ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಧಾರವಾಡ ನೀರಿನ ತೆರಿಗೆ: ₹3.5 ಕೋಟಿ ಪೈಕಿ, ಕೇವಲ ₹15 ಲಕ್ಷ ಸಂಗ್ರಹ!

ಲಾಕ್‌ಡೌನ್: ಅವಳಿನಗರದಲ್ಲಿ ನೀರಿನ ತೆರಿಗೆ ಸಂಗ್ರಹ ತೀವ್ರ ಕುಸಿತ
Last Updated 30 ಏಪ್ರಿಲ್ 2020, 13:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿನಗರದ ನೀರು ಬಳಕೆದಾರರಿಂದ ಜಲ ಮಂಡಳಿಗೆ ಏಪ್ರಿಲ್ ತಿಂಗಳಿನಲ್ಲಿ ಸಂಗ್ರಹವಾಗಿರುವ ತೆರಿಗೆ ಮೊತ್ತ ಕೇವಲ ₹15 ಲಕ್ಷ! ಪ್ರತಿ ತಿಂಗಳು ಅಂದಾಜು ₹3.5 ಕೋಟಿ ತೆರಿಗೆ ರೂಪದಲ್ಲಿ ಮಂಡಳಿಯ ಬೊಕ್ಕಸಕ್ಕೆ ಬರುತ್ತಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಆದಾಯ ನೆಲ ಕಚ್ಚಿದೆ. ತೆರಿಗೆಯಿಂದಲೇ ಸಿಬ್ಬಂದಿ ವೇತನ ಹಾಗೂ ಇತರ ನಿರ್ವಹಣಾ ವೆಚ್ಚಗಳನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದ ಮಂಡಳಿಗೆ, ಆರ್ಥಿಕ ಸಂಕಷ್ಟ ಎದುರಾಗಿದೆ.

ಮೊಬೈಲ್‌ ಮೂಲಕ ವಿದ್ಯುತ್ ಬಿಲ್ ಪಾವತಿಗೆ ಪೂರಕವಾಗಿ ಅನೇಕ ಆ್ಯಪ್‌ಗಳಿವೆ. ಆದರೆ, ನೀರಿನ ಬಿಲ್ ಪಾವತಿಗೆ ಅಂತಹ ಆ್ಯಪ್‌ಗಳು ಇಲ್ಲ. ಇದಕ್ಕೆ ಪರಿಹಾರವಾಗಿ ಬಿಲ್ ಪಾವತಿಗೆ ಜಲ ಮಂಡಳಿ ನೀಡಿರುವ ಒಂದು ವೆಬ್‌ಸೈಟ್ ಲಿಂಕ್‌ಗೆ, ತೆರಿಗೆದಾರರಿಂದ ಅಂದುಕೊಂಡಂತಹ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ, ಬಹುತೇಕ ಮಂದಿ ನೀರಿನ ತೆರಿಗೆ ಪಾವತಿಸದೆ ಸುಮ್ಮನಾಗಿದ್ದಾರೆ.

‘ಮಂಡಳಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತೆರಿಗೆ ಸಂಗ್ರಹ ಪಾತಾಳಕ್ಕೆ ಕುಸಿದಿದೆ. ಸದ್ಯ ನೀರಿನ ಬಿಲ್ ಪಾವತಿಗೆ ಎಲ್ಲರ ಕೈಗೆಟುಕುತ್ತಿದ್ದ ‘ಕರ್ನಾಟಕ ಒನ್’ ಕೇಂದ್ರಗಳು ಮುಚ್ಚಿವೆ. ಇದರಿಂದ ತೆರಿಗೆ ಸಂಗ್ರಹಕ್ಕೆ ದೊಡ್ಡ ಹೊಡೆತ ಬಿದ್ದಿದೆ’ ಎಂದು ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಸ್. ರಾಜಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ನೀರಿನ ಬಳಕೆ ಹೆಚ್ಚಳ:

ಲಾಕ್‌ಡೌನ್‌ನಿಂದಾಗಿ ಎಲ್ಲರೂ ಮನೆಯಲ್ಲೇ ಇರುವುದರಿಂದ ನೀರಿನ ಬಳಕೆ ಪ್ರಮಾಣ ಶೇ 2ರಷ್ಟು ಹೆಚ್ಚಾಗಿದೆ. ಲಾಕ್‌ಡೌನ್‌ಗೂ ಮುಂಚೆ ಹುಬ್ಬಳ್ಳಿಯಲ್ಲಿ ನಿತ್ಯ 125 ಎಂಎಲ್‌ಡಿ ನೀರು ಬಳಕೆಯಾಗುತ್ತಿತ್ತು. ಇದೀಗ, ನೀರಿನ ಬಳಕೆ 127 ಎಂಎಲ್‌ಡಿಗೆ ಹೆಚ್ಚಾಗಿದೆ.

‘ಕೊರೊನಾ ಬರುವುದಕ್ಕೂ ಮುಂಚೆ ನಿತ್ಯ ಜನ ತಮ್ಮ ಕೆಲಸ–ಕಾರ್ಯಗಳಿಗೆ ಹೋಗುತ್ತಿದ್ದರು. ಆದರೆ, ಈಗ ಮನೆಯಲ್ಲೇ ಇದ್ದರೂ ಕೊರೊನಾದಿಂದಾಗಿ ಆಗಾಗ ಕೈ ತೊಳೆಯುವುದು ಹಾಗೂ ಸ್ನಾನ ಮಾಡುವುದು ಸಾಮಾನ್ಯವಾಗಿದೆ. ಜತೆಗೆ, ಸೆಕೆ ತೀವ್ರವಾಗಿರುವುದರಿಂದ ಕ್ರಮೇಣವಾಗಿಯೇ ನೀರಿನ ಬಳಕೆ ಹೆಚ್ಚಾಗಿದೆ. ಹಾಗಾಗಿ, ಹಿಂದಿಗಿಂತ ಶೇ 2ರಷ್ಟು ನೀರಿನ ಬಳಕೆ ಹೆಚ್ಚಾಗಿದೆ’ ಎಂದು ರಾಜಗೋಪಾಲ್ ವಿವರಿಸಿದರು.

‘ನೀರು ಪೂರೈಕೆಗೆ ಯಾವುದೇ ಕೊರತೆ ಇಲ್ಲ. ಹಾಗಾಗಿ ನಗರದ ಶೇ 40ರಷ್ಟು ಪ್ರದೇಶದ ನಳಗಳಿಗೆ ನಿತ್ಯ, ಶೇ 20ರಷ್ಟು ಪ್ರದೇಶಕ್ಕೆ 2 ದಿನಕ್ಕೊಮ್ಮೆ ಹಾಗೂ ಉಳಿದ ಶೇ 40ರಷ್ಟು ಪ್ರದೇಶಕ್ಕೆ 3 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ‌’ ಎಂದು ಹೇಳಿದರು.

ತಗ್ಗಿದ ಟ್ಯಾಂಕರ್ ನೀರು ಬಳಕೆ:

ನಳಗಳ ಮೂಲಕ ಪೂರೈಕೆಯಾಗುವ ನೀರಿನ ಬಳಕೆ ಹೆಚ್ಚಿರುವ ಬೆನ್ನಲ್ಲೇ, ನೀರಿನ ಕೊರತೆ ಇರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ಸರಬರಾಜು ಆಗುತ್ತಿದ್ದ ನೀರಿನ ಪ್ರಮಾಣ ಏಪ್ರಿಲ್‌ನಲ್ಲಿ ಇಳಿಕೆಯಾಗಿದೆ. ಮುಂಚೆ ಈ ಪ್ರದೇಶಗಳಿಗೆ ನಿತ್ಯ 75 ಟ್ಯಾಂಕರ್ (ಟ್ರಾಕ್ಟರ್ ಮತ್ತು ಲಾರಿ ಮೂಲಕ) ನೀರು ಪೂರೈಕೆಯಾಗುತ್ತಿತ್ತು. ಇದೀಗ ನಿತ್ಯ 45ರಿಂದ 50 ಟ್ಯಾಂಕರ್‌ ನೀರು ಮಾತ್ರ ಸರಬರಾಗು ಆಗುತ್ತಿದೆ.

ಬಿಲ್ ಪಾವತಿಗೆ ಲಿಂಕ್ ಕ್ಲಿಕ್ ಮಾಡಿ:

ನೀರಿನ ತೆರಿಗೆ ಪಾವತಿಸಲು ಜಲ ಮಂಡಳಿಯು ipaymyinvoice.com ಎಂಬ ವೆಬ್‌ಸೈಟ್ ಲಿಂಕ್ ನೀಡಿದೆ.

ಇದರ ಮೇಲೆ ಕ್ಲಿಕ್‌ ಮಾಡಿದರೆ, ಕರ್ನಾಟಕ ಜಲ ಮಂಡಳಿಯ ಧಾರವಾಡ, ಹುಬ್ಬಳ್ಳಿ ಹಾಗೂ ಮಂಡ್ಯ ವಿಭಾಗದ ಮೂರು ವಿಂಡೊಗಳು ಕಾಣಿಸಿಕೊಳ್ಳುತ್ತವೆ. ತೆರಿಗೆದಾರರು ತಾವು ವಾಸಿಸುತ್ತಿರುವ ನಗರಕ್ಕೆ ಅನುಗುಣವಾಗಿ ಹುಬ್ಬಳ್ಳಿ ಅಥವಾ ಧಾರವಾಡದ ಆಯ್ಕೆ ಮೇಲೆ ಕ್ಲಿಕ್ ಮಾಡಿ, ಬಿಲ್ ಸಂಖ್ಯೆಯನ್ನು ನಮೂದಿಸಿ ತೆರಿಗೆ ಪಾವತಿಸಬೇಕು.

‘ಲಾಕ್‌ಡೌನ್‌ನಿಂದಾಗಿ ಜಲ ಮಂಡಳಿ ಸಿಬ್ಬಂದಿ ಮನೆ ಮನೆಗೆ ಬಂದು ಬಿಲ್ ಪ್ರತಿ ನೀಡುವುದಿಲ್ಲ. ಹಾಗಾಗಿ, ಹಿಂದಿನ ತಿಂಗಳಿನಲ್ಲಿ ಬಂದಿದ್ದ ಬಿಲ್‌ ಮೊತ್ತವನ್ನೇ ಸದರಿ ತಿಂಗಳಿಗೂ ಅನ್ವಯಿಸಿ ಪಾವತಿಸಬೇಕು’ ಎಂದು ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಸ್. ರಾಜಗೋಪಾಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT