ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ಒಣಭೂಮಿಯಲ್ಲೂ ಅರಳಿದ ಗುಲಾಬಿ

Published 17 ಮೇ 2024, 6:05 IST
Last Updated 17 ಮೇ 2024, 6:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೀರಾವರಿ ಸೌಲಭ್ಯ ಇಲ್ಲದೇ, ಒಣ ಬೇಸಾಯದ ಮೂಲಕ ಪುಷ್ಪ ಕೃಷಿ ಮಾಡಿ ಸೈ ಎನಿಸಿಕೊಂಡು, ಇತರ ರೈತರಿಗೂ ಮಾದರಿಯಾಗಿದ್ದಾರೆ ಕುಂದಗೋಳ ತಾಲ್ಲೂಕಿನ ಹಿರೇಗುಂಜಳ ಗ್ರಾಮದ ರೈತ ಮಲ್ಲೇಶಪ್ಪ ಗೂ. ಬಿಸೇರೊಟ್ಟಿ.

ಅಂದಾಜು 20 ವರ್ಷಗಳಿಂದಲೂ ಕೃಷಿ ಕಾಯಕವನ್ನೇ ನೆಚ್ಚಿಕೊಂಡಿರುವ ಇವರು, ತಮ್ಮ 20 ಎಕರೆ ಜಮೀನಿನಲ್ಲಿ 70 ಪೇರಲ, 25 ಬೇವಿನ ಮರ, 10 ಬೆಟ್ಟದ ನೆಲ್ಲಿಕಾಯಿ, 4 ಚಿಕ್ಕು, 15 ಹೊಂಗೆ, 80 ಕರಿಬೇವು, 25 ಸುಬಾಬೂಲ್ ಮರಗಳು ಹಾಗೂ ಒಂದು ಎಕರೆ ಹುಲ್ಲು ಬೆಳೆಸಿದ್ದಾರೆ. 

ಮೂರು ವರ್ಷಗಳ ಹಿಂದೆ, ತಮಿಳುನಾಡಿನಿಂದ ಬ್ಲ್ಯಾಕ್‌ ಮ್ಯಾಜಿಕ್‌ ರೋಸ್‌ ತಳಿಯ 200 ಗುಲಾಬಿ ಸಸಿಗಳನ್ನು ₹40ಕ್ಕೆ ಒಂದರಂತೆ ಖರೀದಿಸಿ, ಅಂದಾಜು 20 ಗುಂಟೆ ಭೂಮಿಯಲ್ಲಿ ನಾಟಿ ಮಾಡಿದರು.

ಒಂದೂವರೆ ವರ್ಷಕ್ಕೆ ಆದಾಯ ಶುರುವಾಯ್ತು. ಪ್ರತಿ ವಾರಕ್ಕೆ 100ರಿಂದ 150 ಹೂಗಳು ಸಿಗುತ್ತವೆ. ಮಾರುಕಟ್ಟೆಯಲ್ಲಿ ಒಂದು ಹೂವಿಗೆ ₹4ರಿಂದ ₹5 ದರವಿದೆ. ವಾರಕ್ಕೆ ಕನಿಷ್ಠ ₹500 ಲಾಭ ಸಿಗುತ್ತದೆ. ನೀರಾವರಿ ಸೌಲಭ್ಯವಿದ್ದರೆ ವರ್ಷಪೂರ್ತಿ ಆದಾಯ ಪಡೆಯಬಹುದು ಎನ್ನುವ ಮಾತು ರೈತ ಮಲ್ಲೇಶಪ್ಪ ಗೂ. ಬಿಸೇರೊಟ್ಟಿ ಅವರದ್ದು. 

ಗೊಬ್ಬರ ಉತ್ಪಾದನೆಯ‌ಲ್ಲಿ ಸ್ವಾವಲಂಬನೆ: ‘ಪುಷ್ಪ ಕೃಷಿ ಹಾಗೂ ಇನ್ನಿತರ ಕೃಷಿಯಲ್ಲಿ ಆದಾಯ ಬಹುಬೇಗ ಸಿಗಬೇಕೆಂದರೆ ರಾಸಾಯನಿಕ ಬಳಕೆ ಅಗತ್ಯ ಎನ್ನುವಂಥ ಪರಿಸ್ಥಿತಿ ಇದೆ. ಆದರೆ ನಾನು ಕಳೆದ 16 ವರ್ಷದಿಂದ ರಾಸಾಯನಿಕ ಮುಕ್ತ ಕೃಷಿ ಮಾಡುತ್ತ ಬಂದಿರುವೆ’ ಎಂದು ಅವರು ಮಾಹಿತಿ ನೀಡಿದರು. 

‘ಕೃಷಿ ಇಲಾಖೆಯ ನೆರವಿನಿಂದ ಆರು ವರ್ಷದ ಹಿಂದೆ 9 ಅಡಿ ಆಳದ 90 ಅಡಿ ಉದ್ದ ಹಾಗೂ 70 ಅಡಿ ಅಗಲದ ಕೃಷಿ ಹೊಂಡ ನಿರ್ಮಿಸಿಕೊಂಡಿರುವೆ. 9 ಹಸುಗಳನ್ನು ಸಾಕಿಕೊಂಡಿರುವೆ. ಇವುಗಳಿಂದ ಸಿಗುವ ಸಗಣಿ ಹಾಗೂ ಗೋಮೂತ್ರದಲ್ಲೇ ಘನ ಜೀವಾಮೃತ ಸಿದ್ಧಪಡಿಸುತ್ತೇನೆ. ಈ ಗೊಬ್ಬರ ತಯಾರಿಗೆ ಅಂದಾಜು 45 ದಿನ ಬೇಕು. ಪರಿಮಳಯುಕ್ತ ಈ ಗೊಬ್ಬರದಲ್ಲಿ ಪೋಷಕಾಂಶ ಹಾಗೂ ಬ್ಯಾಕ್ಟೀರಿಯಾಗಳಿರುವುದರಿಂದ ಬೆಳೆಗಳ ಬೆಳವಣಿಗೆ ಉತ್ತಮವಾಗಿರುತ್ತದೆ. ಪ್ರತಿ ವರ್ಷ ಅಂದಾಜು 15 ಟನ್‌ ಗೊಬ್ಬರ ಉತ್ಪಾದನೆ ಮಾಡುತ್ತೇನೆ. ಗೊಬ್ಬರ ಮಾರಾಟಕ್ಕಿಲ್ಲ. ಆದರೆ ಈ ಬಗ್ಗೆ ಇತರ ರೈತರಿಗೂ ಮಾರ್ಗದರ್ಶನ ಮಾಡುತ್ತ ಬಂದಿರುವೆ’ ಎಂದು ತಿಳಿಸಿದರು.

ಅಮೆರಿಕಕ್ಕೆ ರಫ್ತು: ‘ಸ್ಥಳೀಯ ಮಾರುಕಟ್ಟೆಯುಲ್ಲಿಯೇ ಗುಲಾಬಿ ಮಾರಾಟ ಮಾಡುತ್ತಿರುವೆ. ಜೋಳ, ಗೋಧಿಯನ್ನು ಲಕ್ಷ್ಮೇಶ್ವರ, ಚೆನ್ನೈ, ಬೆಂಗಳೂರಿಗೆ ಮಾರಾಟ ಮಾಡುತ್ತೇನೆ. ಅಮೆರಿಕಕ್ಕೆ ಮೆಣಸಿನಕಾಯಿ ಪುಡಿ, ಅಜವಾನ್‌ ಅನ್ನು ರಫ್ತು ಮಾಡುತ್ತಿರುವೆ’ ಎಂದು ಸಂತಸ ಹಂಚಿಕೊಂಡರು.

ಭೂಮಿಗೆ ರಾಸಾಯನಿಕ ಉಣಿಸಿ ಫಲವತ್ತತೆ ಹಾಳು ಮಾಡುವ ಬದಲು ಮಣ್ಣು ಸಂರಕ್ಷಣೆಗೆ ಮುಂದಾಗಬೇಕಾಗಿದೆ. ಆರೋಗ್ಯಯುತ ಕೃಷಿಗೆ ಸಾವಯವ ಗೊಬ್ಬರ ಬಳಕೆ ಅಗತ್ಯ
–ಮಲ್ಲೇಶಪ್ಪ ಗೂ. ಬಿಸೇರೊಟ್ಟಿ ರೈತ ಹಿರೇಗುಂಜಳ ಗ್ರಾಮ ಕುಂದಗೋಳ

ಮೇವಿನ ಕೊರತೆ ನೀಗಿಸಿದ ಸುಬಾಬೂಲ್ ಮರ

‘ಮಳೆ ಕೊರತೆಯ ಕಾರಣ ದನಕರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಅದರಲ್ಲೂ ಹಸಿರು ಮೇವು ಸಿಗುವುದು ಇನ್ನೂ ಕಷ್ಟ ಎನ್ನುವಂಥ ಪರಿಸ್ಥಿತಿ ಇದೆ. ಈ ವೇಳೆ ನಮ್ಮ ಕೈ ಹಿಡಿದಿದ್ದು 25 ಸುಬಾಬೂಲ್ ಮರಗಳು. ಇವುಗಳ ತಪ್ಪಲುಗಳನ್ನೇ ದನಕರುಗಳಿಗೆ ನೀಡುತ್ತಿದ್ದು ಉತ್ತಮವಾಗಿ ಹಾಲು ನೀಡುತ್ತಿವೆ. ಬರದ ನಡುವೆಯೂ ಮೇವಿನ ಕೊರತೆ ನೀಗಿದಂತಾಗಿದೆ’ ಎಂದು ಮಲ್ಲೇಶಪ್ಪ ಗೂ. ಬಿಸೇರೊಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT