ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ |ರಂಜಾನ್: ಇಫ್ತಾರ್‌ಗೆ ಕರೆಯುತ್ತಿದೆ ಶಾ ಬಜಾರ್, ವೈವಿಧ್ಯ ಖಾದ್ಯಗಳ ಘಮ

ದಾಹ ನೀಗಿಸುವ ತಂಪು ಪಾನೀಯ
Published 29 ಮಾರ್ಚ್ 2024, 5:21 IST
Last Updated 29 ಮಾರ್ಚ್ 2024, 5:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನಸುಕಿನಿಂದ ಹೊತ್ತು ಮುಳುಗುವವರೆಗೆ ರಂಜಾನಿನ ಉಪವಾಸ ಕೈಗೊಳ್ಳುವವರು ಇಫ್ತಾರ್‌ನಲ್ಲಿ ಹೊಟ್ಟೆ ತಣ್ಣಗಾಗಿಸಲು ಇಲ್ಲಿನ ಶಾ ಬಜಾರ್ ಕಡೆಗೆ ಹೆಜ್ಜೆ ಹಾಕುವುದು ಸಾಮಾನ್ಯ.

ಸಿಬಿಟಿ ನಿಲ್ದಾಣದಿಂದ ಎಡಕ್ಕೆ ಕೆಳಗಿನ ರಸ್ತೆಯಲ್ಲಿ ಇಳಿಯುತ್ತ ಹೋದಂತೆ ಶಾ ಬಜಾರ್ ನಿಮ್ಮನ್ನು ವೈವಿಧ್ಯಮಯ ತಂಪು ಪಾನೀಯಗಳೊಂದಿಗೆ ಸ್ವಾಗತಿಸುತ್ತದೆ. ಮ್ಯಾಂಗೊ ಲಸ್ಸಿ, ಮ್ಯಾಂಗೊ ಮಿಲ್ಕ್ ಶೇಕ್, ಕಾಜೂ ಗುಲ್ಕನ್, ರಸ್ಮಲಾಯ್, ಬಾದಾಮ್‌, ಪಿಸ್ತಾ, ವೆನಿಲ್ಲಾ, ಕಲ್ಲಂಗಡಿ ಶರ್ಬತ್‌, ಮೊಹಬ್ಬತ್ ಶರ್ಬತ್ ಇನ್ನಿತರ ತಂಪಾದ ಪಾನೀಯ ದಣಿದ ದೇಹಕ್ಕೆ ಚೈತನ್ಯ ತುಂಬುತ್ತದೆ.

ಕಾಜೂ ಗುಲ್ಕನ್‌ಗೆ ₹30, ಮ್ಯಾಂಗೋ ಮಿಲ್ಕ್‌ ಶೇಕ್‌ ₹60 ಹಾಗೂ ಮ್ಯಾಂಗೋ ಲಸ್ಸಿ ₹50ಕ್ಕೆ ಮಾರಾಟ ಮಾಡುತ್ತೇವೆ. ಹುಬ್ಬಳ್ಳಿ, ಧಾರವಾಡ ಸೇರಿದಂತೆ ಬೆಳಗಾವಿ, ಗದಗ ಹಾವೇರಿ ಮತ್ತು ಹಲವು ಜಿಲ್ಲೆಗಳ ಜನ ಇಲ್ಲಿಗೆ ಬರುತ್ತಾರೆ ಎನ್ನುತ್ತಾರೆ ಪೀರಾನ್ ಐಸ್ ಕ್ರೀಂನ ಮಾಲೀಕ ಆರುಲ್ ರಶೀದ್.

ಮಾಂಸಾಹಾರದ ವೈವಿಧ್ಯಮಯ ಖಾದ್ಯಗಳನ್ನು ಶಾ ಬಜಾರ್‌ನ ಬೀದಿಯುದ್ದಕ್ಕೂ ತೆರೆದಿಟ್ಟು ಮಾರಾಟ ಮಾಡಲಾಗುತ್ತದೆ. ಸಂಜೆ 6 ಗಂಟೆ ಆಗುತ್ತಿದ್ದಂತೆ ಅಲ್ಲಿನ ಚಿತ್ರಣವೇ ಬದಲಾಗುತ್ತದೆ. ಅರ್ಧ ತಾಸಿನೊಳಗೆ ಜನರು ಪ್ರವಾಹದಂತೆ ಬಂದು ಹೋಗುತ್ತಾರೆ. ಮಾರಾಟ ಮಾಡುವವರು ‘ಆವೋ ಭಯ್ಯಾ, ಆಯಿಯೇ ಬೆಹೆನ್‌ಜೀ..’ ಎನ್ನುತ್ತ ಕೂಗಿ ಕರೆಯುವ ಧ್ವನಿ ಸುತ್ತಲೂ ಕೇಳಿಸುತ್ತಿರುತ್ತದೆ. ಆಹಾರ, ಪಾನೀಯಗಳ ಗುಂಗಿನಲ್ಲಿ ಕಳೆದುಹೋಗುವಂತೆ ಮಾಡುತ್ತದೆ.

ಚಿಕನ್ ರೋಲ್, ಶಾಮಿ ಕಬಾಬ್, ಚಿಕನ್ ಗಾಡಿ, ಚಿಕನ್ ಐಸ್ ಕ್ರೀಂ, ಚಿಕನ್ ಸೌತೆ, ಬೀಫ್ ಸಮೋಸಾ, ಚಿಕನ್ ಸಮೋಸಾ ಕೇವಲ ₹30 ಕ್ಕೆ ಲಭ್ಯ. ಖೀಮಾ, ಮೋಮೊಸ್, ಚಿಕನ್‌ ರೋಲ್‌, ಚಿಕನ್ ಕಬಾಬ್, ಚಿಕನ್‌ ಲಾಲಿಪಪ್, ಹೈದರಾಬಾದಿ ಹಲೀಂ, ಚಿಕನ್ ಶವರ್ಮಾ, ಕಟ್ಲೆಟ್‌ ಮುಂತಾದ ಖಾದ್ಯಗಳು ಕೂಡ ಕಡಿಮೆ‌ ದರಕ್ಕೆ ಸಿಗುತ್ತದೆ. ಅಲ್ಲದೆ ಹೈದರಾಬಾದಿ ಧಮ್‌ ಬಿರಿಯಾನಿ ಸೇರಿದಂತೆ ವಿವಿಧ ಬಗೆಯ ಬಿರಿಯಾನಿಗಳೂ ಭರ್ಜರಿಯಾಗಿ ಮಾರಾಟವಾಗುತ್ತಿವೆ.

ವೈವಿಧ್ಯಮಯ ಖಾದ್ಯಗಳಷ್ಟೇ ಹಲ ಬಗೆಯ ಹಣ್ಣುಗಳ ಮಾರಾಟವೂ ನಡೆಯುತ್ತಿದೆ. ಕಲ್ಲಂಗಡಿ, ಖರಬೂಜ, ಪಪ್ಪಾಯಿ ಹಣ್ಣುಗಳನ್ನು ಕತ್ತರಿಸಿ ಆಯಾ ಹಣ್ಣುಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ಜೊತೆಗೆ ಎಲ್ಲ ಹಣ್ಣುಗಳನ್ನು ಒಳಗೊಂಡ ಫ್ರುಟ್‌ ಬೌಲ್‌ಗೂ ಬೇಡಿಕೆಯಿದೆ.

ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುವ ಶಾ ಬಜಾರ್‌ನ ರಂಗು ಕಣ್ತುಂಬಿಕೊಳ್ಳಲೆಂದೇ ಬರುವ ಜನ ಅನೇಕ. ಬಹುತೇಕರು ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ವಿಡಿಯೋ ಚಿತ್ರೀಕರಿಸುತ್ತ, ಸೆಲ್ಫಿ ಕ್ಲಿಕ್ಕಿಸುತ್ತ ಸಂಭ್ರಮಿಸುವ ದೃಶ್ಯವೂ ಕಂಡು ಬರುತ್ತದೆ.

ದಾಹ ತಣಿಸುವ ತಂಪು ಪಾನೀಯ... –ಪ್ರಜಾವಾಣಿ ಚಿತ್ರ: ಗುರು ಹಬೀಬ
ದಾಹ ತಣಿಸುವ ತಂಪು ಪಾನೀಯ... –ಪ್ರಜಾವಾಣಿ ಚಿತ್ರ: ಗುರು ಹಬೀಬ

ಇಫ್ತಾರ್‌ನ ಹೊತ್ತಿನಲ್ಲಿ...

ಸೂರ್ಯಾಸ್ತದಲ್ಲಿ ಕ್ಷಣ ಕ್ಷಣಕ್ಕೂ ಆಕಾಶದ ಬಣ್ಣ ಬದಲಾಗುವ ಬಗೆ ಬೆರಗು ಹುಟ್ಟಿಸುತ್ತದೆ. ಇಫ್ತಾರ್‌ನ ಹೊತ್ತು ಬರುವವರೆಗಿನ ಅರ್ಧ ತಾಸಿನಲ್ಲಿ ಇಲ್ಲಿ ಕ್ಷಣಕ್ಷಣವೂ ಭಿನ್ನ. ನಿರಂತರ ವ್ಯಾಪಾರದಲ್ಲಿ ತೊಡಗಿರುವ ಜನ ಇಫ್ತಾರ್‌ಗೆ ಕೆಲವೇ ನಿಮಿಷಗಳಿರುವಾಗ ವ್ಯಾಪಾರಕ್ಕಾಗಿ ಕೂಗಿ ಕರೆಯುವುದನ್ನು ಬಿಟ್ಟು ‘ಬರ್‍ರಿ ಬರ‍್ರಿ ಇಫ್ತಾರ್‌ ಮಾಡೋಣ’ ಎಂದು ಕರೆಯಲು ಶುರು ಮಾಡುತ್ತಾರೆ. ತಮ್ಮ ಪುಟ್ಟ ಅಂಗಡಿಯೇ ಇಫ್ತಾರ್‌ ಕೂಟದ ಜಾಗ. ಮಾರಾಟಕ್ಕಿಟ್ಟ ತಿನಿಸುಗಳೇ ಇಫ್ತಾರ್‌ನ ತಿನಿಸು. ಅಷ್ಟು ಹೊತ್ತು ವ್ಯಾಪಾರಿ– ಗ್ರಾಹಕರಾಗಿದ್ದವರು ಆ ಕ್ಷಣದಲ್ಲಿ ಕೇವಲ ಪ್ರೀತಿ ಹಂಚುವವರಾಗಿ ಬದಲಾಗುವ ಕ್ಷಣ ಕೆಂಬಣ್ಣಕ್ಕೆ ತಿರುಗುವ ಸೂರ್ಯ ಶಾಂತವಾಗಿ ತಣ್ಣಗೆ ಎದೆಯೊಳಗೆ ಮುಳುಗಿದಂತೆ ಭಾಸವಾಗುತ್ತದೆ.

ಬದಲಾಗದ ಖಾದ್ಯದ ‘ಬಣ್ಣ’

ಬಣ್ಣ ಬಣ್ಣದ ಮಾಂಸಾಹಾರಿ ಖಾದ್ಯಗಳನ್ನು ಶಾ ಬಜಾರ್‌ನಲ್ಲಿ ಮಾರಾಟ ಮಾಡಲಾಗುತ್ತಿದ್ದು ಗ್ರಾಹಕರನ್ನು ಸಹಜವಾಗಿ ಸೆಳೆಯುತ್ತಿದೆ. ರಾಜ್ಯ ಸರ್ಕಾರ ಈಚೆಗೆ ಆಹಾರ ಖಾದ್ಯಗಳಲ್ಲಿ ರಾಸಾಯನಿಕ ಕೃತಕ ಬಣ್ಣ ಮಿಶ್ರಗೊಳಿಸುವುದನ್ನು ನಿಷೇಧಿಸಿದ್ದು ಜಿಲ್ಲೆಯಲ್ಲಿ ಹಲವು ಅಂಗಡಿ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ. ಆದರೂ ಕಾನೂನಿನ ಅರಿವು ಇಲ್ಲಿನ ಹಲವರನ್ನು ತಲುಪಿಲ್ಲ.

ಮ್ಯಾಂಗೋ ಮಿಲ್ಕ್‌ ಶೇಕ್ ಹಾಗೂ ಕಾಜೂ ಗುಲ್ಕನ್‌ ಶರ್ಬತ್‌ಗೆ ಹೆಚ್ಚು ಬೇಡಿಕೆ ಇದೆ. ರಂಜಾನ್‌ ವಿಶೇಷ ಕಾರಣಕ್ಕೆ ದಿನಕ್ಕೆ ಅಂದಾಜು ನಾಲ್ಕು ಸಾವಿರ ಜನ ಶಾ ಬಜಾರ್‌ಗೆ ಬರುತ್ತಾರೆ. ಉತ್ತಮ ವ್ಯಾಪಾರ ಆಗುತ್ತಿದೆ .
–ಆರುಲ್ ರಶೀದ್ ಪೀರಾನ್, ಐಸ್ ಕ್ರೀಂನ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT