ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನವರು ಹಿಂದೂ ವಿರೋಧಿಯೆಂದು ಬಿಂಬಿಸುವ ಯತ್ನ: ಸಚಿವ ಸಂತೋಷ ಲಾಡ್‌

Published 15 ಜನವರಿ 2024, 15:54 IST
Last Updated 15 ಜನವರಿ 2024, 15:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕಾಂಗ್ರೆಸ್‌ನವರು ದೇವಸ್ಥಾನದ ಮತ್ತು ಹಿಂದೂ ವಿರೋಧಿಗಳು ಎಂದು ಬಿಂಬಿಸಲು, ಬಿಜೆಪಿಯವರು ರಾಮಮಂದಿರ ಉದ್ಘಾಟನೆ ವಿಷಯ ಮುಂದಿಟ್ಟುಕೊಂಡು ಮನಬಂದಂತೆ ಮಾತನಾಡುತ್ತಿದ್ದಾರೆ’ ಎಂದು ಸಚಿವ ಸಂತೋಷ ಲಾಡ್‌ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿರುವ ಶಕ್ತಿ ಪೀಠಗಳನ್ನು ಹಾಗೂ 32ಕೋಟಿ ದೇವರುಗಳನ್ನು ಕಾಪಾಡಿದ್ದು ಬಿಜೆಪಿಯವರಾ? ಅವರ ಕಾಲದಲ್ಲಿ ದೇವಸ್ಥಾನಗಳು ನಿರ್ಮಾಣವಾಗಿದ್ದವೇ? ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಅಧಿಕಾರಕ್ಕೆ ಬರಬೇಕು ಎಂದು ಹೀಗೆಲ್ಲ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅಯೋಧ್ಯೆಗೆ ಹೋಗದಿರುವುದಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಹಾಗೆ ಹೇಳಬಾರದೆಂದು ನಿಯಮವಿಲ್ಲ. ಶಂಕರಾಚಾರ್ಯರು ಮಂದಿರ ಉದ್ಘಾಟನೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಅವರನ್ನು ಮೀರಿ ಬಿಜೆಪಿಯವರು ಇದ್ದಾರೆಯೇ? ಚುನಾವಣೆ ಮುಗಿಯುವವರೆಗೆ ಮಾತ್ರ ಅವರಿಗೆ ರಾಮಮಂದಿರದ ವಿಷಯ ನೆನಪಲ್ಲಿರುತ್ತದೆ’ ಎಂದು ವ್ಯಂಗ್ಯವಾಡಿದರು.

‘ಭಾರತ ವಿಶ್ವಗುರು ಎಂದು ಹೇಳುವ ಬಿಜೆಪಿಯವರು, ಆರ್ಥಿಕ ಪ್ರಗತಿಯ ಬಗ್ಗೆ ಯಾಕೆ ಮಾತನಾಡುವುದಿಲ್ಲ? ನೋಟ್‌ ಅಮಾನ್ಯೀಕರಣ, 10 ವರ್ಷದ ಪ್ರಗತಿಯ ಕುರಿತು ಅವರಿಗೆ ‌ಚರ್ಚೆ ಬೇಡವಾಗಿದೆ’ ಎಂದು ಕುಟುಕಿದರು.

‘ಕೇಂದ್ರ ಸರ್ಕಾರ ಅನುದಾನ ನೀಡುವಲ್ಲಿ ತಾತರಮ್ಯ ಸಾಬೀತು ಮಾಡಿದರೆ, 28 ಕ್ಷೇತ್ರದಲ್ಲಿ ಎಂಪಿ ಅಭ್ಯರ್ಥಿಗಳನ್ನು ನಿಲ್ಲಿಸುವುದಿಲ್ಲ’ ಎನ್ನುವ ಬಿಜೆಪಿಯ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಈ ಕುರಿತು ಚರ್ಚೆ ನಡೆಯಲಿ. ಯಾವ್ಯಾವ ರಾಜ್ಯಕ್ಕೆ ಎಷ್ಟು ಅನುದಾನ ನೀಡಲಾಗಿದೆ, ಎಷ್ಟು ಸಾಲ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರವೇ ಶ್ವೇತಪತ್ರ ಹೊರಡಿಸಲಿ. ರಾಜ್ಯ ಸರ್ಕಾರದ ತೆರಿಗೆ ಹಣವನ್ನೇ ಕೇಂದ್ರ ಸರ್ಕಾರ ನಮಗೆ ಅನುದಾನವಾಗಿ ನೀಡುವುದು. ಅವರೇನು ನಮಗೆ ದಾನ ಕೊಡುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT