ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದ್ದು, ನೆನಗುದಿಗೆ ಬಿದ್ದಿರುವ ನೀರಾವರಿ ಹಾಗೂ ಇತರ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿ ಧಾರವಾಡ ಜಿಲ್ಲಾ ರೈತ ಸಂಘಟನೆಗಳ ಒಕ್ಕೂಟದ ಸದಸ್ಯರು ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಚನ್ನಮ್ಮ ವೃತ್ತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಕಾರ್ಯಕ್ರಮ ನೆಪದಲ್ಲಿ ಚುನಾವಣಾ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಧಾರವಾಡಕ್ಕೆ ಬರುತ್ತಿದ್ದಾರೆ. ಪದೇ ಪದೇ ಉತ್ತರ ಕರ್ನಾಟಕ ಭಾಗಕ್ಕೆ ಬರುತ್ತಿರುವ ಅವರು, ಇಲ್ಲಿಯ ಜನರ ಪ್ರಮುಖ ಬೇಡಿಕೆಯಾದ ಮಹದಾಯಿ ಯೋಜನೆ ಅನುಷ್ಠಾನದ ಕುರಿತು ಒಮ್ಮೆಯೂ ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಮುಖಂಡ ಸಿದ್ದು ತೇಜಿ ಮಾತನಾಡಿ, ‘ಧಾರವಾಡಕ್ಕೆ ಬರುತ್ತಿರುವ ಪ್ರಧಾನಿ ಅವರನ್ನು ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಲಾಗಿತ್ತು. ಭದ್ರತೆ ಹಿನ್ನೆಲೆಯಲ್ಲಿ ಅವಕಾಶ ನೀಡದೆ, ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದ್ದೇವೆ. ಮಹದಾಯಿ ಯೋಜನೆ ಅನುಷ್ಠಾನಗೊಳಿಸಿ ಕಾಮಗಾರಿ ಆರಂಭಿಸಬೇಕು. ಕೃಷಿಕರಿಗೆ ತುಂಗಾಭದ್ರ, ಕೃಷ್ಣ ಹಾಗೂ ಘಟಪ್ರಭಾ ನದಿ ನೀರು ಸದುಪಯೋಗವಾಗುವ ನೀರಾವರಿ ಯೋಜನೆ ಜಾರಿಯಾಗಬೇಕು. ರೈತ ಹೋರಾಟಗಾರರ ಮೇಲಿನ ಪ್ರಕರಣ ರದ್ದುಗೊಳಿಸಬೇಕು. ದಿನದ 12 ಗಂಟೆ ರೈತರಿಗೆ ಉಚಿತ ವಿದ್ಯುತ್ ಒದಗಿಸಬೇಕು. ಕೈಗಾರಿಕಾ ಪ್ರದೇಶಗಳಿಗೆ ರೈತರಿಂದ ಜಮೀನು ಖರೀದಿಸುವ ಪ್ರಕ್ರಿಯೆ ನಿಲ್ಲಿಸಬೇಕು. ಬೆಳೆ ಸಾಲ ಮನ್ನಾ ಮಾಡಿ, ಬೆಂಬಲ ಬೆಲೆ ನೀಡುವ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.
ಶಂಕರಣ್ಣ ಅಂಬಲಿ, ಬಾಬಾಜಾನ್ ಮುಧೋಳ, ರಮೇಶ ಬೋಸ್ಲೆ, ಆನಂದ ದಲಬಂಜನ, ರಬ್ಬಾನಿ ಮೇಸ್ತ್ರಿ, ಜಾವಿದ್ ಸವಣೂರ, ಫೈರೋಜ್‌ಖಾನ್ ಪಠಾಣ, ಇಜಾಜ್ ಮುಧೋಳ, ಬಶೀರ್‌ಅಹ್ಮದ್ ಮುಲ್ಲಾ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.