ಶನಿವಾರ, ಫೆಬ್ರವರಿ 27, 2021
28 °C

ಉಕ್ಕಿ ಹರಿಯುತ್ತಿದೆ ಕೃಷ್ಣಾ | ಗೋಕಾಕ ತಾಲ್ಲೂಕಿನ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಬೆಳಗಾವಿ, ಖಾನಾಪುರ, ಬೈಲಹೊಂಗಲ, ಹಿರೇಬಾಗೇವಾಡಿಯಲ್ಲಿ ಮಳೆ ಮುಂದುವರಿದಿದೆ. ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲಿ ಗೋಕಾಕ ತಾಲ್ಲೂಕಿನ ಅಂಕಲಗಿ ಗ್ರಾಮದ ಶಿವಾನಂದ ಶಂಕರ ನಾಯಿಕ (25) ಕೊಚ್ಚಿಕೊಂಡು ಹೋಗಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ.

ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮನೆಗೋಡೆ ಕುಸಿದು ಬಸವಕಲ್ಯಾಣ ತಾಲ್ಲೂಕಿನ ಧನ್ನೂರ (ಕೆ) ವಾಡಿಯಲ್ಲಿ ವೆಂಕಟ್ (51) ಎಂಬುವವರು ಮೃತಪಟ್ಟಿದ್ದಾರೆ.

ದಕ್ಷಿಣ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಕೃಷ್ಣಾ ಹಾಗೂ ಉಪ ನದಿಗಳು ತುಂಬಿ ಹರಿಯುತ್ತಿವೆ. 10 ಜನವಸತಿ ಪ್ರದೇಶಗಳಿಂದ ಜನರನ್ನು ಸ್ಥಳಾಂತರ ಮಾಡಲಾಗಿದೆ.

ನದಿ ದಂಡೆಯಲ್ಲಿರುವ ಚಿಕ್ಕೋಡಿ, ಅಥಣಿ, ರಾಯಬಾಗ ತಾಲ್ಲೂಕುಗಳ ಹಲವು ಗ್ರಾಮಗಳಲ್ಲಿ ಹಾಗೂ ಗದ್ದೆಗಳಲ್ಲಿ ನೀರು ನುಗ್ಗಿ, ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಚಿಕ್ಕೋಡಿಯ ಯಡೂರವಾಡಿ ಗ್ರಾಮದ ದೋನೆತೋಟಕ್ಕೆ ನೀರು ನುಗ್ಗಿದ್ದು, 35 ಜನರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.


 ಮೋಳೆ ಸಮೀಪದ ಬನಜವಾಡ ಗ್ರಾಮದ ನದಿತೀರದ ಜನರನ್ನು ಅಧಿಕಾರಿಗಳು ಶನಿವಾರ ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು

ನಿಪ್ಪಾಣಿ ತಾಲ್ಲೂಕಿನ ಜತ್ರಾಟ, ಮಾಳಾ, ಕಾಗವಾಡ ತಾಲ್ಲೂಕಿನ ಬಂಜರವಾಡ, ಮುಳುವಾಡ, ರಾಯಬಾಗ ತಾಲ್ಲೂಕಿನ ಶಿರಗೂರು, ಅಥಣಿ ತಾಲ್ಲೂಕಿನ ಸಪ್ತಸಾಗರ ಬಣ, ನಾಗನೂರು ಜನವಸತಿ ಪ್ರದೇಶಗಳಿಂದ ಜನರನ್ನು ಸ್ಥಳಾಂತರ ಮಾಡಲಾಗಿದೆ. 16 ಸೇತುವೆಗಳು ಈಗಲೂ ಜಲಾವೃತವಾಗಿವೆ. ಮಲಪ್ರಭಾ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 13,527 ಕ್ಯುಸೆಕ್‌ ನೀರು ಹೊರಬಿಡಲಾಗಿದೆ. ಇದರ ಜೊತೆಗೆ ರಾಜಾಪುರ ಬ್ಯಾರೇಜ್‌ನಿಂದ 1,72,030 ಹಾಗೂ ದೂಧ್‌ಗಂಗಾ ನದಿಯಿಂದ 33,088 ಕ್ಯುಸೆಕ್‌ ನೀರು ಸೇರಿ ಚಿಕ್ಕೋಡಿಯ ಕಲ್ಲೋಳ ಬಳಿ ಕೃಷ್ಣಾ ನದಿಗೆ 2.20 ಲಕ್ಷ ಕ್ಯುಸೆಕ್‌ ನೀರು ಸೇರಿಕೊಳ್ಳುತ್ತಿದೆ.

‘ರಾಜ್ಯದ ವಿಕೋಪ ಪರಿಹಾರ ಪಡೆಯ (ಎಸ್‌ಡಿಆರ್‌ಎಫ್‌) 50ಕ್ಕೂ ಹೆಚ್ಚು ಮಂದಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಆಲಮಟ್ಟಿ ಜಲಾಶಯದ ಒಳ ಹರಿವು ಹೆಚ್ಚಾದ ಕಾರಣ ಮುಂಜಾಗ್ರತಾ ಕ್ರಮವಾಗಿ 2.58 ಲಕ್ಷ ಕ್ಯೂಸೆಕ್ ನೀರು ಹೊರ ಬಿಟ್ಟಿದ್ದು, ನೂರಾರು ಎಕರೆ ಜಮೀನು ಜಲಾವೃತವಾಗಿದೆ. ಅಧಿಕಾರಿಗಳು ಪ್ರತಿ ಎರಡು ಗಂಟೆಗೊಮ್ಮೆ ಪರಿಸ್ಥಿತಿ ಅವಲೋಕನ ನಡೆಸುತ್ತಿದ್ದಾರೆ.

ಹುಬ್ಬಳ್ಳಿ, ಧಾರವಾಡದಲ್ಲಿ ಮಳೆ ಸುರಿಯಿತು. ಉತ್ತರ ಕನ್ನಡದ ಕರಾವಳಿ ಭಾಗದಲ್ಲಿ ಕಡಲಕೊರೆತ ಹೆಚ್ಚಾಗಿದೆ. ಮಲೆನಾಡಿನಲ್ಲಿಯೂ ಮಳೆಯಾಗಿದೆ.


ಜಮಖಂಡಿ ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ನದಿಯೊಳಗಿಟ್ಟಿದ್ದ ಪಂಪ್‌ಅನ್ನು ರೈತರು ಹಗ್ಗ ಹಾಕಿ ಶನಿವಾರ ಹೊರಗೆ ತೆಗೆದರು

ಮಹಾರಾಷ್ಟ್ರದ ಸಲಹೆಗೆ ಎಂ.ಬಿ. ಪಾಟೀಲ ಆಕ್ಷೇಪ

ವಿಜಯಪುರ: ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹವನ್ನು 518 ಮೀಟರ್‌ಗೆ ಮಿತಿಗೊಳಿಸಬೇಕೆನ್ನುವ ಮಹಾರಾಷ್ಟ್ರ ಸರ್ಕಾರದ ಸಲಹೆಗೆ ಶಾಸಕ ಎಂ.ಬಿ.ಪಾಟೀಲ ಶನಿವಾರ ಇಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

‘ನೀರು ಸಂಗ್ರಹಿಸುವ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಮೊದಲಿನಿಂದಲೂ ಗೊಂದಲ ಸೃಷ್ಟಿಸುತ್ತಾ ಬಂದಿದೆ. ನೀರು ಬಿಡುವಾಗ ಒಂದು ಮಾತು, ಪ್ರವಾಹ ಸಂದರ್ಭದಲ್ಲಿ ಮತ್ತೊಂದು ಹೇಳಿಕೆ ನೀಡುವುದು ಮಹಾರಾಷ್ಟ್ರದ ಚಾಳಿಯಾಗಿದೆ. ನಾವು ಎಷ್ಟು ನೀರು ಸಂಗ್ರಹಿಸಬೇಕು ಎಂದು ಹೇಳಲು ಅವರು ಯಾರು? ಜಲಾಶಯದ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಲಿದ್ದೇವೆ’ ಎಂದು ತಿರುಗೇಟು ನೀಡಿದ್ದಾರೆ.


ಚಿಕ್ಕೋಡಿ ತಾಲ್ಲೂಕಿನ ಹರಿತ ಕ್ರಾಂತಿ ನಗರ ಜನವಸತಿ ಪ್ರದೇಶಕ್ಕೆ ದೋಣಿ ವ್ಯವಸ್ಥೆ ಕಲ್ಪಿಸಲಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು