ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ನಿಷೇಧ ಪ್ರಮುಖರೊಂದಿಗೆ ಚರ್ಚಿಸಿ ಸರ್ಕಾರಕ್ಕೆ ವರದಿ: ಅರವಿಂದ ಬೆಲ್ಲದ

Last Updated 13 ಮೇ 2020, 13:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮದ್ಯವನ್ನು ನಿಷೇಧಿಸಬೇಕೆಂಬ ಅಭಿಪ್ರಾಯಕ್ಕೆ ಈಗಲೂ ಬದ್ಧನಾಗಿದ್ದೇನೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರಮುಖರೊಂದಿಗೆ ಚರ್ಚಿಸಿ, ಮುಂದೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಶಾಸಕ ಹಾಗೂ ಹುಬ್ಬಳ್ಳಿ–ಧಾರವಾಡ ಮಹಾನಗರ ಬಿಜೆಪಿ ಘಟಕದ ಅಧ್ಯಕ್ಷ ಅರವಿಂದ ಬೆಲ್ಲದ ಹೇಳಿದರು.

‘ಈ ಸಂಬಂಧ ಈಗಗಾಲೇ ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ಸಿರಿಗೆರೆ ಶ್ರೀಗಳು, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಸೇರಿದಂತೆ ಹಲವರ ಜತೆ ಚರ್ಚಿಸಿದ್ದೇನೆ. ಮದ್ಯವನ್ನು ಕೇವಲ ರಾಜ್ಯಮಟ್ಟದಲ್ಲಷ್ಟೇ ಅಲ್ಲದೆ, ರಾಷ್ಟ್ರಮಟ್ಟದಲ್ಲೂ ನಿಷೇಧಿಸಬೇಕಾದ ಅಗತ್ಯವಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮದ್ಯವು ರಾಜ್ಯದ ಪ್ರಮುಖ ಆದಾಯ ಮೂಲವಾಗಿರುವುದರಿಂದ, ನಿಷೇಧಿಸಲು ಸರ್ಕಾರ ಹಿಂಜರಿಯುತ್ತಿದೆ. ಹಾಗಾಗಿ, ನಿಷೇದಕ್ಕೂ ಮುಂಚೆ, ಅದಕ್ಕೆ ಪರ್ಯಾಯ ಆರ್ಥಿಕ ಮಾರ್ಗವನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ. ಆದ್ದರಿಂದ, ಇದೇ ಮೇ 15ಕ್ಕೆ ಹುಬ್ಬಳ್ಳಿಯಲ್ಲಿ ಕೆಲ ತಜ್ಞರ ಜತೆ ಸಭೆ ನಡೆಸಿ ಚರ್ಚಿಸಲಾಗುವುದು’ ಎಂದರು.

‘ಮಧ್ಯ ನಿಷೇಧಿಸಬೇಕು ಎಂದು ಪಕ್ಷದ ಅಧ್ಯಕ್ಷರಾದ ನಳೀನ್‌ಕುಮಾರ್ ಕಟೀಲ್ ಅವರಿಗೆ ತಿಳಿಸಿಯೇ, ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಅದಕ್ಕೆ ಎಲ್ಲರೂ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ದೊಡ್ಡ ಮಟ್ಟದಲ್ಲಿ ಜನಾಭಿಪ್ರಾಯ ಮೂಡಿ, ಮದ್ಯ ನಿಷೇಧದ ಆಗ್ರಹವು ಆಂದೋಲನದ ರೂಪ ಪಡೆದುಕೊಳ್ಳಬೇಕಿದೆ. ಇದಕ್ಕೆ ಸಾಕಷ್ಟು ಸಮಯವೂ ಬೇಕು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಧಾರವಾಡ ಗ್ರಾಮಾಂತರ ಬಿಜೆಪಿ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ, ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ಪಶ್ಚಿಮ ಕ್ಷೇತ್ರದ ಅಧ್ಯಕ್ಷ ಬಸವರಾಜ ಗರಗ, ಮುಖಂಡರಾದ ಹನುಮಂತಪ್ಪ ದೊಡ್ಡಮನಿ, ಸತೀಶ ಹಾನಗಲ್ಲ ಹಾಗೂ ರಾಮಣ್ಣ ಬಡಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT