ಮಂಗಳವಾರ, ಮಾರ್ಚ್ 31, 2020
19 °C

ಮನೆಯಲ್ಲೇ ಇರಿ; ಮಕ್ಕಳೊಂದಿಗೆ ಆಟವಾಡಿ

ಪ್ರಮೋದ್ Updated:

ಅಕ್ಷರ ಗಾತ್ರ : | |

Prajavani

 

ಪ್ರಾಣಕ್ಕೆ ಕುತ್ತು ತರುವ ಕೊರೊನೊ ಸೋಂಕು ರಾಜ್ಯಾದ್ಯಂತ ವೇಗದಲ್ಲಿ ಹರಡಿಕೊಳ್ಳುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಮಾರ್ಚ್‌ 31ರ ತನಕ ಲಾಕ್‌ಡೌನ್‌ ಘೋಷಿಸಿದ್ದು, ಬೇಸಿಗೆ ಶಿಬಿರ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮಕ್ಕಳು ಮನೆಯಲ್ಲೇ ಕಾಲ ಕಳೆಯುವಂತಾಗಿದೆ.

ಆದರೆ, ಈಗ ಎದುರಾಗಿರುವ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಿ, ಕೊರೊನಾವನ್ನು ಹಿಮ್ಮೆಟ್ಟಿಸಲು ಮನೆಯಲ್ಲಿದ್ದುಕೊಂಡೇ ಎಲ್ಲರೂ ಹೋರಾಟ ಮಾಡಬೇಕಾಗಿದೆ. ಸಂಕಷ್ಟದ ಈ ಸಂದರ್ಭ ಹೊಸತನಕ್ಕೆ ವೇದಿಕೆಯಾಗಲಿ.

ಮೊದಲು ನಿತ್ಯ ಕಚೇರಿ, ಓಡಾಟ, ಮಾರುಕಟ್ಟೆಯಲ್ಲೇ ಬದುಕು ಕಳೆದು ಹೋಗುತ್ತಿತ್ತು. ಈಗ ಇವುಗಳಿಗೆಲ್ಲ ತಾತ್ಕಾಲಿಕ ವಿರಾಮ ಹೇಳಿ ಮನೆಯವರೊಂದಿಗೆ ಹೆಚ್ಚು ಸಮಯ ಕಳೆಯಬಹುದು. ಮಕ್ಕಳ ಹೊಸ ಕನಸುಗಳಿಗೆ ಜೀವತುಂಬಲು ಪೋಷಕರಿಗೆ ಇದು ಸಕಾಲ. ಮನೆಯಲ್ಲಿದ್ದೇ ಹೇಗೆ ಬೇಸಿಗೆ ಕಳೆಯಬೇಕು? ಎಂದು ಗೊಣಗುವ ಬದಲು ಮಕ್ಕಳಿಗೆ ಹೊಸ ಆಟಗಳನ್ನು ಹೇಳಿಕೊಡಿ. ಮಕ್ಕಳೊಂದಿಗೆ ಕಾಲ ಕಳೆದು ಪೋಷಕರೂ ನಿರುಮ್ಮಳರಾಗಲಿ. ಈ ಕ್ರೀಡೆಗಳು ಮಕ್ಕಳಿಗೆ ಮನರಂಜನೆ ಜೊತೆಗೆ ಭಾರಿ ಖುಷಿ ಕೊಡುತ್ತವೆ. ಅದಕ್ಕಾಗಿ ಮನೆಯಲ್ಲಿದ್ದುಕೊಂಡೇ ಆಡಬಹುದಾದ ಕೆಲ ಕ್ರೀಡೆಗಳ ಪರಿಚಯ ಇಲ್ಲಿವೆ.

* ಬ್ಯಾಲನ್ಸಿಂಗ್‌ ಬೀಮ್‌

ಮನೆಯಲ್ಲಿ ತಲೆದಿಂಬುಗಳನ್ನು ಉದ್ದ ಸಾಲಿನಲ್ಲಿಟ್ಟು ಮಕ್ಕಳನ್ನು ಒಂದು ತುದಿಯಿಂದ ಇನ್ನೊಂದು ತುದಿಗೆ ಎಲ್ಲಿಯೂ ಬೀಳದಂತೆ ಹೋಗಬೇಕು ಎನ್ನುವ ಟಾಸ್ಕ್‌ ಕೊಡಿ. ದಿಂಬು ಮೆತ್ತಗೆ ಇರುವುದರಿಂದ ದೇಹ ಸಮತೋಲನ ಮಾಡುತ್ತಾ ಇನ್ನೊಂದು ತುದಿಗೆ ಹೋಗುವುದು ಮಕ್ಕಳಿಗೆ ಮನರಂಜನೆ ಕೊಡುತ್ತದೆ.

 * ಚೆಸ್

ತಲೆಗೆ ಕಸರತ್ತು ಕೊಟ್ಟು ಮಕ್ಕಳ ಯೋಚನಾ ಶಕ್ತಿಯನ್ನು ಹೆಚ್ಚಿಸಲು ಚೆಸ್‌ ಸಹಕಾರಿ. ಮನೆಯಲ್ಲಿ ಇಬ್ಬರೇ ಇದ್ದರೂ ಈ ಕ್ರೀಡೆಯನ್ನು ಆರಾಮವಾಗಿ ಆಡಬಹುದು. ಮಕ್ಕಳ ಜ್ಞಾನ ಶಕ್ತಿ ಹೆಚ್ಚಿಸಲು ಅನುಕೂಲವಾಗುತ್ತದೆ.

 * ಬೌಲಿಂಗ್

ಪ್ರತಿ ವರ್ಷ ಕ್ರಿಕೆಟ್‌ ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಿದ್ದವರು ಮನೆಯಲ್ಲಿ ಚೆಂಡನ್ನು ಕ್ಯಾಚ್‌ ಹಿಡಿಯುವ ಅಭ್ಯಾಸ ಮಾಡಬಹುದು. ಚಿಕ್ಕ ಮಕ್ಕಳಿದ್ದರೆ ಚೆಂಡನ್ನು ಉರುಳಿಸಿ ಅದನ್ನು ಹಿಡಿಯುವಂತೆ ರಂಜಿಸಬಹುದು. ವರಾಂಡವಿದ್ದರೆ ಗಲ್ಲಿ ಕ್ರಿಕೆಟ್ ಆಡಬಹುದು. ಪ್ಲಾಸ್ಟಿಕ್‌ ಚೆಂಡು ಅಥವಾ ಲೋ ಟೆನಿಸ್‌ ಚೆಂಡು ಉಪಯೋಗಿಸಿ ಆಡಿದರೆ ಅನುಕೂಲ. ಟೇಪ್‌ರೆಕಾರ್ಡರ್‌ ಅಥವಾ ಶಬ್ಧಬರುವ ಸಾಧನ ಜೊತೆಯಲ್ಲಿಟ್ಟುಕೊಳ್ಳಿ. ಟೇಪ್‌ರೆಕಾರ್ಡರ್ ಆನ್ ಮಾಡಿದಾಗ ಯಾರ ಕೈಯಲ್ಲಿ ಚೆಂಡು ಇರುತ್ತದೆಯೋ ಅವರು ಸೋತಂತೆ ಎನ್ನುವ ನಿಯಮ ಮಾಡಿಕೊಳ್ಳಿ. 

* ಪದಗಳ ಆಟ

ಮನೆಯಲ್ಲಿ ಸಣ್ಣದೊಂದು ಕಪ್ಪು ಬೋರ್ಡ್‌ ಅಳವಡಿಸಿ ಮಕ್ಕಳಿಗೆ ಪದಗಳ ಆಟ ಹೇಳಿಕೊಡಿ. ಮೂರ್ನಾಲ್ಕು ಪದಗಳ ಸಣ್ಣ ವಾಕ್ಯ ಬರೆದು ಮಧ್ಯದ ಅಥವಾ ಕೊನೆಯ ಪದಗಳನ್ನು ಬಿಟ್ಟಸ್ಥಳದ ಮಾದರಿಯಲ್ಲಿ ತುಂಬುವಂತೆ ಬುದ್ಧಿಗೆ ಕಸರತ್ತು ಕೊಡಬಹುದು. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ಅಥವಾ ಅವರು ಕಲಿಯುವ ಮಾಧ್ಯಮದಲ್ಲಿ ಒಂದು ಪದಕ್ಕೆ ಪರ್ಯಾಯ ಪದಗಳನ್ನು ಹುಡುಕುವಂತೆಯೂ ಹೇಳಬಹುದು.

 * ಸಾಕ್‌ ಟಾಸ್‌

ಮನೆಯ ಮೂರ್ನಾಲ್ಕು ಸದಸ್ಯರು ಸೇರಿಕೊಂಡು ಖುಷಿಯಿಂದ ಆಡಿ ಹೆಚ್ಚು ಮನರಂಜನೆ ಪಡೆಯಬಹುದಾದ ಕ್ರೀಡೆಯಿದು. ದೊಡ್ಡದಾದ ಬಟ್ಟೆಯನ್ನು ನಾಲ್ಕು ತುದಿಯಲ್ಲಿ ಹಿಡಿದು ಅದರ ಮಧ್ಯೆದಲ್ಲಿ ಪ್ಲಾಸ್ಟಿಕ್‌ ಚೆಂಡು ಅಥವಾ ಹಗುರವಾದ ವಸ್ತುವನ್ನು ಮೇಲಕ್ಕೆ ತೂರಿ ಕ್ಯಾಚ್‌ ಹಿಡಿಯಬಹುದು. ಚೆಂಡು ಹಿಡಿದವರು ವಿಜೇತರಾದಂತೆ ಎನ್ನುವುದನ್ನು ಮಕ್ಕಳಿಗೆ ಹೇಳಿಕೊಟ್ಟರೆ ಆಟದ ರೋಚಕತೆ ಹೆಚ್ಚಾಗುತ್ತದೆ.

 * ಫಾಲೊ ದ ಲೀಡರ್‌

ಕನ್ನಡಿ ಮುಂಭಾಗದಲ್ಲಿ ಮಕ್ಕಳನ್ನು ನಿಲ್ಲಿಸಿ; ಅವರು ಮಾಡುವಂತೆ ಮನೆಯ ಉಳಿದ ಸದಸ್ಯರೂ ಮಾಡಬೇಕು. ಒಂದು ಅಥವಾ ಎರಡು ನಿಮಿಷಗಳ ಕಾಲ ಸಮಯ ನಿಗದಿ ಮಾಡಿಕೊಳ್ಳಬೇಕು. ಕನ್ನಡಿಯ ಮುಂದಿನ ಲೀಡರ್‌ ಮಾಡಿದಂತೆ ಯಾರು ಮಾಡುತ್ತಾರೊ ಅವರು ಮುಂದಿನ ಆಟದ ಲೀಡರ್‌ ಆಗುತ್ತಾರೆ ಎನ್ನುವ ನಿಯಮ ಮಾಡಿಕೊಳ್ಳಿ.

* ಕಾರ್ಡ್‌ನಿಂದ ಆಟ

ಪ್ರಾಣಿಗಳ ಚಿತ್ರ ಹಾಗೂ ಸಂಖ್ಯೆಗಳನ್ನು ಹೊಂದಿರುವ ಬಿಡಿಯಾದ ಕಾರ್ಡ್‌ಗಳನ್ನು ಮಕ್ಕಳ ಕೈಗೆ ಕೊಟ್ಟು, ಸಮಯವನ್ನು ನಿಗದಿ ಮಾಡಿ. ನಿಗದಿತ ಸಮಯದ ಒಳಗೆ ಸರಿಯಾಗಿ ಸಂಖ್ಯೆಗಳನ್ನು ಜೋಡಿಸಬೇಕು. ಬಿಡಿ ಬಿಡಿಯಾದ ಚಿತ್ರಗಳನ್ನು ಸರಿಯಾಗಿ ಜೋಡಿಸಿ ಪ್ರಾಣಿಚಿತ್ರವನ್ನು ತೋರಿಸುವ ಆಟ ಆಡಿಸಬಹುದು. ಇದರಿಂದ ಮಕ್ಕಳ ವಿಚಾರ ಶಕ್ತಿ ಮತ್ತು ಜ್ಞಾನ ಮಟ್ಟ ಹೆಚ್ಚಾಗುತ್ತದೆ.

* ಓದುವುದು

ಮಾರುಕಟ್ಟೆಯಲ್ಲಿ ಮಕ್ಕಳ ಪುಸ್ತಕಗಳ ದೊಡ್ಡ ಸರಕು ಇವೆ. ಚಿತ್ರಗಳ ಮೂಲಕ ಮಕ್ಕಳ ಕತೆಗಳನ್ನು ಹೇಳುವ, ಅಂಕಿಗಳ ಮೂಲಕ ಗಣಿತ ತಿಳಿದುಕೊಳ್ಳಲು ಪುಸ್ತಕ ಭಂಡಾರಗಳೇ ಇವೆ. ಪಠ್ಯದಲ್ಲಿರುವ ಚಿತ್ರಗಳನ್ನು ಯಥಾವತ್ತಾಗಿ ಬಿಡಿಸಲು ಮಕ್ಕಳಿಗೆ ಹೇಳಬಹುದು. ಇದರಿಂದ ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಓದುವ ಹಾಗೂ ಬರೆಯುವ ಹವ್ಯಾಸ ರೂಢಿಸಬಹುದು.

ಇವುಗಳ ಜೊತೆಗೆ ಪಿಚ್ಚಿಂಗ್‌ ಪೆನ್ನಿಸ್‌, ಚೌಕಾಬಾರ, ಹಾವಿನ ಪಠ, ದ ಲಿಸನಿಂಗ್ ಗೇಮ್‌, ಕುಟುಂಬದ ಸದಸ್ಯರನ್ನು ಗುರುತು ಹಿಡಿಯುವ ಸ್ಪರ್ಧೆ, ಮನೆಯಲ್ಲೇ ಯೋಗ, ಬಲೂನ್‌ ಬಾಲ್‌ ಕ್ಯಾಚ್‌, ಬೆಡ್‌ ಮೇಲೆ ಡ್ಯಾನ್ಸ್ ಮಾಡುವುದು, ಮ್ಯೂಸಿಕಲ್‌ ಚೇರ್‌, ವ್ಯಕ್ತಿಯನ್ನು ಗುರುತಿಸುವುದು, ಕೇರಮ್, ಬಣ್ಣಗಳನ್ನು ಗುರುತಿಸುವುದು ಹೀಗೆ ಅನೇಕ ಕ್ರೀಡೆಗಳನ್ನು ಮನೆಯಲ್ಲಿದ್ದುಕೊಂಡೇ ಆಡಿ. ಕೊರೊನಾ ಸೋಂಕಿನಿಂದ ದೂರವಿರಲು ಸರ್ಕಾರದ ಹೋರಾಟದ ಜೊತೆ ನೀವೂ ಕೈ ಜೋಡಿಸಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು