ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಅಕ್ಕಿ ಎಲ್ಲಿಂದ ಬರುತ್ತದೆ ಎಂದು ಗೊತ್ತಿಲ್ಲ: ಪರಿಸರವಾದಿ ವಿಜಯ ನಿಶಾಂತ

ವಿಶ್ವ ಪರಿಸರ, ವಿಶ್ವ ಜಲದಿನ ಕಾರ್ಯಕ್ರಮ
Published 22 ಮಾರ್ಚ್ 2024, 8:01 IST
Last Updated 22 ಮಾರ್ಚ್ 2024, 8:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ನಗರ ಪ್ರದೇಶದ ಮಕ್ಕಳಿಗೆ ಒಂದೇ ಒಂದು ಮರದ ಹೆಸರು ಗೊತ್ತಿಲ್ಲ. ಅಕ್ಕಿ ಎಲ್ಲಿಂದ ಬರುತ್ತದೆ ಎಂದು ಸಹ ಗೊತ್ತಿಲ್ಲ. ಈ ನಿಟ್ಟಿನಲ್ಲಿ ನಾವು ನಗರ ಪ್ರದೇಶದ ಮಕ್ಕಳಿಗೆ ಪರಿಸರ ಮತ್ತು ಅರಣ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ತುರ್ತಾಗಿ ಮಾಡಬೇಕಿದೆ' ಎಂದು ಟ್ರೀ ಡಾಕ್ಟರ್ ಖ್ಯಾತಿಯ ಪರಿಸರವಾದಿ ವಿಜಯ ನಿಶಾಂತ ಹೇಳಿದರು.

ಗ್ರೀನ್ ಕರ್ನಾಟಕ ಅಸೋಷಿಯೇಷನ್, ವಸುಂಧರಾ ಫೌಂಡೇಷನ್ ಮತ್ತು ವಿ-ಕೇರ್ ಫೌಂಡೇಷನ್ ವತಿಯಿಂದ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ವಿಶ್ವ ಜಲದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಬೆಂಗಳೂರಿನಲ್ಲಿ ಅಭಿವೃದ್ಧಿ ಎಂದರೆ ಮರ ಕಡಿಯುವುದು, ಕೆರೆಗಳನ್ನು ಮುಚ್ಚುವುದು ಎನ್ನುವಂತಾಗಿತ್ತು. ಕೆಲ ವರ್ಷಗಳಿಂದ ಅದಕ್ಕೆ ಕಡಿವಾಣ ಹಾಕಿ, ಗಿಡ-ಮರಗಳನ್ನು ಬೆಳೆಸಲು ಉತ್ತೇಜಿಸಲಾಗುತ್ತಿದೆ. ಸ್ಥಳೀಯರು, ಸರಕಾರೇತರ ಸಂಸ್ಥೆಗಳು ಜಾಗೃತವಾಗಿ, ಈಗ ಅಲ್ಲಿರುವ ಒಂದೇ ಒಂದು ಮರಗಳನ್ನು ಕಡಿಯಲು ಬಿಡುತ್ತಿಲ್ಲ. ನಾಲ್ಕು ಪಟ್ಟು ಮರಗಳ ಸಂಖ್ಯೆ ಹೆಚ್ಚಳವಾಗಿದೆ. ಅದೇ ರೀತಿ ಹುಬ್ಬಳ್ಳಿಯನ್ನೂ ಗ್ರೀನ್ ಸಿಟಿ ಮಾಡಬಹುದು. ಇಲ್ಲಿರುವ ಸರಕಾರೇತರ ಸಂಸ್ಥೆಗಳು ಜಾಗೃತವಾಗಿ, ಸಮಾಜದಲ್ಲಿ ಪರಿಸರ ಜಾಗೃತಿ ಮೂಡಿಸಲು ಮುಂದಾಗಬೇಕು' ಎಂದರು.

'ಮರಗಳಿಗೆ ಮೊಳೆ ಹೊಡೆದು ಜಾಹೀರಾತು ಫಲಕ ಅಳವಡಿಸುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಎಲ್ಲಿಯಾದರೂ ಇಂತಹ ಸನ್ನಿವೇಶ ಕಂಡು ಬಂದರೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಬಹುದು. ಮರ-ಗಿಡಗಳು ಎಲ್ಲ ಜೀವರಾಶಿಗಳಿಗೆ ಅಗತ್ಯವಾಗಿ ಬೇಕಾಗಿರುವ ಪರಿಸರ ಸಂಪತ್ತಾಗಿದೆ. ಅಭಿವೃದ್ಧಿ ಸಂದರ್ಭದಲ್ಲಿ ಮರಗಳನ್ನು ಕಡಿಯದೇ, ಅವುಗಳನ್ನು ಸ್ಥಳಾಂತರಿಸಲು ಯೋಜನೆ ರೂಪಿಸಬೇಕು. ಜನರು ಸರ್ಕಾರದ ಜೊತೆ ಮುಕ್ತವಾಗಿ ಮಾತನಾಡಬೇಕು, ಚರ್ಚಿಸಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ದೆವ್ವ, ಭೂತಗಳಲ್ಲ' ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಮಾಜಿಕ‌ ಕಾರ್ಯಕರ್ತೆ ಗೌರಿ ನಾಯ್ಕ, 'ನಾನು ಸಮಾಜಕ್ಕೆ ಏನಾದರೂ ನೀಡಬೇಕೆಂದು ಹಂಬಲಿಸಿ, ಶಿರಸಿ ಗಣೇಶನಗರದ ಅಂಗನವಾಡಿಯ ಜಾಗದಲ್ಲಿ ಬಾವಿ ತೋಡುವ ಕೆಲಸ ಆರಂಭಿಸಿದ್ದೆ. 40 ದಿನಗಳಲ್ಲಿ 55 ಅಡಿ ಆಳ ಬಾವಿ ತೋಡಿದ್ದು, ಏಳು ಅಡಿಯಷ್ಟು ನೀರು ಬಂದಿದೆ. ಚಿನ್ನ, ಬೆಳ್ಳಿ ಆಭರಣಕ್ಕಿಂತ ಮಕ್ಕಳಿಗೆ ನೀರು ಕೊಟ್ಟಿರುವ ಆನಂದವೇ ಹೆಚ್ಚು' ಎಂದರು.

ಪತ್ರಕರ್ತ ರಾಧಾಕೃಷ್ಣ ಭಡ್ತಿ, ನೀರಿನ ಬಳಕೆ ಮತ್ತು ಲಭ್ಯತೆ ಕುರಿತು ಮಾತನಾಡಿದರು.

ಪ್ರಾಸ್ತಾವಿಕ ಮಾತನಾಡಿದ ಗ್ರೀನ್ ಕರ್ನಾಟಕ ಅಧ್ಯಕ್ಷ ಚನ್ನು ಹೊಸಮನಿ, 'ಎಲ್ಲರೂ ಗಿಡ-ಮರಗಳನ್ನು ನೆಟ್ಟು ಪೋಷಿಸಿದರೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಮತ್ತೊಂದು ಊಟಿ ಆಗಲಿದೆ. ಯುವಕರು, ಮಕ್ಕಳು‌ ಪರಿಸರದ ಕುರಿತು ಜಾಗೃತರಾಗಬೇಕು' ಎಂದರು.

ಎಲ್ ಆ್ಯಂಡ್ ಟಿ ವ್ಯವಸ್ಥಾಪಕ ಹರಿಪ್ರಸಾದ ಮಾತನಾಡಿದರು. ವಸುಂಧರ ಫೌಂಡೇಷನ್ ಮೇಘರಾಜ ಕೆರೂರ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಇದ್ದರು.

'ನೆರಳು ಎಲ್ಲಿದೆ ಎಂದು ಹುಡುಕಬೇಕಾಗಿದೆ'

'ಪ್ಲೈ ಓವರ್'ಗಾಗಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಹುಬ್ಬಳ್ಳಿ-ಧಾರವಾಡದಲ್ಲಿ ಮರಗಳನ್ನು ಕಡಿಯಲಾಗಿದೆ, ಬದಲಾಗಿ ಒಂದೇ ಒಂದು ಗಿಡಗಳನ್ನು ನೆಟ್ಟಿಲ್ಲ. ಅದನ್ನು ಯಾರೂ ಪ್ರಶ್ನಿಸುತ್ತಲೂ ಇಲ್ಲ. ನಾಗರಿಕರ ಮನಸ್ಥಿತಿ ಹೀಗಾದರೆ ಹೇಗೆ? ನಗರದಲ್ಲಿ ನೆರಳು‌ ಎಲ್ಲಿದೆ ಎಂದು ಹುಡುಕುವಂತಾಗಿದೆ' ಎಂದು ವಿಜಯ ನಿಶಾಂತ ಬೇಸರ ವ್ಯಕ್ತಪಡಿಸಿದರು.

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಹಾದು ಹೋಗಲಿದೆ. ಅದು ಕಾರ್ಯರೂಪಕ್ಕರ ಬಂದರೆ ಲಕ್ಷಾಂತರ ಮರಗಳ ಮಾರಣಹೋಮವಾಗಿ, ಹುಬ್ಬಳ್ಳಿ-ಧಾರವಾಡದ ಜನತೆಯ ಬದುಕಿಗೂ ಕುತ್ತುಬರಲಿದೆ. ನಾಗರಿಕರು ಎಚ್ಚೆತ್ತುಕೊಳ್ಳುವ ಅಗತ್ಯವಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT