ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಏರುತ್ತಿರುವ ತಾಪಮಾನ: ಜನಜೀವನ ಹೈರಾಣ

ಬಿರುಬೇಸಿಗೆಯಿಂದ ಸಾಂಕ್ರಾಮಿಕ ರೋಗ ಭೀತಿ: ಇರಲಿ ಮುನ್ನಚ್ಚರಿಕೆ
Published 1 ಏಪ್ರಿಲ್ 2024, 5:06 IST
Last Updated 1 ಏಪ್ರಿಲ್ 2024, 5:06 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮೇಲೆ ಬಿಸಿಲು, ಕೆಳಗೆ ಬೆಂಕಿ ಎನ್ನುವಂತೆ ಸೂರ್ಯನು ಬೀರುವ ಕೆಂಗಣ್ಣಿಗೆ ಭೂಮಿ ಕಾದು ಕೆಂಡವಾಗಿದೆ. ಫೆಬ್ರುವರಿ ಆರಂಭದಲ್ಲಿಯೇ ಬಿಸಿಲು ತನ್ನ ಚುರುಕು ಮುಟ್ಟಿಸುತ್ತಿದ್ದು, ಈಗ ಪ್ರಖರ ಬಿಸಿಲಿಗೆ ಜನಜೀವನ ಹೈರಾಣಾಗಿದೆ.

ಜಿಲ್ಲೆಯಲ್ಲಿ ಕನಿಷ್ಠ 22ರಿಂದ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಈ ಹಿಂದೆ ದಾಖಲಾಗುತ್ತಿತ್ತು. ಈಗ ಕನಿಷ್ಠ 35, ಗರಿಷ್ಠ 40ರ ಆಸುಪಾಸಿನಲ್ಲಿ ಇದೆ. ಬೆಳಿಗ್ಗೆ 6.50ರಿಂದ ಸೂರ್ಯ ರಶ್ಮಿ ಭೂಮಿಗೆ ಬೀಳಲು ಆರಂಭಿಸಿದರೆ, ಸಂಜೆಯಾದರೆ ಬಿಸಿಲಿನ ಧಗೆಗೆ ಜನರು ಹೈರಾಣಾಗುತ್ತಿದ್ದಾರೆ. ಅಲ್ಲದೆ ರಾತ್ರಿ ಅವಧಿ ದೀಘ್ರವಾಗಿದ್ದು, ಝಳಕ್ಕೆ ನಿದ್ದೆ ಬಾರದೇ ಪರಿತಪಿಸುವಂತೆ ಆಗಿದೆ.

ಹೊತ್ತು ನೆತ್ತಿಗೇರುತ್ತಿದ್ದಂತೆಯೇ ಮನೆಯಿಂದ ಹೊರಗೆ ಬರಲಾರದಷ್ಟು ಬಿಸಿಲ ಝಳ ಹಾಗೂ ಸಂಜೆಯಾದರೂ ಆರದ ಕಾವು. ಮೈಯಿಂದ ಒಂದೇ ಸಮನೆ ಇಳಿಯುವ ಬೆವರಿಗೆ ದೇಹ ಬಸವಳಿಯುತ್ತಿದೆ. ಶ್ರಮ ಪಡುವ ಕಾರ್ಮಿಕರ ಬದುಕು ಇನ್ನೂ ಕಷ್ಟದ್ದಾಗಿದೆ.

‘ಜಿಲ್ಲೆಯಲ್ಲಿ ಮಾರ್ಚ್‌ ತಿಂಗಳಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಿದ್ದು, ಈ ವರ್ಷ ಏಪ್ರಿಲ್‌, ಮೇ ತಿಂಗಳಲ್ಲಿ ಇನ್ನೂ ತಾಪಮಾನ ಗರಿಷ್ಠ ಮಟ್ಟಕ್ಕೆ ಏರುವ ಲಕ್ಷಣವಿದೆ’ ಎನ್ನುವುದು ಹವಾಮಾನ ಇಲಾಖೆಯ ಮುನ್ಸೂಚನೆ.

ತಜ್ಞ ವೈದ್ಯರ ಸಲಹೆ:

‘ಹೊರಗಿನ ತಾಪಮಾನ ಹೆಚ್ಚಾದಂತೆ ಬೆವರುವಿಕೆಯೂ ಜಾಸ್ತಿಯಾಗುತ್ತದೆ. ಜಾಸ್ತಿ ಬೆವರು ಹೊರಗೆ ಹೋಗುವುದರಿಂದ ದೇಹವು ನಿರ್ಜಲೀಕರಣಕ್ಕೆ ಒಳಗಾಗುವ ಅಪಾಯ ಇರುತ್ತದೆ. ಅದನ್ನು ತಪ್ಪಿಸಲು ಸಾಧ್ಯವಾದಷ್ಟು ಜಾಸ್ತಿ ನೀರು ಕುಡಿಯಬೇಕು. ಬೇರೆ ಅವಧಿಗೆ ಹೋಲಿಸಿದರೆ, ಇಲ್ಲಿ ನಮ್ಮ ದೇಹಕ್ಕೆ ದಿನದಲ್ಲಿ ಕನಿಷ್ಠ 2.5 ಲೀಟರ್‌ಗಳಷ್ಟು ಹೆಚ್ಚು ನೀರಿನ ಅಗತ್ಯ ಇರುತ್ತದೆ. ಕುದಿಸಿ ಆರಿಸಿದ ಶುದ್ಧ ನೀರನ್ನೇ ಕುಡಿಯುವ ಅಭ್ಯಾಸ ಒಳ್ಳೆಯದು. ಕುದಿಸಿ ಆರಿಸಿದ ನೀರಿನಿಂದ ತಯಾರಿಸಿದ ಪಾನೀಯಗಳು, ಮಜ್ಜಿಗೆ, ಗಂಜಿಯನ್ನೂ ಹೆಚ್ಚು ಸೇವಿಸಬೇಕು’ ಎಂದು ತಜ್ಞ ವೈದ್ಯ ಡಾ.ಲಕ್ಷ್ಮಣ ಶಿವಳ್ಳಿ ಸಲಹೆ ನೀಡಿದರು.

‘ಬಿಸಿಲಿನಲ್ಲಿ ಝಳ ಹೆಚ್ಚು ಇದ್ದಾಗ ಹೊರಗಡೆ ಅಡ್ಡಾಡುವುದನ್ನು ಆದಷ್ಟು ತಪ್ಪಿಸಬೇಕು. ಇದರಿಂದ ಬಳಲುವಿಕೆ ಹೆಚ್ಚಾಗಿ, ತಲೆಸುತ್ತು ಬಂದು ಸ್ಮೃತಿ ತಪ್ಪುವ ಸಾಧ್ಯತೆಯೂ ಇರುತ್ತದೆ. ಅಂತಹವರನ್ನು ಬಿಸಿಲಿನ ತಾಪ ತೀರಾ ಜಾಸ್ತಿ ಆದರೆ ‘ಹೀಟ್‌ ಸ್ಟ್ರೋಕ್‌’ ಉಂಟಾಗುವ ಅಪಾಯವೂ ಇದೆ’ ಎಂದರು.

ಏನಿದು ಹೀಟ್‌ಸ್ಟ್ರೋಕ್‌?:

ದೇಹವನ್ನು ಎಡೆಬಿಡದೆ ಬಿಸಿಲಿಗೆ ಒಡ್ಡಿಕೊಂದಾಗ ಉಂಟಾಗುವ ದೇಹಸ್ಥಿತಿ ಇದು. ಹೀಟ್‌ಸ್ಟ್ರೋಕ್‌ನಿಂದ ದೇಹದ ಉಷ್ಣಾಂಶ ಒಂದೇ ಸಮನೆ ಹೆಚ್ಚಳವಾಗುತ್ತದೆ. ಬೆವರಿನ ಮೂಲಕ ದೇಹದ ಉಷ್ಣಾಂಶ ಹೊರ ಹಾಕುವ ವ್ಯವಸ್ಥೆ ವಿಫಲವಾಗಿ, ದೇಹದ ಉಷ್ಣಾಂಶ 104 ಡಿಗ್ರಿ ಫ್ಯಾರನ್‌ ಹೀಟ್‌ಗಿಂತಲೂ ಜಾಸ್ತಿಯಾಗುತ್ತದೆ.

ಬೇಸಿಗೆಯಲ್ಲಿ ಆರೋಗ್ಯ ಸಮಸ್ಯೆ:

ಬೇಸಿಗೆಯಲ್ಲಿ ನಿರ್ಜಲೀಕರಣ, ಕಾಲರಾ, ಟೈಫಾಯ್ಡ್‌, ವಾಂತಿ ಭೇದಿ, ಕಣ್ಣಿನ ಸಮಸ್ಯೆ, ತಲೆ ಸುತ್ತು, ಮೂಗಿನಲ್ಲಿ ರಕ್ತ ಸುರಿಯುವುದು, ಚರ್ಮ ಸಮಸ್ಯೆಗಳು, ಶ್ವಾಸಕೋಶ ತೊಂದರೆ, ಬೆವರು ಗುಳ್ಳೆ, ಕೀವು ತುಂಬಿದ ಗುಳ್ಳೆ, ಕೆಮ್ಮು,ಅಂಗೈ, ಅಂಗಾಲು ಉರಿ, ಉರಿ ಮೂತ್ರ, ಸರ್ಪ ಸುತ್ತು, ಮಲಬದ್ಧತೆ ಕಾಣಿಸಿಕೊಳ್ಳುತ್ತವೆ. ಈ ಬಗ್ಗೆ ಎಚ್ಚರ ವಹಿಸಬೇಕು ಎನ್ನುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಲಹೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಳವಾಗಿದ್ದು, 34ರಿಂದ 36ರವರೆಗೆ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಜನರ ನೆತ್ತಿ ಸುಡುತ್ತಿದೆ. ಮಧ್ಯಾಹ್ನ ಆಗುತ್ತಿದ್ದಂತೆ ಮನೆಯಿಂದ ಹೊರಬರಲು ಜನರು ಯೋಚಿಸುವಂತಾಗಿದೆ. ಬಿಸಿಲಿನ ದಾಹ ತಣಿಸಿಕೊಳ್ಳಲು ಜನರು ಕೆರೆ, ಬಾವಿ, ಈಜುಕೊಳದಲ್ಲಿ ಸ್ನಾನದ ಮೊರೆ ಹೋಗುತ್ತಿದ್ದಾರೆ.

ತಂಪು ಪಾನೀಯ, ನೀರಿನ ಅಂಶ ಹೆಚ್ಚಾಗಿರುವ ಹಣ್ಣು, ನಿಂಬೆಹಣ್ಣಿನ ಪಾನಕ, ಶರಬತ್, ಮಜ್ಜಿಗೆ, ಸೇಬು, ಮೋಸಂಬಿ, ಅನಾನಸ್‌, ದಾಳಿಂಬೆ, ಬಾಳೆಹಣ್ಣು, ಕಲ್ಲಂಗಡಿ, ಎಳೆನೀರು ಸೇವಿಸುತ್ತಿದ್ದಾರೆ. ಹೀಗಾಗಿ ಹುಬ್ಬಳ್ಳಿ– ಧಾರವಾಡ ಸೇರಿದಂತೆ ಜಿಲ್ಲೆಯಾದ್ಯಂತ ಪಾನೀಯಗಳು, ಹಣ್ಣಿನ ರಸಗಳ ಮಾರಾಟ ಜೋರಾಗಿದೆ. ರಸ್ತೆಬದಿಗಳಲ್ಲಿ ಕಲ್ಲಂಗಡಿ, ಎಳನೀರು ತೆಂಗಿನಕಾಯಿಗಳ ರಾಶಿ ಹಾಕಲಾಗಿದೆ.

ಬಿಸಿಲ ಝಳದಿಂದ ರಕ್ಷಣೆ ಹೇಗೆ?

ಸಾಧ್ಯವಾದಷ್ಟು ಮನೆ ಒಳಾಂಗಣದಲ್ಲೇ ಇರಬೇಕು ಹೆಚ್ಚಿನ ಪ್ರಮಾಣದ ನೀರು ಕುಡಿಯುವುದು ಅವಶ್ಯ ದೇಹಕ್ಕೆ ಆಯಾಸವಾಗದಂತೆ ದ್ರವರೂಪದ ಪಾನೀಯ ಎಳನೀರು ಗಂಜಿ ಸೇವನೆ ಉತ್ತಮ ಕಾರ್ಬೋನೇಟೆಡ್‌ ಪಾನೀಯದಿಂದ ದೂರ ಇರುವುದು ಒಳ್ಳೆಯದು ಹೊರಗಡೆ ಹೋಗುವುದು ಅನಿವಾರ್ಯವಾದರೆ ಛತ್ರಿ ತಂಪು ಕನ್ನಡಕ ಟೋಪಿ ಧರಿಸಿಮೈಗೆ ತೆಳುವಾದ ಹತ್ತಿ ಬಟ್ಟೆ ಧರಿಸಿ  ಮಧ್ಯಾಹ್ನ 12ರ ಬಳಿಕ ಬಿಸಿಲಿನಲ್ಲಿ ಅಡ್ಡಾಡದಿರಿ

‘ಚರ್ಮದ ಆರೋಗ್ಯದತ್ತ ಲಕ್ಷ್ಯ ಇರಲಿ’

‘ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಮಸಾಲೆ ಪದಾರ್ಥಗಳ ಸೇವನೆಯಿಂದ ದೂರವಿರಬೇಕು. ದೇಹದಲ್ಲಿ ನೀರಿನ ಅಂಶ ಹೆಚ್ಚಿರುವಂತೆ ನೋಡಿಕೊಳ್ಳಬೇಕು. ಹಣ್ಣುಗಳನ್ನು ಸೇವಿಸಬೇಕು. ಸಾಧ್ಯವಾದಷ್ಟು ಹತ್ತಿ ಬಟ್ಟೆಗಳನ್ನು ಧರಿಸಬೇಕು’ ಎಂಬುದು ಕಿಮ್ಸ್ ಆಸ್ಪತ್ರೆಯ ಚರ್ಮ ಹಾಗೂ ಲೈಂಗಿಕ ರೋಗ ತಜ್ಞ ಡಾ.ಚಂದ್ರಮೋಹನ್.ಕೆ. ಅವರ ಸಲಹೆ. ‘ಬಿಸಿಲಿನಲ್ಲಿ ಓಡಾಟದಿಂದ ಚರ್ಮರೋಗ ಹಾಗೂ ವಿವಿಧ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ತ್ವಚೆಯ ಆರೋಗ್ಯ ಕಾಪಾಡಲು ವೈದ್ಯರ ಸಲಹೆ ಮೇರೆಗೆ ಸನ್‌ಸ್ಕ್ರೀನ್‌ಗಳನ್ನು ಬಳಸಬೇಕು. ಮನೆಯಿಂದ ಹೊರ ಹೋಗುವಾಗ ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳಬೇಕು ಛತ್ರಿ ಬಳಸಬೇಕು ಅಗಲವಾದ ಟೊಪ್ಪಿಗೆ ಧರಿಸಬೇಕು’ ಎನ್ನುತ್ತಾರೆ ಅವರು.

ಅನಾರೋಗ್ಯದ ಲಕ್ಷಣ 

ಆಯಾಸ ದೇಹದ ಉಷ್ಣಾಂಶ 104 ಡಿಗ್ರಿ ಫ್ಯಾರನ್‌ಹೀಟ್‌ ದಾಟುವುದು ವಾಕರಿಕೆ ಮತ್ತು ವಾಂತಿ ತಲೆನೋವು ಸ್ನಾಯುಸೆಳೆತ ತ್ವರಿತ ಹೃದಯಬಡಿತ ಅಥವಾ ಏದುಸಿರು ಗಲಿಬಿಲಿಗೊಳಗಾಗುವುದು ತಲೆ ಸುತ್ತುವಿಕೆ ಸ್ಮೃತಿ ತಪ್ಪುವುದು. ಪ್ರಥಮ ಚಿಕಿತ್ಸೆ ವಿಧಾನ: ಸಾಧ್ಯವಾದಷ್ಟು ನೀರು ಸೇವಿಸಿ ದೇಹವನ್ನು ತಂಪಗಾಗಿಸಿ ನೆರಳಿರುವ ಕಡೆ ಅಥವಾ ತಂಪಾದ ಸ್ಥಳಕ್ಕೆ ತೆರಳಿ ವಿಶ್ರಾಂತಿ ತಣ್ಣೀರಿನ ಸ್ನಾನ ಅನಾರೋಗ್ಯ ಉಂಟಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಹತ್ತಿ ವಸ್ತ್ರ ಬಳಸಿ

ಸಡಿಲವಾದ ತೆಳು ಹತ್ತಿಯ ವಸ್ತ್ರಗಳನ್ನು ಧರಿಸಬೇಕು. ಕೈಗೆಟುಕುವಂತೆ ಕುಡಿಯುವ ನೀರನ್ನು ಇಟ್ಟುಕೊಳ್ಳಬೇಕು. ಶುದ್ದೀಕರಿಸಿದ ನೀರನ್ನುಕುಡಿಯಬೇಕು. ಬಿಗಿ ಗಾಢ ಬಣ್ಣದ ಸಿಂಥೆಟಿಕ್ ಬಟ್ಟೆ ಧರಿಸಬಾರದು. ಸೋಡಾ ಕಾರ್ಬೋನೇಟೆಡ್ ಪಾನೀಯ ಕಾಫಿ ಟೀ ಅತಿ ಸಕ್ಕರೆ ಅಂಶವುಳ್ಳ ಪಾನೀಯ ಹಾಗೂ ಮಸಾಲೆಯುಕ್ತ ಆಹಾರ ಮದ್ಯಪಾನ ಸೇವನೆ ಬೇಡ. ಬಿಗಿಯಾದ ಗಾಳಿಯಾಡದ ಪಾದರಕ್ಷೆ ಶೂಗಳನ್ನು ಧರಿಸಬಾರದು.

ಯಾರು ಏನಂದರು?

ಬಿಸಿಲಿನಿಂದ ಪ್ರಮುಖವಾಗಿ ಚರ್ಮ ಕಪ್ಪಾಗುವುದು ತುರಿಕೆ ಬರುವುದು ಆಯಾಸ ಮುಂತಾದ ರೋಗಗಳು ಕಾಣಿಸಿಕೊಳ್ಳುತ್ತವೆ. ಮುಂಜಾಗ್ರತೆ ಕ್ರಮಗಳನ್ನು ವೈದ್ಯರ ಸಲಹೆ ಮೇರೆಗೆ ಕೈಗೊಳ್ಳಬೇಕು –ಡಾ.ಕೆ.ಚಂದ್ರಮೋಹನ್ ಚರ್ಮರೋಗ ತಜ್ಞ ಕಿಮ್ಸ್

ಬಿಸಿಲು ಹೆಚ್ಚಿರುವ ಕಾರಣ ಹಣ್ಣುಗಳ ವ್ಯಾಪಾರ ಜೋರಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಹಣ್ಣು ಖರೀದಿಸಿ ತಂದಿದ್ದೇವೆ. ವ್ಯಾಪಾರ ಚೆನ್ನಾಗಿದೆ –ಅದ್ನಾನ್ ಹಣ್ಣಿನ ವ್ಯಾಪಾರಿ ದುರ್ಗದ ಬೈಲ್ ಹುಬ್ಬಳ್ಳಿ

ಈ ಸಾರಿ ಬಿಸಿಲು ವಿಪರೀತವಾಗಿದೆ. ಕೆಲಸಕ್ಕೆ ಹೊರಗೆ ಹೋಗಿ ಬಂದರೆ ದೇಹ ಬಳಲಿದಂತೆ ಆಗುತ್ತದೆ. ಏಪ್ರಿಲ್ ಮೇ ತಿಂಗಳಲ್ಲಿ ಪರಿಸ್ಥಿತಿ ಇನ್ನೂ ಅಧ್ವಾನವಾಗಿರುತ್ತದೆ ಎಂಬ ಆತಂಕ ಕಾಡುತ್ತಿದೆ - ಸುಧಾ ಅಶೋಕ ಗೃಹಿಣಿ

ಬಿಸಿಲು ಇದ್ದರೂ ಕೆಲಸ ಮಾಡುವುದು ನಮಗೆ ಅನಿವಾರ್ಯ. ಬಿಸಿಲಿನ ಝಳಕ್ಕೆ ಹೈರಾಣಾಗಿದ್ದೇವೆ. ಪ್ರತಿವರ್ಷಕ್ಕಿಂತ ಈ ವರ್ಷ ಶಾಖ ತೀವ್ರವಾಗಿದೆ. ಮುಂದೆ ಹೇಗೆ ಎಂಬ ಚಿಂತೆ ಕಾಡುತ್ತಿದೆ –ಪವನಕುಮಾರ ಉದ್ಯೋಗಿ

ಬಿಸಿಲಿನ ಜಳಕ್ಕೆ ಎಳೆನೀರಿನ ಮೊರೆ ಹೋದ ಜನತೆ
ಬಿಸಿಲಿನ ಜಳಕ್ಕೆ ಎಳೆನೀರಿನ ಮೊರೆ ಹೋದ ಜನತೆ
ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಹಣ್ಣುಗಳ ಮಾರಾಟ ಜೋರಾಗಿದೆ
ಪ್ರಜಾವಾಣಿ ಚಿತ್ರ: ಗೋವಿಂದ ಜವಳಿ
ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಹಣ್ಣುಗಳ ಮಾರಾಟ ಜೋರಾಗಿದೆ ಪ್ರಜಾವಾಣಿ ಚಿತ್ರ: ಗೋವಿಂದ ಜವಳಿ
ಉಪ್ಪಿನಬೆಟಗೇರಿ ಗ್ರಾಮದಲ್ಲಿ ನೀರಿನ ಅಭಾವದಿಂದ ಬ್ಯಾರಲ್‌ಗಳಲ್ಲಿ ಸಂಗ್ರಹಿಸಿದ ನೀರಿನಲ್ಲಿ ಲಾರ್ವಾ ಕ್ರಿಮಿಗಳು ಕಂಡು ಬಂದಿದ್ದರಿಂದ ನೀರನ್ನು ಚೆಲ್ಲಲಾಯಿತು 
ಉಪ್ಪಿನಬೆಟಗೇರಿ ಗ್ರಾಮದಲ್ಲಿ ನೀರಿನ ಅಭಾವದಿಂದ ಬ್ಯಾರಲ್‌ಗಳಲ್ಲಿ ಸಂಗ್ರಹಿಸಿದ ನೀರಿನಲ್ಲಿ ಲಾರ್ವಾ ಕ್ರಿಮಿಗಳು ಕಂಡು ಬಂದಿದ್ದರಿಂದ ನೀರನ್ನು ಚೆಲ್ಲಲಾಯಿತು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT