ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಮಾಟಾಯ್ಡ್: ಇರಲಿ ಎಚ್ಚರ

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 21 ಜುಲೈ 2019, 13:42 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ರೂಮಾಟಾಯ್ಡ್ ಸಂಧಿವಾತ (ಆರ್ಥರಿಟೀಸ್) ಸಾಮಾನ್ಯವಾಗಿದೆ. ಕನಿಷ್ಠ ಇಪ್ಪತ್ತು ವಯಸ್ಸಿನವರಿಂದಿಡಿದು ವಯಸ್ಕರವರೆಗೆ ಇದು ಹೆಚ್ಚಾಗಿ ಬರುತ್ತಿದೆ. ಜಗತ್ತು ಆಧುನಿಕರಣಗೊಂಡಂತೆ ಬದಲಾದ ಮನುಷ್ಯನ ಜೀವನ ಶೈಲಿಯೂ ಇದಕ್ಕೆ ಒಂದು ರೀತಿಯಲ್ಲಿ ಕಾರಣ. ಈ ರೋಗವನ್ನು ಸಂಪೂರ್ಣ ಗುಣಪಡಿಸುವಂತಹ ಚಿಕಿತ್ಸೆ ಇದುವರೆಗೆ ಬಂದಿಲ್ಲ. ಆದರೆ, ಬಂದಾಗ, ಇದನ್ನು ನಿಯಂತ್ರಣದಲ್ಲಿಟ್ಟುಕೊಂಡು ಬದುಕು ದೂಡುವ ಚಿಕಿತ್ಸಾ ಸೌಲಭ್ಯಗಳಿವೆ. ಹಾಗಾಗಿ, ಈ ಕಾಯಿಲೆ ಬಗ್ಗೆ ಅರಿವಿರಬೇಕಾದ್ದು ಇಂದಿನ ಅಗತ್ಯವಾಗಿದೆ.

ರೂಮಾಟಾಯ್ಡ್ ಸಂಧಿವಾತ ಒಂದು ರೀತಿಯ ಉರಿ ಊತವಾಗಿದೆ. ಕೈ ಮತ್ತು ಕಾಲಿನಲ್ಲಿರುವ ಕೀಲುಗಳಲ್ಲಿ ನೋವು ಮತ್ತು ಬಾವು ಕಾಣಿಸಿಕೊಳ್ಳುತ್ತದೆ. ಆರಂಭಿಕ ಹಂತದಲ್ಲೇ ಇದಕ್ಕೆ ಚಿಕಿತ್ಸೆ ಪಡೆಯದಿದ್ದರೆ, ಕೀಲುಗಳಲ್ಲಿ ದೀರ್ಘಕಾಲಿಕ ನ್ಯೂನತೆ ಉಂಟಾಗುವ ಸಾಧ್ಯತೆ ಇರುತ್ತದೆ. ಜತೆಗೆ ಪುಪ್ಪಸ, ಕಣ್ಣು, ರಕ್ತನಾಳಗಳು, ನರಗಳು ಹಾಗೂ ಚರ್ಮಕ್ಕೂ ತೊಂದರೆಯಾಗುತ್ತದೆ. ಸಾಮಾನ್ಯವಾಗಿ ನೂರು ಜನರಲ್ಲಿ ಕನಿಷ್ಠ ಇಬ್ಬರಿಗೆ ಈ ಕಾಯಿಲೆ ಇರುತ್ತದೆ. ಅದರಲ್ಲೂ 20ರಿಂದ 50 ವರ್ಷದೊಳಗಿನ ಹೆಂಗಸರಲ್ಲಿ ಕಾಣಿಸಿಕೊಳ್ಳುತ್ತದೆ. ಅಲ್ಲದೆ, ಪುರುಷರು ಹಾಗೂ ಚಿಕ್ಕ ಮಕ್ಕಳಲ್ಲಿಯೂ ನೋಡಬಹುದಾಗಿದೆ.

ಕಾರಣವೇನು?

ಇದೊಂದು ಆಟೊ ಇಮ್ಯೂನೊ ರೋಗ. ನಮ್ಮ ಶರೀರದಲ್ಲಿರುವ ರೋಗ ನಿಯಂತ್ರಣ ಕಣಗಳು, ನಮ್ಮ ಶರೀರವನ್ನು ಪರಕೀಯ ಎಂದು ಭಾವಿಸಿ ಆಕ್ರಮಣ ಮಾಡುತ್ತವೆ. ಹೀಗೆ ಆಗಲು ಒತ್ತಡ, ಸಂಸರ್ಗ ದೋಷ (Infection), ಅನುವಂಶೀಯತೆ (ಜೀನ್ಸ್), ಆಹಾರ (ಹಾರ್ಮೋನ್) ಇತ್ಯಾದಿ ಕಾರಣಗಳಿಗಾಗಿ ಬರುವುದುಂಟು. ಹಾಗಾಗಿ, ಈ ಸಂಧಿವಾತವನ್ನು ಸಂಪೂರ್ಣವಾಗಿ ಗುಣಪಡಿಸುವುದು ಸಾಧ್ಯವಿಲ್ಲ. ಆದರೆ, ರೋಗವನ್ನು ನಿಯಂತ್ರಣದಲ್ಲಿ ಇಡಬಹುದಾಗಿದೆ.

ಲಕ್ಷಣಗಳಾವುವು?

ಕೈ ಮತ್ತು ಕಾಲುಗಳ ಕೀಲುಗಳಲ್ಲಿ ನೋವು ಮತ್ತು ಬಾವು ಕಾಣಿಸಿಕೊಳ್ಳುವುದು. ಬೆಳಿಗ್ಗೆ ಎದ್ದಾಗ ನೋವು ಹೆಚ್ಚಿದ್ದು ಕಾಲು ಮಡಿಚಲು ತೊಂದರೆಯಾಗುವುದು ಹಾಗೂ ಕೆಲಸ ಮಾಡುತ್ತ ಹೋದಂತೆ ನೋವು ತಗ್ಗುವುದು. ಮೊಣಕೈ ಮತ್ತು ಮೊಣಕಾಲುಗಳಲ್ಲಿ ಗಂಟಾಗುತ್ತವೆ. ಈ ರೋಗ ನಿಯಂತ್ರಣದಲ್ಲಿಲ್ಲದಿದ್ದರೆ, ದೇಹದ ಇತರ ಅಂಗಗಳ ಮೇಲೂ ಪರಿಣಾಮ ಬೀರುತ್ತದೆ.

ಮುಖ್ಯವಾಗಿ ಕಣ್ಣಿನ ನೀರಿನ ಅಂಶ ಕಡಿಮೆಯಾಗಿ ಕೆಂಪು ಬಣ್ಣಕ್ಕೆ ತಿರುಗಿ ಉರಿಯುತ್ತದೆ. ಬಾಯಿಯಲ್ಲಿ ನೀರಿನ ಅಂಶ ಕಡಿಮೆಯಾಗಿ ಹಲ್ಲು ಹುಳುಕಾಗುವುದು. ಪುಪ್ಪಸದಲ್ಲಿ ನೀರು ತುಂಬುವ, ಗಂಟುಗಳಾಗುವ ಅಥವಾ ಪೊಳ್ಳುತನ (ಕ್ಯಾವಿಟಿ) ಆಗಬಹುದು. ನರಗಳಿಗೆ ರಕ್ತ ಸಂಚಾರ ಕಡಿಮೆಯಾಗಿ ಕೈ ಮತ್ತು ಕಾಲುಗಳಲ್ಲಿ ನರಗಳು ದುರ್ಬಲಗೊಳ್ಳುತ್ತವೆ. ಇದರಿಂದ ಕೈ ಮತ್ತು ಕಾಲುಗಳಲ್ಲಿ ಸ್ಪರ್ಶ ಜ್ಞಾನ ಕಡಿಮೆಯಾಗಿ ಜೋಮು ಹಿಡಿಯುವುದು. ಚರ್ಮಗಳಲ್ಲಿ ಗಂಟಾಗಿ, ಒಣ ತುರಿಕೆ ಉಂಟಾಗುವ ಜತೆಗೆ ಕೂದಲು ಉದುರುವುದು. ರಕ್ತನಾಳದಲ್ಲಿ ರಕ್ತ ಸಂಚಾರ ಕಡಿಮೆಯಾಗಿ, ಬೆರಳುಗಳು ಕೊಳೆಯಬಹುದು (ಗ್ಯಾಂಗ್ರಿನ್).

ರೋಗ ಖಚಿತಪಡಿಸುವುದು ಹೇಗೆ?

ಯಾರಿಗೆ ಕೈ ಮತ್ತು ಕಾಲಿನ ಗಂಟುಗಳಲ್ಲಿ ಆರು ವಾರಕ್ಕಿಂತ ಹೆಚ್ಚು ಕಾಲ ನೋವಿದ್ದರೆ, ಬೇರಾವುದೇ ಕಾಯಿಲೆ ಇಲ್ಲದಿದ್ದರೆ ಅದು ರೂಮಾಟಾಯ್ಡ್ ಆರ್ಥರಿಟೀಸ್ ಎಂದರ್ಥ. ಶೇ 70ರಷ್ಟು ಜನರಲ್ಲಿ ರೂಮಾಟಾಯ್ಡ್ ಫ್ಯಾಕ್ಟರ್ ಪಾಸಿಟಿವ್ (ಆರ್‌ಎಫ್‌) ಆಗಿರುತ್ತದೆ. ರೋಗ ಖಚಿತಕ್ಕೆ ಆರ್‌ಎಫ್‌ ಆಗಬೇಕಿಲ್ಲ. ಆದರೆ, ಹೆಚ್ಚಿನ ಪ್ರಮಾಣದಲ್ಲಿದ್ದವರಿಗೆ ರೋಗದ ಪರಿಣಾಮ ತೀವ್ರವಾಗಿರಬಹುದು. ರೊಮಾಟಾಯ್ಡ್ ಅಂಶವು ಒಮ್ಮೆ ಪಾಸಿಟಿವ್ ಆಗಿದ್ದರೆ, ಅದು ಹಾಗೆಯೇ ಉಳಿಯುವುದು.

ಅದನ್ನು ಮತ್ತೆ ಪರೀಕ್ಷೆ ಮಾಡಿಸುವ ಅಗತ್ಯವಿಲ್ಲ. ಆರ್‌ಎಫ್‌ ನೆಗೆಟಿವ್ ಇದ್ದವರಿಗೆ ‘ಆ್ಯಂಟಿಸಿಸಿಪಿ’ (AntiCCP) ಎಂಬ ಪರೀಕ್ಷೆ ಮಾಡಿ ಅದನ್ನು ನಿರ್ಧರಿಸಬಹುದು. ಸಂಧಿವಾತ ಬರುವುದಕ್ಕೂ ಮುಂಚೆಯೇ ಪಾಸಿಟಿವ್ ಇರುವುದರಿಂದ, ಇದನ್ನು ರೋಗ ಮುಂದೆ ಬರುವುದನ್ನು ಪತ್ತೆ ಹಚ್ಚಲು ಉಪಯೋಗಿಸಬಹುದು. ಶೇ 50ರಷ್ಟು ಜನರಲ್ಲಿ ರೋಗ ಲಕ್ಷಣವಿದ್ದರೆ, ಆ್ಯಂಟಿ ಸಿಸಿಪಿ ಪಾಸಿಟಿವ್ ಇದ್ದವರಿಗೆ ಮುಂದೆ ರೂಮಾಟಾಯ್ಡ್ ಆರ್ಥರಿಟೀಸ್ ಬರಬಹುದು. ರೋಗದ ತೀವ್ರತೆಯನ್ನು ಇಎಸ್‌ಆರ್‌ ಮತ್ತ ಸಿಆರ್‌ಪಿ ರಕ್ತ ತಪಾಸಣೆ ಪರೀಕ್ಷೆಗಳು ಹೇಳುತ್ತವೆ. ಎಕ್ಸ್‌ರೇಯಲ್ಲಿ ಕೈ ಮತ್ತು ಕಾಲುಗಳಲ್ಲಿರುವ ಎಲುಬು ನಷ್ಟವನ್ನು ಕಾಣಬಹುದು.

ಚಿಕಿತ್ಸೆ ಹೇಗೆ?

ಆರ್ಥರಿಟೀಸ್ ದೀರ್ಘಕಾಲ ಇರುವಂತಹ ಕಾಯಿಲೆ. ಆರಂಭಿಕ ಹಂತದಲ್ಲಿ ಈ ಕಾಯಿಲೆಯನ್ನು ಕಂಡುಹಿಡಿದರೆ ಪೂರ್ತಿಯಾಗಿ ಗುಣಪಡಿಸಬಹುದಾಗಿದೆ. ಇದಕ್ಕೆ ಮೂರು ರೀತಿಯ ಚಿಕಿತ್ಸೆಗಳಿವೆ. ನೋವು ಕಡಿಮೆ ಮಾಡುವ ಮಾತ್ರೆಗಳು, ಕಾಯಿಲೆ ಗುಣಪಡಿಸುವ ಮಾತ್ರೆಗಳು ಹಾಗೂ ಸ್ಟಿರಾಯ್ಡ್‌. ಆದರೆ, ಇದರಿಂದಲೂ ಸೈಡ್ ಎಫೆಕ್ಟ್‌ ತಪ್ಪಿದ್ದಲ್ಲ.

ನೋವು ಕಡಿಮೆ ಮಾಡುವ ಮಾತ್ರೆಗಳನ್ನು ತುಂಬಾ ದಿನ ತೆಗೆದುಕೊಂಡರೆ, ಹೊಟ್ಟೆಯಲ್ಲಿ ಹುಣ್ಣಾಗುತ್ತದೆ ಮತ್ತು ಕಿಡ್ನಿಗೆ ತೊಂದರೆಯಾಗಬಹುದು. ರೋಗ ಗುಣಪಡಿಸುವ ಮಾತ್ರೆಗಳನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಬೇಕು. ಸ್ಟಿರಾಯ್ಡ್‌ ಮಾತ್ರೆಗಳು ನೋವನ್ನು ಬೇಗ ವಾಸಿ ಮಾಡುತ್ತವೆ. ಇವುಗಳನ್ನು ದೀರ್ಘ ಕಾಲಾವಧಿವರೆಗೆ ತೆಗೆದುಕೊಂಡರೆ, ಎಲುಬು ಮೆದುವಾಗಿ ಮುರಿಯಬಹುದು. ಹೊಟ್ಟೆಯಲ್ಲಿ ಹುಣ್ಣಾಗಬಹುದು, ಸಂಸರ್ಗದೋಷ (Infection) ಆಗಬಹುದು. ಇಷ್ಟೆಲ್ಲಾ ತೊಂದರೆ ಇದ್ದರೂ, ಕೆಲವೊಂದು ರೋಗಗಳಿಗೆ ಈ ಮಾತ್ರೆ ಕೊಡುವುದರಿಂದ ರೋಗಿಯ ಜೀವ ಉಳಿಸಬಹುದಾಗಿದೆ. ಉರಿ ಊತದ ಸಂಧಿವಾತಕ್ಕೆ ಮಾತ್ರೆಗಳೇ ಚಿಕಿತ್ಸೆ. ಮೂಳೆ ಸವೆತ ಮತ್ತು ಊರಿ ಊತದ ಸಂಧಿವಾತದಲ್ಲಿ ಕೀಲು ಹಾನಿಯಾಗಿ ದಿನನಿತ್ಯದ ಕೆಲಸಕ್ಕೆ ತೊಂದರೆಯಾದಾಗ, ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಸಂಧಿವಾತವಿದ್ದಲ್ಲಿ ಬೆಳಿಗ್ಗೆ ಎದ್ದಾಗ ನೋವು ಇರುತ್ತದೆ. ಕೆಲಸ ಮಾಡುತ್ತಾ ನೋವು ಕಮ್ಮಿಯಾಗುತ್ತದೆ. ಸಂಧಿವಾತದಲ್ಲಿ ಆರಾಮದಿಂದ ನೋವು ಹೆಚ್ಚಾಗಿ, ದೈಹಿಕ ಚಟುವಟಿಕೆಗಳಿಂದ ನೋವು ಕಡಿಮೆಯಾಗುತ್ತದೆ. ಆದ್ದರಿಂದ, ವ್ಯಾಯಾಮ ಮಾಡುವುದರಿಂದ ನೋವು ತಗ್ಗುತ್ತದಲ್ಲದೆ, ಕೀಲುಗಳ ಚಾಲನೆ ಹೆಚ್ಚಾಗುತ್ತದೆ. ಆರಂಭದಲ್ಲಿ ನೋವು ಹೆಚ್ಚಾದರೂ, ಸ್ವಲ್ಪ ದಿನಗಳಲ್ಲಿ ಕಮ್ಮಿಯಾಗುವುದು.

ವ್ಯಾಯಾಮ, ಆಹಾರ

ಕನಿಷ್ಠ 10 ನಿಮಿಷದಿಂದ ಅರ್ಧ ಗಂಟೆಯವರೆಗೆ ವ್ಯಾಯಾಮ ಮಾಡಬೇಕು. ಬೆಳಿಗ್ಗೆ ಮತ್ತು ಸಂಜೆ ಎರಡೂ ಹೊತ್ತು ಮಾಡಿದರೆ, ಇನ್ನೂ ಒಳ್ಳೆಯದು. ವ್ಯಾಯಾಮ ಮಾಡಿ ಎರಡು ಗಂಟೆಗಿಂತ ಹೆಚ್ಚು ನೋವಿದ್ದರೆ, ಮರುದಿನ ಕಡಿಮೆ ವ್ಯಾಯಾಮ ಮಾಡಬೇಕು. ಬಳಿಕ ನಿಧಾನವಾಗಿ ವ್ಯಾಯಾಮದ ಸಮಯವನ್ನು ಹೆಚ್ಚಿಸುತ್ತ ಹೋಗಬೇಕು. ನಮ್ಮ ದೇಹವು ನಾವು ತಿನ್ನುವ ಆಹಾರದಿಂದ ರಚನೆಯಾಗಿದೆ. ಶರೀರದಲ್ಲಿ ಆಗುವ ವಿಕಲ್ಪಗಳಿಗೆ ಆಹಾರವೂ ಒಂದು ಕಾರಣವಿರಬಹುದು. ಕೆಲವೊಂದು ರೋಗಗಳು ಆಹಾರದಿಂದಾಗಿ ಹೆಚ್ಚಾಗಬಹುದು. ಉಪವಾಸದಿಂದ ಸಂಧಿವಾತದ ಲಕ್ಷಣಗಳು ಕಡಿಮೆಯಾಗುವುದು. ಹಾಗಾಗಿ, ಆಹಾರದಲ್ಲಿ ನಿಯಂತ್ರಣ, ಸೂಕ್ತ ಉಪವಾಸ, ಒಳ್ಳೆಯ ಆಹಾರ (ಶಾಕಾಹಾರಿ ಆಹಾರ -Balanced diet), ವ್ಯಾಯಾಮ ಹಾಗೂ ಯೋಗದಿಂದಲೂ ಆರ್ಥರಿಟೀಸ್‌ನಿಂದ ದೂರವಿರಬಹುದು.

-ಡಾ.ವಿಕ್ರಮ ಹರಿದಾಸ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT