ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಅಂಗವಿಕಲರ ದಿನ | ನಾವೂ ಮನುಷ್ಯರು...

Published 2 ಡಿಸೆಂಬರ್ 2023, 23:30 IST
Last Updated 2 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ
ಡಿಸೆಂಬರ್‌ 3 ವಿಶ್ವ ಅಂಗವಿಕಲರ ದಿನ. ಧಾರವಾಡದ ಪೆಟ್ರೋಲ್‌ ಬಂಕ್‌ನಲ್ಲಿ ಶ್ರವಣ–ನುಡಿ ಎರಡೂ ಶಕ್ತಿ ಕಳೆದುಕೊಂಡವರು ಗನ್‌ ಹಿಡಿದು ನಿಂತು ವ್ಯವಹರಿಸುವ ಚಾತುರ್ಯ, ಕಾಲಿಲ್ಲದಿದ್ದರೂ ಕೈಗಳಿಂದ ಟೀ ಮಾರುತ್ತಾ ಬಣ್ಣ ಬಳಿಯುವ ಹುಬ್ಬಳ್ಳಿಯ ಸಾಧಕ, ವೀಲ್‌ಚೇರ್‌ನಲ್ಲಿ ಕುಳಿತೇ ಕೆಲಸ ಮಾಡುವ ಬಾಗಲಕೋಟೆಯ ಕಾಲ್‌ ಸೆಂಟರ್‌ ಉದ್ಯೋಗಿ ಶಾರದಾ ಇವರೆಲ್ಲರ ಬದುಕಿನ ಕಥೆಗಳು ನಿಮಗಾಗಿ...

‘ಏನನ್ನೂ ಮಾಡಲಾಗದವರು’ ಎಂದು ಅನುಕಂಪದಿಂದ ನೋಡುವ ಬದಲು ಒಮ್ಮೆ ಅವಕಾಶ ಕೊಡಿ. ‘ಕೈಯಿಲ್ಲ, ಕಾಲಿಲ್ಲ’ ಎಂದು ಹೀಯಾಳಿಸುವ ಬದಲು ಸ್ವಾವಲಂಬಿಗಳಾಗಿ ಬದುಕಲು ಬಿಡಿ. ನಮ್ಮ ದೇಹಕ್ಕೆ ವೈಕಲ್ಯವಿದೆಯೇ ಹೊರತು ಮನಸ್ಸಿಗಲ್ಲ. ನಾವೂ ಮನುಷ್ಯರು. ಬದುಕುತ್ತೀವಿ. ನಮ್ಮಲ್ಲೂ ಛಲ, ಪ್ರತಿಭೆ ಇದೆ’.

ಈ ಮಾತು ರಾಯಚೂರಿನ ಮಹಾಂತೇಶ ನಿರಲಗಿ ಅವರೊಬ್ಬರದ್ದೇ ಅಲ್ಲ, ಅವರಂತೆಯೇ ಸಣ್ಣಪುಟ್ಟ ಕೆಲಸ ಗಳಿಸಿ ಬದುಕು ಕಟ್ಟಿಕೊಂಡವರ ಅಂತರಾಳದ ದನಿ. ಅಪಘಾತದಲ್ಲಿ ಕೈಕಾಲು ಕಳೆದುಕೊಂಡು, ಚಿಕ್ಕವಯಸ್ಸಿನಲ್ಲಿ ದೃಷ್ಟಿ ಹೋಗಿ, ಗುಡುಗು ಅಬ್ಬರಿಸಿದರೂ ಕೇಳದ ಸ್ಥಿತಿಯಲ್ಲಿರುವವರ ಅನಿಸಿಕೆಯೂ ಇದೇ ಆಗಿದೆ.

ವೈದ್ಯರೊಬ್ಬರ ಎಡವಟ್ಟಿನಿಂದ ಬಾಲ್ಯಾವಸ್ಥೆಯಲ್ಲೇ ಎರಡೂ ಕಣ್ಣುಗಳನ್ನು ಕಳೆದುಕೊಂಡ ಮಹಾಂತೇಶ ನಿರಲಗಿ 13ನೇ ವಯಸ್ಸಿನವರೆಗೆ ಶಾಲೆಯತ್ತ ಮುಖ ಮಾಡಲಿಲ್ಲ.ಆಮೇಲೆ ಅಂಧರ ಶಾಲೆಗೆ ಸೇರಿಕೊಂಡ ಅವರು, ಪದವಿವರೆಗೂ ಓದಿದರು. ಕೌಶಲ ತರಬೇತಿ ಪಡೆದು, ಕೆಲಸವನ್ನೂ ಹುಡುಕಿಕೊಂಡರು. ತಂತ್ರಜ್ಞಾನದ ನೆರವಿನಿಂದ ಈಗ ಅವರದ್ದು ಚೆಂದದ ಬಾಳ್ವೆ.

ಧಾರವಾಡದ ಟೋಲ್ ನಾಕಾ ಬಳಿಯಿರುವ ಶೆಲ್ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುವ ಮಧುಸೂದನ, ವಿನಾಯಕ, ಮಲ್ಲಿಕಾರ್ಜುನ, ಅನಿತಾ, ನಿಖಿತಾ ಮತ್ತು ಸವಿತಾ ಅವರ ಕಥೆ ಇನ್ನೂ ಆಸಕ್ತಿಕರ. ಈ ಆರೂ ಜನರಿಗೆ ದೃಷ್ಟಿ ಇದೆ; ಕಿವಿ ಕೇಳಿಸಲ್ಲ, ಮಾತು ಬರಲ್ಲ. ಶಿಸ್ತು ಮತ್ತು ಬದ್ಧತೆ ವಿಷಯದಲ್ಲಿ ಈ ಆರೂ ಜನರು ತಮಗೆ ತಾವೇ ಸಾಟಿ. ಚಳಿ, ಮಳೆ, ಬಿಸಿಲು ಏನೇ ಇರಲಿ, ಸ್ವಲ್ಪವೂ ತಡ ಮಾಡದೇ ಪೆಟ್ರೋಲ್‌ ಬಂಕ್‌ನಲ್ಲಿ ಹಾಜರಿರುತ್ತಾರೆ. ಕೈಸೆನ್ನೆ, ಮುಖಭಾವದಲ್ಲೇ ಸಂವಹನ ನಡೆಸಿ, ಗ್ರಾಹಕರ ವಿಶ್ವಾಸ ಗಳಿಸುತ್ತಾರೆ.

ಧಾರವಾಡದ ಕಾಲ್ ಸೆಂಟರ್‌ವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗವಿಕಲರು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಧಾರವಾಡದ ಕಾಲ್ ಸೆಂಟರ್‌ವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗವಿಕಲರು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಪೆಟ್ರೋಲ್, ಡೀಸೆಲ್ ಮತ್ತು ದರದ ಬಗ್ಗೆ ಗ್ರಾಹಕರು ಕೇಳುವುದೇ ಬೇಡ, ಕೊರಳಿಗೆ ಹಾಕಿಕೊಂಡಿರುವ ದರಪಟ್ಟಿ ತೋರಿಸಿ ಪಟಪಟನೆಮುಂದಿನ ಕೆಲಸ ಮಾಡುತ್ತಾರೆ. ‘ಡಿಜಿಟಲ್‌ ಪೇಮೆಂಟ್ ಕೂಡ ಮಾಡಬಹುದು’ ಎಂದು ಕಣ್ಣುಸನ್ನೆಯಲ್ಲೇ ತಿಳಿಸುತ್ತಾರೆ.

‘ಬೆಳಗಾವಿ, ಹಾವೇರಿ, ಧಾರವಾಡ, ಹುಬ್ಬಳ್ಳಿಯವರಾದ ಈ ಆರೂ ಜನರು ಕಲಿತಿದ್ದು ಎಸ್ಸೆಸ್ಸೆಲ್ಸಿಯಷ್ಟೆ. ಕೌಶಲ ತರಬೇತಿ ಮತ್ತು ಅವರೊಳಗಿನ ಆಸಕ್ತಿ, ಚತುರತೆ ಬದುಕನ್ನು ಸುಗಮಗೊಳಿಸಿದೆ. ಅವರ ಬಗ್ಗೆ ಕೆಲ ಗ್ರಾಹಕರು ವಿನಾಕಾರಣ ತಕರಾರು ಮಾಡಿದರೆ, ಇನ್ನೂ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅಂಗವಿಕಲರೆಂದು ನಿರ್ಲಕ್ಷಿಸುವುದು ಸರಿಯಲ್ಲ. ಅವರಲ್ಲಿನ ಸಾಮರ್ಥ್ಯ ಗುರುತಿಸಿ ಕೆಲಸ ನೀಡಿದರೆ ಖಂಡಿತ ಅವರು ಮಾಡುತ್ತಾರೆ. ಇತರರಿಗಿಂತ ಅವರು ಹೆಚ್ಚು ಪ್ರಾಮಾಣಿಕರು. ಕೆಲಸ ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ನಿಸ್ಸೀಮರು’ ಎಂದು ಶೆಲ್‌ ಪೆಟ್ರೋಲ್‌ ಬಂಕ್‌ ವ್ಯವಸ್ಥಾಪಕ ಅಭಿಜಿತ್‌ ಅಷ್ಠಾಪುರೆ ಶ್ಲಾಘಿಸುತ್ತಾ ಭಾವುಕರಾದರು.

ಇಲ್ಲಿ ವಾಹನಗಳಿಗೆ ಪೆಟ್ರೋಲ್‌ ಹಾಕಿಸಿಕೊಳ್ಳುವವರು ಕೈಕುಲುಕಿ, ಅಭಿನಂದಿಸುತ್ತಾರೆ. ಅಂಥವರಲ್ಲಿ ಒಬ್ಬರಾದ ಹುಬ್ಬಳ್ಳಿಯ ಹರ್ಷಾ ಜೆ.ಎಂ. ಅವರು ಪ್ರತಿ ಸಲ ಇಲ್ಲಿ ಬಂದಾಗ, ಎರಡು ನಿಮಿಷ ಸಂವಾದ ನಡೆಸಿ ಮುಂದೆ ಪ್ರಯಾಣ ಬೆಳೆಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ‘ದೈಹಿಕವಾಗಿ ಎಲ್ಲವನ್ನೂ ಹೊಂದಿದ್ದರೂ ಸೋಂಬೇರಿಗಳಿಗಿಂತ ನಿಮ್ಮಂತಹ ವ್ಯಕ್ತಿಗಳೇ ನಮಗೆಲ್ಲರಿಗೂ ಪ್ರೇರಣೆ’ ಎಂದು ಅವರು ಅದೆಷ್ಟು ಸಲ ಅವರು ಬೆನ್ನುತಟ್ಟಿದ್ದಾರೋ.

ಹುಬ್ಬಳ್ಳಿಯ ರಾಜನಗರದ ಬಳಿ ಟೀ ಮಾರುತ್ತಿರುವ ಅಂಗವಿಕಲ ಬಸವರಾಜ ಐಹೊಳೆ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಹುಬ್ಬಳ್ಳಿಯ ರಾಜನಗರದ ಬಳಿ ಟೀ ಮಾರುತ್ತಿರುವ ಅಂಗವಿಕಲ ಬಸವರಾಜ ಐಹೊಳೆ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಪೋಲಿಯೊದಿಂದಾಗಿ ಎರಡು ಕಾಲು ಕಳೆದುಕೊಂಡರೂ ಆತ್ಮವಿಶ್ವಾಸ ಕಳೆದುಕೊಳ್ಳದ ಬಾಗಲಕೋಟೆಯ ಶಾರದಾ ಬಾದಾಮಿ ಅವರಿಗೆ ಗಾಲಿಕುರ್ಚಿ ಆಸರೆಯಾಗಿದೆ. ಕಾಲ್‌ ಸೆಂಟರ್‌ನಲ್ಲಿ ಉದ್ಯೋಗಿ ಆಗಿರುವ ಅವರು ಮನೆ ನಿರ್ವಹಣೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.

‘ದೈಹಿಕವಾಗಿ ಸರಿಯಾಗಿದ್ದ ಮಾತ್ರಕ್ಕೆ ಅವರು ಸಮರ್ಥರು, ಅಂಗವಿಕಲರು ಅಸಮರ್ಥರು ಎಂಬ ಭಾವನೆ ಹಲವರಲ್ಲಿದೆ. ಇದರಿಂದ ಪ್ರತಿಭಾವಂತ ಅಂಗವಿಕಲರಿಗೆ ಉದ್ಯೋಗ ಸಿಗುತ್ತಿಲ್ಲ. ಶಿಕ್ಷಣ ಮುಗಿಸಿ ಹಲವು ಸಂದರ್ಶನಗಳನ್ನು ನೀಡಿದರೂ ಅಂಗವಿಕಲೆ ಎಂಬ ಕಾರಣಕ್ಕೆ ನನಗೆ ಉದ್ಯೋಗ ಸಿಗಲಿಲ್ಲ. ಈ ಭಾವನೆಯಿಂದ ಹೊರಬೇಕಾದದ್ದು ಮುಖ್ಯ’ ಎಂದು ಸಿವಿಲ್‌ ಎಂಜಿನಿಯರಿಂಗ್ ಮುಗಿಸಿರುವ ದಾವಣಗೆರೆಯ ಪುಷ್ಪಲತಾ ಎಸ್‌. ಗಂಟಲು ಉಬ್ಬಿಸಿಕೊಳ್ಳುತ್ತಾರೆ.

ಕಣ್ಣು ಕಾಣಿಸದಿದ್ದರೂ ಗಾರ್ಮೆಂಟ್ಸ್‌ನಲ್ಲಿ ಶರ್ಟ್‌ಗಳಿಗೆ ಬಟನ್‌ ಹಾಕುವ ಮಂಡ್ಯದ ಶಶಿಕಲಾ, ಮುಂಗೈ ಇರದಿದ್ದರೂ ಮಾಲ್‌ವೊಂದರ ಬಿಲ್‌ ಕೌಂಟರ್‌ನಲ್ಲಿ ಕೆಲಸ ಮಾಡುವ ಶಶಿ, ಅಂಗವೈಕಲ್ಯದ ಮಧ್ಯೆಯೂ ಕೆಲಸ ಮಾಡುವ ಮಲ್ಲಿಕಾರ್ಜುನ ಗೌಡರ್, ಕಾಲು ನೋವಿದ್ದರೂ ದೈಹಿಕ ಶ್ರಮ ಪಡುತ್ತಾ ಪೆಪ್ಸಿ ಕಂಪನಿಯಲ್ಲಿ ಕೆಲಸ ಮಾಡುವ ಹತ್ತಾರು ಹುಡುಗರು, ಅಂಗವಿಕಲರಾಗಿದ್ದರೂ ದೈಹಿಕ ಸಮಸ್ಯೆ ಇರುವ ನೂರಾರು ಮಂದಿಯ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸದಲ್ಲಿ ನಿರತರಾದ ಸವದತ್ತಿಯ ವಿಠ್ಠಲ ಜಾಧವ, ಬೈಲಹೊಂಗಲದ ಶಿವಣ್ಣ...ಹೀಗೆ ಸಾಧಕರ ಪಟ್ಟಿ ಉದ್ದವಾಗುತ್ತದೆ. ಹಾಗೆಯೇ ಅವರ ಆಸಕ್ತಿದಾಯಕ ಕಥೆಗಳ ಗುಚ್ಛ ದೊಡ್ಡದಾಗುತ್ತಲೇ ಹೋಗುತ್ತದೆ.

ಅಂಗವಿಕಲರಿಗೆ ಆಧಾರ ‘ಸಮರ್ಥನಂ’

ಧಾರವಾಡದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಧಾರವಾಡದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಮೂವರು ದೃಷ್ಟಿದೋಷವುಳ್ಳ ಸ್ನೇಹಿತರಾದ ಧಾರವಾಡದ ಉದಯಕುಮಾರ್ ಬೆಳಗಾವಿಯ ಮಹಾಂತೇಶ ಜಿ.ಕೆ. ಮತ್ತು ಎಸ್‌.ಪಿ.ನಾಗೇಶ್‌ ಅವರು ಅಂಗವಿಕಲರಿಗೆ ನೆರವಾಗಲು 1997ರಲ್ಲಿ ಬೆಂಗಳೂರಿನಲ್ಲಿ ‘ಸಮರ್ಥನಂ ಅಂಗವಿಕಲರ ಸಂಸ್ಥೆ’  ಆರಂಭಿಸಿದರು. ಎಲ್‌ಕೆಜಿಯಿಂದ ಹಾಗೂ ಉಳಿದ ಶಾಖೆಗಳಲ್ಲಿ ಎಸ್ಸೆಸ್ಸೆಲ್ಸಿ ನಂತರ ಅವರು ಬಯಸುವ ಪದವಿವರೆಗೆ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಮಾರ್ಗದರ್ಶನ ನೀಡುತ್ತಾರೆ. ಹತ್ತಕ್ಕೂ ಹೆಚ್ಚು ಅಂಗವಿಕಲರು ಸರ್ಕಾರಿ ಕಚೇರಿಗಳಲ್ಲಿ ಪ್ರಥಮ ದ್ವಿತೀಯ ದರ್ಜೆಯ ಸಹಾಯಕರಾಗಿದ್ದಾರೆ. ಹಲವರು ಖಾಸಗಿ ಉದ್ಯೋಗಗಳನ್ನು ಪಡೆದಿದ್ದಾರೆ. ‘ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ಅಂಗವಿಕಲರನ್ನು ಗುರುತಿಸಿ ಉಚಿತ ಶಿಕ್ಷಣದ ಜೊತೆಗೆ ಮೂರು ತಿಂಗಳು ಕಂಪ್ಯೂಟರ್‌ ಸಂವಹನ ಸೇರಿ ವಿವಿಧ ಕೌಶಲ ತರಬೇತಿ ನೀಡಿ ಉದ್ಯೋಗ ಮೇಳ ಆಯೋಜಿಸಿ ಕೆಲಸ ನೀಡುತ್ತೇವೆ. ಉದ್ಯೋಗ ಸಿಕ್ಕ ನಂತರವೂ ಮೂರು ತಿಂಗಳು ಉಚಿತ ವಸತಿ ವ್ಯವಸ್ಥೆ ಮಾಡುತ್ತೇವೆ. ಅವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವವರೆಗೆ ನೆರವಾಗುತ್ತೇವೆ’– ‘ಸಮರ್ಥನಂ‘ ಧಾರವಾಡ ಶಾಖೆಯ ತರಬೇತುದಾರ ಹರ್ಷಾ ಸರಾಫ್‌ ಹೀಗೆ ಹೇಳುವಾಗ ಹೆಮ್ಮೆ ಇತ್ತು. ಈ ಸಂಸ್ಥೆಯಲ್ಲಿ ತರಬೇತಿ ಪಡೆದ ಅಂಗವಿಕಲರು ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಇದ್ದಾರೆ ಎಂದು ಮಾತು ಸೇರಿಸಿದವರು ಸಂಸ್ಥೆಯ ಸ್ಥಾಪಕರೊಬ್ಬರಾದ ಮಹಾಂತೇಶ ಜಿ.ಕೆ. 2030ರ ಹೊತ್ತಿಗೆ 10 ಲಕ್ಷ ಅಂಗವಿಕಲರ ಬದುಕಿಗೆ ಬೆಳಕು ಕಾಣಿಸುವ ಗುರಿಯನ್ನು ಹೊರಹಾಕಿದವರು ಮತ್ತೊಬ್ಬ ಸ್ಥಾಪಕ ಉದಯಕುಮಾರ್. ಬೆಂಗಳೂರು ಬೆಳಗಾವಿ ಧಾರವಾಡ ಬಳ್ಳಾರಿ ಹೈದರಾಬಾದ್‌ ಪುಣೆ ಗುಂಟುರು ಅನಂತಪುರಂ ದೆಹಲಿ ಮುಂಬೈ ಚೆನ್ನೈ ಕೊಚಿ ಹಾಗೂ ಯುಕೆಯಲ್ಲಿ ಸಮರ್ಥನಂ ಶಾಖೆಗಳಿವೆ. ಆಸಕ್ತ ಅಂಗವಿಕಲರು ಬುದ್ಧಿಮಾಂದ್ಯ ಮಕ್ಕಳು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 080–68333999/ 25729922/ 25721444.

ಕಾಲಿಲ್ಲದ ಕಲಾವಿದ ಬಸವರಾಜ ಐಹೊಳೆ

ಹುಬ್ಬಳ್ಳಿಯ ರಸ್ತೆ ಬದಿಯ ಗೋಡೆ ಮೇಲೆ ಪರಿಸರ ಜಾಗೃತಿ ಚಿತ್ರ ಬಿಡಿಸಿದ ಅಂಗವಿಕಲ ಕಲಾವಿದ ಬಸವರಾಜ ಐಹೊಳೆ

ಹುಬ್ಬಳ್ಳಿಯ ರಸ್ತೆ ಬದಿಯ ಗೋಡೆ ಮೇಲೆ ಪರಿಸರ ಜಾಗೃತಿ ಚಿತ್ರ ಬಿಡಿಸಿದ ಅಂಗವಿಕಲ ಕಲಾವಿದ ಬಸವರಾಜ ಐಹೊಳೆ

‘ಕಾಲಿಲ್ಲದಿದ್ದರೆ ಏನಂತೆ ಚಿತ್ರ ಬಿಡಿಸಲು ಬಣ್ಣ ಬಳಿಯಲು ಕೈಗಳಿವೆ. ಅದೇ ಕೈಗಳಿಂದ ಸಂಜೆ ಟೀ ಮಾಡಿ ಮಾರಿ ಹಣ ಕೂಡ ಗಳಿಸುತ್ತೇನೆ. ಆಗಾಗ ಅವಕಾಶ ಸಿಕ್ಕಾಗ ಅಭಿನಯ ಮಾಡುತ್ತೇನೆ...’ ಎನ್ನುವ ಬಸವರಾಜ ಅವರ ವ್ಯಕ್ತಿತ್ವ ಬೆರಗು ಮೂಡಿಸುತ್ತದೆ. ಹುಬ್ಬಳ್ಳಿಯ ನಿವಾಸಿ ಬಸವರಾಜ ಐಹೊಳೆ ಹುಟ್ಟುವಾಗಲೇ ಕಾಲನ್ನು ಕಳೆದುಕೊಂಡವರು. ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಅವರು ಇಂದು ‘ಕಲಾವಿದ’. ಎಲ್ಲ ರೀತಿಯ ಚಿತ್ರಗಳನ್ನು ಸುಂದರವಾಗಿ ಆಕರ್ಷಕವಾಗಿ ಬಿಡಿಸುವ ಅವರು ‘ಯುವರತ್ನ’ ಮತ್ತು ‘ವಿಜಯಾನಂದ’ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಐಟಿಐ ಮುಗಿಸಿರುವ ಅವರು ಸ್ವಂತ ಟೀ ಶಾಪ್‌ ಹೊಂದಿದ್ದು ಅದರ ಮೂಲಕ ಸ್ವಾವಲಂಬಿ ಜೀವನ ನಡೆಸಿದ್ದಾರೆ. ಶಾಲೆ–ಕಾಲೇಜುಗಳಿಗೆ ಉಚಿತವಾಗಿ ಚಿತ್ರಗಳನ್ನು ಬಿಡಿಸಿಕೊಡುತ್ತಾರೆ. ಹುಬ್ಬಳ್ಳಿಯಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ‘ರೆವಲ್ಯೂಷನ್‌ ಮೈಂಡ್ಸ್‌’ ತಂಡದ ಜೊತೆಗೂಡಿ ರಸ್ತೆ ಬದಿ ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸುತ್ತಾರೆ. ‘ಕುಟುಂಬದವರ ಕಾಳಜಿ ಹಾಗೂ ಬೆಂಬಲವೇ ನನಗೆ ಆಸೆಯಾಗಿದೆ. ಬೇಸರ ಖಿನ್ನತೆ ಚಿಂತೆ ಇಲ್ಲ. ಎಲ್ಲವನ್ನೂ ನಿಭಾಯಿಸಿಕೊಂಡು ಇದ್ದುದ್ದರಲ್ಲೇ ಸಂತೃಪ್ತಿಯಿಂದ ಬದುಕುತ್ತಿರುವೆ’ ಎನ್ನುತ್ತಾರೆ ಬಸವರಾಜ ಐಹೊಳೆ.

ಧಾರವಾಡದ ಟೋಲ್ ನಾಕಾ ಬಳಿಯಿರುವ ಶೆಲ್‌ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುವ ಮಾತು ಬಾರದ ಹಾಗೂ ಕಿವಿ ಕೇಳದ ಯುವಕ ಯುವತಿಯರು 
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಧಾರವಾಡದ ಟೋಲ್ ನಾಕಾ ಬಳಿಯಿರುವ ಶೆಲ್‌ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುವ ಮಾತು ಬಾರದ ಹಾಗೂ ಕಿವಿ ಕೇಳದ ಯುವಕ ಯುವತಿಯರು  ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಧಾರವಾಡದ ಟೋಲ್ ನಾಕಾ ಬಳಿಯಿರುವ ಶೆಲ್‌ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುವ ಮಾತುಬಾರದ ಹಾಗೂ ಕಿವಿ ಕೇಳದ ಯುವಕ ಯುವತಿಯರು
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಧಾರವಾಡದ ಟೋಲ್ ನಾಕಾ ಬಳಿಯಿರುವ ಶೆಲ್‌ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುವ ಮಾತುಬಾರದ ಹಾಗೂ ಕಿವಿ ಕೇಳದ ಯುವಕ ಯುವತಿಯರು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಶಾಪಿಂಗ್‌ ಮಾಲ್‌ವೊಂದರಲ್ಲಿ ಕೆಲಸ ಮಾಡುವ ಮಲ್ಲಿಕಾರ್ಜುನ್ ಗೌಡರ
ಶಾಪಿಂಗ್‌ ಮಾಲ್‌ವೊಂದರಲ್ಲಿ ಕೆಲಸ ಮಾಡುವ ಮಲ್ಲಿಕಾರ್ಜುನ್ ಗೌಡರ
ಸ್ಕೂಟಿ ಮೇಲೆ ಟೀ ಕೊಂಡೊಯ್ಯುವ  ಅಂಗವಿಕಲ ಬಸವರಾಜ ಐಹೊಳೆ
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಸ್ಕೂಟಿ ಮೇಲೆ ಟೀ ಕೊಂಡೊಯ್ಯುವ  ಅಂಗವಿಕಲ ಬಸವರಾಜ ಐಹೊಳೆ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ರಾಜನಗರದ ಬಳಿ ಟೀ ಮಾರುತ್ತಿರುವ ಅಂಗವಿಕಲ ಬಸವರಾಜ ಐಹೊಳೆ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಹುಬ್ಬಳ್ಳಿಯ ರಾಜನಗರದ ಬಳಿ ಟೀ ಮಾರುತ್ತಿರುವ ಅಂಗವಿಕಲ ಬಸವರಾಜ ಐಹೊಳೆ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT