ಸೋಮವಾರ, ಆಗಸ್ಟ್ 8, 2022
23 °C

ಶಾಲೆ ಮಾನ್ಯತೆ ರದ್ದು; ವಿದ್ಯಾರ್ಥಿಗಳ ವರ್ಗಾವಣೆ ಪತ್ರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಮಾನ್ಯತೆ ರದ್ದಾದ ಶಾಲೆಯಿಂದ ವಿದ್ಯಾರ್ಥಿಗಳ ವರ್ಗಾವಣೆ ಪತ್ರ (ಟಿ.ಸಿ) ಪಡೆಯಲು ತೆರಳಿದ ಪಾಲಕರಿಗೆ ಶಾಲಾ ಆಡಳಿತ ಮಂಡಳಿ ಅದನ್ನು ನೀಡದೆ ಹಣ ಕೇಳುತ್ತಿರುವ ಪ್ರಕರಣ ಇಲ್ಲಿನ ಹಳೇಹುಬ್ಬಳ್ಳಿಯ ಸುಭಾಷನಗರ ರಸ್ತೆಯ ವಿದ್ಯಾನಿಕೇತನ ಶಾಲೆಯಲ್ಲಿ ಮಂಗಳವಾರ ನಡೆದಿದೆ.

ವಿದ್ಯಾನಿಕೇತನ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಸರಿಯಾಗಿ ನಡೆಸಿಲ್ಲ ಹಾಗೂ ಅಗತ್ಯಕ್ಕಿಂತ ಕಡಿಮೆ ಮಕ್ಕಳು ಇದ್ದಾರೆ ಎಂದು 2021–22ರ ಶೈಕ್ಷಣಿಕ ವರ್ಷದಿಂದ ಶಾಲೆಯ ಮಾನ್ಯತೆ ರದ್ದು ಪಡಿಸಲಾಗಿದೆ. ಇದರ ಬಗ್ಗೆ ಮಾಹಿತಿಯಿಲ್ಲದ ಪಾಲಕರು ಪ್ರಸ್ತುತ ವರ್ಷವೂ ಅಲ್ಲಿಯೇ ಮಕ್ಕಳನ್ನು ಮುಂದುವರಿಸಿದ್ದರು. ಮಾನ್ಯತೆ ರದ್ದಾದ ವಿಷಯ ತಿಳಿದ ಪಾಲಕರು ವರ್ಗಾವಣೆ ಪತ್ರ ಕೇಳಲು ಶಾಲೆಗೆ ಹೋದಾಗ, ಶಾಲೆಯ ಆಡಳಿತ ಮಂಡಳಿಯವರು ಅವರನ್ನು ಸತಾಯಿಸುತ್ತಿದ್ದಾರೆ.

‘ಪ್ರವೇಶ ಶುಲ್ಕ ಬಾಕಿಯಿದೆ, ಆ ಹಣವನ್ನು ಕಟ್ಟಬೇಕು ಎಂದು ಆಡಳಿತ ಮಂಡಳಿಯವರು ಹೇಳುತ್ತಿದ್ದಾರೆ. ಮಾನ್ಯತೆಯೇ ಇಲ್ಲದ ಮೇಲೆ ಇವರಿಗೆ ಹೇಗೆ ಶುಲ್ಕ ಕಟ್ಟಬೇಕು, ಈಗಾಗಲೇ ಶುಲ್ಕ ಕಟ್ಟಿಸಿಕೊಂಡಿರುವುದು ಕೂಡ ತಪ್ಪು’ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಪಾಲಕರು ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತೆರಳಿ ಶಾಲಾ ಆಡಳಿತ ಮಂಡಳಿ ವರ್ಗವಣೆ ಪತ್ರ ನೀಡದೆ ಸಮಸ್ಯೆ ಮಾಡುತ್ತಿರುವ ಕುರಿತು ದೂರು ನೀಡಿದ್ದಾರೆ. ‘ಶಾಲೆಯಲ್ಲಿ ಐದು–ಆರು ಮಕ್ಕಳು ಮಾತ್ರ ಇದ್ದಾರೆ. ಕಲಿಸಲು ಶಿಕ್ಷಕರು ಸಹ ಇಲ್ಲ. ಮಾನ್ಯತೆ ರದ್ದಾಗಿರುವ ವಿಷಯ ಮುಚ್ಚಿಟ್ಟು ಶುಲ್ಕ ಕಟ್ಟಿಸಿಕೊಂಡಿದ್ದಾರೆ. ವರ್ಗಾವಣೆ ಪತ್ರ ನೀಡಿ ಎಂದರೆ, ಹಣ ಕೇಳುತ್ತಿದ್ದಾರೆ’ ಎಂದು ನಂದಿಸಾಬನವರ್‌ ಹೇಳಿದರು.

‘2020–21ನೇ ಸಾಲಿನಲ್ಲಿ ವಿದ್ಯಾನಿಕೇತನ ಶಾಲೆಗೆ ಆರ್‌ಟಿಇ ಅಡಿ 49 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಅದರ ಹೊರತಾಗಿಯೂ ಸಾಕಷ್ಟು ಮಂದಿ ಅಲ್ಲಿ ಅಭ್ಯಾಸ ಮಾಡುತ್ತಿರುವ ಕುರಿತು ದಾಖಲೆ ಹೇಳುತ್ತವೆ. ಆದರೆ, ಖುದ್ದು ಪರಿಶೀಲನೆ ನಡೆಸಿದಾಗ ಐದರಿಂದ ಆರು ವಿದ್ಯಾರ್ಥಿಗಳು ಅಷ್ಟೇ ಇದ್ದರು. ಶೈಕ್ಷಣಿಕ ಚಟುವಟಕೆಗಳನ್ನು ಸಹ ಸರಿಯಾಗಿ ನಡೆಸದ ಕಾರಣ ಪ್ರಸ್ತುತ ವರ್ಷದಿಂದ 1 ರಿಂದ 5ನೇ ತರಗತಿವರೆಗೆ ಮಾನ್ಯತೆ ರದ್ದು ಪಡಿಸಲಾಗಿದೆ. ಮಕ್ಕಳ ಪಾಲಕರು ವರ್ಗಾವಣೆ ಪತ್ರ ಪಡೆಯಲು ಹೋದಾಗ ಆಡಳಿತ ಮಂಡಳಿ ಹಣ ನೀಡಬೇಕು ಎಂದು ಹೇಳಿರುವುದಾಗಿ ಪಾಲಕರು ತಿಳಿಸಿದ್ದಾರೆ. ಈ ಕುರಿತು ಡಿಡಿಪಿಐ ಅವರಿಗೆ ತಿಳಿಸಲಾಗಿದೆ’ ಎಂದು ಬಿಇಒ ಕಚೇರಿಯ ಅಧಿಕಾರಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು