ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೂವಿನಹಡಗಲಿ: ಎಟಿಎಂ ಕಾರ್ಡ್ ಬದಲಿಸಿ ರೈತನಿಗೆ ₹95 ಸಾವಿರ ವಂಚನೆ

Published 5 ಆಗಸ್ಟ್ 2024, 15:26 IST
Last Updated 5 ಆಗಸ್ಟ್ 2024, 15:26 IST
ಅಕ್ಷರ ಗಾತ್ರ

ಹೂವಿನಹಡಗಲಿ: ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ಶಾಖೆಯ ಎಟಿಎಂನಲ್ಲಿ ರೈತನೊಬ್ಬರ ಎಟಿಎಂ ಕಾರ್ಡ್ ಬದಲಾಯಿಸಿ ₹95 ಸಾವಿರ ವಂಚಿಸಿರುವುದು ಈಚೆಗೆ ನಡೆದಿದೆ.

ತಾಲ್ಲೂಕಿನ ಮಿರಾಕೊರನಹಳ್ಳಿ ಗ್ರಾಮದ ರೈತ ಎ. ಈಶಪ್ಪ ಹಣ ಕಳೆದುಕೊಂಡವರು. ಕಳೆದ ಜೂನ್‌ 15ರಂದು ಪಟ್ಟಣದ ಎಸ್‌ಬಿಐ ಎಟಿಎಂನಲ್ಲಿ ಹಣ ಬಿಡಿಸಿಕೊಳ್ಳುವಾಗ ವ್ಯಕ್ತಿಯೊಬ್ಬ ಹಿಂದೆ ನಿಂತು ಹೊಂಚು ಹಾಕಿದ್ದಾನೆ. ಡ್ರಾ ಮಾಡಿದ ಹಣ ಎಣಿಕೆ ಮಾಡಿಕೊಳ್ಳುವಾಗ ಹಿಂದೆ ನಿಂತಿದ್ದ ವ್ಯಕ್ತಿ ಅರಿವಿಗೆ ಬಾರದಂತೆ ಮಷಿನ್‌ನಲ್ಲಿದ್ದ ಕಾರ್ಡ್ ಕಿತ್ತು, ತನ್ನಲ್ಲಿದ್ದ ಬೇರೆ ಕಾರ್ಡ್ ನೀಡಿದ್ದಾನೆ. ಹಿಂದೆ ನಿಂತು ಪಿನ್ ಸಂಖ್ಯೆ ನೋಡಿಕೊಂಡಿದ್ದಾನೆ. ನಂತರ 48 ಗಂಟೆಯೊಳಗೆ ರೈತನ ಖಾತೆಯಲ್ಲಿದ್ದ ಹಣವನ್ನೆಲ್ಲ ಹಾವೇರಿ, ಬೆಂಗಳೂರಿನ ಎಟಿಎಂಗಳಲ್ಲಿ ದೋಚಿದ್ದಾರೆ. ಹಣ ಬಿಡಿಸಿದ ಸಂದೇಶ ಮೊಬೈಲ್‌ಗೆ ಹೋಗದಂತೆ ಮಾಡಿ ವಂಚಿಸಿದ್ದಾರೆ.

‘ಆಭರಣ ಸಾಲದ ಹಣವನ್ನು ಬ್ಯಾಂಕ್‌ನವರು ಖಾತೆಗೆ ಜಮೆ ಮಾಡಿದ್ದರು. ಬೀಜ ಗೊಬ್ಬರಕ್ಕೆಂದು ₹4,500  ಬಿಡಿಸಿಕೊಳ್ಳುವಾಗ ವಂಚಕ ಮೋಸ ಮಾಡಿದ್ದಾನೆ. ಇಲ್ಲಿನ ಬ್ಯಾಂಕ್ ಎಟಿಎಂನಲ್ಲಿ ಭದ್ರತೆ ಇಲ್ಲದಿರುವುದರಿಂದ ಕಳ್ಳರಿಗೆ ಹಬ್ಬವಾಗಿದೆ. ಘಟನೆ ನಡೆದು ಬಹಳ ದಿನಗಳಾದರೂ ಬ್ಯಾಂಕ್‌ನವರು ಸಿಸಿ ಕ್ಯಾಮೆರಾ ದೃಶ್ಯಾವಳಿಯನ್ನು ಪೊಲೀಸರಿಗೆ ನೀಡಿ ಕಳ್ಳರ ಪತ್ತೆಗೆ ಸಹಕರಿಸುತ್ತಿಲ್ಲ’ ಎಂದು ರೈತ ಈಶಪ್ಪ ಅಳಲು ತೋಡಿಕೊಂಡರು.

‘ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಖಾತೆಯಲ್ಲಿ ಉಳಿಸಿದ್ದ ಹಣವನ್ನು ವಂಚಕ ದೋಚಿದ್ದಾನೆ. ಈ ಕುರಿತು ದೂರು ನೀಡಲಾಗಿದ್ದು, ಪೊಲೀಸರು ವಂಚಕನನ್ನು ಪತ್ತೆ ಹಚ್ಚಿ ಹಣ ವಾಪಾಸ್ ಕೊಡಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT