ಸೋಮವಾರ, ಜನವರಿ 17, 2022
18 °C
ಕೃಷಿ ಕಾಯ್ದೆ ವಾಪಸ್‌ ಪಡೆಯಲು ಕೇಂದ್ರ ನಿರ್ಧಾರ

ಸಿಹಿ ಹಂಚಿ ಸಂಭ್ರಮ, ವಿಜಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ಬೆಳಿಗ್ಗೆ ಘೋಷಿಸುತ್ತಿದ್ದಂತೆ ರೈತರ ಹಾಗೂ ವಿವಿಧ ಸಂಘಟನೆಗಳ ವಲಯದಲ್ಲಿ ಸಂಭ್ರಮ ಮನೆ ಮಾಡಿತ್ತು.

ಕೆಲ ರಾಜಕೀಯ ಪಕ್ಷಗಳು ವಿಜಯಾಚರಣೆ ಮಾಡಿ ಖುಷಿಪಟ್ಟರೆ, ಇನ್ನೂ ಕೆಲ ನಾಯಕರು ಸರ್ಕಾರ ಮುಂದೆಯಾದರೂ ರೈತರ ಹಿತ ಕಾಯಲು ಒತ್ತು ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಜಿಟಿಜಿಟಿಯಾಗಿ ಸುರಿಯುತ್ತಿದ್ದ ಮಳೆಯ ನಡುವೆಯೂ ಕರ್ನಾಟಕ ಕಳಸಾ-ಬಂಡೂರಿ ಹೋರಾಟ ಸಮಿತಿ ಸದಸ್ಯರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಂಭ್ರಮ ಆಚರಿಸಿದರು.

ಕೇಂದ್ರದ ನಿರ್ಧಾರದಿಂದ ಖುಷಿಯಾಗಿದ್ದು, ಹೋರಾಟದ ವೇಳೆ ಮೃತಪಟ್ಟ ರೈತರ ಕುಟುಂಬದವರಿಗೆ ಪರಿಹಾರ ನೀಡಬೇಕು. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಸಮಿತಿ ಅಧ್ಯಕ್ಷ ಸಿದ್ದಣ್ಣ ತೇಜಿ, ಉಪಾಧ್ಯಕ್ಷ ಬಾಬಾಜಾನ್ ಮುಧೋಳ, ಪೀರಜಾದೆ ರಮೇಶ್ ಭೋಸ್ಲೆ, ಬಶೀರ್ ಮುಧೋಳ, ನದಾಫ್ ಇದ್ದರು.

ಆಪ್‌: ಎಎಪಿ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಯಘೋಷ ಕೂಗಿ ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ನರಗುಂದ ಮಾತನಾಡಿ ‘ಪಕ್ಷ ರೈತರ ಹೋರಾಟಕ್ಕೆ ಸಂಪೂರ್ಣವಾಗಿ ಬೆಂಬಲ ನೀಡಿತ್ತು. ಪ್ರತಿಕೂಲ ಹವಾಮಾನ ಪರಿಸ್ಥಿತಿಯನ್ನೂ ಲೆಕ್ಕಿಸದೇ ರೈತರು ಹೋರಾಟದಲ್ಲಿ ಧುಮುಕಿದರು. ಅವರಿಗೆ ದೆಹಲಿ ಸರ್ಕಾರ ಅನೇಕ ಸೌಲಭ್ಯಗಳನ್ನು ಒದಗಿಸಿತು’ ಎಂದು ಹರ್ಷ ವ್ಯಕ್ತಪಡಿಸಿದರು.

ಹುಬ್ಬಳ್ಳಿ ಘಟಕದ ಅಧ್ಯಕ್ಷ ಅನಂತಕುಮಾರ ಬುಗಡಿ, ಮುಖಂಡರಾದ ಶಶಿಕುಮಾರ ಸುಳ್ಳದ, ವಿಕಾಸ ಸೊಪ್ಪಿನ, ಸಂತೋಷ ಮಾನೆ, ಮೆಹಬೂಬ ಹೊಸಮನಿ, ಶಾಮ ನರಗುಂದ, ದೀಪಿಕಾ ಮುಥಾ, ಡೇನಿಯಲ್ ಐಕೊಸ, ಮಲ್ಲಪ್ಪ ತಡಸದ, ಮಲ್ಲಿಕಾರ್ಜುನಯ್ಯ ಹಿರೇಮಠ, ಹಸನ ಇನಾಮದಾರ, ಶಿವಕುಮಾರ ಬಾಗಲಕೋಟ, ಮೆಹಬೂಬ್ ಹರವಿ, ಕಲಿಮ ಲಕ್ಷ್ಮೇಶ್ವರ ಇದ್ದರು.

ವ್ಯಾಪಾರಸ್ಥರ ಸಂಘ: ಕೇಂದ್ರದ ನಿರ್ಧಾರ ಸ್ವಾಗತಾರ್ಹ ಎಂದು ಎಪಿಎಂಸಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಹೇಳಿದ್ದು ‘ ಎಪಿಎಂಸಿಗಳ ಪುನಶ್ಚೇತನಕ್ಕೆ ಕೇಂದ್ರದ ನಿಧಿಯಿಂದ ರಾಜ್ಯಗಳಿಗೆ ಹೆಚ್ಚು ಅನುದಾನ ಒದಗಿಸಬೇಕು’ ಎಂದು ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ, ಉಪಾಧ್ಯಕ್ಷ ಪ್ರಮೋದ ಸೋಳಂಕಿ, ಗೌರವ ಕಾರ್ಯದರ್ಶಿ ರಾಜಕಿರಣ ಮೆಣಸಿನಕಾಯಿ ಆಗ್ರಹಿಸಿದ್ದಾರೆ.

ರೈತರ ಹೋರಾಟಕ್ಕೆ ಜಯ: ರೈತರ ನಿರಂತರ ಹೋರಾಟಕ್ಕೆ ಸಿಕ್ಕ ಜಯ ಇದು ಎಂದು ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್‌.ಎಚ್‌. ಕೋನರಡ್ಡಿ ಪ್ರತಿಕ್ರಿಯಿಸಿದ್ದಾರೆ.

ತಡವಾಗಿಯಾದರೂ ಕೇಂದ್ರ ತನ್ನ ನಿರ್ಧಾರವನ್ನು ವಾಪಸ್‌ ಪಡೆದಿದ್ದು ಉತ್ತಮ ಬೆಳವಣಿಗೆ. ಅದೇ ರೀತಿ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಹೋರಾಟ ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರೈತರ ಗೆಲುವು: ದೇಶದ ಎಪಿಎಂಸಿಗಳಿಗೆ ಮಾರಕವಾಗಿದ್ದ ಕಾಯ್ದೆಗಳನ್ನು ಕೇಂದ್ರ ವಾಪಸ್ ಪಡೆದಿದ್ದು ರೈತರಿಗೆ ಸಿಕ್ಕ ಗೆಲುವು ಎಂದು ಶಾಸಕ ಪ್ರಸಾದ ಅಬ್ಬಯ್ಯ ಬಣ್ಣಿಸಿದ್ದಾರೆ.

ಅನ್ನದಾತರನ್ನು ವಿಶ್ವಾಸಕ್ಕೆ ಪಡೆಯದೇ ಎಡವಿದ್ದ ಕೇಂದ್ರ ಸರ್ಕಾರಕ್ಕೆ ತಡವಾಗಿ ಜ್ಞಾನೋದಯವಾಗಿದ್ದು, ವಿವಿಧ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ಕೇಂದ್ರ ಇನ್ನು ಮುಂದಾದರೂ ರೈತರ ವಿಷಯದಲ್ಲಿ ತನ್ನ ಸರ್ವಾಧಿಕಾರಿ ಮನಸ್ಥಿತಿಯಿಂದ ಹೊರಬಂದು ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದನ್ನು ಬಿಡಬೇಕು ಎಂದಿದ್ದಾರೆ

ದೇಶದ ಕೃಷಿ ಹಾಗೂ ಸ್ವಾವಲಂಬನೆಯನ್ನು ಕಬಳಿಸುವ ಕಾರ್ಪೋರೇಟ್ ಕಂಪನಿಗಳ ಹುನ್ನಾರಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಸಮಿತಿ ಸದಸ್ಯ ಬಸವರಾಜ ಕೋರಿಮಠ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರ ರೈತರ ಹಕ್ಕೊತ್ತಾಯಗಳ ಹಲವು ಅಂಶಗಳನ್ನು ಪರಿಗಣಿಸಿಲ್ಲ. ಕಾರ್ಮಿಕ ಸಂಹಿತೆಗಳ ಕುರಿತು ಏನನ್ನು ಮಾತನಾಡಿಲ್ಲ. ಹೀಗಾಗಿ ಈ ಪ್ರಶ್ನೆಗಳಿಗಾಗಿ ಹೋರಾಟ ಮುಂದುವರಿಸುವ ಅಗತ್ಯವಿದೆ ಎಂದಿದ್ದಾರೆ.

 

‘ಐತಿಹಾಸಿಕ ಪ್ರತಿರೋಧಕ್ಕೆ ಮಣಿದ ಸರ್ಕಾರ’

ಹುಬ್ಬಳ್ಳಿ: ದೇಶದ ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್‌ ಕಂಪನಿಗಳಿಗೆ ವಹಿಸಿಕೊಡುವ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ರೈತರ ಐತಿಹಾಸಿಕ ಪ್ರತಿರೋಧಕ್ಕೆ ಮಣಿದು ಕಾಯ್ದೆಗಳನ್ನು ರದ್ದುಪಡಿಸಲು ನಿರ್ಧರಿಸಿದೆ. ಇದು ರೈತರ ಹೋರಾಟಕ್ಕೆ ಸಿಕ್ಕ ಜಯ ಎಂದು ಸಿಪಿಐಎಂ (ಮಾರ್ಕ್ಸ್‌ವಾದಿ) ಜಿಲ್ಲಾ ಸಮಿತಿ ಬಣ್ಣಿಸಿದೆ.

‘ಹೋರಾಟ ನಿರತ ರೈತರನ್ನು ನಕಲಿ ಎಂದು ನಿಂದಿಸಲಾಯಿತು. ಲಾಠಿ ಚಾರ್ಜ್‌ ಕೂಡ ಮಾಡಲಾಯಿತು.  ಇದಕ್ಕೆ ಬಿಜೆಪಿ ನೇರ ಕಾರಣ. ಕರ್ನಾಟಕ ಸರ್ಕಾರ ಕಾಯ್ದೆಯ ನೀತಿಗಳನ್ನು ಜಾರಿಗೊಳಿಸುವಲ್ಲಿ ತಾನೇ ಮೊದಲಿಗ ಎಂದು ಹೇಳಿ ಭೂ ಸುಧಾರಣಾ ಕಾಯ್ದೆಗಳನ್ನು ಜಾರಿಗೊಳಿಸಿದೆ. ಇವುಗಳನ್ನು ವಾಪಸ್‌ ಪಡೆಯಬೇಕು’ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಹೇಶ ಪತ್ತಾರ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.