ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗಳಲ್ಲಿ ನರೇಗಾ ಕೆಲಸ ಪ್ರಾರಂಭಿಸಿ: ಶಾಸಕ ಮುನೇನಕೊಪ್ಪ ಸೂಚನೆ

ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ
Last Updated 22 ಏಪ್ರಿಲ್ 2020, 14:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಂಕಷ್ಟದ ಸಮಯದಲ್ಲೂ ನರೇಗಾದಡಿ ಕೆಲಸ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ. ಪಿಡಿಒ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ನರೇಗಾ ಕೆಲಸಗಳನ್ನು ಆರಂಭಿಸಬೇಕು ಎಂದು ನವಲಗುಂದ ಶಾಸಕ ಶಂಕರ ಪಾಟೀಲ ಮುನೇಕೊಪ್ಪ ಸೂಚಿಸಿದರು.

ಇಲ್ಲಿನ ಮಿನಿವಿಧಾನಸೌಧದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ‘ನವಲಗುಂದ ಮತಕ್ಷೇತ್ರದ ಕೆಲ ಹಳ್ಳಿಗಳು ಹುಬ್ಬಳ್ಳಿ ನಗರಕ್ಕೆ ಹತ್ತಿರದಲ್ಲಿವೆ. ಹಳ್ಳಿಯಿಂದ ಜನ ದುಡಿಮೆಗಾಗಿ ಬರುತ್ತಾರೆ. ಗ್ರಾಮಗಳಲ್ಲಿ ನರೇಗಾದಡಿ ಉದ್ಯೋಗ ಸೌಲಭ್ಯ ಕಲ್ಪಿಸಲು ಕೋರಿದ ಪ್ರತಿಯೊಬ್ಬರಿಗೂ ಕೆಲಸ ನೀಡಬೇಕು’ ಎಂದು ಹೇಳಿದರು.

‘ಹೊಸದಾಗಿ ಕೆಲಸಕ್ಕಾಗಿ ಅರ್ಜಿ ನೀಡಿದವರಿಗೆ ಒಂದೇ ದಿನದಲ್ಲಿ ಜಾಬ್‌ ಕಾರ್ಡ್‌ ನೀಡಿ ಕೆಲಸ ಒದಗಿಸಬೇಕು. ಸೋಂಕು ಹರಡುವ ಭೀತಿ ಇರುವ ಕಾರಣ ಕೆಲಸದ ಸ್ಥಳದಲ್ಲಿ ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳಬೇಕು. ಮುಖಗವಸು, ಮಾಸ್ಕ್‌ ವ್ಯವಸ್ಥೆ ಮಾಡಬೇಕು’ ಎಂದರು.

‘ಬೇಸಿಗೆ ಆರಂಭವಾಗಿರುವ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಗ್ರಾಮಗಳಿಗೆ ಬರುವವರ ಮೇಲೆ ನಿಗಾ ಇಡಬೇಕು. ಅನಗತ್ಯವಾಗಿ ಎಲ್ಲರಿಗೂ ಪಾಸ್‌ಗಳನ್ನು ನೀಡಬಾರದು. ಹುಬ್ಬಳ್ಳಿಯಿಂದ ಹಳ್ಳಿಗಳಿಗೆ ಕೆಲಸ ಮಾಡಲು ಬರುವವರು ಕಂಟೈನ್ಮೆಂಟ್‌ ವ್ಯಾಪ್ತಿಯ ಪ್ರದೇಶದಲ್ಲಿ ವಾಸಿಸುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ತಾಕೀತು ಮಾಡಿದರು.

ಸಂಕಷ್ಟದ ಸಮಯದಲ್ಲಿಯೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 5985 ಆಹಾರ ಧಾನ್ಯದ ಕಿಟ್‍ಗಳನ್ನು ನೀಡಲಾಗಿದೆ ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಚೆನ್ನಮ್ಮ ಗೊರ್ಲ, ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್‌ ಪ್ರಕಾಶ ನಾಶಿ, ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕಕುಮಾರ ಸಿಂದಗಿ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಶ್ರೀಧರ ಪತ್ತಾರ, ಗ್ರಾಮೀಣ ಪೊಲೀಸ್ ಇನ್‌ಸ್ಟೆಕ್ಟರ್‌ ಡಿಸೋಜಾ ಪಾಲ್ಗೊಂಡಿದ್ದರು.

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಿಶ್ವಾಸ ತುಂಬಿದರು
ಕೊರೊನಾ ಇರುವ ಕಾರಣ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇದರಿಂದ ಮಕ್ಕಳು ಒತ್ತಡಕ್ಕೆ ಒಳಗಾಗಬಾರದು ಎನ್ನುವ ಕಾರಣಕ್ಕೆ ಮುನೇನಕೊಪ್ಪ ಅವರು ಫೋನ್‌ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು.

ಕೋಳಿವಾಡ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಯಶೋಧಾ ಕಳಸದಗೆ ಕರೆ ಮಾಡಿದ ಮುನೇನಕೊಪ್ಪ ‘ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿ ಪರೀಕ್ಷೆ ಬರೆಯಬೇಕು. ಸದಾ ಕ್ರಿಯಾಶೀಲತೆಯಿಂದ ಇರಬೇಕು. ಅಧ್ಯಯನ ಮಾಡುವ ವೇಳೆಯೂ ಅಂತರ ಪಾಲಿಸಬೇಕು ಸ್ಫೂರ್ತಿ ತುಂಬಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT