ಹುಬ್ಬಳ್ಳಿ: ಇಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ನಗರದಲ್ಲಿ ಅಧಿಕಾರಿಗಳೊಂದಿಗೆ ಗುರುವಾರ ಸಮಾಲೋಚನೆ ನಡೆಸಿದರು.
ಮೇಲ್ಸೇತುವೆ ಕಾಮಗಾರಿ, ಯೋಜನೆಯ ನೀಲನಕ್ಷೆ, ಭೂಸ್ವಾಧೀನ, ಕಾಲಮಿತಿ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಚಿವರಿಗೆ ವಿವರ ನೀಡಿದರು.
‘ಕೆಲವೆಡೆ ಅವೈಜ್ಞಾನಿಕವಾಗಿ ನಡೆಯುತ್ತಿರುವ ಕಾಮಗಾರಿ ಸರಿಪಡಿಸಬೇಕು. ಪಾಲಿಕೆ ಕಚೇರಿಯಿಂದ ಹೊಸೂರು ಮಾರ್ಗದಲ್ಲಿ ಕಾಮಗಾರಿಯಿಂದಾಗಿ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಇದನ್ನು ನಿವಾರಿಸಬೇಕು. ಜನರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಬೇಕು. ವೇಗವಾಗಿ ಪೂರ್ಣಗೊಳಿಸಲು ಆದ್ಯತೆ ನೀಡಬೇಕೆಂದು ಸಚಿವ ಸಂತೋಷ ಲಾಡ್ ಅಧಿಕಾರಿಗಳಿಗೆ ಸೂಚಿಸಿದರು’ ಎಂದು ಮುಖಂಡ ನಾಗರಾಜ ಗೌರಿ ತಿಳಿಸಿದರು.
‘ಶಿವಕೃಷ್ಣ ಮಂದಿರದ ಜಾಗ ಸ್ವಾಧೀನ ಮಾಡಿಕೊಳ್ಳದಂತೆ ಹೈಕೋರ್ಟ್ ಧಾರವಾಡ ಪೀಠ ತಡೆಯಾಜ್ಞೆ ನೀಡಿದ್ದು, ಕಾನೂನಾತ್ಮಕ ತೊಂದರೆ ಪರಿಹರಿಸಲು ಯತ್ನಿಸಬೇಕೆಂದೂ ನಿರ್ದೇಶನ ನೀಡಿದರು’ ಎಂದರು.
ಈದ್ಗಾ ಕಾಂಪೌಂಡ್: ಮೇಲ್ಸೇತುವೆ ಕಾಮಗಾರಿಗಾಗಿ ರಾಣಿ ಚನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನದ ಕಾಂಪೌಂಡ್ ಭಾಗಶಃ ತೆರವು ಆಗಲಿರುವ ಬಗ್ಗೆಯೂ ಸಚಿವರು ಮಾಹಿತಿ ಸಂಗ್ರಹಿಸಿದರು. ಭೂಸ್ವಾಧೀನ ಪ್ರಕ್ರಿಯೆ, ಭದ್ರತೆ, ಮುಖಂಡರೊಂದಿಗೆ ಸಭೆ ನಡೆಸುವ ಕುರಿತಾಗಿ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
‘ಮೇಲ್ಸೇತುವೆ ಕಾಮಗಾರಿ ಕುರಿತು ಸಚಿವರು ಪ್ರಾಥಮಿಕ ಮಾಹಿತಿ ಪಡೆದರು. ಯೋಜನೆಗೆ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಇರದ ಕಾರಣ, ಮುಂದಿನ ದಿನಗಳಲ್ಲಿ ಸಮಗ್ರ ಮಾಹಿತಿಯೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದರು’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಮಾಹಿತಿ ನೀಡಿದರು.