ಶುಕ್ರವಾರ, ಜನವರಿ 27, 2023
21 °C
ಕಿಮ್ಸ್‌ ಆಸ್ಪತ್ರೆಯ ನವಜಾತ ಶಿಶು ತಜ್ಞ ಡಾ. ಮಾರ್ತಾಂಡಪ್ಪ ಸಲಹೆ

ಗರ್ಭಿಣಿಯರೇ, ಹೆಚ್ಚು ನೀರು ಕುಡಿಯಿರಿ: ಕಿಮ್ಸ್‌ ಆಸ್ಪತ್ರೆ ತಜ್ಞ ವೈದ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಗರ್ಭಿಣಿ, ಬಾಣಂತಿಯರು ಹೆಚ್ಚು ನೀರು ಕುಡಿಯಬೇಕು. ತಾಯಿಯು ನಿತ್ಯ 3ರಿಂದ 4 ಲೀಟರ್ ನೀರು ಕುಡಿಯುವುದರಿಂದ ನವಜಾತ ಶಿಶುಗಳ ಆರೋಗ್ಯ ಉತ್ತಮವಾಗಿರುತ್ತದೆ’ ಎಂದು ಕಿಮ್ಸ್‌ ಆಸ್ಪತ್ರೆಯ ನವಜಾತ ಶಿಶು ತಜ್ಞ ಡಾ. ಮಾರ್ತಾಂಡಪ್ಪ ಡಿ.ಎಚ್‌ ಸಲಹೆ ನೀಡಿದರು.

‘ನವಜಾತ ಶಿಶುಗಳ ಆರೋಗ್ಯ ರಕ್ಷಣೆ’ ವಿಷಯ ಕುರಿತು ‘ಪ್ರಜಾವಾಣಿ’ ಶುಕ್ರವಾರ ಆಯೋಜಿಸಿದ್ದ ‘ಫೇಸ್‌ಬುಕ್‌ ಲೈವ್’ ಸಂವಾದದಲ್ಲಿ ಮಾತನಾಡಿದ ಅವರು, ‘ಇತ್ತೀಚೆಗೆ ಗರ್ಭಿಣಿಯರು ಹೆಚ್ಚಾಗಿ ನೀರು ಕುಡಿಯುತ್ತಿಲ್ಲ. ಇದೇ ಕಾರಣದಿಂದಾಗಿ, ತಿಂಗಳಿಗೆ ಕನಿಷ್ಠ ಐದು ಶಿಶುಗಳು ಕೊನೆಯುಸಿರೆಳೆಯುತ್ತಿವೆ. ನೀರು ಹೆಚ್ಚು ಕುಡಿದರೆ ಮಗುವಿನ ಮೇಲೆ ಅಡ್ಡ ಪರಿಣಾಮವಾಗಲಿದೆ ಎಂಬ ಮೂಢನಂಬಿಕೆಯನ್ನು ಬಿಡಬೇಕು. ಜೊತೆಗೆ, ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು’ ಎಂದರು.

‘ಸಾಮಾನ್ಯವಾಗಿ ಗರ್ಭಿಣಿಯರಿಗೆ ಆಸಿಡಿಟಿ ಹೆಚ್ಚಾಗಿರುವುದರಿಂದ ಖಾರ ಸೇರಿದಂತೆ, ಎಣ್ಣೆ ಪದಾರ್ಥಗಳನ್ನು ಸೇವಿಸಬಾರದು. ಮಗು ಹುಟ್ಟಿದ ತಕ್ಷಣ ತಾಯಿಯ ಎದೆ ಹಾಲು ಕುಡಿಸಬೇಕು. ಆ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ. ‘ಗಿಣ್ಣ’ದ  1 ಎಂ.ಎಲ್‌ ಹಾಲು ನಂತರದ ಎದೆ ಹಾಲಿನ 1 ಲೀಟರ್‌ಗೆ ಸಮ. ಮಗುವಿಗೆ 6 ತಿಂಗಳು ಕಡ್ಡಾಯವಾಗಿ ಎದೆಹಾಲು ಕುಡಿಸಬೇಕು. ನಂತರ, ಆಹಾರದ ಜೊತೆಗೆ ಎರಡು ವರ್ಷದವರೆಗೂ ಹಾಲುಣಿಸಬೇಕು’ ಎಂದು ಸಲಹೆ ನೀಡಿದರು.

‘ಮಗುವಿನ ಶುಚಿತ್ವಕ್ಕೆ ಒತ್ತು ನೀಡುವ ಜೊತೆಗೆ, ತಾಯಂದಿರು ಸಹ ವೈಯಕ್ತಿಕ ಆರೋಗ್ಯ ಮತ್ತು ಶುಚಿತ್ವದತ್ತ ಗಮನ ಹರಿಸಬೇಕು. ಮಗುವಿನ ತಲೆ, ಕಾಲು ಹಾಗೂ ಕೈಗಳನ್ನು ಬೆಚ್ಚಗಿಡಬೇಕು. ಬೆಚ್ಚನೆಯ ಬಟ್ಟೆಗಳನ್ನು ತೊಡಿಸಬೇಕು. ಶಿಶುವಿಗೆ ಎಣ್ಣೆ ಹಚ್ಚಿ ಕೆಲ ಹೊತ್ತು ಮಸಾಜ್‌ ಮಾಡಿ, ಸ್ನಾನ ಮಾಡಿಸುವುದರಿಂದ ಮಗು ಚೆನ್ನಾಗಿ ನಿದ್ರೆ ಮಾಡುತ್ತದೆ. ಬೆಳವಣಿಗೆಯೂ ಚೆನ್ನಾಗಿರುತ್ತದೆ’ ಎಂದು ತಿಳಿಸಿದರು.

‘ಶಿಶುಗಳಿಗೆ ಎರಡು ಹಂತಗಳಲ್ಲಿ ಲಸಿಕೆ ಹಾಕಲಾಗುತ್ತದೆ. ಅವಧಿ ನಂತರ ಮತ್ತು ಅವಧಿ ಪೂರ್ವ ಹುಟ್ಟುವ ಮಕ್ಕಳಿಗೆ ಬಿಸಿಜಿ, ಹೆಪಟೈಟಿಸ್‌ ‘ಬಿ’, ಪೋಲಿಯೊ ಲಸಿಕೆಯನ್ನು ತೂಕಕ್ಕೆ ಅನುಗುಣವಾಗಿ ಹಾಕಲಾಗುತ್ತದೆ’ ಎಂದರು.

ಸಿಸೇರಿಯನ್‌ ಹೆಚ್ಚುತ್ತಿದೆ: ‘ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಹೆರಿಗೆಗಿಂತ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವುದು ಹೆಚ್ಚಾಗುತ್ತಿದೆ. ಹೆರಿಗೆ ನೋವು ತಡೆಯಲಾಗದಿದ್ದಾಗ ಕೆಲವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ. ತಾಯಿಯ ಆರೋಗ್ಯಕ್ಕೆ ಅಪಾಯವುಂಟಾಗುತ್ತದೆ ಎಂಬ ಸಂದರ್ಭದಲ್ಲಿ ವೈದ್ಯರು ಸಿಜೆರಿಯನ್‌ಗೆ ಸಲಹೆ ನೀಡುತ್ತಾರೆ’ ಎಂದು ತಿಳಿಸಿದರು.

ಸಂವಾದ ವೀಕ್ಷಣೆಗೆ ಲಿಂಕ್: https://fb.watch/gSSqv-tZwO/?mibextid=RUbZ1f

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು