ಭಾನುವಾರ, ಸೆಪ್ಟೆಂಬರ್ 26, 2021
28 °C
ಮತದಾನಕ್ಕೆ ಒಂದೇ ದಿನಬಾಕಿ: ಮನೆಮನೆ ಪ್ರಚಾರ ಜೋರು

ಮತಬೇಟೆಗೆ ಅಂತಿಮ ಕಸರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಯ ಮತದಾನಕ್ಕೆ ಒಂದು ದಿನ ಬಾಕಿ ಉಳಿದಿರುವಂತೆಯೇ ಅಭ್ಯರ್ಥಿಗಳು ಬುಧವಾರ ಮನೆಮನೆ ಪ್ರಚಾರ ನಡೆಸಿದರು. ಮತಬೇಟೆಗೆ ಅಂತಿಮ ಕಸರತ್ತುಗಳನ್ನು ಮಾಡಿದರು.

ಬಿಜೆಪಿ, ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷ, ಜೆಡಿಎಸ್‌ ಮತ್ತು ಕೆಲ ಪಕ್ಷೇತರ ಅಭ್ಯರ್ಥಿಗಳು ತಮ್ಮ ವಾರ್ಡ್‌ನಲ್ಲಿ ಮನೆಮನೆಗೆ ಹೋಗಿ ಪ್ರಚಾರ ಮಾಡಿದರು. ಕಾಂಗ್ರೆಸ್‌ನ ಕೆಲ ಸ್ಥಳೀಯ ನಾಯಕರು ಹಲವು ವಾರ್ಡ್‌ಗಳಲ್ಲಿ ಆಯಾ ಬಡಾವಣೆಯ ಮುಖ್ಯಸ್ಥರು, ಧರ್ಮಗುರುಗಳು, ಕ್ಲಬ್‌ಗಳ ಮುಖ್ಯಸ್ಥರು ಹೀಗೆ ಪ್ರಮುಖರನ್ನು ಭೇಟಿಯಾದರು.

ಶಾಸಕ ಪ್ರಸಾದ ಅಬ್ಬಯ್ಯ, ಕಾಂಗ್ರೆಸ್‌ ಮುಖಂಡ ಸದಾನಂದ ಡಂಗನವರ, ಮುಖಂಡರಾದ ನಾಸಿರ್ ಅಸುಂಡಿ, ರಾಕೇಶ ಪಲ್ಲಾಟೆ, ಶ್ರೀನಿವಾಸ ಬೆಳದಡಿ, ರಮೇಶ ಹುಲಕೊಪ್ಪ, ಶಾರುಖ್ ಮುಲ್ಲಾ, ಅಧ್ಯಕ್ಷರಾದ ಮೆಹಮೂದ್ ಕೋಳೂರು, ಪ್ರಸನ್ನ ಮೀರಜಕರ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ ಸೇರಿದಂತೆ ಸ್ಥಳೀಯ ನಾಯಕರು ಮನೆಮನೆಗೆ ತೆರಳಿ ಮತ ಕೇಳಿದರು. ಅಬ್ಬಯ್ಯ ವಾರ್ಡ್‌ 61ರಲ್ಲಿ ದೊರೆರಾಜ್ ಮಣಿಕುಂಟ್ಲ, 82ರಲ್ಲಿ ಯಲ್ಲಮ್ಮ ಪಲ್ಲಾಟೆ, 60ರಲ್ಲಿ ಕೌಸರ್ ಬಾನು ಗುಡಮಾಲ್‌ ಸೇರಿದಂತೆ ಹಲವರ ಪರ ಮತಯಾಚಿಸಿದರು.

ಬಿಜೆಪಿಯ ಹಲವು ಸದಸ್ಯರು ಪ್ರಚಾರ ಮಾಡಿದರೆ, ಇನ್ನೂ ಕೆಲವರು ಯಾವ ಪ್ರಚಾರವನ್ನೂ ಮಾಡದೆ ಆನ್‌ಲೈನ್‌ ಮೂಲಕ ಮತದಾರರ ಮನ ಗೆಲ್ಲಲು ಕಸರತ್ತು ನಡೆಸಿದರು.

ಬಹಳಷ್ಟು ಅಭ್ಯರ್ಥಿಗಳು ತಮ್ಮ ವಾರ್ಡ್‌ಗಳಲ್ಲಿ ಬಹುತೇಕ ಮನೆಗಳ ಮುಖ್ಯಸ್ಥರ ಮೊಬೈಲ್‌ ಸಂಖ್ಯೆಗಳನ್ನು ಸಂಗ್ರಹಿಸಿದ್ದು, ವಾಟ್ಸ್‌ ಆ್ಯಪ್‌ ಮೂಲಕ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಏನು ಮಾಡುತ್ತದೆ ಎನ್ನುವ ಮಾಹಿತಿ ಪತ್ರವನ್ನು ಒಳಗೊಂಡ ಸಂದೇಶವನ್ನು ಕಳುಹಿಸಿ ಪ್ರಚಾರ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮನೆ ಮನೆ ಪ್ರಚಾರದ ಕೊನೆಯ ದಿನವಾದ ಗುರುವಾರ ಹಾಗೂ ಮತದಾನದ ದಿನದಂದು ಮಾಡಬೇಕಾದ ‘ತಂತ್ರ’ಗಳ ಬಗ್ಗೆ ಕಾರ್ಯಕರ್ತರ ಜೊತೆ ಚರ್ಚಿಸಿದರು.

ಸಿದ್ಧತೆ: ನಗರದ ಲ್ಯಾಮಿಂಗ್ಟನ್‌ ಶಾಲೆಯಲ್ಲಿ ಬುಧವಾರ ಮತದಾನಕ್ಕೆ ಸಿಬ್ಬಂದಿ ಅಗತ್ಯ ತಯಾರಿ ಮಾಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.