ಶನಿವಾರ, ಜನವರಿ 29, 2022
19 °C

ಹುಬ್ಬಳ್ಳಿಯ ವಿದ್ಯಾರ್ಥಿಗೆ ಕೋವಿಡ್‌ ದೃಢ; ಶಾಲೆಗೆ ರಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

iStock Image

ಹುಬ್ಬಳ್ಳಿ: ಇಲ್ಲಿನ ಆದರ್ಶ ನಗರದ ಜಿ.ವಿ. ಜೋಶಿ ರೋಟರಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಒಬ್ಬ ವಿದ್ಯಾರ್ಥಿಗೆ ಮಂಗಳವಾರ ಕೋವಿಡ್‌ ದೃಢಪಟ್ಟಿದ್ದು, ಡಿ.4ರವರೆಗೆ ಶಾಲೆಗೆ ರಜೆ ಘೋಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಮಕ್ಕಳಿಗೂ ಕೋವಿಡ್‌ ದೃಢಪಟ್ಟಿದೆ.

ಇತ್ತೀಚೆಗೆ ಎಸ್‌ಡಿಎಂ ಕಾಲೇಜಿನ ಹಲವು ವಿದ್ಯಾರ್ಥಿಗಳಿಗೆ ಕೋವಿಡ್‌ ಆಗಿತ್ತು. ಈ ವಿದ್ಯಾರ್ಥಿ ಅಲ್ಲಿನವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು.

‘ಶಾಲೆಯ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಲಾಗಿದೆ. ಶಿಕ್ಷಕರು ಹಾಗೂ ಸಿಬ್ಬಂದಿ ಕೋವಿಡ್‌ ಲಸಿಕೆಯ ಎರಡೂ ಡೋಸ್‌ ಪಡೆದ ಮಾಹಿತಿ ನೀಡಬೇಕು. ಪಡೆದಿಲ್ಲವಾದರೆ ತಕ್ಷಣವೇ ಲಸಿಕೆ ಪಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ’ ಎಂದು ಹುಬ್ಬಳ್ಳಿ ನಗರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಮೈನಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್‌ ದೃಢಪಟ್ಟಿದ್ದು ಎರಡು ದಿನ ಶಾಲೆಗೆ ರಜೆ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ತರಗತಿಯ ಎಲ್ಲ ಮಕ್ಕಳಿಗೆ ಕೋವಿಡ್‌ ಪರೀಕ್ಷೆ ಮಾಡಿಸಲಾಗಿದೆ.

‘ನ.25ರಂದು ಗ್ರಾಮದ ವ್ಯಕ್ತಿಯೊಬ್ಬರಲ್ಲಿ ಕೋವಿಡ್‌ ದೃಢಪಟ್ಟಿತ್ತು. ಅವರ ಕುಟುಂಬದ ಮಕ್ಕಳು ಸರ್ಕಾರಿ ಪ್ರಾಥಮಿಕ ಶಾಲೆಯ 3 ಮತ್ತು 4ನೇ ತರಗತಿಯಲ್ಲಿ ಕಲಿಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಎರಡೂ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ನ.29ರಂದು ಕೋವಿಡ್‌ ಪರೀಕ್ಷೆ ಮಾಡಿಸಲಾಗಿತ್ತು. ಅದರಲ್ಲಿ ಸೋಂಕಿತ ವ್ಯಕ್ತಿಯ ಕುಟುಂಬದ ಇಬ್ಬರು ಮಕ್ಕಳಲ್ಲಿ ಕೋವಿಡ್‌ ಖಚಿತಗೊಂಡಿದ್ದು, ಉಳಿದ ವಿದ್ಯಾರ್ಥಿಗಳ ವರದಿ ನೆಗೆಟಿವ್‌ ಬಂದಿದೆ’ ಎಂದು ಶಿಕ್ಷಕರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು