ಭಾನುವಾರ, ಸೆಪ್ಟೆಂಬರ್ 25, 2022
21 °C

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದನ್ನು ಒಪ್ಪುವುದಿಲ್ಲ: ಕೇಂದ್ರ ಸಚಿವ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಮೊಟ್ಟೆ ಎಸೆದಿರುವುದನ್ನು ಒಪ್ಪುವುದಿಲ್ಲ. ಇಂಥ ಚಟುವಟಿಕೆಗಳಿಗೆ ಬಿಜೆಪಿ ಎಂದಿಗೂ ಪ್ರೋತ್ಸಾಹ ನೀಡುವುದಿಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

‘ಪ್ರತಿಭಟನೆ ನಡೆಸಲು ಎಲ್ಲರಿಗೂ ಹಕ್ಕಿದೆ. ಅದು ಪ್ರಜಾಪ್ರಭುತ್ವದ ಮಾರ್ಗದಲ್ಲಿ ಇರಬೇಕು. ಯಾರೂ ಲಕ್ಷ್ಮಣ ರೇಖೆ ದಾಟಬಾರದು. ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸಿದ್ದರಾಮಯ್ಯ ಅವರೂ ಇಂಥ ಕೃತ್ಯಗಳಿಗೆ ಪ್ರಚೋದನೆ ನೀಡುವುದನ್ನು ನಿಲ್ಲಿಸಬೇಕು’ ಎಂದು ಇಲ್ಲಿ ಪ್ರತಿಕ್ರಿಯಿಸಿದರು.

‘ಈಗಿರುವುದು ನಕಲಿ ಕಾಂಗ್ರೆಸ್‌. ನಕಲಿ ಗಾಂಧಿಗಳನ್ನು ಮೆಚ್ಚಿಸಲು ಸಿದ್ದರಾಮಯ್ಯ ಸಾವರ್ಕರ್‌ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ವೀರ ಸಾವರ್ಕರ್‌ ಅವರನ್ನು ಟೀಕಿಸಿದರೆ, ಅವಹೇಳನಕಾರಿಯಾಗಿ ಮಾತನಾಡಿದರೆ ಮುಸ್ಲಿಮರ ಮತಗಳು ಸಿಗುತ್ತವೆ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ತೇಲುತ್ತಿದ್ದಾರೆ’ ಎಂದು ದೂರಿದರು.

ಸಾವರ್ಕರ್‌ ಅವರಿಗೆ 11 ವರ್ಷ ‘ಕರಿನೀರಿನ’ ಶಿಕ್ಷೆ ನೀಡಲಾಗಿತ್ತು. ನಕಲಿ ಗಾಂಧಿ ಕುಟುಂಬದವರು ಯಾರಾದರೂ ಇಂಥ ಶಿಕ್ಷೆ ಅನುಭವಿಸಿದ್ದಾರಾ? ಎಂದು ಅವರು ಪ್ರಶ್ನಿಸಿದರು.

’ದೇಶದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದೆ. ಕೆಲವು ರಾಜ್ಯಗಳಲ್ಲಿ ಒಬ್ಬರೇ ಒಬ್ಬ ಸಂಸದರೂ ಆಯ್ಕೆಯಾಗಿಲ್ಲ. ಅಧಿಕಾರ ಉಳಿದಿರುವುದು ಎರಡು ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿದೆ. ಇದನ್ನು ಅರಿಯದೇ ಕಾಂಗ್ರೆಸ್‌ನವರು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಹಗಲುಕನಸು ಕಾಣುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು