ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಶಿಕ್ಷಣದಿಂದ ಯಶಸ್ಸು ಸಾಧ್ಯ: ಕರಜಗಿ

Last Updated 21 ಡಿಸೆಂಬರ್ 2019, 9:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗುಣಮಟ್ಟದ ಶಿಕ್ಷಣವಿದ್ದರೆ ಮಾತ್ರ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಬಹುದು ಎಂದು ಕ್ರಿಯೇಟಿವ್‌ ಟೀಚಿಂಗ್‌ ಅಕಾಡೆಮಿ ನಿರ್ದೇಶಕ ಡಾ. ಗುರುರಾಜ ಕರಜಗಿ ಹೇಳಿದರು.

ಕೆಎಲ್‌ಇ ಸಂಸ್ಥೆಯ ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ‘ಗುಣಮಟ್ಟದ ಸುಸ್ಥಿರತೆ ಮತ್ತು ವಿಸ್ತ್ರತಗೊಳ್ಳುವಿಕೆಯಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ’ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.

‘ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯದವರೆಗೂ ನಮ್ಮಲ್ಲಿ ಬಗೆ ಬಗೆಯ ಶಿಕ್ಷಣ ಪ್ರಕಾರಗಳಿವೆ. ಅವುಗಳ ಬೋಧನೆಗೆ ಶಿಕ್ಷಕರು, ಕಲಿಕೆಗೆ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಆದರೆ, ಬಹುತೇಕರು ಕಲಿತ ಶಿಕ್ಷಣಕ್ಕೆ ಪೂರಕವಾದ ವೃತ್ತಿ ಮಾಡುವ ಬದಲು, ಬೇರೆಯದೇ ವೃತ್ತಿಯಲ್ಲಿ ತೊಡಗಿರುತ್ತಾರೆ. ವಿದ್ಯಾರ್ಥಿಗಳ ಭವಿಷ್ಯವನ್ನು ಮುಂದಿಟ್ಟುಕೊಂಡು ಗುಣಮಟ್ಟದ ಶಿಕ್ಷಣ ನೀಡುವಂತಾಗಬೇಕು’ ಎಂದರು.

‘ಶಾಲಾ–ಕಾಲೇಜುಗಳಲ್ಲಿ ನೀಡುವ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಎಷ್ಟು ಉಪಯೋಗವಾಗಲಿದೆ ಎನ್ನುವುದನ್ನು ಮೊದಲು ಅರಿಯಬೇಕು. ಆಧುನಿಕ ದಿನಗಳಲ್ಲಿ ಹೊಸ ಆವಿಷ್ಕಾರಗಳು, ತಂತ್ರಜ್ಞಾನಗಳು ಹುಟ್ಟಿಕೊಳ್ಳುತ್ತಿವೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಯೋಚನೆ ಮತ್ತು ಚಿಂತನೆ ಬದಲಾಗುವಂತಹ ಶಿಕ್ಷಣ ದೊರೆಯಬೇಕು’ ಎಂದು ಹೇಳಿದರು.

‘ವಿದ್ಯಾರ್ಥಿಗಳು ಪಡೆಯುವ ಶಿಕ್ಷಣ ಆತ್ಮವಿಶ್ವಾಸ ಹೆಚ್ಚಿಸಬೇಕು. ಬದುಕಿನಲ್ಲಿ ಸೋತರೂ ಗೆದ್ದು ನಿಲ್ಲುತ್ತೇನೆ ಎನ್ನುವ ಮನೋಭಾವ ಅವರಲ್ಲಿ ಒಡಮೂಡಬೇಕು. ಸಮಾಜಪರ ಚಿಂತನೆ, ಮಾನವೀಯ ಗುಣ, ಸಂಸ್ಕಾರ, ಸಾಮಾನ್ಯ ಜ್ಞಾನದ ಜೊತೆ ಸುತ್ತಲಿನವರೊಂದಿಗೆ ಪ್ರೀತಿಯಿಂದ ಬದುಕುವ ಗುಣ ಬೆಳೆಸಬೇಕು. ಅಂತಹ ವಿದ್ಯಾರ್ಥಿಗೆ ಜೀವನದಲ್ಲಿ ಸೋಲು ಎಂಬುದೇ ಎದುರಾಗದು’ ಎಂದರು.

‘ಬದುಕಿನಲ್ಲಿ ಎದುರಾಗುವ ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ಆದರೆ, ಅದನ್ನು ಹುಡುಕುವ ವ್ಯವಧಾನ, ಸಹನೆ ನಮ್ಮಲ್ಲಿಲ್ಲ. ತಕ್ಷಣ ಪರಿಹಾರ ದೊರೆಯಬೇಕು ಎಂದು ಯೋಚನೆ ಮಾಡದೆ ಕೈಗೊಳ್ಳುವ ನಿರ್ಧಾರ, ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತವೆ. ಮನಸ್ಸನ್ನು ಶಾಂತವಾಗಿಟ್ಟುಕೊಂಡು ಪರಿಹಾರದ ದಿಕ್ಕಿನತ್ತ ಚಿಂತಿಸಬೇಕು. ಆಗ ಗೆಲುವಿನ ಕಿರಣ ಗೋಚರಿಸುತ್ತದೆ’ ಎಂದು ತಿಳಿಸಿದರು.

ಕೆಎಲ್‌ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಪ್ರಾಚಾರ್ಯ ಡಾ.ಎಸ್‌.ವಿ. ಹಿರೇಮಠ, ಜೆ.ಪಿ. ಜಾಬಿನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT