ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಕಲಾವಿದರು ಒಗ್ಗಟ್ಟಾಗಬೇಕು: ಹೊರಟ್ಟಿ

ರಾಜ್ಯ ವೃತ್ತಿ ರಂಗಭೂಮಿ ಮಾಲೀಕರ ಸಂಘದ ಕಾರ್ಯಚಟುವಟಿಕೆಗಳು ಪ್ರಾರಂಭ
Last Updated 4 ಆಗಸ್ಟ್ 2019, 15:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ವೃತ್ತಿ ರಂಗಭೂಮಿ ಕಲಾವಿದರು ಸಂಘಟನೆ ಮೂಲಕ ಒಗ್ಗಟ್ಟು ಪ್ರದರ್ಶಿಸಿ, ಸರ್ಕಾರದಿಂದ ಅನುದಾನ ಪಡೆಯಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಕರ್ನಾಟಕ ರಾಜ್ಯ ವೃತ್ತಿ ರಂಗಭೂಮಿ ಮಾಲೀಕರ ಸಂಘದ ವತಿಯಿಂದನಗರದ ಬಸವ ವನ ಬಳಿ ಹಾಕಿರುವ ಕೆ.ಬಿ.ಆರ್‌. ಡ್ರಾಮಾ ಕಂಪನಿ ಟೆಂಟ್‌ನಲ್ಲಿ ‘2019–20ನೇ ಸಾಲಿನ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳ ಪ್ರಾರಂಭೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸ್ತುತ ನಾಟಕ ಕಂಪನಿಗಳ ಪರಿಸ್ಥಿತಿ ಶೋಚನೀಯವಾಗಿದೆ. ದೂರದರ್ಶನ, ಮೊಬೈಲ್‌, ಸಿನಿಮಾಗಳಿಂದ ನಾಟಕ ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಯೂ ಟ್ಯೂಬ್‌ನಲ್ಲಿ ನಾಟಕ ನೋಡುತ್ತ ಮನರಂಜನೆ ಪಡೆಯುತ್ತಿದ್ದಾರೆ. ನಾಟಕ ಪ್ರದರ್ಶನ ಸಹ ಕಡಿಮೆಯಾಗುತ್ತಿದೆ’ ಎಂದರು.

‘93 ವರ್ಷಗಳಿಂದ ಚಿಂದೋಡಿ ಕುಟುಂಬ ನಾಟಕ ಪ್ರದರ್ಶನ ಮಾಡುತ್ತ ಬಂದಿದ್ದು, ನೂರು ವರ್ಷ ಪೂರೈಸುವ ಮಹತ್ವಾಕಾಂಕ್ಷೆ ಹೊಂದಿದೆ. ಸುದೀರ್ಘ ಪಯಣದಲ್ಲಿ ಸಾಕಷ್ಟು ನೋವು ಉಂಡಿರುವ ಈ ಕಂಪನಿ, ಐದಾರು ಜನ ಪ್ರೇಕ್ಷಕರು ಇದ್ದಾಗಲೂ ಕಲೆಗೆ ಅಪಚಾರವಾಗದಂತೆ ನಾಟಕ ಪೂರ್ಣಗೊಳಿಸಿದೆ. ಈಗ ಮತ್ತೊಮ್ಮೆ ರಂಗಭೂಮಿ ಮಾಲೀಕರು ಒಂದುಗೂಡಿದ್ದು ಸಂತಸದ ವಿಷಯ’ ಎಂದರು.

ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, ‘ಒಬ್ಬರಿಗೊಬ್ಬರು ಕೈ ಜೋಡಿಸಿ ಸಹಕಾರ ನೀಡಿದರೆ ಅದು ಸಮಷ್ಠಿಯಾಗುತ್ತದೆ. ಆ ಸಮಷ್ಠಿಯೇ ಶಕ್ತಿಯಾಗಿ ಹೊರ ಹೊಮ್ಮುತ್ತದೆ. ಅಂತಹ ಬಲಿಷ್ಠ ಶಕ್ತಿ ನಾಟಕ ಕಂಪನಿಗಳ ಮಾಲೀಕರದ್ದಾಗಬೇಕು. ಬೆಂಗಳೂರು, ಶಿವಮೊಗ್ಗ, ತುಮಕೂರಿನಲ್ಲಿ ಇರುವಂತೆ ಹುಬ್ಬಳ್ಳಿಯಲ್ಲೂ ಒಂದು ರಂಗಭೂಮಿ ವೇದಿಕೆ ಬೇಕಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು’ ಎಂದು ಮನವಿ ಮಾಡಿದರು.

ರಂಗಭೂಮಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಚಿಂದೋಡಿ ಶಂಭುಲಿಂಗಪ್ಪ, ಉಪಾಧ್ಯಕ್ಷೆ ಮಾಲತಿ ಸುಧೀರ್‌, ಖಜಾಂಚಿ ರಾಜಣ್ಣ ಜೇವರ್ಗಿ, ಕಲಾವಿದರ ಸಂಘದ ಅಧ್ಯಕ್ಷ ಫೈಯಾಜ್ ಕರ್ಜಗಿ ಇದ್ದರು. ನಂತರ ಚಿಂದೋಡಿ ಶ್ರೀಕಂಟೇಶ ನಿರ್ದೇಶಿಸಿರುವ ‘ನಿದ್ದಿಗೆಡಿಶ್ಯಾಳ ಬಸಲಿಂಗಿ’ ಸಾಮಾಜಿಕ ಹಾಸ್ಯ ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT