ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಅಂತರ ಅತ್ಯಗತ್ಯ; ಗುಂಪು ಸೇರಿದರೆ ಬೆತ್ತ

Last Updated 26 ಮಾರ್ಚ್ 2020, 14:11 IST
ಅಕ್ಷರ ಗಾತ್ರ

ಧಾರವಾಡ: ಜನರ ನಿತ್ಯ ಜೀವನಕ್ಕೆ ಅವಶ್ಯಕವಾಗಿರುವ ದಿನ ಬಳಕೆ ವಸ್ತುಗಳ ಮಾರಾಟಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟ ಪರಿಣಾಮ ಹಲವು ಮಾರಾಟ ಮಳಿಗೆಗಳು ಗುರುವಾರ ಕಾರ್ಯ ನಿರ್ವಹಿಸಿದವು. ಆದರೆ ಒಂದು ಮೀಟರ್ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿತ್ತು.

ಹೀಗಾಗಿ ಅಂತರ ಕಾಯ್ದುಕೊಂಡಲ್ಲಿ ಮಾರಾಟಕ್ಕೆ ಅನುವು ಮಾಡಿಕೊಟ್ಟ ಪೊಲೀಸರು, ಗುಂಪು ಸೇರಿದಲ್ಲಿ ಬೆತ್ತದ ರುಚಿ ತೋರಿಸಿದರು. ಮಾರುಕಟ್ಟೆಯ ಕೆಲ ಪ್ರದೇಶಗಳಲ್ಲಿ ಸರ್ಕಾರದ ಕಾಳಜಿಯನ್ನು ನಿರ್ಲಕ್ಷಿಸಿ ಯುವಕರು ಗುಂಪು ಸೇರಿಕೊಂಡಿದ್ದರು. ಇವರಿಗೆ ಪೊಲೀಸರು ಲಾಠಿ ಏಟಿನ ಮೂಲಕವೇ ಕಾಳಜಿಯ ಪಾಠ ಮಾಡಿದರು.

ಬುಧವಾರ ಹಬ್ಬದ ಸಂದರ್ಭದಲ್ಲಿ ಬೆಳಿಗ್ಗೆ ಇಡೀ ಮಾರುಕಟ್ಟೆಯೇ ಗಿಜಿಗಿಡುತ್ತಿತ್ತು. ಸಾಮಾಜಿಕ ಅಂತರ ಕಾಪಾಡುವಂತೆ ಮಾಡಿಕೊಂಡ ಎಲ್ಲಾ ಮನವಿಗಳೂ ವ್ಯರ್ಥವಾಗಿದ್ದವು. ನಂತರ ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿಸುವ ಮೂಲಕ ಜನರಿಗೆ ಮನೆ ಕಡೆ ದಾರಿ ತೋರಿಸಿದರು.

ಗುರುವಾರವೂ ಇದೇ ಸ್ಥಿತಿ ನಿರ್ಮಾಣವಾಗಿತ್ತು. ಸಗಟು ವ್ಯಾಪಾರ ಮಂಡಿಗಳ ಮುಂದೆ ಸಣ್ಣ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಖರೀದಿಗೆ ಗುಂಪು ಸೇರಿದ್ದರು. ಮುಖಗವಸು ತೊಟ್ಟಿದ್ದರೂ, ಅಂತರವೇನೂ ಕಂಡುಬರಲಿಲ್ಲ. ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಂಗಡಿಗಳನ್ನು ಮುಚ್ಚಲು ಸೂಚನೆ ನೀಡಿದರು. ಕೆಲವು ಭಾಗವಾನರು ಪೊಲೀಸರೊಂದಿಗೆ ವಾಗ್ವಾದವನ್ನೂ ನಡೆಸಿದರು.

ಸಾಮಾಜಿಕ ಅಂತರದ ಕೊರತೆ ಎದುರಾದ ಮಾರುಕಟ್ಟೆಯಲ್ಲಿ ಪೊಲೀಸರು ವ್ಯಾಪಾರಿಗಳ ತಕ್ಕಡಿಯನ್ನೇ ತೆಗೆದುಕೊಂಡು ಹೋಗುವ ಮೂಲಕ ಮಾರುಕಟ್ಟೆಯನ್ನು ಬಲವಂತದಿಂದ ಮುಚ್ಚಿಸಿದರು. ಆದರೆ ಸಾರ್ವಜನಿಕರ ದಿನನಿತ್ಯದ ಖರೀದಿಗೆ ಯಾವುದೇ ತೊಂದರೆ ಅಗಲಿಲ್ಲ. ಮುಂಜಾನೆ ಹಾಲು ಮಾರಾಟ ಮಳಿಗೆಗಳಲ್ಲೂ ಸಾಮಾಜಿಕ ಅಂತರಗಳು ಕಂಡುಬಂದವು. ಹಾಲು, ಬ್ರೆಡ್, ಬನ್ಸ್, ರಸ್ಕ್‌, ಮ್ಯಾಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ ಎಂದು ವ್ಯಾಪಾರಿಗಳು ತಿಳಿಸಿದರು.

ಹಲವು ಬಡಾವಣೆಗಳಲ್ಲಿ ದಿನಸಿ ವ್ಯಾಪಾರಿಗಳು ಅಂಗಡಿಗಳನ್ನು ತೆರೆದಿದ್ದರು. ಸುರಕ್ಷಿತೆಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿ ಮೀಟರ್‌ ಅಂತರದಲ್ಲಿ ಒಂದು ವೃತ್ತಾಕಾರ ರಚಿಸಿದ್ದರು. ಅದರಲ್ಲಿ ನಿಂತು ತಮ್ಮ ಸರದಿಗಾಗಿ ಜನರು ಕಾದು ಬೇಕಾದ ವಸ್ತುಗಳನ್ನು ಖರೀದಿಸಿದರು.ಔಷಧ ಅಂಗಡಿಗಳಲ್ಲೂ ಅಂತರ ತತ್ವವನ್ನು ಪಾಲಿಸಿದ್ದು ಕಂಡುಬಂತು.

ರಿಲಾಯನ್ಸ್ ಫ್ರೆಶ್, ಮೋರ್‌ ನಂತ ಸೂಪರ್ ಮಾರುಕಟ್ಟೆಯಲ್ಲೂ ಇಂಥ ಅಂತರದ ಸಾಲುಗಳು ಕಂಡುಬಂದವು. ಆದರೆ ಹವಾನಿಯಂತ್ರಿತ ಸಾಧನಗಳನ್ನು ಸ್ಥಗಿತಗೊಳಿಸಲಾಗಿತ್ತು. ಒಳಗೆ ಕನಿಷ್ಠ ಗ್ರಾಹಕರ ಸಂಖ್ಯೆಯನ್ನು ಕಾಪಾಡಲಾಗಿತ್ತು. ಹೊರಬರುವವರ ಸಂಖ್ಯೆಗೆ ಅನುಗುಣವಾಗಿ ಹೊರಗಿರುವವರನ್ನು ಒಳಕ್ಕೆ ಬಿಡಲಾಗುತ್ತಿತ್ತು.

‘ಆದರೆ ಹೋಲ್‌ಸೇಲ್ ಮಳಿಗೆಗಳು ಕಾರ್ಯನಿರ್ವಹಿಸದ ಕಾರಣ ಬಡಾವಣೆಗಳಲ್ಲಿರುವ ಮಳಿಗೆಗಳಲ್ಲಿ ದಾಸ್ತಾನಿನ ಕೊರತೆ ಎದುರಾಗಿದೆ. ಈ ಹಿಂದೆ ಖರೀದಿಸಿದ ವಸ್ತುಗಳು ಖಾಲಿಯಾಗುತ್ತಿವೆ. ನಂತರ ನಾವೂ ಬಾಗಿಲು ಹಾಕಬೇಕಾಗುವುದು ಅನಿವಾರ್ಯವಾಗಲಿದೆ. ಮಳಿಗೆಗಳಿಗೆ ದಾಸ್ತಾನು ಪೂರೈಸಿದರೆ, ಸಾರ್ವಜನಿಕರಿಗೂ ಅಗತ್ಯ ವಸ್ತುಗಳನ್ನು ಪೂರೈಸಬಹುದು’ ಎಂದು ಕಲಘಟಗಿ ರಸ್ತೆಯ ವ್ಯಾಪಾರಿ ಸುರೇಶ ತಿಳಿಸಿದರು.

ಬೇಡಿಕೆ ಹಾಗೂ ಪೂರೈಕೆ ನಡುವೆ ದೊಡ್ಡ ಅಂತರ ಉಂಟಾಗಿರುವುದರಿಂದ ತರಕಾರಿ, ಮೊಟ್ಟೆ ಇತ್ಯಾದಿ ವಸ್ತುಗಳ ಬೆಲೆಗಳಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡುಬಂತು. ಹೂವಿನ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿದೆ. ಹಣ್ಣಿನ ಮಳಿಗೆಗಳು ಅಲ್ಲೊಂದು ಇಲ್ಲೊಂದು ಎಂಬಂತೆ ತೆರೆದಿದ್ದವು. ಕೋವಿಡ್–19 ಕುರಿತು ಜಾಗತಿಕ ಹಾಗೂ ದೇಶದ ಪರಿಸ್ಥಿತಿ ಕುರಿತು ವಿಸ್ತೃತ ವರದಿಗಳಿಗಾಗಿ ಪತ್ರಿಕೆಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಓದುಗರು ಪತ್ರಿಕಾ ಕಚೇರಿಗಳಿಗೆ ಕರೆ ಮಾಡಿ ಪತ್ರಿಕೆಗಳನ್ನು ಕೋರಿದರು.

ಬಹಳಷ್ಟು ದೇವಾಲಯಗಳ ಬಾಗಿಲು ಹಾಕಿದ್ದವು. ಕೆಲವು ಬಡಾವಣೆಗಳಲ್ಲಿ ಒಂದೇ ದ್ವಾರದ ಮೂಲಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತಾದರೂ, ಭಕ್ತರ ಸಂಖ್ಯೆ ವಿರಳವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT