ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಸಾರ್ವಜನಿಕರ ಸಹಕಾರ; ವಾರಾಂತ್ಯ ಕರ್ಫ್ಯೂ ಯಶಸ್ವಿ

Last Updated 24 ಏಪ್ರಿಲ್ 2021, 12:30 IST
ಅಕ್ಷರ ಗಾತ್ರ

ಧಾರವಾಡ: ವಾರಾಂತ್ಯ ಕರ್ಫ್ಯೂಗೆ ಜನರೇ ಸಹಕಾರ ನೀಡಿದ್ದರಿಂದ ಇಡೀ ನಗರವೇ ಶನಿವಾರ ಬಿಕೋ ಎನ್ನುತ್ತಿತ್ತು.

ರಸ್ತೆಯಲ್ಲಿ ವಾಹನಗಳು ವಿರಳವಾಗಿದ್ದರು. ಬಹುತೇಕ ಅಂಗಡಿಗಳು ಬಾಗಿಲು ಹಾಕಿದ್ದವು. ಕೆಲ ಔಷಧ ಅಂಗಡಿಗಳು, ಕೆಲವು ಹೋಟೆಲುಗಳು, ಅಲ್ಲಲ್ಲಿ ಬೇಕರಿಗಳು ಕಾರ್ಯನಿರ್ವಹಿಸಿದ್ದು ಕಂಡುಬಂತು. ಉಳಿದಂತೆ ಇತರ ಅಂಗಡಿಗಳು ಬಾಗಿಲು ಹಾಕಿ ಕರ್ಫ್ಯೂವನ್ನು ವರ್ತಕರು ಬೆಂಬಲಿಸಿದರು.

ಶುಕ್ರವಾರ ಸಂಜೆಯಿಂದಲೇ ಪೊಲೀಸರು ವಾರಾಂತ್ಯ ಕರ್ಫ್ಯೂ ಜಾರಿ ಕುರಿತು ಜಾಗೃತಿ ಮೂಡಿಸಿದರು. ಶನಿವಾರ ಬೆಳಿಗ್ಗೆ ಪೊಲೀಸರು ಕಾರ್ಯಾಚರಣೆಗೆ ಇಳಿದರೂ, ಜನರೇ ಹೊರಗೆ ಬಾರದ ಕಾರಣ ಅವರೂ ತುಸು ಒತ್ತಡ ಕಡಿಮೆಯಾಗಿತ್ತು. ಹಾಲು ವಿತರಣೆ, ಹೋಟೆಲುಗಳಿಂದ ಮನೆಬಾಗಿಲಿಗೆ ಆಹಾರ ತಲುಪಿಸುವ ವ್ಯವಸ್ಥೆ ಜಾರಿಯಲ್ಲಿತ್ತು. ಮದುವೆ ನಿಗದಿಯಾಗಿದ್ದವರು, ಕುಟುಂಬದ ಆಪ್ತರ ಸಮ್ಮುಖದಲ್ಲಿ ವಿವಾಹ ಕಾರ್ಯ ನೆರವೇರಿಸಿಕೊಂಡರು.

ಸಿಬಿಟಿ, ಸುಭಾಸ ರಸ್ತೆ, ಗಾಂಧೀ ಚೌಕ ಸೇರಿದಂತೆ ನಗರದ ಮಾರುಕಟ್ಟೆ ಪ್ರದೇಶ ಸಂಪೂರ್ಣ ಸ್ತಬ್ಧಗೊಂಡಿತ್ತು. ಕೆಲ ಕಾರ್ಮಿಕರು ದುಡಿಮೆ ಇಲ್ಲದೆ, ಬಾಗಿಲು ಹಾಕಿದ ಅಂಗಡಿ ಮುಂದಿನ ಕಟ್ಟೆ ಮೇಲೆ ಮಲಗಿದ್ದು ಕಂಡುಬಂತು. ಜನರ ಓಡಾಟ ವಿರಳವಾಗಿದ್ದರಿಂದ ಅಗತ್ಯ ವಸ್ತುಗಳಿಗಾಗಿ ಮನೆಯಿಂದ ಹೊರಗೆ ಬಂದವರಿಗೆ, ಊರುಗಳಿಂದ ಬಂದವರಿಗೆ ಪೊಲೀಸರು ಹೆಚ್ಚಿನ ಕಾರಣ ಕೇಳಲಿಲ್ಲ ಹಾಗೂ ಅವರ ಮೇಲೆ ಗದರಿದ ಪ್ರಸಂಗಗಳೂ ನಡೆದ ಕುರಿತು ವರದಿಯಾಗಿಲ್ಲ.

ಧಾರ್ಮಿಕ ಕೇಂದ್ರಗಳಲ್ಲೂ ಮುಂಜಾನೆ ಸಾಂಕೇತಿಕವಾಗಿ ಪ್ರಾರ್ಥನೆ ನೆರವೇರಿಸಿ ಬಾಗಿಲು ಹಾಕಿದವು. ಹೀಗಾಗಿ ಜನರು ಎಲ್ಲಿಯೂ ಹೊರಗೆ ಹೋಗದೆ ಮನೆಯಲ್ಲೇ ದಿನ ಕಳೆದರು. ಬಸ್ ನಿಲ್ದಾಣದಲ್ಲಿ ಬಸ್ ಇತ್ತಾದರೂ, ಜನರು ಇಲ್ಲದ ಕಾರಣ ಸಂಚಾರವೂ ನಡೆಸಲಿಲ್ಲ.

‘ಶನಿವಾರ ವರನಟ ಡಾ. ರಾಜಕುಮಾರ್ ಅವರ ಜನ್ಮದಿನಾಚರಣೆಯಾದ್ದರಿಂದ ಬಹಳಷ್ಟು ಟಿವಿ ವಾಹಿನಿಗಳು ಅವರ ಚಿತ್ರಗಳನ್ನು ಪ್ರಸಾರ ಮಾಡಿದವು. ಹೀಗಾಗಿ ಅವರ ಸಾಕಷ್ಟು ಅಪರೂಪದ ಚಿತ್ರಗಳನ್ನು ಮನೆಮಂದಿಯೆಲ್ಲಾ ಕುಳಿತು ನೋಡಿ ಸಂಭ್ರಮಿಸಿದೆವು. ಸುದ್ದಿ ವಾಹಿನಿ ನೋಡಿದರೆ ಕೋವಿಡ್–19 ಸೋಂಕು ಹಬ್ಬುತ್ತಿರುವ ಬಗೆ ಮತ್ತು ಅದಕ್ಕೆ ತುತ್ತಾದವರ ಸಂಬಂಧಿಕರ ರೋಧನ ಭಯ ಹುಟ್ಟಿಸುವಂತಿತ್ತು. ಹೀಗಾಗಿ ಡಾ. ರಾಜ್‌ಕುಮಾರ್ ಅವರ ಚಿತ್ರಗಳಿಗೆ ದಿನವನ್ನು ಮೀಸಲಿಡಲಾಯಿತು’ ಎಂದು ಮುರುಘಾಮಠ ಬಳಿ ನಿವಾಸಿ ರಾಜಶೇಖರ ತಿಳಿಸಿದರು.

ವಾರಾಂತ್ಯ ಕರ್ಫ್ಯೂ ಕುರಿತು ಪ್ರತಿಕ್ರಿಯಿಸಿದ ಎಸಿಪಿ ಜಿ.ಅನುಷಾ, ‘ಸಾಕಷ್ಟು ಜಾಗೃತಿ ಮೂಡಿಸಿದ್ದರ ಪರಿಣಾಮ ವಾರಾಂತ್ಯ ಕರ್ಫ್ಯೂ ಸಂಪೂರ್ಣ ಯಶಸ್ವಿಯಾಯಿತು. ಜನರ ಸಹಕಾರವೂ ಉತ್ತಮವಾಗಿತ್ತು. ಹೀಗಾಗಿ ಎಲ್ಲಿಯೂ ಅಹಿತಕರ ಘಟನೆ ನಗರದಲ್ಲಿ ನಡೆಯಲಿಲ್ಲ’ ಎಂದರು.

ತಾಲ್ಲೂಕಿನ ಶಿಬಾರಗಟ್ಟಿ ಗ್ರಾಮದಲ್ಲಿ ನಿಗದಿಯಾಗಿದ್ದ ಮಂಜುನಾಥ ಹಾಗೂ ರಾಧಾ ಅವರ ವಿವಾಹ ಕಾರ್ಯಕ್ರಮದಲ್ಲಿ 50 ಜನರು ಮೀರದಂತೆ ಗ್ರಾಮ ಪಂಚಾಯ್ತಿ ಅಧಿಕಾರಿ ಹಾಗೂ ಸಿಬ್ಬಂದಿ ನಿಗಾ ವಹಿಸಿದರು. ಬಂದ ಅತಿಥಿಗಳಿಗೆ ಮುಂಗೈಪಟ್ಟಿಯನ್ನು ನೀಡಲಾಗಿತ್ತು.

ಉಳಿದಂತೆ ಜಿಲ್ಲೆಯ ಇತರ ಭಾಗಗಳಲ್ಲಿ ಅನಗತ್ಯವಾಗಿ ಓಡಾಡುವವರಿಗೆ ಪೊಲೀಸರು ದಂಡ ವಿಧಿಸಿ ಬಿಸಿ ಮುಟ್ಟಿಸಿದರು. ಬಾಗಿಲು ತೆರೆದಿದ್ದ ಅಂಗಡಿಗಳಿಗೂ ದಂಡ ಹಾಕಿದ ಪ್ರಕರಣಗಳು ಶನಿವಾರ ಬೆಳಿಗ್ಗೆ ಗುಡಿಗೇರಿ, ಅಣ್ಣಿಗೇರಿಯಲ್ಲಿ ಜರುಗಿತು. ಉಳಿದಂತೆ ಜಿಲ್ಲೆಯಾದ್ಯಂತ ವಾರಾಂತ್ಯ ಕರ್ಫ್ಯೂ ಯಶಸ್ವಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT