ಗುರುವಾರ , ಏಪ್ರಿಲ್ 9, 2020
19 °C

ಈದ್‌ ಮಿಲಾದ್‌ಗೆ ಕಳೆಗಟ್ಟುವ ಆಸಾರ್‌ ಶರೀಫ್‌ ದರ್ಗಾ

ಬಸೀರಅಹ್ಮದ್ ನಗಾರಿ Updated:

ಅಕ್ಷರ ಗಾತ್ರ : | |

Prajavani

ಅಲ್ಲಿ ಯಾವುದೇ ಸಮಾಧಿಗಳಿಲ್ಲ. ಆದರೂ, ವರ್ಷಕ್ಕೊಂದು ಬಾರಿ ಎರಡು ದಿನಗಳ ಕಾಲ ದೊಡ್ಡ ಪ್ರಮಾಣದಲ್ಲಿ ಉತ್ಸವ ನಡೆಯತ್ತದೆ. ಜಾತಿ–ಮತ ಭೇದವಿಲ್ಲದೇ ಸಾವಿರಾರು ಜನರು ಅಲ್ಲಿಗೆ ಸಾಲುಗಟ್ಟಿ ಭೇಟಿ ನೀಡಿ ಆರಾಧಿಸುತ್ತಾರೆ. ಪ್ರಾರ್ಥಿಸುತ್ತಾರೆ, ಹರಕೆ ಕಟ್ಟುತ್ತಾರೆ. ಅದುವೇ ಹಳೇ ಹುಬ್ಬಳ್ಳಿಯ ಆಸಾರ್ ಮೊಹಲ್ಲಾದಲ್ಲಿರುವ ‘ಆಸಾರ್‌ ಶರೀಫ್‌ ದರ್ಗಾ’ದ ವೈಶಿಷ್ಟ್ಯ.

ಹೌದು; ದರ್ಗಾ ಎಂದಾಕ್ಷಣ ಸಾಮಾನ್ಯವಾಗಿ ಯಾವುದೋ ಪುಣ್ಯಪುರುಷರ ಐಕ್ಯತಾಣ ಇಲ್ಲವೇ ಸಮಾಧಿ ಸ್ಥಿತಿ ಎಂದೇ ಪರಿಭಾವಿಸುತ್ತೇವೆ. ಆದರೆ, ಆಸಾರ್‌ ಮೊಹಲ್ಲಾದಲ್ಲಿರುವ ಆಸಾರ್‌ ಶರೀಫ್ ದರ್ಗಾಗೆ ಭೇಟಿ ನೀಡಿದರೆ, ನಿಮಗೆ ಅಂಥ ಯಾವುದೇ ಕುರುಹುಗಳು ಕಾಣುವುದಿಲ್ಲ. ಆದರೆ, ನಿಷ್ಠೆಯಿಂದ ಪ್ರಾರ್ಥಿಸುವವರ ಸಂಖ್ಯೆಯೇನೂ ಕಮ್ಮಿಇಲ್ಲ.

ದರ್ಗಾದಲ್ಲಿ ಏನಿದೆ?

‘ಈ ದರ್ಗಾದಲ್ಲಿ ಮಾನವಕುಲದ ಶ್ರೇಷ್ಠ ಮಾರ್ಗದರ್ಶಕರಾದ ಪ್ರವಾದಿ ಮೊಹಮ್ಮದ್(ಸ್ವ.ಸ) ಅವರ ಮೊಗದ ಕೂದಲಿದೆ (ಮುಹ್‌–ಎ–ಮುಬಾರಕ್‌). ಅದನ್ನು ಚಿಕ್ಕ ಪೆಟ್ಟಿಗೆಯಲ್ಲಿ ಗಂಧದ ಪುಡಿಯಲ್ಲಿಟ್ಟು ಸಂರಕ್ಷಣೆ ಮಾಡಲಾಗುತ್ತಿದೆ. ಈ ಪೆಟ್ಟಿಗೆಯನ್ನು ಲಾಕರ್‌ನಲ್ಲಿ ಇಟ್ಟು ರಕ್ಷಿಸಲಾಗುತ್ತಿದೆ. ಈದ್‌ ಮಿಲಾದ್‌ ದಿನ ಮಾತ್ರ ಅದನ್ನು ಹೊರ ತೆಗೆದು, ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ’ ಎನ್ನುತ್ತಾರೆ ಆಸಾರ್‌ ಹೊಂಡ ದರ್ಗಾ ಸಮಿತಿ ಅಧ್ಯಕ್ಷ ಮೊಹಮ್ಮದ್ ಹುಸೇನ್‌ ಉರ್ಫ್‌ ಮುನ್ನಾ ಒಡ್ಡೊ.

ಎರಡು ದಿನಗಳ ಉತ್ಸವ

ಈದ್‌ ಮಿಲಾದ್‌ ದಿನ ಹಾಗೂ ಮರು ದಿನ ಇಲ್ಲಿ ಉತ್ಸವ ನಡೆಯುತ್ತದೆ. ಅದಕ್ಕೂ ಮುನ್ನ 11 ದಿನಗಳ ಕಾಲ ಪ್ರವಾದಿ ಮೊಹಮ್ಮದ್ ಅವರ ಜೀವನ ಚರಿತ್ರೆ ಕುರಿತು ಪ್ರವಚನ ನಡೆಯುತ್ತದೆ. ಅದು ಸಂದಲ್‌ ರಾತ್ರಿ ಮುಗಿಯುತ್ತದೆ. ಸಂದಲ್‌ ದಿನವೇ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ. ಸಂದಲ್‌ ಮೆರವಣಿಗೆಯೂ ಅದ್ಧೂರಿಯಾಗಿ ನಡೆಯುತ್ತದೆ. ಹುಬ್ಬಳ್ಳಿಯ ಮೂಲೆ–ಮೂಲೆಯ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಆಸಾರ್ ಮೊಹಲ್ಲಾದಿಂದ ಆರಂಭಗೊಳ್ಳುವ ಮೆರವಣಿಗೆ ಹಳೇಹುಬ್ಬಳ್ಳಿ ಸರ್ಕಲ್‌, ಬೆಳಂಕರ್‌ ಓಣಿ, ಚಿಟಕಿ ಮೊಹಲ್ಲಾ, ಅಕ್ಕಿ ಪೇಟೆ, ಪಠಾಣ ಗಲ್ಲಿ, ಕಸಾಯಿ ಮೊಹಲ್ಲಾ, ಸದರ್‌ ಸೋಫಾ, ಹಳೇ ಹುಬ್ಬಳ್ಳಿ ಬ್ರಿಡ್ಜ್‌, ಆಸಾರ್‌ ಮೊಹಲ್ಲಾ ಮೂಲಕ ದರ್ಗಾ ತಲುಪುತ್ತದೆ.

‘ಈದ್‌ ಮಿಲಾದ್ ದಿನ ಮಧ್ಯಾಹ್ನ ನಮಾಜ್‌ ಬಳಿಕ ಪ್ರವಾದಿ ಮೊಹಮ್ಮದ್ (ಸ್ವ.ಸ) ಮುಹ್‌–ಎ–ಮುಬಾರಕ್‌ ಸಾರ್ವಜನಿಕ ಪ್ರದರ್ಶನ ನಡೆಯುತ್ತದೆ. ರಾತ್ರಿ 10 ಗಂಟೆವರೆಗೂ ಜಾತಿ–ಮತ–ಪಂಥಗಳ ಭೇದವಿಲ್ಲದೇ ಮುಸ್ಲಿಮರೂ ಸೇರಿದಂತೆ ಸಾವಿರಾರು ಭಕ್ತರು ಸಾಲು ಗಟ್ಟಿ ಮುಹ್‌–ಎ–ಮುಬಾರಕ್‌ ದರ್ಶನ ಪಡೆಯುತ್ತಾರೆ. ಮುಹ್‌–ಎ–ಮುಬಾರಕ್‌ ಅನ್ನು ಯಥಾಸ್ಥಿತಿ ಇಡಲಾಗುತ್ತದೆ. ಅದಕ್ಕೆ ಭೂತಗನ್ನಡಿ ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಕಾಣುವಂತೆ ಏರ್ಪಾಡು ಮಾಡಿರುತ್ತೇವೆ’ ಎಂದು ಮೊಹಮ್ಮದ್ ಹುಸೇನ್ ವಿವರಿಸಿದರು.

‘ಅಂದು ರಾತ್ರಿ ಪ್ರದರ್ಶನ ಮುಗಿದ ಬಳಿಕ ಮತ್ತೆ ಅದನ್ನು ಯಥಾಸ್ಥಿತಿ ಪೆಟ್ಟಿಗೆಯಲ್ಲಿಟ್ಟು, ಲಾಕರ್‌ನಲ್ಲಿ ಇಡಲಾಗುತ್ತದೆ. ಮರು ದಿನ ಕೇವಲ ಮಹಿಳೆಯರಿಗೆ ದರ್ಶನಾವಕಾಶ ಕಲ್ಪಿಸಲಾಗುತ್ತದೆ. ಅಂದು ಪುರುಷರಿಗೆ ಅವಕಾಶ ಇರುವುದಿಲ್ಲ’ ಎನ್ನುತ್ತಾರೆ ಅವರು.

ಆಸಾರ್‌ ಮಹಲ್‌ ಆವರಣದಲ್ಲಿ ಎರಡು ಅಂತಸ್ತಿನ ಭವ್ಯ ಮಸೀದಿ ಇದೆ. ಅದನ್ನು ಇತ್ತೀಚೆಗೆ ನವೀಕರಿ
ಸಲಾಗಿದೆ. ಮಸೀದಿ ಒಳ ಗೋಡೆಗಳೆಲ್ಲವೂ ಮಾರ್ಬಲ್‌ನಿಂದ ಆವೃತವಾಗಿವೆ. ಜೊತೆಗೆ ಒಳಗೆ ಕುರಾನಿನ ಶ್ಲೋಕಗಳನ್ನು ಕೆತ್ತಲಾಗಿದೆ. ಇನ್ನು, ಮಹಲ್ ಆವರಣದಲ್ಲಿಯೇ ಎರಡು ಸಮಾಧಿಗಳಿವೆ. ಮಹಲ್‌, ಮಸೀದಿ ಕಣ್ಗಾವಲಿಗೆ ನಾಲ್ಕು ಸಿ.ಸಿ.ಟಿ.ವಿ ಕ್ಯಾಮೆರಾಗಳಿವೆ.

ಹರಕೆಗೆ ಪಾನ್‌ ಬೀಡಾ

‘ಹರಕೆ ಹೊರುವಾಗ ಇಲ್ಲಿ ಪಾನ್‌ ಬೀಡಾ ತಿನ್ನುವುದು ವಿಶೇಷ. ಮಹಿಳೆಯರು ಸಂತಾನ ಸೇರಿದಂತೆ ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಇಲ್ಲಿ ಹರಕೆ ಹೊರುತ್ತಾರೆ. ಕೊಬ್ಬರಿ, ಸಕ್ಕರೆ, ಒಣಹಣ್ಣುಗಳನ್ನು ಒಳಗೊಂಡ ಪಾನ್‌ ತಿಂದು ಹರಕೆ ಕಟ್ಟುತ್ತಾರೆ. ಇಷ್ಟಾರ್ಥ ಈಡೇರಿದಾಗ ಮತ್ತೆ ಅಂಥದ್ದೇ ಬೀಡಾ ತಂದು ದರ್ಗಾಕ್ಕೆ ಅರ್ಪಿಸುತ್ತಾರೆ. ಇದಲ್ಲದೇ, ಹೂವು ಸೇರಿದಂತೆ ಮತ್ತಿತರ ವಸ್ತುಗಳನ್ನು ಹರಕೆ ರೂಪದಲ್ಲಿ ಇಲ್ಲಿಗೆ ಭಕ್ತರು ಅರ್ಪಿಸುತ್ತಾರೆ’ ಎನ್ನುತ್ತಾರೆ ಆಸಾರ್‌ ಹೊಂಡ ದರ್ಗಾ ಸಮಿತಿ ಅಧ್ಯಕ್ಷ ಮೊಹಮ್ಮದ್ ಹುಸೇನ್‌ ಉರ್ಫ್‌ ಮುನ್ನಾ ಒಡ್ಡೊ.

ಚಿತ್ರಗಳು: ಈರಪ್ಪ ನಾಯ್ಕರ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)