ಶನಿವಾರ, ಫೆಬ್ರವರಿ 22, 2020
19 °C
ಉಪರಾಷ್ಟ್ರಪತಿ ವೆಂಕಯ್ಯನಾಯ್ಡ ಜೊತೆ ಮಹದಾಯಿ ಹೋರಾಟಗಾರರ ಸಭೆ

ಹುಬ್ಬಳ್ಳಿ: ಅಧಿಸೂಚನೆಗೆ ನಿರ್ದೇಶನ ನೀಡಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಮಹದಾಯಿ ನದಿ ನೀರನ್ನು ಮಲಪ್ರಭೆಗೆ ಹರಿಸುವ ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆ ಜಾರಿಗೆ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ರೈತ ಸೇನಾ  ಮತ್ತು ಕಳಸಾ ಬಂಡೂರಿ ರೈತ ಹೋರಾಟ ಸಮಿತಿಯ ಮುಖಂಡರು ಭಾನುವಾರ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಮನವಿ ಮಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಾಯ್ಡು ಅವರನ್ನು ಭೇಟಿಯಾಗಿ ಅಂದಾಜು 20 ನಿಮಿಷ ಚರ್ಚಿಸಿದರು. ಈ ವೇಳೆ ಮುಖಂಡರು ‘ಮಹದಾಯಿ ನೀರಿಗಾಗಿ ಸತತವಾಗಿ ಹೋರಾಟ ಮಾಡುತ್ತಿದ್ದೇವೆ. 2018ರಲ್ಲಿ ನ್ಯಾಯ ಮಂಡಳಿ ಕರ್ನಾಟಕಕ್ಕೆ 13.5 ಟಿ.ಎಂ.ಸಿ. ಅಡಿ ನೀರು ಬಳಕೆ ಮಾಡಿಕೊಳ್ಳಲು ಅವಕಾಶ ಕೊಡಬೇಕೆಂದು ಆದೇಶಿಸಿದ್ದರೂ, ಇದಕ್ಕೆ ಅವಕಾಶ ಕೊಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಆದ್ದರಿಂದ ಆದಷ್ಟು ಬೇಗನೆ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

‘ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿಯಿದೆ. ಆದ್ದರಿಂದ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು’ ಎಂದರು.

‘ರೈತರ ಬೆಳೆಗಳಿಗೆ ಸಮಯಕ್ಕೆ ಸರಿಯಾಗಿ ಯೋಗ್ಯ ಬೆಲೆ ಸಿಗದ ಕಾರಣ ನಿರಂತರವಾಗಿ ಅನ್ಯಾಯವಾಗುತ್ತಿದೆ. ಆದ್ದರಿಂದ ಡಾ. ಸ್ವಾಮಿನಾಥನ್ ವರದಿ ಜಾರಿಗೆ ತರಲು ಕ್ರಮ ಕೈಗೊಳ್ಳಬೇಕು. ಅತಿವೃಷ್ಟಿಯಿಂದ ತತ್ತರಿಸಿ ಹೋಗಿರುವ ರೈತರಿಗೆ ಸಂಪೂರ್ಣವಾಗಿ ಇನ್ನೂ ಪರಿಹಾರ ಸಿಕ್ಕಿಲ್ಲ’ ಎಂದು ತಿಳಿಸಿದರು.

‘ವೆಂಕಯ್ಯ ನಾಯ್ಡು ಅವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರುತ್ತೇನೆಂದು ಭರವಸೆ ನೀಡಿದ್ದಾರೆ’ ಎಂದು ರೈತ ಸೇನಾದ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ‘ಪ್ರಜಾವಾಣಿ’ ಗೆ ತಿಳಿಸಿದರು.

ಸೇನಾದ ಪ್ರಮುಖರಾದ ಫಕ್ಕೀರಪ್ಪ ಜೋಗಣ್ಣವರ, ಮಲ್ಲಣ್ಣ ಅಲೇಕರ, ಗುರು ರಾಯನಗೌಡ್ರ, ಮುತ್ತು ಪಾಟೀಲ, ಗಂಗಣ್ಣ ಈರೇಶನವರ, ಗಿರಿಯಪ್ಪ ಹಂಜಿ, ವರುಣಗೌಡ ಪಾಟೀಲ, ಸಲೀಂ ಸಂಗನಮಲ್ಲ, ಕಳಸಾ ಬಂಡೂರಿ ರೈತ ಹೋರಾಟ ಸಮಿತಿಯ ಪ್ರಮುಖರಾದ ಸಿದ್ದು ತೇಜಿ, ಬಾಬಾಜಾನ್‌ ಮುಧೋಳ, ನವೀನ ಮುನಿಯಪ್ಪ, ಶಿವು ಪಡೆಸಪ್ಪ, ನಾಗರಾಜ ಮುದಗೇರಿ ಇದ್ದರು.

ಉಪರಾಷ್ಟ್ರಪತಿ ಗರಂ 

ಮಹದಾಯಿ ವಿಷಯದ ಚರ್ಚೆ ವೇಳೆ ಕೆಲ ಮುಖಂಡರು ‘ಕರ್ನಾಟಕ, ಗೋವಾ ಹಾಗೂ ಮಹರಾಷ್ಟ್ರದಲ್ಲಿ ನಿಮ್ಮ ಪಕ್ಷವೇ ಅಧಿಕಾರದಲ್ಲಿದೆ. ಕೂಡಲೇ ಕ್ರಮ ತೆಗೆದುಕೊಳ್ಳಿ’ ಎಂದು ಏರಿದ ಧ್ವನಿಯಲ್ಲಿ ಹೇಳಿದ ಕಾರಣ ವೆಂಕಯ್ಯ ನಾಯ್ಡು ಅವರು ಗರಂ ಆದರು.

‘ನಾನು ಉಪರಾಷ್ಟ್ರಪತಿ. ನನಗೆ ಆ ಪಕ್ಷ, ಈ ಪಕ್ಷ ಎಂದು ಹೇಳುವಂತಿಲ್ಲ’ ಎಂದು ಸಿಟ್ಟಾಗಿ ಪ್ರತಿಕ್ರಿಯಿಸಿದರು.

‘ಮಹದಾಯಿ ನೀರಿಗಾಗಿ ನಮ್ಮ ಸಹನೆ ಮೀರಿ ಹೋಗಿದೆ. ನಮ್ಮ ಹಕ್ಕು ನೀಡುವಂತೆ ಏರುಧ್ವನಿಯಲ್ಲಿ ಆಗ್ರಹಪಡಿಸಿದ್ದಕ್ಕೆ ಉಪರಾಷ್ಟ್ರಪತಿ ಅವರು ಸಿಟ್ಟಾದರು. ಸಭೆ ಮುಗಿದ ಬಳಿಕ ಸಮಾಧಾನದಿಂದ ಸಮಸ್ಯೆ ಆಲಿಸಿದರು. ನನಗೂ ಕನ್ನಡ ಬರುತ್ತದೆ. ಕನ್ನಡದಲ್ಲೇ ಮಾತನಾಡಬಹುದಿತ್ತು ಎಂದರು’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು