ಸೋಮವಾರ, ಮಾರ್ಚ್ 1, 2021
20 °C
ಉದ್ಯಮಿ ಆರ್‌.ಎನ್‌. ಶೆಟ್ಟಿ ನುಡಿನಮನ; ಗಣ್ಯರಿಂದ ಸಾಧನೆ, ವ್ಯಕ್ತಿತ್ವ ಸ್ಮರಣೆ

ಬದ್ಧತೆಯಿಂದ ಮಾತ್ರ ಯಶಸ್ಸು: ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಒಬ್ಬ ಸಾಮಾನ್ಯ ವ್ಯಕ್ತಿ ವೃತ್ತಿಯಲ್ಲಿ ಬದ್ಧತೆ ರೂಢಿಸಿಕೊಂಡರೆ ಯಾವ ಎತ್ತರಕ್ಕೆ ಏರಬಹುದು ಎನ್ನುವುದಕ್ಕೆ ಆರ್‌.ಎನ್‌. ಶೆಟ್ಟಿ ಅವರೇ ಸಾಕ್ಷಿ ಎಂದು ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿ ಶನಿವಾರ ಡಾ. ಆರ್‌.ಎನ್‌. ಶೆಟ್ಟಿ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಆರ್‌.ಎನ್‌. ಶೆಟ್ಟಿ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ ‘ಮನುಷ್ಯದ ಬದುಕು ತೆರೆದ ಪುಸ್ತಕವಿದ್ದಂತೆ ಹುಟ್ಟು ಮೊದಲ ಪುಟ, ಸಾವು ಕೊನೆಯ ಪುಟ. ಇದರ ನಡುವೆ ನಾವು ಏನು ಬರೆಯುತ್ತೇವೆ ಎನ್ನುವುದೇ ಮುಖ್ಯ’ ಎಂದರು.

‘ಸಣ್ಣ ವಿಚಾರವನ್ನೂ ಗಂಭೀರವಾಗಿ, ಸೂಕ್ಷ್ಮವಾಗಿ ನೋಡುವ ಜಾಣತನ ಅವರಲ್ಲಿತ್ತು. ಅವರ ನೆನಪು ಮತ್ತು ಸಾಧನೆಗಳನ್ನು ಅಮರವಾಗಿಸಲು ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಬೇಕು. ಶೆಟ್ಟಿ ಅವರ ಬಗ್ಗೆ ಪುಸ್ತಕ ಬರೆದು ಶಾಲೆಗಳಿಗೆ ಹಂಚಬೇಕು’ ಎಂದು ಸಲಹೆ ನೀಡಿದರು.

ಆಳ್ವಾಸ್‌ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ ಆಳ್ವಾ ಮಾತನಾಡಿ ‘ಉದ್ಯಮದಲ್ಲಿ ಧರ್ಮ, ಪಾರದರ್ಶಕತೆ, ನೈತಿಕತೆ ಉಳಿಸಿಕೊಳ್ಳುವುದು ಸವಾಲಿನ ಕೆಲಸ. ರಾಜಕಾರಣ ಸೇರಿದಂತೆ ಉಳಿದ ಕ್ಷೇತ್ರಗಳಲ್ಲಿ ಅಜಾತಶತ್ರುವಾಗಿ ಬದುಕಬಹುದು. ಆದರೆ, ಉದ್ಯಮ ಕ್ಷೇತ್ರದಲ್ಲಿ ಅಸಾಧ್ಯ. ಇದನ್ನು ಸಾಧ್ಯವಾಗಿಸಿದ ಹೆಚ್ಚುಗಾರಿಕೆ ಅವರದ್ದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ‘ಆರ್‌.ಎನ್‌. ಶೆಟ್ಟಿ ಅವರು ಬದುಕಿನುದ್ದಕ್ಕೂ ಸಮಾಜಮುಖಿ ಕೆಲಸ ಮಾಡಿದ್ದಾರೆ. ಅಧಿಕಾರ ಇರಲಿ; ಬಿಡಲಿ ಎಲ್ಲರನ್ನೂ ಒಂದೇ ರೀತಿಯಾಗಿ ಗೌರವದಿಂದ ಕಂಡಿದ್ದಾರೆ. ಅವರು ಎಲ್ಲ ಸಮಾಜದವರಿಗೂ ಮಾದರಿ ಕೆಲಸ ಮಾಡಿದ್ದಾರೆ’ ಎಂದು ನೆನಪಿಸಿಕೊಂಡರು.

ಪಾಲಿಕೆ ಮಾಜಿ ಸದಸ್ಯರಾದ ರಾಜಣ್ಣ ಕೊರವಿ, ದೀಪಕ ಚಿಂಚೋರೆ, ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ನೀಲಕಂಠ ಪಿ. ಜಡೆ, ಜೈನ ಸಮಾಜದ ಪ್ರಮುಖ ಮಹೇಂದ್ರ ಸಿಂಘಿ, ರೋಟರಿ ವಿದ್ಯಾ ಸಂಸ್ಥೆ ಮುಖ್ಯಸ್ಥ ರಾಜ ದೇಸಾಯಿ, ಬಂಟ್ಸ್‌ ಸಂಘದ ಮಾಜಿ ಉಪಾಧ್ಯಕ್ಷ ಸೀತಾರಾಮ ಶೆಟ್ಟಿ, ಹುಬ್ಬಳ್ಳಿ–ಧಾರವಾಡ ಬಂಟರ ಸಂಘದ ಕಾರ್ಯಾಧ್ಯಕ್ಷ ಎಸ್‌. ಸುಭಾಶ್ಚಂದ್ರ ಶೆಟ್ಟಿ, ದಕ್ಷಿಣ ಕನ್ನಡ ಡ್ರಾವಿಡ ಬ್ರಾಹ್ಮಣರ ಸಂಘದ ಕಾರ್ಯದರ್ಶಿ ಅನಂತರಾಜ ಭಟ್‌, ವೇಣುಗೋಪಾಲ ಶೆಟ್ಟಿ, ಜೆ.ಕೆ. ಶೆಟ್ಟಿ, ಶಾಂತರಾಮ ಶೆಟ್ಟಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು