ಗುರುವಾರ , ಫೆಬ್ರವರಿ 27, 2020
19 °C

ಆಕಾಶವೇ ಅವಕಾಶ, ಇರಲಿ ವಿಶ್ವಾಸ: ಟೈಕಾನ್ ಉದ್ಯಮ ಸಮ್ಮೇಳನದಲ್ಲಿ ಮಹಿಳಾ ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹುಬ್ಬಳ್ಳಿ: ಉದ್ಯಮ ಇರಲಿ, ಕೃಷಿ ಇರಲಿ, ಸಾಹಿತ್ಯ– ಸಂಗೀತ ಯಾವುದೇ ಕ್ಷೇತ್ರವಿರಲಿ, ಸಾಧನೆ ಮಾಡಲು ಮಹಿಳೆಗೆ ನೂರಾರು ಅವಕಾಶಗಳಿವೆ. ಅದು ಈಗಾಗಲೇ ಸಾಬೀತಾಗಿದೆ. ಇರುವುದಿಷ್ಟೇ, ಆಗುವುದಿಷ್ಟೇ, ಬೇರೆ ಅವಕಾಶ ಎಲ್ಲಿದೆ ಎಂಬ ಮನಸ್ಥಿತಿ ಬಿಡಿ. ನಾಯಕಕತ್ವ ಗುಣ ಹುಟ್ಟಿನಿಂದಲೇ ಬರುತ್ತದೆ...

ಟೈಕಾನ್ ಉದ್ಯಮ ಸಮ್ಮೇಳನದ ಪ್ರಮುಖ ಆಕರ್ಷಣೆ ಎನಿಸಿದ್ದ ಮಹಿಳಾ ಸಂವಾದ ಹಾಗೂ ಯಶೋಗಾಥೆ ಅನಾವರಣ ಕಾರ್ಯಕ್ರಮದಲ್ಲಿ ಸಾಧಕಿಯರು ಸ್ಫೂರ್ತಿ ತುಂಬಿದ ಬಗೆಯಿದು. ಕೃಷಿ ಪುರುಷ ಪ್ರಧಾನವಲ್ಲ ಅದು ಮಹಿಳಾ ಪ್ರಧಾನ ಎಂದು ಪ್ರತಿಪಾದಿಸಿದವರು ಕೃಷಿ ಮಹಿಳೆ ಕವಿತಾ ಮಿಶ್ರಾ. ‘ಕೋಟಿ ಕೋಟಿ ಉದ್ಯಮದ ಕಥೆ ಕೇಳಿದೆವು. ಆದರೆ ನಾನು ಐದು ರೂಪಾಯಿಯಿಂದ ಆರಂಭಿಸುತ್ತೇನೆ. ಏಕೆಂದರೆ ನನ್ನ ಪಯಣ ಆರಂಭವಾಗಿದ್ದು ಐದು ರೂಪಾಯಿಯಿಂದ’ ಎಂದು ಶೂನ್ಯದಿಂದ ಆರಂಭಿಸಿ ಸಾಧನೆಯ ಉತ್ತುಂಗ ಏರಿದ ಬಗೆಯನ್ನು ಬಿಚ್ಚಿಟ್ಟರು.

’ಧಾರವಾಡದವಳಾದ ನಾನು ಎಂಜಿನಿಯರಿಂಗ್ ಪದವಿ ಪಡೆದಿದ್ದೆ. ಎಂಜಿನಿಯರ್ ಆಗಿ ವೃತ್ತಿ ಆರಂಭಿಸುವ ಕನಸು ಸಹ ಇತ್ತು. ಆದರೆ ವಿವಾಹವಾದ ನಂತರ ಗಂಡನ ಮನೆ ರಾಯಚೂರಿಗೆ ಹೋಗಬೇಕಾಯಿತು. ಹೊರಗೆ ಕೆಲಸ ಮಾಡಲು ಅವಕಾಶ ಇರಲಿಲ್ಲ. ನಂತರ ಕೃಷಿ ಆರಂಭಿಸಿದೆ, ಅದರಲ್ಲಿ ಯಶಸ್ಸು ಸಹ ಸಿಕ್ಕಿತು’ ಎಂದರು.

‘ಕೃಷಿ ಪುರುಷ ಪ್ರಧಾನ ಕಸುಬು ಎನ್ನುತ್ತಾರೆ. ಆದರೆ ನೇಗಿಲು ಹಿಡಿದು ಹೋಗುವ ಗಂಡನಿಗೆ ರೊಟ್ಟಿ ಕಟ್ಟಿಕೊಡುವುದು ಹೆಂಡತಿ. ಆತ ಹೊಲಕ್ಕೆ ಹೋದ ನಂತರ ಮನೆ ಕೆಲಸ ಮುಗಿಸಿ ತಾನೂ ಹೊಲಕ್ಕೆ ಹೋಗುವ ಮಹಿಳೆ ಅಲ್ಲಿ ಮತ್ತೆ ಕೆಲಸ ಮಾಡುತ್ತಾಳೆ. ಫಸಲು ಬಂದಾಗ ಅದನ್ನು ಚೀಲಕಟ್ಟಿ ವಾಹನಕ್ಕೆ ತುಂಬುತ್ತಾಳೆ. ಆದರೆ ಅದನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವುದು ಪತಿ. ಅದಕ್ಕೇ ಕೃಷಿ ಪುರುಷ ಪ್ರಧಾನ ಎನ್ನುತ್ತಾರೆ. ಮಹಿಳೆ ತಾನು ಸಹ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡಿದರೆ ಆಗ ಕೃಷಿ ಮಹಿಳಾ ಪ್ರಧಾನವಾಗುತ್ತದೆ’ ಎಂದರು.

ನಾಯಕತ್ವ ಗುಣ ಎಲ್ಲರಲ್ಲಿದೆ: ನಾಯಕತ್ವ ಗುಣ ಎಂಬುದು ಹುಟ್ಟುತ್ತಲೇ ಎಲ್ಲರಲ್ಲಿ ಇರುತ್ತದೆ. ಆದರೆ ಅದನ್ನು ಬೆಳೆಸುವ ಕೆಲಸವನ್ನು ಮಾಡಬೇಕಾಗುತ್ತದೆ. ಅನ್ಯಾಯವನ್ನು ಪ್ರತಿಭಟಿಸುವ ವ್ಯಕ್ತಿಯಲ್ಲಿ ನಾಯಕತ್ವ ಗುಣ ವಿಶೇಷವಾಗಿರುತ್ತದೆ. ಇರುತ್ತದೆ. ಶಾಲೆಯಲ್ಲಿದ್ದಾಗಲೇ ಪಂಚಾಯಿತಿ ಸಹಕಾರದಿಂದ ಬಾಲ್ಯ ವಿವಾಹವೊಂದನ್ನು ತಡೆದೆ. ಈ ವರೆಗೆ 28 ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಶಿಕ್ಷಣ ವಂಚಿತ 10 ಮಕ್ಕಳನ್ನು ಶಾಲೆಗೆ ಸೇರಿಸಲಾಗಿದೆ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಂಜುಳಾ ಮುನವಳ್ಳಿ ಹೇಳಿದರು.

ಬೈಕರ್‌ ಕ್ಯಾಂಡಿಡಾ ಲೂಯಿಸ್, ಈಜು ಕೋಚ್‌ ಭಾರತಿ ಕೊಠಾರಿ, ಉದ್ಯಮಿ ಮೇಘನಾ ಕುಲಕರ್ಣಿ ತಮ್ಮ ಅನುಭವ ಹಂಚಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು