ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಭಿನ್ನಾಭಿಪ್ರಾಯ ಬದಿಗಿಟ್ಟು ಕೆಲಸ ಮಾಡಿ

ಮುಖಂಡರ ಸಭೆಯಲ್ಲಿ ಶಿವಕುಮಾರ್‌ ಖಡಕ್‌ ಎಚ್ಚರಿಕೆ
Last Updated 8 ಅಕ್ಟೋಬರ್ 2021, 8:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಾನಗಲ್‌ ಕ್ಷೇತ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಎಂದು ಸುಮ್ಮನಿರುವ ಬದಲು, ನಮ್ಮಲ್ಲಿನ ಭಿನ್ನಾಭಿಪ್ರಾಯ ಬದಿಗಿಟ್ಟು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಟೊಂಕಕಟ್ಟಿ ನಿಲ್ಲಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಖಡಕ್ಕಾಗಿ ಹೇಳಿದರು.

ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ’ಪಕ್ಷದ ಎಲ್ಲ ಕಾರ್ಯಕರ್ತರು ಪ್ರಾಮಾಣಿಕವಾಗಿ ಪ್ರಚಾರದಲ್ಲಿ ಸಕ್ರಿಯವಾಗ ತೊಡಗಿಕೊಂಡರೆ ಗೆಲುವು ಸಾಧ್ಯವಾಗುತ್ತದೆ. ಹಾನಗಲ್‌ ಹಾಗೂ ಸಿಂದಗಿ ಕ್ಷೇತ್ರದ ಗೆಲುವಿಗೆ ಎಲ್ಲರೂ ಶ್ರಮಿಸೋಣ’ ಎಂದರು.

‘ಹಾನಗಲ್‌ ಕ್ಷೇತ್ರದ ಜನ ನಮ್ಮ ಪಕ್ಷವನ್ನು ಬಹಳಷ್ಟು ನಂಬಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳಲು ನಾವೆಲ್ಲರೂ ಬದ್ಧತೆಯಿಂದ ಕೆಲಸ ಮಾಡಬೇಕಾಗಿದೆ. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಪ್ರಚಾರ ಮಾಡಬೇಕು’ ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ ‘ಧಾರವಾಡ ಹಾಗೂ ಹಾವೇರಿ ಜಿಲ್ಲೆಯ ಮುಖಂಡರು ಜವಾಬ್ದಾರಿ ಹಂಚಿಕೊಂಡು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮ ಪಡಬೇಕು. ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವು ಪಡೆದರೆ ರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಸಂದೇಶ ನೀಡಿದಂತಾಗುತ್ತದೆ’ ಎಂದರು.

’ದೇಶ ಈಗ ಸಂಕಷ್ಟದಲ್ಲಿದ್ದು, ಸಂಪೂರ್ಣವಾಗಿ ರಾಜಕೀಯ ವ್ಯವಸ್ಥೆಯನ್ನೇ ಬಿಜೆಪಿ ಬುಡಮೇಲು ಮಾಡುವ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕೆಲಸ ನಡೆಯುತ್ತಿದೆ. ಸರ್ಕಾರಗಳ ವಿರುದ್ಧ ನಾವು ಧ್ವನಿ ಎತ್ತಿದರೆ ಅವರ ಮೇಲೆ ಸ್ವತಂತ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ದಾಳಿ ನಡೆಸಲಾಗುತ್ತಿದೆ’ ಎಂದು ಆರೋಪಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಆರ್‌. ಧ್ರುವನಾರಾಯಣ, ಸಲೀಂ ಅಹ್ಮದ್‌, ಶಾಸಕರಾದ ಎಚ್‌.ಕೆ. ಪಾಟೀಲ, ಪ್ರಸಾದ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ಲಕ್ಷ್ಮಿ ಹೆಬ್ಬಾಳಕರ, ಹಾನಗಲ್‌ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ, ರಾಮಲಿಂಗರಡ್ಡಿ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ಮುಖಂಡ ಸದಾನಂದ ಡಂಗನವರ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

ಪ್ರತಿ ಬೂತ್‌ಗೆ ಐವರು ಮುಖಂಡರು
ಹಾನಗಲ್‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 239 ಬೂತ್‌ಗಳಿದ್ದು, ಕಾಂಗ್ರೆಸ್‌ ಪ್ರತಿ ಬೂತ್‌ಗೆ 5 ಜನ ಮುಖಂಡರನ್ನು ಹಗೂ 25 ಜನ ಕಾರ್ಯಕರ್ತರನ್ನು ನೇಮಕ ಮಾಡಿದೆ.

ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ ಮಾಡಿದ ಸಾಧನೆ ಮತ್ತು ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುವಂತೆ ಸಭೆಯಲ್ಲಿ ಸೂಚಿಸಲಾಗಿದೆ.

ಅ. 11ರಂದು ಮುಖಂಡರು ತಮಗೆ ವಹಿಸಿದ ಬೂತ್‌ನಲ್ಲಿ ಕೆಲಸ ಆರಂಭಿಸಿ ಬಹಿರಂಗ ಪ್ರಚಾರದ ಕೊನೆಯ ದಿನದ ತನಕ ಆಯಾ ಬೂತ್‌ ವ್ಯಾಪ್ತಿಯಲ್ಲಿಯೇ ವಾಸ್ತವ್ಯ ಹೂಡಬೇಕು ಎಂದು ಶಿವಕುಮಾರ್‌ ಸೂಚಿಸಿದರು.

*

ಎರಡು ಉಪಚುನಾವಣೆಗಳನ್ನು ಮುಖಂಡರು ಕಾಯ, ವಾಚ, ಮನಸಾ ಪ್ರತಿಷ್ಠೆಯಾಗಿ ಸ್ವೀಕರಿಸಿ ಕೆಲಸ ಮಾಡಬೇಕು.
-ಎಸ್‌.ಆರ್‌. ಪಾಟೀಲ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT