ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಪೂರೈಕೆಯಾಗದ ನೀರು, ಸ್ಥಳೀಯರಿಂದ ರಸ್ತೆ ತಡೆದು ಪ್ರತಿಭಟನೆ

Last Updated 4 ಮೇ 2022, 16:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹದಿನೈದು ದಿನಗಳಿಂದ‌ ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಹಳೇ ಹುಬ್ಬಳ್ಳಿಯ ಚನ್ನಪೇಟೆಯ ನಿವಾಸಿಗಳು, ಬುಧವಾರ ಸುಮಾರು ಎರಡು ತಾಸು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಅವಳಿನಗರಕ್ಕೆ ನೀರು ಪೂರೈಕೆಯ ಹೊಣೆಯನ್ನುಎಲ್ ಅಂಡ್ ಟಿ ಕಂಪನಿಗೆ ಜಲಮಂಡಳಿ ಹಸ್ತಾಂತರಿಸಿದೆ. ವಿವಿಧ ಬೇಡಿಕೆ ಈಡೇರಿಕೆಗಾಗಿ ನೌಕರರು ನಡೆಸಿದ್ದ ಮುಷ್ಕರ ಅಂತ್ಯಗೊಂಡರೂ, ನೀರು ಸರಬರಾಜು ಮಾಡಿಲ್ಲ.ಇದರಿಂದಾಗಿ, ಭಾರೀ ಸಮಸ್ಯೆಯಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ನಾಲ್ಕೈದು ದಿನ ನೀರು ಬರದಿದ್ದರೆ ಹೇಗೊ ಸಹಿಸಿಕೊಳ್ಳಬಹುದು. ಆದರೆ, ಹದಿನೈದು ದಿನಗಳಿಂದ ನೀರಿಲ್ಲದೆ ಹೇಗೆ ಬದುಕು ಸಾಗಿಸಬೇಕು. ನಿತ್ಯ ಕರ್ಮಗಳಿಂದಿಡಿದು ಕುಡಿಯಲು ಸಹ ಪರದಾಡಬೇಕಾದ ಸ್ಥಿತಿ ಉದ್ಭವಿಸಿದೆ. ಪಾಲಿಕೆ ಮತ್ತು ಜಲಮಂಡಳಿಯವರು ಕಡೆ ಪಕ್ಷ ಟ್ಯಾಂಕರ್ ನೀರನ್ನು ಸಹ ನೀಡಿಲ್ಲ. ಹೀಗಾದರೆ, ನಾವೇಕೆ ಇವರಿಗೆ ತೆರಿಗೆ ಕಟ್ಟಬೇಕು ಎಂದು ಸ್ಥಳೀಯರಾದಸಿದ್ದು ಹನಿಗಿ ಆಕ್ರೋಶ ಹೊರಹಾಕಿದರು.

ಇತ್ತೀಚಿನ ವರ್ಷಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಎಲ್ಲೂ ನೀರಿನ ಅಭಾವವಿಲ್ಲ ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೇಳುತ್ತಾರೆ. ಆದರೆ, ಇಂದಿಗೂ ನಗರದ ಹಲವೆಡೆ ವಾರಕ್ಕೊಮ್ಮೆ ನೀರು ಬರುತ್ತಿದೆ. ಜಲಮಂಡಳಿಯ ಅಸಮರ್ಥತೆ ಹಾಗೂ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಇನ್ನಾದರೂ, ಎಲ್ಲಾ ಪ್ರದೇಶಗಳಿಗೂ ದಿನವಿಡೀ ನೀರು ಕೊಡಬೇಕು ಎಂದುಸಿದ್ದಪ್ಪ ಬೌಲಿ ಆಗ್ರಹಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ 63ನೇ ವಾರ್ಡ್‌ ಸದಸ್ಯೆ ರಾಧಾಬಾಯಿ ಸಫಾರೆ, ತಕ್ಷಣ ನೀರು ಪೂರೈಕೆ ಮಾಡುವುದಾಗಿ ಪ್ರತಿಭಟನಾನಿರತರಿಗೆ ಭರವಸೆ ನೀಡಿದರು. ಬಳಿಕ ಸ್ಥಳೀಯರು ಪ್ರತಿಭಟನೆ ಕೈಬಿಟ್ಟರು.

ಚನ್ನಪೇಟ ಸುತ್ತಮುತ್ತಲಿನ ನಿವಾಸಿಗಳು ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಸ್ಥಳೀಯರಾದ ಏಕನಾಥ ಪವರಾ, ಗುರುನಾಥ ಹಿಂಕರ್ ಸೇರಿದಂತೆ ಹಲವರು ಇದ್ದರು.

ಮುಷ್ಕರ ನಿಂತರೂ ಪೂರೈಕೆಯಾಗದ ನೀರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಲಮಂಡಳಿ ನೌಕರರು ನಡೆಸುತ್ತಿದ್ದ ಮುಷ್ಕರ ಅಂತ್ಯಗೊಂಡರೂ, ನಗರದ ಹಲವೆಡೆ ಕುಡಿಯುವ ನೀರು ಪೂರೈಕೆಯಲ್ಲಿ ಆಗುತ್ತಿದ್ದ ವ್ಯತ್ಯಯ ಮುಂದುವರಿದಿದೆ. ಹಳೇ ಹುಬ್ಬಳ್ಳಿಯ ಅವರಾಧಿ ಓಣಿ, ಲಕ್ಷ್ಮಿಪೇಟೆ, ಹಣಗಿ ಓಣಿ, ಚನ್ನಪೇಟೆ ಮುಖ್ಯ ರಸ್ತೆ, ಗುಡಿ ಓಣಿ, ವಿಠಲ ಓಣಿಯ ಸೇರಿದಂತೆ ವಿವಿಧೆಡೆ 12 ದಿನಗಳಾದರೂ ನೀರು ಪೂರೈಕೆಯಾಗಿಲ್ಲ.

ಇನ್ನು ದಿನದ ಇಪ್ಪತ್ತನಾಲ್ಕು ತಾಸು ನೀರು ಪೂರೈಕೆಯಾಗುವ ರಾಜನಗರ, ವಿಶ್ವೇಶ್ವರನಗರ, ಅಶೋಕನಗರ, ಗುರುದೇವನಗರ, ಶಕ್ತಿ ಕಾಲೊನಿ ಸೇರಿದಂತೆ ಹಲವೆಡೆ ಕುಡಿಯುವ ನೀರಿನ ಪೂರೈಕೆ ಮಧ್ಯಾಹ್ನದಿಂದ ನಿಂತಿದೆ. ಇದರಿಂದಾಗಿ ಜನರು, ಕುಡಿಯುವ ನೀರಿಗಾಗಿ ಕ್ಯಾನ್‌ಗಳ ಮೊರೆ ಹೋಗಬೇಕಾಯಿತು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಅಧಿಕಾರಿಗಳಿಗೆ ಕರೆ ಮಾಡಿದಾಗ, ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT