ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಬಿತ್ತನೆ ಬೀಜದ ದರ ಏರಿಕೆ: ರೈತ ಕಂಗಾಲು

ಖರ್ಚು ಹೆಚ್ಚಳ; ಆದಾಯ ಕಡಿಮೆ * ಸರ್ಕಾರ ನೆರವಿಗೆ ಧಾವಿಸಲು ಆಗ್ರಹ
Published 26 ಮೇ 2024, 4:34 IST
Last Updated 26 ಮೇ 2024, 4:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಳೆದ ಮುಂಗಾರು–ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆ, ತೀವ್ರ ಬರದಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರು ಈ ವರ್ಷ ಭರವಸೆಯಿಂದ ಬಿತ್ತನೆ ಮಾಡಲು ಮುಂದಾಗಿದ್ದಾರೆ. ಆದರೆ, ಬಿತ್ತನೆ ಬೀಜದ ದರ ಏರಿಕೆ ಅವರಿಗೆ ಹೊರೆಯಾಗಿ ಪರಿಣಮಿಸಿದೆ.

‘ಬರದಿಂದ ಬೆಳೆ ಹಾನಿಯಾಗಿ, ನಷ್ಟ ಉಂಟಾಗಿದ್ದರಿಂದ ಈ ಬಾರಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಕಡಿಮೆ ದರಕ್ಕೆ ಬಿತ್ತನೆ ಬೀಜ ದೊರೆಯುವ ನಿರೀಕ್ಷೆ ಇತ್ತು. ಆದರೆ, ದರ ಏರಿಕೆಯಾಗಿರುವುದು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಒಟ್ಟಾರೆ ಕೃಷಿ ವೆಚ್ಚವೂ ಅಧಿಕವಾಗಿರುವುದರಿಂದ ಕಂಗಾಲಾಗಿದ್ದೇವೆ’ ಎಂಬುದು ರೈತರ ನೋವಿನ ನುಡಿ. 

‘ಸದಕ್ಕೆ ಮನೆಯಲ್ಲಿರುವ ಹೆಸರು ಬೀಜಗಳನ್ನೇ ಬಿತ್ತನೆಗೆ ಸಿದ್ಧಮಾಡಿಟ್ಟುಕೊಂಡಿರುವೆ. ಕಳೆದ ವರ್ಷ ಐದು ಕೆ.ಜಿ. ಹೆಸರು ಬಿತ್ತನೆ ಬೀಜಕ್ಕೆ ₹350–₹400 ದರವಿತ್ತು. ಈಗ ₹800ಕ್ಕೆ ಏರಿಕೆಯಾಗಿದೆ. ಅಷ್ಟು ದರ ನೀಡಿ ಖರೀದಿಸುವುದು ಅನಿವಾರ್ಯವೂ ಆಗಿದೆ’ ಎಂದು ಗಾಮನಗಟ್ಟಿಯ ರೈತ ಬಸವರಾಜ ಶಿಗ್ಗಾವಿ ತಿಳಿಸಿದರು.

‘ಈ ಮುಂಗಾರಿನಲ್ಲಿ ಸೊಯಾಬೀನ್‌ ಬಿತ್ತನೆ ಮಾಡುವೆ. 30 ಕೆ.ಜಿ. ಸೊಯಾಬೀನ್ ಬಿತ್ತನೆ ಬೀಜಕ್ಕೆ ₹1,431 ದರವಿದೆ. ಮಾರುಕಟ್ಟೆಯಲ್ಲೂ ಬಹುತೇಕ ಇಷ್ಟೇ ದರವಿದೆ. ಕಳೆದ ಬಾರಿ ಬೆಳೆ ಹಾನಿಯಾಗಿ ಇಳುವರಿ ಕಡಿಮೆಯಾಗಿದ್ದರಿಂದ ದರ ಏರಿಕೆಯಾಗಿದೆ’ ಎಂದು ಗಾಮನಗಟ್ಟಿಯ ರೈತ ಬಸವರಾಜ ಮನಗುಂಡಿ ಹೇಳಿದರು.   

ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಲಿ: ‘ಅನೇಕ ರೈತರಿಗೆ ಬರ ಪರಿಹಾರ ಸಿಕ್ಕಿಲ್ಲ. ಬೆಳೆ ಹಾನಿ ಪರಿಹಾರವೂ ಅಲ್ಪ ಪ್ರಮಾಣದಲ್ಲಿ ಜಮೆ ಆಗಿದೆ. ಇಂತಹ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ದರ ಏರಿಕೆ ದೊಡ್ಡ ಹೊಡೆತ ನೀಡಿದೆ. ಬಿತ್ತನೆ ಬೀಜವಷ್ಟೇ ಅಲ್ಲದೆ, ಕೃಷಿ ವೆಚ್ಚ ಬಹುಪಾಲು ಏರಿಕೆಯಾಗಿದೆ. ಕೃಷಿ ಕಾರ್ಯಕ್ಕೆ ಬಳಸುವ ಟ್ರ್ಯಾಕ್ಟರ್‌ ಅನ್ನು ಒಂದು ದಿನಕ್ಕೆ ಬಾಡಿಗೆ ಪಡೆಯಲು ₹1,200 ನೀಡಬೇಕಿದೆ. ಕೃಷಿ ಕಾರ್ಮಿಕರಿಗೆ ದಿನಕ್ಕೆ ₹450ರವರೆಗೆ ಕೂಲಿ ಪಾವತಿಸಬೇಕು. ಹೆಚ್ಚು ಖರ್ಚು ಮಾಡಿದರೂ ಆದಾಯ ನಮ್ಮ ನಿರೀಕ್ಷೆಯಷ್ಟು ಇರುವುದಿಲ್ಲ. ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಸರ್ಕಾರ ಕ್ರಮವಹಿಸಬೇಕು’ ಎಂದು ರೈತ ಮುಖಂಡ ಸಿದ್ದುತೇಜಿ ಆಗ್ರಹಿಸಿದರು. 

ಬಿತ್ತನೆ ಬೀಜ ಸಬ್ಸಿಡಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅದರ ಹೊರತಾಗಿ ಪ್ರತಿ ವರ್ಷ ದರ ಏರಿಳಿತ ಸಹಜ. ಈ ಬಗ್ಗೆ ರೈತರು ಮನವಿ ಸಲ್ಲಿಸಿಲ್ಲ
ಮಂಜುಳಾ ಸಹಾಯಕ ನಿರ್ದೇಶಕಿ ಕೃಷಿ ಇಲಾಖೆ ಹುಬ್ಬಳ್ಳಿ

ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧಾರ

‘ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಕೃಷಿ ಹಾಗೂ ತೋಟಗಾರಿಕೆ ಸಮಿತಿಯಿಂದ ಈಚೆಗೆ ನಡೆದ ಸಭೆಯಲ್ಲಿ ವಿವಿಧ ನಿರ್ಣಯ ಅಂಗೀಕರಿಸಲಾಯಿತು. ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ಸಕಾಲಕ್ಕೆ ಸಮರ್ಪಕವಾಗಿ ವಿತರಿಸುವುದು ಎಲ್ಲ ರೈತರಿಗೆ ಬೆಳೆಹಾನಿ ಪರಿಹಾರ ನೀಡುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಕೃಷಿ ಪರಿಕರಗಳ ದರ ಏರಿಕೆ ನಿಯಂತ್ರಿಸುವ ಬಗ್ಗೆಯೂ ಸರ್ಕಾರದ ಗಮನ ಸೆಳೆಯಲಾಗುವುದು’ ಎಂದು ಸಮಿತಿ ಸದಸ್ಯ ಈಶ್ವರ ಮಾಳಣ್ಣವರ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT