ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1,100 ಕೋಟಿ ವೆಚ್ಚದಲ್ಲಿ ಮಲಪ್ರಭಾ ನದಿಯಿಂದ ಕುಡಿಯುವ ನೀರು: ಜೋಶಿ

Last Updated 22 ನವೆಂಬರ್ 2020, 11:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಹಾಗೂ ರಾಜ್ಯ ಸರ್ಕಾರದ ಜಲಧಾರೆ ಯೋಜನೆಯಡಿ ₹ 1,100 ಕೋಟಿ ವೆಚ್ಚದಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಮಲಪ್ರಭಾ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದ ಘನ ತ್ಯಾಜ್ಯ ವಿಲೇವಾರಿ ಘಟಕ, ಬೀರಲಿಂಗೇಶ್ವರ ದೇವಸ್ಥಾನದ ಭೂಮಿ ಪೂಜೆ, ಮುಕ್ತಿ ವನಸಹಾಯ ಕೇಂದ್ರ ಉದ್ಘಾಟನೆ ನೆರವೇರಿಸಿ ಮತ್ತು ಕಸ ವಿಲೇವಾರಿ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ಹರ್ ಘರ್ ಜಲ್ ಯೋಜನೆ ಮೂಲಕ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು. 24x7 ನೀರು ಲಭ್ಯವಾಗುವಂತೆ ಮಾಡಲಾಗುವುದು. ಸ್ವಚ್ಛ ಭಾರತ್ ಸ್ವಚ್ಛ ಗ್ರಾಮ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತಿಗೆ ಸಾಕಷ್ಟು ಅನುದಾನ ಒದಗಿಸಲಾಗುತ್ತಿದೆ. ಪ್ರತಿ ಮನೆಯಲ್ಲೂ ಕಸ ವಿಂಗಡಣೆ ಮಾಡಬೇಕು. ಹಸಿ‌ ಹಾಗೂ ಕಸ ಸಂಗ್ರಹಿಸಲು ಗ್ರಾಮ ಪಂಚಾಯ್ತಿಯಿಂದಲೇ ಹಸಿರು ಮತ್ತು ನೀಲಿ ಬುಟ್ಟಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಕುಸುಗಲ್ ಗ್ರಾಮದಲ್ಲಿ ₹20 ಲಕ್ಷ ಅನುದಾನದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಘಟಕ ನಿರ್ಮಾಣಕ್ಕೆ ₹5 ಲಕ್ಷ ಹಣವನ್ನು ನರೇಗಾದಡಿ ಕೊಡಲಾಗಿದೆ. ಜಿಲ್ಲೆಗೆ 60 ತ್ಯಾಜ್ಯ ವಿಲೇವಾರಿ ಘಟಕ ಮಂಜೂರು ಆಗಿವೆ. 20 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಸ್ವಚ್ಚತೆ ಗಮನ ನೀಡದೆ ಇರುವುದರಿಂದ ಹಲವು ಖಾಯಿಲೆಗಳು ಸಾಂಕ್ರಾಮಿಕ ರೋಗಗಳು ಹರಡುತ್ತವೆ. ರೋಗ ಬಂದಾಗ ಆಸ್ಪತ್ರೆಗಳಿಗೆ ಹಣ ವ್ಯಯಿಸುವ ಬದಲು ಸ್ವಚ್ಛತೆ ಕಾಪಾಡಿಕೊಳ್ಳಬೇಕು’ ಎಂದರು.

ಕುಸುಗಲ್ ಗ್ರಾಮಸ್ಥರು ನೀಡಿದ ಮನವಿಗೆ ಸ್ಪಂದಿಸಿದ ಸಚಿವರು ಹುಬ್ಬಳ್ಳಿ ಬೈಪಾಸ್ ರಸ್ತೆಯಿಂದ ಕುಸುಗಲ್ ಗ್ರಾಮಕ್ಕೆ ಸರ್ವಿಸ್ ರಸ್ತೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.

ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾ ಪಚಾಯ್ತಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಸಿಇಒ ಬಿ.ಸುಶೀಲಾ, ತಾಲ್ಲೂಕು ಪಂಚಾಯ್ತಿ ಸದಸ್ಯೆ ದ್ಯಾವಲಾಬಿ ಕೋಂ ಮಿರ್ಜಾನವರ, ಇಓ ಗಂಗಾಧರ ಕಂದಕೋರ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಶಿಧರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT