ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಸಂಪರ್ಕವೇ ಇಲ್ಲದ ಪ್ರದೇಶದಲ್ಲಿ ಖಾರಕುಟ್ಟುವ ಯಂತ್ರದ ಸೌಲಭ್ಯ

ಸೆಲ್ಕೊ ಫೌಂಡೇಷನ್‌ ಮತ್ತು ಕರ್ನಾಟಕ ವಿಕಾಸ ಬ್ಯಾಂಕ್ (ಕೆವಿಜಿ) ‌ಆರ್ಥಿಕ ನೆರವಿನಿಂದ
Last Updated 8 ಸೆಪ್ಟೆಂಬರ್ 2021, 14:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿದ್ಯುತ್‌ ಸಂಪರ್ಕವೇ ಇಲ್ಲದ ಪ್ರದೇಶದಲ್ಲಿ ಸಂಪೂರ್ಣ ಸೌರಶಕ್ತಿಯ ಬಲದಿಂದಲೇ ಕಾರ್ಯನಿರ್ವಹಿಸುವ ಖಾರ ಕುಟ್ಟುವ ಯಂತ್ರದ ಉದ್ಘಾಟನೆ ಬುಧವಾರ ನಡೆಯಿತು.

ಸೆಲ್ಕೊ ಫೌಂಡೇಷನ್‌ ಮತ್ತು ಕರ್ನಾಟಕ ವಿಕಾಸ ಬ್ಯಾಂಕ್ (ಕೆವಿಜಿ) ‌ಆರ್ಥಿಕ ನೆರವಿನಿಂದ ಉಣಕಲ್‌ ಕೆರೆ ದಡದಲ್ಲಿರುವ ಶಾಕ್ತಪೀಠ ಬಡಾವಣೆ ಅಬ್ದುಲ್‌ ಗುಲಾಬ್‌ ರಬ್ಬಾನಿ ಅವರು ಈ ಯಂತ್ರವನ್ನು ಆರಂಭಿಸಿದ್ದಾರೆ.

ಈ ಯಂತ್ರದ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದ ಸೆಲ್ಕೊ ಇಂಡಿಯಾದ ಡೆಪ್ಯೂಟಿ ಪ್ರಧಾನ ವ್ಯವಸ್ಥಾಪಕ ಪ್ರಸನ್ನ ಹೆಗಡೆ ‘ಕೆರೆಯ ದಂಡೆಗೆ ಇರುವ ಈ ಬಡಾವಣೆಯಲ್ಲಿ ವಿದ್ಯುತ್‌ ಸೌಲಭ್ಯವಿಲ್ಲ. ಸಂಪೂರ್ಣವಾಗಿ ಸೌರಶಕ್ತಿ ಆಧಾರದ ಮೇಲೆ ಯಂತ್ರಗಳು ಕಾರ್ಯನಿರ್ವಹಿಸುತ್ತವೆ. 7,500 ವ್ಯಾಟ್‌ ವಿದ್ಯುತ್‌ ಉತ್ಪಾದನೆಯ ಸಾಮರ್ಥ್ಯವನ್ನು ಇಲ್ಲಿನ ಸೌರಶಕ್ತಿ ಯಂತ್ರಗಳು ಹೊಂದಿದ್ದು, ಪ್ರತಿ ದಿನ ಒಂದು ಕ್ವಿಂಟಲ್‌ ಮೆಣಸಿನಕಾಯಿಯನ್ನು ಖಾರದ ಪುಡಿ ಮಾಡಬಹುದು. ಸತತ ಆರರಿಂದ ಎಂಟು ತಾಸು ಯಂತ್ರ ಚಲಾಯಿಸಬಹುದು’ ಎಂದರು. ಇದಕ್ಕಾಗಿ ಒಟ್ಟು ₹10 ಲಕ್ಷ ವೆಚ್ಚವಾಗಿದೆ.

‘ಸೌರಶಕ್ತಿ ನಿರ್ವಹಣೆ ದುಬಾರಿಯಲ್ಲ. ತಿಂಗಳಿಗೆ ಒಂದು ಸಲ ನೀರಿನಿಂದ ಸ್ವಚ್ಛ ಮಾಡಬೇಕು. ಆರು ತಿಂಗಳಿಗೆ ಒಂದು ಸಲ ಡಿಸ್ಟಿಲ್‌ ನೀರು ಹಾಕಬೇಕು. ಮಳೆ ಮತ್ತು ಮೋಡಕವಿದ ವಾತಾವರಣ ಇದ್ದ ಸಂದರ್ಭದಲ್ಲಿಯೂ ಯಂತ್ರ ಸರಾಗವಾಗಿ ಕೆಲಸ ಮಾಡುತ್ತದೆ’ ಎಂದರು.

ಕೆವಿಜಿ ಬ್ಯಾಂಕ್‌ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ.ಎಚ್‌. ಭಟ್‌ ಮಾತನಾಡಿ ‘ಅಂಗವಿಕಲರಾದ ಅಬ್ದುಲ್‌ ಮುನ್ನುಗ್ಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರಿಗೆ ನಮ್ಮ ಬ್ಯಾಂಕ್‌ ನೆರವಾಗಿದೆ. ಬದ್ಧತೆಯಿಂದ ಕೆಲಸ ಮಾಡುವವರು ಇದೇ ರೀತಿ ಮುಂದೆ ಬಂದರೆ ಇನ್ನಷ್ಟು ಜನರ ಜೀವನೋಪಾಯಕ್ಕೆ ನೆರವು ನೀಡಲಾಗುವುದು’ ಎಂದರು.

ಅಬ್ದುಲ್‌ ಮಾತನಾಡಿ ‘ಖಾರದ ಪುಡಿಯನ್ನು ನನ್ನದೇ ಬ್ರ್ಯಾಂಡ್‌ ಅಡಿ ಮಾರುಕಟ್ಟೆಗೆ ತರುವ ಉದ್ದೇಶ ಹೊಂದಿದ್ದೇನೆ. ಮೊದಲು ಉಣಕಲ್‌ನಲ್ಲಿ ಗಿರಣಿ ನಡೆಸಿದ ಅನುಭವವಿದೆ. ಈಗ ಸೌರಶಕ್ತಿಯಿಂದ ಖಾರಕುಟ್ಟುವ ಯಂತ್ರಗಳನ್ನು ಕಡಿಮೆ ವೆಚ್ಚದಲ್ಲಿ ನಿರ್ವಹಿಸಬಹುದು’ ಎಂದರು.

ಕೆವಿಜಿ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಶಂಕರ ವಾಟ್ನಾಳ, ಶ್ರೀನಗರ ಶಾಖೆಯ ಸಹಾಯಕ ವ್ಯವಸ್ಥಾಪಕಿ ಜ್ಯೋತಿ, ಪತ್ತಾರ, ಸೆಲ್ಕೊ ಸಂಸ್ಥೆಯ ನಾಗೇಶ, ರಾಜೇಂದ್ರ, ನವೀನ, ವೀರೇಶ, ಗುರುಮೂರ್ತಿ, ಪ್ರವೀಣ ಬಗಾಡೆ, ಕೃಷಿ ತಜ್ಞ ಅನಿಲ್‌ ಮಾಂಜ್ರೆ, ತಂತ್ರಜ್ಞ ಆನಂದ ಭಟ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT