ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಜಿಲ್ಲೆಗೆ ಯಾವಾಗ ಹಾಕಿ ಟರ್ಫ್‌?

ಕ್ರೀಡಾಪಟುಗಳ ಬೇಡಿಕೆಗೆ ಸಿಗದ ಮನ್ನಣೆ, ಮಣ್ಣಿನ ಅಂಗಳದಲ್ಲಿ ಅಭ್ಯಾಸ, ಟರ್ಫ್‌ನಲ್ಲಿ ಪಂದ್ಯ!
Last Updated 8 ಆಗಸ್ಟ್ 2021, 15:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡ ನಾಲ್ಕು ದಶಕಗಳ ಬಳಿಕ ಕಂಚಿನ ಪದಕ ಗೆದ್ದಾಗ, ಮಹಿಳಾ ತಂಡ ನಾಲ್ಕನೇ ಸ್ಥಾನ ಪಡೆದಾಗ ಇಲ್ಲಿನ ‘ಹಾಕಿ ತವರು’ ಎನಿಸಿರುವ ಸೆಟ್ಲಮೆಂಟ್‌ನಲ್ಲಿ ಸಂಭ್ರಮ ಮನೆ ಮಾಡಿತ್ತು.

ವಿಶ್ವದ ದೊಡ್ಡ ಕ್ರೀಡಾಕೂಟದಲ್ಲಿ ಭಾರತದ ಸಾಧನೆ ಇಲ್ಲಿನ ಹಾಕಿ ಆಟಗಾರರು ಹಾಗೂ ಕ್ರೀಡಾಪ್ರೇಮಿಗಳಲ್ಲಿ ಹೆಮ್ಮೆಯ ಭಾವ ಮೂಡಿಸಿತ್ತು. ಜೊತೆಗೆ ನಮಗೂ ಟರ್ಫ್‌ ಮೇಲೆ ಅಭ್ಯಾಸ ಮಾಡುವ ಭಾಗ್ಯ ಯಾವಾಗ ಸಿಗುತ್ತದೆ. ನಾವೂ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಹೆಸರು ಅಚ್ಚೊತ್ತುವುದು ಯಾವಾಗ ಎನ್ನುವ ಪ್ರಶ್ನೆಯೂ ಕಾಡಿತು.

ಇಲ್ಲಿನ ಸೆಟ್ಲಮೆಂಟ್‌ ಬಡಾವಣೆಯಲ್ಲಿ ಮೊದಲಿನಿಂದಲೂ ಮನೆಗೊಬ್ಬರಂತೆ ಹಾಕಿ ಆಟಗಾರರು ಇದ್ದಾರೆ. ಪರಂಪರಾಗತವಾಗಿ ಬಂದ ಹಾಕಿ ಮೇಲಿನ ಸೆಳೆತ ಈಗಲೂ ಉಳಿದುಕೊಂಡಿದೆ. ಈ ಬಡಾವಣೆಯ‌ ವಿನಾಯಕ ಬಿಜವಾಡ, ಅಭಿಷೇಕ ಬಿಜವಾಡ, ಸೂರಜ್‌ ಬಿಜವಾಡ, ಪ್ರಜ್ವಲ್‌ ಬಿಜವಾಡ, ವಾಸು ಬಳ್ಳಾರಿ ಹೀಗೆ ಅನೇಕ ಆಟಗಾರರು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಸೆಟ್ಲಮೆಂಟ್‌ನಿಂದಲೇ ಅಂದಾಜು 25ಕ್ಕೂ ಹೆಚ್ಚು ಆಟಗಾರರು ರಾಜ್ಯಮಟ್ಟದಲ್ಲಿ ಮಿಂಚಿದ್ದಾರೆ.

ಅಂಚೆ ಇಲಾಖೆಯ ಉದ್ಯೋಗಿ ವಿನಾಯಕ ಎರಡು ದಶಕಗಳಿಂದ ಹಾಕಿಯಲ್ಲಿದ್ದಾರೆ. 2010ರಲ್ಲಿ ರಾಷ್ಟ್ರೀಯ ಜೂನಿಯರ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಕರ್ನಾಟಕ ತಂಡದಲ್ಲಿದ್ದರು. ವಿಶ್ವ ಹಾಕಿ ಸರಣಿಯಲ್ಲಿ ಕರ್ನಾಟಕ ಲಯನ್ಸ್‌ ತಂಡ ಪ್ರತಿನಿಧಿಸಿದ್ದರು. ಫಾರ್ವರ್ಡ್‌ ಆಟಗಾರ ವಿನಾಯಕ 2013ರಲ್ಲಿ ಸೀನಿಯರ್‌ ರಾಷ್ಟ್ರೀಯ ಟೂರ್ನಿ ರಂಗಸ್ವಾಮಿ ಕಪ್‌ನಲ್ಲಿ ಕರ್ನಾಟಕ ಪ್ರಶಸ್ತಿ ಗೆದ್ದಾಗ ತಂಡದಲ್ಲಿದ್ದರು.

ಸೆಟ್ಲಮೆಂಟ್‌ನ ಯಂಗ್‌ ಸ್ಟರ್ಸ್ ಹಾಕಿ ಕ್ಲಬ್‌, ಹುಬ್ಬಳ್ಳಿ ಹಾಕಿ ಅಕಾಡೆಮಿ, ವಾಸು ಸ್ಪೋರ್ಟ್ಸ್‌ ಕ್ಲಬ್‌ಗಳು ಇಲ್ಲಿ ‌‌‌ಸಕ್ರಿಯವಾಗಿವೆ. ಈ ಕ್ಲಬ್‌ಗಳು ಉತ್ತರ ಕರ್ನಾಟಕದ ಜಿಲ್ಲೆಗಳು, ನೆರೆಯ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಆಟಗಾರರನ್ನು ಆಹ್ವಾನಿಸಿ ಟೂರ್ನಿಗಳನ್ನು ಆಯೋಜಿಸುತ್ತವೆ. ಕೋವಿಡ್‌ ಕಾರಣದಿಂದಾಗಿ ಎರಡು ವರ್ಷಗಳಿಂದ ಯಾವುದೇ ಟೂರ್ನಿಗಳು ನಡೆದಿಲ್ಲ. ಅಭ್ಯಾಸವೂ ಕೂಡ ಸರಿಯಾಗಿ ಆಗಿಲ್ಲ.

ಇದೆಲ್ಲಕ್ಕಿಂತ ಹೆಚ್ಚಾಗಿ ಸ್ಥಳೀಯವಾಗಿ ಹಾಕಿ ಟರ್ಫ್‌, ಗುಣಮಟ್ಟದ ಸ್ಟಿಕ್‌, ಮೈದಾನ ಮತ್ತು ತರಬೇತುದಾರರ ಕೊರತೆ ಇಲ್ಲಿನ ಹಾಕಿ ಆಟಗಾರರನ್ನು ಕಾಡುತ್ತಿದೆ. ಇಲ್ಲಿ ಮಣ್ಣಿನ ಮೈದಾನದಲ್ಲಿ ಅಭ್ಯಾಸ ಮಾಡಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಅಭ್ಯಾಸವಿಲ್ಲದಿದ್ದರೂ ಟರ್ಫ್‌ ಮೇಲೆ ಆಡುವ ‘ಸಾಹಸ’ ಮಾಡಬೇಕಾದ ಸವಾಲು ಇಲ್ಲಿನ ಆಟಗಾರರ ಮುಂದಿದೆ.

ಆದ್ದರಿಂದ ಇಲ್ಲಿನ ಅನೇಕ ಹಾಕಿ ಆಟಗಾರರು ಬೆಂಗಳೂರು, ಮಡಿಕೇರಿಗೆ ಇನ್ನೂ ಕೆಲವರು ಹೊರ ರಾಜ್ಯಗಳಿಗೆ ವಲಸೆ ಹೋಗಿ ಅಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಒಬ್ಬರನ್ನು ನೋಡಿ ಇನ್ನೊಬ್ಬರು ದೊಡ್ಡ ಸಾಧನೆ ಮಾಡುವುದು ಅವರಿಗೆ ರಕ್ತಗತವಾಗಿಯೇ ಬಂದಿದೆ. ಸೌಲಭ್ಯಗಳ ಕೊರತೆಯಿಂದಾಗಿ ಅನೇಕ ಯುವ ಪ್ರತಿಭೆಗಳ ಕನಸು ಇಲ್ಲಿಯೇ ಕಮರಿ ಹೋಗುತ್ತಿದೆ.

‘ಜಿಲ್ಲೆಗೆ ಹಾಕಿ ಟರ್ಫ್‌ ನಿರ್ಮಿಸಿಕೊಡಬೇಕು ಎಂದು ಅನೇಕ ಬಾರಿ ಮನವಿ ಮಾಡಿದರೂ ಬೇಡಿಕೆ ಈಡೇರಿಲ್ಲ. ಹೀಗಾಗಿ ಈಗಲೂ ಮಣ್ಣಿನ ಅಂಗಳದಲ್ಲಿ ಅಭ್ಯಾಸ ಮಾಡುವುದು ಅನಿವಾರ್ಯವಾಗಿದೆ. ಒಲಿಂಪಿಕ್ಸ್‌ನಂಥ ಕಠಿಣ ಕ್ರೀಡಾಕೂಟದಲ್ಲಿ ಭಾರತ ಪ್ರಕಾಶಿಸುತ್ತಿರುವಾಗ ಸರ್ಕಾರ ತಳಮಟ್ಟದಿಂದ ರಾಷ್ಟ್ರೀಯ ಕ್ರೀಡೆಯ ಬುನಾದಿ ಗಟ್ಟಿಗೊಳಿಸುವ ಕೆಲಸ ಈಗಲಾದರೂ ಮಾಡಬೇಕು’ ಎನ್ನುತ್ತಾರೆ ವಾಸು ಸ್ಪೋರ್ಟ್ಸ್‌ ಕ್ಲಬ್‌ ಅಧ್ಯಕ್ಷ ದೇವೇಂದ್ರ ಬಳ್ಳಾರಿ.

ಹಾಕಿ ನಮಗೆ ಧರ್ಮವಿದ್ದಂತೆ, ಟರ್ಫ್‌ ಕೊರತೆಯಿಂದಾಗಿ ವೃತ್ತಿಪರ ಆಟಗಾರರನ್ನು ರೂಪಿಸುವುದು ಕಷ್ಟವಾಗುತ್ತಿದೆ. ಈಗಲಾದರೂ ಸೌಲಭ್ಯಗಳನ್ನು ಕಲ್ಪಿಸಬೇಕು.
ಬಲರಾಜ ಹಲಕುರ್ಕಿ
ಹಾಕಿ ಕರ್ನಾಟಕದ ಧಾರವಾಡ ಜಿಲ್ಲಾ ಕಾರ್ಯದರ್ಶಿ

ಟರ್ಫ್‌ ಕೊರತೆ ಕಾರಣ ಸ್ಥಳೀಯವಾಗಿಯೇ ಇದ್ದರೆ ಆಟಗಾರರಿಗೆ ಉತ್ತಮ ಭವಿಷ್ಯವಿಲ್ಲ. ಟರ್ಫ್‌ ನಿರ್ಮಾಣದ ಕೆಲಸ ತುರ್ತಾಗಿ ಆಗಬೇಕಾಗಿದೆ.
ಚಂದ್ರಶೇಖರ ಗೋಕಾಕ
ಯಂಗ್‌ ಸ್ಟರ್ಸ್‌ ಸ್ಪೋರ್ಟ್ಸ್‌ ಕ್ಲಬ್‌ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT