ಯ ವಹಿವಾಟು ವೇಗವಾಗಿ ಅಭಿವೃದ್ಧಿ ಕಾಣುತ್ತಿದೆ. ಜೊತೆಗೆ ಶಿಕ್ಷಣ, ಪ್ರವಾಸೋದ್ಯಮ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸುವುತ್ತ ದಾಪುಗಾಲು ಇಟ್ಟಿದೆ.

ನೆರೆಯ ಮುಂಬೈ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿರುವ ಇಲ್ಲಿನ ಉದ್ಯಮಿಗಳು ವಿಮಾನಯಾನದಿಂದಾಗಿ ಅಭಿವೃದ್ಧಿಯ ವೇಗ ಹೆಚ್ಚಿಸಿಕೊಂಡಿದ್ದಾರೆ. ಕೈಗಾರಿಕಾ ‘ಹಬ್‌’ ಆಗುತ್ತಿರುವ ಹುಬ್ಬಳ್ಳಿಯಲ್ಲಿ ಕಿರ್ಲೋಸ್ಕರ್ ಎಲೆಕ್ಟ್ರಿಕ್ ಕಂಪನಿ, ಬಿಡಿಕೆ, ಎನ್‌ಜಿಇಎಫ್‌, ಟಾಟಾ ಮೋಟರ್ಸ್ ಸೇರಿದಂತೆ ಹಲವು ಪ್ರಮುಖ ಉದ್ಯಮಗಳಿವೆ. ತಾರಿಹಾಳ, ಗೋಕುಲ ರಸ್ತೆ ಮತ್ತು ರಾಯಾಪುರ ಕೈಗಾರಿಕಾ ಪ್ರದೇಶದಲ್ಲಿ ನೂರಾರು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ನಡೆಯುತ್ತಿವೆ.

ಇಲ್ಲಿನ ಕೈಗಾರಿಕೆಗಳು ಉತ್ಪಾದಿಸುವ ಸರಕುಗಳಿಗೆ ಬೇಕಾಗುವ ಕಚ್ಚಾವಸ್ತುಗಳನ್ನು ತರಿಸಲು ಸಾರಿಗೆ ಸೌಕರ್ಯಕ್ಕೆ ಮೊದಲು ಬೆಂಗಳೂರಿನ ಮೇಲೆ ಅವಲಂಬನೆಯಾಗಬೇಕಿತ್ತು. ನೇರ ವಿಮಾನ ಇಲ್ಲದ ದಿನಗಳಲ್ಲಿ ರಾಜ್ಯ ರಾಜಧಾನಿಯಿಂದ ವಸ್ತುಗಳನ್ನು ತರಿಸಲು ಎರಡು ದಿನಗಳೇ ಬೇಕಾಗುತ್ತಿತ್ತು. ದೇಶದ ವಾಣಿಜ್ಯ ನಗರಿ ಮುಂಬೈ, ನವದೆಹಲಿ, ಅಹಮದಾಬಾದ್‌ನಿಂದ ತರಲು ಒಂದು ವಾರದ ತನಕ ಕಾಯಬೇಕಾದ ಪರಿಸ್ಥಿತಿಯೂ ಇತ್ತು.

ಯಂತ್ರಗಳ ಬಿಡಿಭಾಗಗಳಿಗೆ ಉದ್ಯಮಿಗಳು ಮುಂಬೈಯನ್ನು ನೆಚ್ಚಿಕೊಂಡಿದ್ದಾರೆ. ಈಗ ಹುಬ್ಬಳ್ಳಿಯಿಂದ ನೇರವಾಗಿ ಮುಂಬೈಗೆ ವಿಮಾನ ಇರುವುದರಿಂದ ಅನುಕೂಲವಾಗಿದೆ. ದೇಶದ ಪ್ರಮುಖ ನಗರಗಳಿಂದ ಒಂದೇ ದಿನದಲ್ಲಿ ಬಂದು, ವಾಪಸ್‌ ಹೋಗಬಹುದಾಗಿದೆ.

ಕೈಗಾರಿಕಾ ಯಂತ್ರೋಪಕರಣಗಳು, ಆಟೊಮೊಬೈಲ್‌, ಸಿದ್ಧ ಉಡುಪುಗಳು, ಎಲೆಕ್ಟ್ರಿಕಲ್, ಸ್ಟೀಲ್ ಪೀಠೋಪಕರಣಗಳು, ಆಹಾರ ಉತ್ಪನ್ನಗಳು, ಆಭರಣಗಳು, ರಬ್ಬರ್ ಮತ್ತು ಚರ್ಮದ ಕೈಗಾರಿಕೆಗಳವರು ಕಚ್ಚಾ ಸಾಮಗ್ರಿಗಳನ್ನು ಹೊರರಾಜ್ಯಗಳಿಂದ ಸುಲಭವಾಗಿ ತರಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕಾರ್ಗೊ ಸೌಲಭ್ಯ ಕೂಡ ಇರುವುದು ಇದಕ್ಕೆ ಅನುಕೂಲವಾಗಿದೆ.

ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಮತ್ತು ಸೌಲಭ್ಯಗಳಿದ್ದರೂ ಬಂದು ವಿಮಾನಯಾನ ಸೌಲಭ್ಯ ಇರದಿದ್ದರಿಂದ ಉದ್ಯಮಿಗಳು ಹಿಂದೇಟು ಹಾಕುತ್ತಿದ್ದರು. ನೇರ ವಿಮಾನ ಸೌಲಭ್ಯ ಸುಧಾರಿಸಿದ ಬಳಿಕ ಆಟೊಮೊಬೈಲ್‌ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಸ್ಕೋಡಾ, ಆರ್‌.ಡಿ, ಹುಂಡೈ, ವೊಲ್ವೊ ಷೋ ರೂಮ್‌ಗಳು ಇಲ್ಲಿ ಆರಂಭವಾಗಿವೆ.

‘ನೇರ ವಿಮಾನದಿಂದಾಗಿ ಹುಬ್ಬಳ್ಳಿ ರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ಆಗಿ ಬೆಳೆಯುತ್ತಿದೆ. ಈಗಿರುವ ಸೌಲಭ್ಯಗಳನ್ನು ಇನ್ನಷ್ಟು ಹೆಚ್ಚಿಸಬೇಕು. ಮಾರ್ಬಲ್ಸ್‌ನ ದೊಡ್ಡ ಉದ್ಯಮ ಹೊಂದಿರುವ ರಾಜಸ್ಥಾನದ ಕಿಶನ್‌ಗಡ, ಟೈಕ್ಸ್‌ಟೈಲ್ಸ್‌ ಉದ್ಯಮದಲ್ಲಿ ಖ್ಯಾತಿ ಹೊಂದಿರುವ ಸೂರತ್‌ ಮತ್ತು ದೋಸೆಹಿಟ್ಟು ಸೇರಿದಂತೆ ಪ್ಯಾಕಿಂಗ್ ಆಹಾರಧಾನ್ಯಗಳಿಗೆ ಹೆಸರಾದ ಇಂದೋರ್‌ಗೆ ನೇರ ವಿಮಾನ ಕಲ್ಪಿಸಿದರೆ ಅಭಿವೃದ್ಧಿಯ ವೇಗ ಇನ್ನಷ್ಟು ಹೆಚ್ಚಾಗುತ್ತದೆ’ ಎನ್ನುತ್ತಾರೆ ಉದ್ಯಮಿ ಮಹೇಂದ್ರ ಸಿಂಘಿ.

ಶೈಕ್ಷಣಿಕ ಪ್ರಗತಿಗೂ ಅನುಕೂಲ: ಜಿಲ್ಲೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ರಾಜ್ಯದ ಏಕೈಕ ಕಾನೂನು ವಿಶ್ವವಿದ್ಯಾಲಯವಿದೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಹಾಗೂ ಎಂಜಿನಿಯರ್ ಕಾಲೇಜುಗಳಿವೆ.

ಆ ಕಾಲೇಜುಗಳಿಗೆ ಉಪನ್ಯಾಸ ನೀಡಲು, ಕೃಷಿ ವಿ.ವಿ.ಯಲ್ಲಿ ನಡೆಯುವ ಸಂಶೋಧನೆಗಳನ್ನು ನೋಡಲು ಮೊದಲು ಸಾರಿಗೆ ಸಂಪರ್ಕದ ಕೊರತೆಯಿಂದ ವಿಷಯ ಪರಿಣತರು ಬರುತ್ತಿರಲಿಲ್ಲ. ಆದರೆ, ಮುಂಬೈ ಮತ್ತು ಹಿಂಡನ್‌ನಿಂದ (ದೆಹಲಿ ಹತ್ತಿರದ ಪ್ರದೇಶ) ನೇರ ವಿಮಾನ ಆರಂಭವಾದ ಮೇಲೆ ಅಲ್ಲಿನ ಪ್ರತಿಷ್ಠಿತ ಕಾಲೇಜುಗಳ ಪ್ರಾಧ್ಯಾಪಕರು ಮತ್ತು ಸಂಶೋಧಕರು ಇಲ್ಲಿಗೆ ಬಂದು ಹೋಗುತ್ತಿದ್ದಾರೆ. ಇದರಿಂದಾಗಿ ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಗೂ ಅನುಕೂಲವಾಗಿದೆ.

ಪ್ರವಾಸೋದ್ಯಮಕ್ಕೆ ಪೂರಕ: ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಉತ್ತರ ಕನ್ನಡ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ತೆರಳಲು ದೂರದ ಪ್ರಯಾಣಿಕರಿಗೆ ಪ್ರವಾಸಿ ತಾಣಗಳನ್ನು ವೀಕ್ಷಿಸಲು ವಿಮಾನ ಸಂಪರ್ಕ ಅನುಕೂಲ ಒದಗಿಸಿದೆ.

ಕೋವಿಡ್‌ ಕಾರಣದಿಂದಾಗಿ ಹಿಂದಿನ ಎರಡು ವರ್ಷಗಳಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಇದಕ್ಕೂ ಮೊದಲು ವಿದೇಶಿ ಪ್ರವಾಸಿಗರು ಗೋವಾಕ್ಕೆ ಬಂದು, ಹುಬ್ಬಳ್ಳಿಯಿಂದ ವಿಶ್ವವಿಖ್ಯಾತ ಹಂಪಿ, ಜೋಗ ಜಲಪಾತ, ಕಾರವಾರ, ಬದಾಮಿ, ಪಟ್ಟದಕಲ್ಲು ಸೇರಿದಂತೆ ಅನೇಕ ಪ್ರವಾಸಿ ತಾಣಗಳನ್ನು ವೀಕ್ಷಿಸುತ್ತಾರೆ.

ಹುಬ್ಬಳ್ಳಿಯಿಂದ ಇಂಡಿಗೊ ಸಂಸ್ಥೆಯ ವಿಮಾನಗಳು ಪ್ರತಿನಿತ್ಯ, ಸ್ಟಾರ್‌ ಏರ್‌ ವಾರದಲ್ಲಿ ಮೂರು ದಿನ ಮತ್ತು ಅಲಯನ್ಸ್‌ ಏರ್‌ ವಾರದಲ್ಲಿ ಎರಡು ದಿನ ಸಂಚರಿಸುತ್ತಿವೆ. ಈಗಿರುವ ಸೌಲಭ್ಯಗಳನ್ನು ವಿಸ್ತರಿಸುವ ಜೊತೆಗೆ ಜೈಪುರ, ಲಖನೌ, ಕೋಲ್ಕತ್ತ ಮತ್ತು ಭುವನೇಶ್ವರಕ್ಕೆ ನೇರ ವಿಮಾನ ಕಲ್ಪಿಸಿದರೆ ಸಂಪರ್ಕ ಇನ್ನಷ್ಟು ಸುಲಭವಾಗುತ್ತದೆ. ಪ್ರವಾಸಿ ತಾಣಗಳ ವೀಕ್ಷಣೆ, ಇಲ್ಲಿ ನೆಲೆಸಿರುವ ಅಲ್ಲಿನ ಉದ್ಯಮಿಗಳು, ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಹುಬ್ಬಳ್ಳಿ ತನ್ನ ಬ್ರ್ಯಾಂಡ್ ಮೌಲ್ಯ ವಿಸ್ತರಿಸಿಕೊಳ್ಳುವುದಕ್ಕೂ ವೇದಿಕೆ ಸಿಕ್ಕಂತಾಗುತ್ತದೆ.

***

ವಿಮಾನ ಸಂಪರ್ಕದಿಂದ ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಅಭಿವೃದ್ಧಿ ಕಂಡಿದೆ. ವಿಷಯ ಪರಿಣತರು, ಸಂಶೋಧಕರು ಬರುತ್ತಿದ್ದಾರೆ. ನಮ್ಮ ಸಾಧನೆಗಳನ್ನು ಅವರಿಗೆ ತೋರಿಸುವುದು ಸುಲಭವಾಗುತ್ತಿದೆ.

- ಅಶೋಕ ಶೆಟ್ಟರ್‌, ಕುಲಪತಿ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ, ಹುಬ್ಬಳ್ಳಿ

 

***

ಕಡಿಮೆ ಅವಧಿಯಲ್ಲಿ ಮೂತ್ರಪಿಂಡ ರವಾನೆ ಸೇರಿದಂತೆ ವೈದ್ಯಕೀಯ ಕ್ಷೇತ್ರದ ಅನೇಕ ಕೆಲಸಗಳಿಗೆ ವಿಮಾನಯಾನ ಅನುಕೂಲವಾಗಿದೆ. ಇದರಿಂದ ಹೊರರಾಜ್ಯಗಳ ಶಸ್ತ್ರಚಿಕಿತ್ಸೆ ತಜ್ಞರು ಹುಬ್ಬಳ್ಳಿಗೆ ಬರುತ್ತಿದ್ದಾರೆ.

- ಲಕ್ಷ್ಮಣ ಟಿ.ಎಲ್‌. ಸಿಇಒ, ಸುಚಿರಾಯು ಆಸ್ಪತ್ರೆ, ಹುಬ್ಬಳ್ಳಿ

 

***

ಹಿಂದಿನ ಐದು ವರ್ಷಗಳಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ ಪ್ರಯಾಣಿಕರು ಮಾಹಿತಿ

ವರ್ಷ;ಪ್ರಯಾಣಿಕರು

2016–17;25,928

2017–18;49,227

2018–19;4,60,462

2019–20;4,75,218

2020–21;1,19,072

ಹುಬ್ಬಳ್ಳಿಯಿಂದ ಇರುವ ವಿಮಾನ ಸೌಲಭ್ಯ

ಇಂಡಿಗೊ: ಚೆನ್ನೈ, ಬೆಂಗಳೂರು, ಗೋವಾ, ಕೊಚ್ಚಿ, ಮುಂಬೈ ಮತ್ತು ಕಣ್ಣೂರು (ನಿತ್ಯ ಸಂಚಾರ)
ಸ್ಟಾರ್‌ ಏರ್‌: ಬೆಂಗಳೂರು, ಹಿಂಡನ್‌, ತಿರುಪತಿ (ವಾರದಲ್ಲಿ ನಾಲ್ಕು ದಿನ)
ಅಲಯನ್ಸ್‌ ಏರ್‌: ಹೈದರಾಬಾದ್‌ (ವಾರದಲ್ಲಿ ಎರಡು ದಿನ)

ಹುಬ್ಬಳ್ಳಿ ವಿಮಾನಯಾನ ಬೆಳೆದಿದ್ದು ಹೀಗೆ...

ಉತ್ತರ ಕರ್ನಾಟಕದ ಪ್ರಮುಖ ನಗರ ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲು 1970ರಿಂದಲೂ ಪ್ರಯತ್ನಗಳು ನಡೆದಿದ್ದವು. ಸ್ಥಳೀಯ ಆಡಳಿತ ಗೋಕುಲ ರಸ್ತೆಯಲ್ಲಿ 347 ಎಕರೆ ಜಾಗವನ್ನು ಕೇಂದ್ರ ಸರ್ಕಾರಕ್ಕೆ ನೀಡಿತು. ನಿಲ್ದಾಣ ನಿರ್ಮಾಣದ ಖರ್ಚು ರಾಜ್ಯ ಸರ್ಕಾರವೇ ವಹಿಸಿಕೊಳ್ಳಬೇಕು ಎನ್ನುವ ಷರತ್ತಿನೊಂದಿಗೆ ವಾಯುದೂತ್‌ ವಿಮಾನಗಳ ಸಂಚಾರಕ್ಕೆ ಕೇಂದ್ರ ಒಪ್ಪಿಕೊಂಡಿತು.

1988ರಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಂಡು, 1989ರಲ್ಲಿ ಸಂಚಾರ ಆರಂಭವಾಗಿ ಕೆಲ ತಿಂಗಳಲ್ಲೇ ನಿಂತುಹೋಯಿತು. ನಂತರ ಬೋಯಿಂಗ್‌ ವಿಮಾನಗಳ ಸಂಚಾರಕ್ಕೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವ ಕೈಗೆತ್ತಿಕೊಳ್ಳಲಾಯಿತು. 1994ರ ಏಪ್ರಿಲ್‌ನಲ್ಲಿ ಚೆನ್ನೈ–ಬೆಂಗಳೂರು–ಹುಬ್ಬಳ್ಳಿ ನಡುವೆ ವಿಮಾನ ಸಂಚಾರವನ್ನು ಖಾಸಗಿ ಸಂಸ್ಥೆ ಎನ್‌ಈಪಿಸಿ ಸಂಸ್ಥೆ ಆರಂಭಿಸಿತು.

2003ರಲ್ಲಿ ಏರ್‌ ಡೆಕ್ಕನ್‌, ಬಳಿಕ ಕಿಂಗ್‌ಫಿಷರ್‌ ಸಂಸ್ಥೆ ಬೆಂಗಳೂರು ಮತ್ತು ಮುಂಬೈಗೆ ಸಂಚಾರ ಆರಂಭಿಸಿದವು. 2014ರಿಂದ 2019ರ ತನಕ ಸ್ಟೈಸ್‌ಜೆಟ್‌ ಹಾಗೂ 2018ರಿಂದ ಇಂಡಿಗೊ ಕಾರ್ಯಾಚರಣೆ ಆರಂಭಿಸಿತು. 

***

‘ಹೈದರಾಬಾದ್‌ನತ್ತ ಇರಲಿ ಚಿತ್ತ’

ಜಿಲ್ಲೆಯಲ್ಲಿ ಕೈಗಾರಿಕಾ ಕ್ಷೇತ್ರದ ಕ್ಷಿಪ್ರ ಬೆಳವಣಿಗೆಗೆ ವಿಮಾನ ಸೌಲಭ್ಯ ಪ್ರಮುಖ ಕಾರಣ ಎನ್ನುವುದು ಸ್ಪಷ್ಟ. ಇಲ್ಲಿನ ಉದ್ಯಮಿಗಳು ವಹಿವಾಟಿಗಾಗಿ ಮುಂಬೈ, ನವದೆಹಲಿ, ಅಹಮದಾಬಾದ್‌ನತ್ತ ಗಮನ ಹರಿಸುತ್ತಿದ್ದಾರೆ. ಅಲ್ಲಿ ನೀಡುತ್ತಿರುವ ಗಮನವನ್ನು ಹೈದರಾಬಾದ್‌ಗೂ ನೀಡಬೇಕು. ತೆಲಂಗಾಣದಲ್ಲಿ ಆಗುತ್ತಿರುವ ಕೈಗಾರಿಕಾ ಬೆಳವಣಿಗೆಗಳನ್ನು ಗಮನಿಸಬೇಕು.

ಬೆಂಗಳೂರಿನಲ್ಲಿ ಈಗ ಉದ್ಯಮ ಮತ್ತು ಜೀವನ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ಬಹಳಷ್ಟು ಜನ ಹುಬ್ಬಳ್ಳಿಯಂಥ ಊರುಗಳತ್ತ ಗಮನ ಹರಿಸುತ್ತಿದ್ದಾರೆ. ಈ ಅವಕಾಶ ಇನ್ನೂ ಚೆನ್ನಾಗಿ ಬಳಸಿಕೊಳ್ಳಬೇಕು.

- ವಿಜೇಶ್ ಸೈಗಲ್‌, ಅಧ್ಯಕ್ಷ, ಹುಬ್ಬಳ್ಳಿ ಟೈ ಸಂಸ್ಥೆ

***

’ಅಂತರರಾಷ್ಟ್ರೀಯ ಸಂಪರ್ಕ ಕಲ್ಪಿಸಲಿ’

ದೇಶದ ಬಹುತೇಕ ಕಾರ್ಪೊರೇಟ್‌ ಕಂಪನಿಗಳ ಮುಖ್ಯ ಕಚೇರಿಗಳು ಮುಂಬೈನಲ್ಲಿರುವ ಕಾರಣ ಅಲ್ಲಿಂದ ಹುಬ್ಬಳ್ಳಿಗೆ ಬರುವವರಿಗೆ ವಿಮಾನಯಾನದಿಂದ ಅನುಕೂಲವಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾರ್ಗೊ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಬೇಕಿದೆ. ಅಂತರರಾಷ್ಟ್ರೀಯ ವಿಮಾನಗಳಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯಾದರೆ ಸಿಂಗಪುರ, ಅಮೆರಿಕ, ಯುರೋಪ್‌ ರಾಷ್ಟ್ರಗಳಿಗೆ ಹೋಗಿ ಬರುವ ಉದ್ಯಮಿಗಳ ಸಂಖ್ಯೆ ಹೆಚ್ಚಾಗುತ್ತದೆ. ಆಗ ಹುಬ್ಬಳ್ಳಿ ಜಾಗತಿಕ ನಕಾಶೆಯಲ್ಲಿ ಹೆಚ್ಚು ಖ್ಯಾತಿ ಪಡೆಯುತ್ತದೆ.

- ಅರುಣ್‌ ಹೆಬ್ಳೀಕರ್‌, ವ್ಯವಸ್ಥಾಪಕ ನಿರ್ದೇಶಕರು, ಯುನಿ ಅಬೆಕ್ಸ್‌ ಅಲಾಯ್‌ ಪ್ರೊಡೆಕ್ಟ್‌ ಲಿಮಿಟೆಡ್‌, ಧಾರವಾಡ

***

‘ಒಂದೇ ದಿನದಲ್ಲಿ ಹೋಗಿಬರಲು ಅನುಕೂಲ’

ಜಿಲ್ಲೆಯಲ್ಲಿ ಉದ್ಯಮಗಳನ್ನು ಸ್ಥಾಪಿಸಲು, ಕಂಪನಿಗಳನ್ನು ಆರಂಭಿಸಲು ಬಹಳಷ್ಟು ಜನ ಮೊದಲು ಹಿಂದೇಟು ಹಾಕುತ್ತಿದ್ದರು. ಈಗ ಬೆಳಿಗ್ಗೆ ಬಂದು ಸಂಜೆ ವಾಪಸ್‌ ಹೋಗಲು ಪ್ರಮುಖ ನಗರಗಳಿಗೆ ನೇರವಿಮಾನ ಸೌಲಭ್ಯವಿದೆ. ಇದರಿಂದಾಗಿ ಉದ್ಯಮಕ್ಕಷ್ಟೇ ಅಲ್ಲದೆ, ಶಿಕ್ಷಣ, ವೈದ್ಯಕೀಯ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ಅನುಕೂಲವಾಗಿದೆ.

ಮಹೇಂದ್ರ ಲದ್ದಡ, ಅಧ್ಯಕ್ಷ, ವಾಣಿಜ್ಯೋದ್ಯಮ ಸಂಸ್ಥೆ ಹುಬ್ಬಳ್ಳಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು