ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ರಂಗಪಂಚಮಿ ನಾಳೆ; ನಗರದಲ್ಲಿ ಕಟ್ಟೆಚ್ಚರ

ಸೂಕ್ಷ್ಮಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ; ಕಿಡಿಗೇಡಿಗಳ ಮೇಲೆ ಹದ್ದಿನ ಕಣ್ಣು
Last Updated 10 ಮಾರ್ಚ್ 2023, 14:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹೋಳಿ ಹಬ್ಬದ ಐದನೇ ದಿನವಾದ ರಂಗಪಂಚಮಿ(ಶನಿವಾರ)ಯಂದು ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಗುವ ಬಣ್ಣದಾಟಕ್ಕೆ ಹು–ಧಾ ಪೊಲೀಸ್‌ ಕಮಿಷನರೇಟ್‌ ಘಟಕ ಕಟ್ಟೆಚ್ಚರ ವಹಿಸಿದೆ. ನಗರದಾದ್ಯಂತ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಡಾ.ಬಿ. ಆರ್‌. ಅಂಬೇಡ್ಕರ್‌ ವೃತ್ತ, ಸ್ಟೇಷನ್‌ ರಸ್ತೆ, ದುರ್ಗದ ಬೈಲ್‌, ಹಳೇ ಹುಬ್ಬಳ್ಳಿ ವೃತ್ತ, ಇಂಡಿಪಂಪ್‌ ವೃತ್ತ, ಡಾಕಪ್ಪ ವೃತ್ತ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ ಸಿಬ್ಬಂದಿ ನಿಯೋಜಿಸಲು ನಿರ್ಧರಿಸಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಕಿಡಿಗೇಡಿಗಳ ಮೇಲೆ ಹದ್ದಿನ ಕಣ್ಣಿಡಲಿದೆ.

ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಇಲಾಖೆ ಶುಕ್ರವಾರ ಮೂರುಸಾವಿರ ಮಠದಿಂದ ನಗರದ ವಿವಿಧೆಡೆ ಪಥಸಂಚಲನ ನಡೆಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದೆ. ಭದ್ರಾವತಿಯಿಂದ ಬಂದಿರುವ ಕ್ಷಿಪ್ರ ಕಾರ್ಯಾಚರಣೆ ಪಡೆಯ ಸಿಬ್ಬಂದಿಗೆ ಸೂಕ್ಷ್ಮ ಪ್ರದೇಶಗಳಲ್ಲಿನ ಜವಾಬ್ದಾರಿ ವಹಿಸಲಾಗಿದೆ. 400 ಗೃಹರಕ್ಷಕ ಸಿಬ್ಬಂದಿ, 15 ಕೆಎಸ್‌ಆರ್‌ಪಿ ತುಕುಡಿಗಳನ್ನು ಆಯ್ದ ಪ್ರದೇಶಗಳಲ್ಲಿ ನಿಯೋಜಿಸಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ. 50ಕ್ಕೂ ಹೆಚ್ಚು ಸಿಬ್ಬಂದಿ ಮಫ್ತಿಯಲ್ಲಿ ಕರ್ತವ್ಯನಿರ್ವಹಿಸಲಿದ್ದು, ಶಾಂತಿ ಕದಡುವವರ ಮೇಲೆ ಕಣ್ಣಿಡಲಿದ್ದಾರೆ.

‘ಬಲವಂತವಾಗಿ ಬಣ್ಣ ಹಚ್ಚಬಾರದು. ಪ್ರೀತಿ, ಸೌಹಾರ್ದತೆಯಿಂದ ಹೋಳಿ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಬೇಕು. ಯುವತಿಯರಿಗೆ ಚುಡಾಯಿಸುವುದು, ಕೀಟಲೆ ಮಾಡುವುದು ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳಲಾಗುವುದು. ನಗರದಾದ್ಯಂತ ಸಿಬ್ಬಂದಿ ಪೆಟ್ರೋಲಿಂಗ್‌ ಮಾಡಲಿದ್ದು, ಕಟ್ಟೆಚ್ಚರ ವಹಿಸಲಿದ್ದಾರೆ’ ಎಂದು ಕಮಿಷನರ್‌ ರಮನ್‌ ಗುಪ್ತಾ ಎಚ್ಚರಿಕೆ ನೀಡಿದ್ದಾರೆ.

ನಗರದ ದುರ್ಗದ ಬೈಲ್‌, ಜನತಾ ಬಜಾರ್‌, ಹಳೇಹುಬ್ಬಳ್ಳಿ ಮಾರುಕಟ್ಟೆಯಲ್ಲಿ ವೈವಿಧ್ಯಮಯ ಪಿಚಕಾರಿಗಳು ಮಕ್ಕಳನ್ನು ಸೆಳೆಯುತ್ತಿವೆ. ಶುಕ್ರವಾರ ಪಾಲಕರ ಜೊತೆಗೂಡಿ ಮಕ್ಕಳು ಅವುಗಳನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವೈವಿಧ್ಯಮಯ ಬಣ್ಣಗಳನ್ನು ಖರೀದಿಸಲು ಗ್ರಾಹಕರು ಮುಗಿ ಬಿದ್ದಿದ್ದರು.

ಚಿಗರಿ ಬಸ್‌ ಸಂಚಾರದಲ್ಲಿ ವ್ಯತ್ಯಯ:

ರಂಗಪಂಚಮಿ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಮಧ್ಯ ಸಂಚರಿಸುವ ಬಿ.ಆರ್.ಟಿ.ಎಸ್ ಬಸ್‌ ಸಂಚಾರದಲ್ಲಿ ಶನಿವಾರ ವ್ಯತ್ಯಯವಾಗಲಿದೆ. ಬೆಳಿಗ್ಗೆ 6 ರಿಂದ ಸಂಜೆ 5ರವರೆಗೆ ಬಿಆರ್‌ಟಿಎಸ್‌ ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಬಣ್ಣದ ಕಾರ್ಯಕ್ರಮ ಮುಗಿದ ಬಳಿಕ ಪ್ರಯಾಣಿಕರ ಸಂಖ್ಯೆಗಳಿಗೆ ಅನುಗುಣವಾಗಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಹು–ಧಾ ನಗರ ಸಾರಿಗೆ ವಿಭಾಗದ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭದ್ರತೆಗೆ ಸಿಟಿ ಸ್ವ್ಯಾಟ್‌ ಸಿಬ್ಬಂದಿ

ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸಲು ಹು–ಧಾ ಪೊಲೀಸ್‌ ಕಮಿಷನರೇಟ್‌ ಘಟಕ ನುರಿತ(ಸ್ವ್ಯಾಟ್‌) ಸಿಬ್ಬಂದಿ ತಂಡಗಳನ್ನು ರಚಿಸಿದ್ದು, ರಂಗಪಂಚಮಿ ಭದ್ರತೆಗೆ ಅವರನ್ನು ನಿಯೋಜಿಸಲಾಗಿದೆ. ಸಿವಿಲ್‌ ಹಾಗೂ ಸಿಎಆರ್‌ ಘಟಕದ 50 ಸಿಬ್ಬಂದಿ ಇದರಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಬೆಂಗಳೂರಿನಲ್ಲಿ ಕಮಾಂಡೋ ತರಬೇತಿ ಪಡೆದಿರುವ ಸಿಬ್ಬಂದಿ, ಆಧುನಿಕ ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆಯೂ ತರಬೇತಿ ಪಡೆದಿದ್ದಾರೆ. ಜಾತ್ರೆ, ಗಣ್ಯರ ಭೇಟಿ, ಗಲಭೆ ಹಾಗೂ ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT