ಧಾರವಾಡ:‘ಸಹಬಾಳ್ವೆಯೇ ಕ್ರಿಸ್‌ಮಸ್ ಸಂದೇಶ’

ಧಾರವಾಡ: ‘ಗೋದಲಿಯಲ್ಲಿ ಜನಿಸಿದ ಯೇಸುಕ್ರಿಸ್ತ, ಜಗತ್ತಿನ ಜನರ ಉದ್ಧಾರಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡರು. ಅವರ ಆದರ್ಶದಂತೆ, ಅನುಕೂಲಸ್ಥರಾದವರು ಇಲ್ಲದವರ ನೆರವಿಗೆ ಧಾವಿಸಬೇಕಾಗಿದೆ. ಕ್ರಿಸ್‌ಮಸ್ ಹಬ್ಬದ ಆಚರಣೆ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸಹಬಾಳ್ವೆಯ ಸಂಕಲ್ಪ ಮಾಡಬೇಕು. ಇದೇ ಕ್ರಿಸ್‌ಮಸ್‌ನ ಸಂದೇಶ’ ಎಂದು ರೆವರೆಂಡ್ ಸ್ಯಾಮ್ಯುವೆಲ್ ಕ್ಯಾಲ್ವಿನ್ ಅವರು ಹೇಳಿದರು.
ನಗರದ ಐತಿಹಾಸಿಕ ಹೆಬಿಕ್ ಸ್ಮಾರಕ ಚರ್ಚ್‌ನಲ್ಲಿ ಭಾನುವಾರ ನಡೆದ ಕ್ರಿಸ್‌ಮಸ್ ಹಬ್ಬದ ವಿಶೇಷ ಪ್ರಾರ್ಥನೆ ನೆರವೇರಿಸಿ ನೆರೆದ ಭಕ್ತರನ್ನು ಉದ್ದೇಶಿಸಿ ಅವರು ಶುಭಸಂದೇಶ ನೀಡಿದರು.
‘ಹಬ್ಬದ ಸಂಭ್ರಮ ಹಾಗೂ ಸಡಗರದ ಜತೆಗೆ ಬಡವರ, ದೀನ ದಲಿತರು, ನಿರ್ಗತಿಕರು, ಅನಾರೋಗ್ಯ ಪೀಡಿತರು, ಕಷ್ಟದಲ್ಲಿರುವವರ ಕುರಿತು ಪ್ರೀತಿ ತೋರಬೇಕು. ಅವರಿಗೆ ನೆರವಾಗಬೇಕು. ಅವರ ಜೀವನ ಮಟ್ಟವನ್ನು ಸುಧಾರಣೆಗೆ ಎಲ್ಲರೂ ಕೈಜೋಡಿಸಬೇಕು. ಇದು ಯೇಸುಕ್ರಿಸ್ತ ತೋರಿದ ಹಾದಿ’ ಎಂದರು.
ರೆವರೆಂಡ್ ಎಸ್.ಎಸ್.ಸಕ್ರಿ ಅವರು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಕೋವಿಡ್‌ನ ಹೊಸ ರೂಪಾಂತರಿ ತಳಿಯು ಬರುತ್ತಿದೆ ಎಂಬ ಆತಂಕಕಾರಿ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿದೆ. ಇದರಿಂದ ಸರ್ವರನ್ನೂ ಕಾಪಾಡುವಂತೆ ದೇವರಲ್ಲಿ ಪ್ರಾರ್ಥಿಸಿದರು.
ಬಿಷಪ್ ರೈಟ್ ರೆವರೆಂಡ್ ಮಾರ್ಟಿನ್ ಬೋರ್ಗಾಯಿ ಹಬ್ಬದ ಸಂದೇಶ ನೀಡಿದರು. ಭಕ್ತರು ಕ್ರಿಸ್ತನ ಕುರಿತು ವಿಶೇಷ ಗೀತೆಗಳನ್ನು ಹಾಡಿದರು. ಕ್ಯಾರೆಲ್‌ಗಳ ಗೀತೆಗಳಿಗೂ ದನಿಗೂಡಿಸಿದರು.
ಶನಿವಾರ ರಾತ್ರಿಯಿಂದಲೇ ಚರ್ಚ್‌ನಲ್ಲಿ ಹಬ್ಬದ ಸಡಗರ ಕಳೆಕಟ್ಟಿತ್ತು. ರಾತ್ರಿ ವಿಶೇಷ ಪ್ರಾರ್ಥನೆ ನಡೆಯಿತು. ಭಾನುವಾರ ಬೆಳಿಗ್ಗೆ ಹಿರಿಯರು, ಕಿರಿಯರು ಹೊಸ ಉಡುಪು ಧರಿಸಿ ಸಂಭ್ರಮಿಸಿದರು. ಪರಸ್ಪರ ಶುಭ ಹಾರೈಸಿದರು. ಯೇಸುವನ್ನು ಧ್ಯಾನಿಸುವ ಸುಮಧುರ ಗೀತೆ ಚರ್ಚ್ ಆವರಣದಲ್ಲಿ ಅನುರಣಿಸಿತು. ನಂತರ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ಹಬ್ಬದ ಅಂಗವಾಗಿ ಕೇಕ್ ಹಂಚಲಾಯಿತು.
ಉಳಿದಂತೆ ನಗರದ ಶತಮಾನ ಕಂಡ ಆಲ್‌ಸೈಂಟ್ ಚರ್ಚ್, ಹೋಲಿಕ್ರಾಸ್ ಚರ್ಚ್ ಹಾಗೂ ನಿರ್ಮಲ ನಗರದಲ್ಲಿರುವ ಪರ್ಪೇಚ್ಯುಯಲ್ ಸಾಕರ್ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.
ಕ್ಯಾಥೋಲಿಕ್ ಹಾಗೂ ಪ್ರೊಟೆಸ್ಟೆಂಟ್ ಕ್ರೈಸ್ತ ಧರ್ಮೀಯರು ಯೇಸು ಕ್ರಿಸ್ತನ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದರು. ಚರ್ಚ್‌ನ ಕಾಯರ್‌ಗಳು ವಿಶೇಷ ಪ್ರಾರ್ಥನೆ ಗೀತೆಗಳನ್ನು ಹಾಡಿದರು. ಧರ್ಮಗುರುಗಳು ಪ್ರಾರ್ಥನೆ ಬೋಧಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.