ಹುಬ್ಬಳ್ಳಿ: ಚಾರ್ಲಿ ಚಾಪ್ಲಿನ್, ಯಶವಂತನ ಇಷ್ಟದ ನಟನಾಗಿದ್ದ. ಹುಬ್ಬಳ್ಳಿಯ ನವನಗರದಲ್ಲಿ ವಾಸವಿದ್ದ ಅವನು 1980ರ ಅವಧಿಯಲ್ಲಿ ಚಾಪ್ಲಿನ್ ನಟನೆಯನ್ನು ಯಥಾವತ್ತಾಗಿ ಮಿಮಿಕ್ರಿ ಮಾಡುತ್ತ, ಸ್ನೇಹಿತರನ್ನೆಲ್ಲ ನಗಿಸುತ್ತಿದ್ದ. ಆಗಿನಿಂದಲೇ ಅವನಿಗೆ ರಂಗಭೂಮಿ ಮೇಲೆ ಒಲವಿತ್ತು. 1987–88ರಲ್ಲಿ ಶಿವಮೊಗ್ಗದ ನೀನಾಸಂನಲ್ಲಿ ತರಬೇತಿ ಪಡೆದು ಬಂದ ಆತ ನಂತರದ ದಿನಗಳಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿ ಯಶಸ್ವಿ ಕಲಾವಿದನಾಗಿ ಗುರುತಿಸಿಕೊಂಡಿದ್ದ.

ಯಶವಂತ ಮತ್ತು ನನಗೆ ಒಂದು ವರ್ಷದ ಅಂತರ. ಇಬ್ಬರೂ ಏಕಕಾಲಕ್ಕೆ ರಂಗಭೂಮಿ ಪ್ರವೇಶಿಸಿದವರು. ನಮ್ಮ 45 ವರ್ಷಗಳ ಒಡನಾಟ ಬಣ್ಣಕ್ಕಷ್ಟೇ ಸೀಮಿತವಾಗಿರಲಿಲ್ಲ. ಬದುಕಿನ ಪ್ರತಿ ಏರಿಳಿತದಲ್ಲೂ ಗಟ್ಟಿಯಾದ ಭಾವನಾತ್ಮಕ ಸಂಬಂಧವಿತ್ತು. ‘ಕೂಡಿಕೊಂಡಿದೆ ಎಂದರೆ, ಯಾವುದೋ ಜನ್ಮದ ನಂಟು. ಯಾವ ಕಾರಣಕ್ಕೂ ನಂಟಿನ ತಂತು ತುಂಡಾಗಬಾರದು’ ಎಂದು ತಾತ್ವಿಕವಾಗಿ ಹೇಳುತ್ತಿದ್ದ. ಬಂಧ–ಸಂಬಂಧದ ಬಗ್ಗೆ ಅಪಾರ ಗೌರವ ಇಟ್ಟುಕೊಂಡು, ಅದನ್ನು ಜತನದಿಂದ ಕಾದುಕೊಂಡು ಹೋಗುತ್ತಿದ್ದ.

ಒಂದಷ್ಟು ಸಮಾನ ಮನಸ್ಕರೆಲ್ಲ ಸೇರಿ ಧಾರವಾಡದಲ್ಲಿ ‘ಕಲಾದರ್ಪಣ’ ಹವ್ಯಾಸಿ ತಂಡ ಕಟ್ಟಿಕೊಂಡಿದ್ದೆವು. ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಅನುವಾದದ ‘ಅಂಧಯೋಗ’ ನಾಟಕ ನಿರ್ದೇಶಿಸಿದ. ಅದು ಸಾಕಷ್ಟು ಪ್ರದರ್ಶನ ಕಂಡು, ಹೆಸರು ತಂದುಕೊಟ್ಟಿತು. ನಂತರದ ದಿನಗಳಲ್ಲಿ ದ.ರಾ. ಬೇಂದ್ರೆ ಅವರ 13 ನಾಟಕಗಳನ್ನು, ಧಾರವಾಡದ ಅವರದ್ದೇ ಮನೆಯಂಗಳದಲ್ಲಿ ನಿರ್ದೇಶಿಸಿ ನಮಗೆಲ್ಲ ಬಣ್ಣ ಹಚ್ಚಿಸಿದ್ದ. ದ.ರಾ. ಬೇಂದ್ರೆ ಅವರ ಪುತ್ರ ವಾಮನ ಬೇಂದ್ರೆ ಮಾರ್ಗದರ್ಶನ ನೀಡಿದ್ದರು.

ಬಸ್ ಟಿಕೆಟ್ಗೆ ಐದು, ಹತ್ತು ಪೈಸೆ ನೀಡಲು ಆಗದಷ್ಟು ಬಡತನ ಆತನದ್ದು. ಹೀಗಾಗಿ ನವನಗರದಿಂದ ಧಾರವಾಡಕ್ಕೆ ನಡೆದುಕೊಂಡೇ ಬರುತ್ತಿದ್ದ. ‘ಬಡತನ ಮತ್ತು ಹಸಿವೆಯ ಕಾವು ಹೆಚ್ಚಾದಾಗಲೇ ಬದುಕು ಅರ್ಥವಾಗುವುದು’ ಎನ್ನುತ್ತಿದ್ದ.

ಮಹಾರಾಷ್ಟ್ರದ ನಾಗಪುರದಲ್ಲಿರುವ ದಕ್ಷಿಣ ಮಧ್ಯ ಸಾಂಸ್ಕೃತಿಕ ವಲಯದ ಅಧಿಕಾರಿಯಾಗಿ 15 ವರ್ಷ ಕರ್ತವ್ಯ ನಿರ್ವಹಿಸಿದ್ದ ಯಶವಂತ, ಉತ್ತಮ ನಾಟಕ ಸಾಹಿತ್ಯ, ರಂಗಸಜ್ಜಿಕೆ ಮತ್ತು ಅಭಿನಯ ಹೇಗಿರಬೇಕು ಎಂಬ ಮರ್ಮ ಅರಿತಿದ್ದ. ಅಲ್ಲಿಯ ಮರಾಠಿ ನಾಟಕಗಳನ್ನು ಆಳವಾಗಿ ಅಧ್ಯಯನ ಮಾಡಿ, ಅಲ್ಲಿ ಯಶಸ್ವಿಯಾದ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿ, ನಿರ್ದೇಶಿಸಿದ್ದ.

‘ಆಲ್ ದಿ ಬೆಸ್ಟ್‘, ‘ಸೂಪರ್ ಸಂಸಾರ’, ‘ದಿಲ್ ಮಾಂಗೆ ಮೋರ್’, ‘ಸಹಿ ರೇ ಸಹಿ’ ಪ್ರಮುಖವಾದವು. ‘ರಾಶಿ ಚಕ್ರ’ ಏಕವ್ಯಕ್ತಿ ನಾಟಕವೂ ಮರಾಠಿ ಮೂಲದ್ದಾಗಿದ್ದು, ಹಾಸ್ಯ, ವ್ಯಂಗ್ಯದ ಮೂಲಕ ಜನಪ್ರಿಯವಾಗಿತ್ತು. ಟಿಕೆಟ್ ಶುಲ್ಕ ಎಷ್ಟೇ ಇಟ್ಟಿದ್ದರೂ, ಥಿಯೇಟರ್ ಹೌಸ್ಫುಲ್ ಆಗುತ್ತಿತ್ತು. ರಂಗಭೂಮಿಗೆ ಜನರನ್ನು ಸೆಳೆಯುವ ಹಾಗೆಯೇ, ಮಾರುಕಟ್ಟೆ ಪಡೆಯುವ ಚಾಕಚಕ್ಯತೆಯೂ ಅವನಲ್ಲಿತ್ತು.

ನಟ ಅರವಿಂದ ರಮೇಶ ಅವರ ನಿರ್ದೇಶನದ ‘ರಾಮ ಶಾಮ ಭಾಮ’ ಸಿನೆಮಾದಲ್ಲಿ ನಟಿಸಿದ ಯಶವಂತ, ತಮಿಳು ನಟ ಕಮಲಹಾಸನ್ಗೆ ಹುಬ್ಬಳ್ಳಿ–ಧಾರವಾಡ ಭಾಷೆ ಕಲಿಸಿದ್ದ. ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯ, ಕೆಇ ಬೋರ್ಡ್ ಶಾಲೆಯ ಡಾಕ್ಯೂಮೆಂಟರಿ ತಯಾರಿಸಿದ್ದ. ಹುಬ್ಬಳ್ಳಿಯಲ್ಲಿ ನಿರ್ಮಿಸಿದ್ದ ‘ಆದಿರಂಗ ಥಿಯೇಟರ್’ನಲ್ಲಿ ಒಂಬತ್ತು ವಿಧದ ರಂಗ ಚಟುವಟಿಕೆ ನಡೆಸುವ ಕನಸು ಕಟ್ಟಿಕೊಂಡು, ಆ ನಿಟ್ಟಿನಲ್ಲಿ ಶ್ರಮಿಸುತ್ತಿದ್ದ. ಮಕ್ಕಳನ್ನು ಕಟ್ಟಿಕೊಂಡು ಸಾಕಷ್ಟು ನಾಟಕಗಳನ್ನು ಮಾಡಿದ್ದಾನೆ. ಅವನು ಬರೆದಿದ್ದ ನಾಲ್ಕು ಪುಸ್ತಕಗಳನ್ನು ಹುಬ್ಬಳ್ಳಿ ಸಾಹಿತ್ಯ ಪ್ರಕಾಶನ ಪ್ರಕಟಿಸಿದೆ. ನಲವತ್ತು–ನಲವತೈದು ವರ್ಷಗಳ ಸುದೀರ್ಘ ಕಾಲ ಅನುಭವಿಸಿದ ಕಷ್ಟ, ಪಟ್ಟ ಶ್ರಮಕ್ಕೆ ಫಲ ಸಿಗುವ ಕಾಲಘಟ್ಟ ಇದಾಗಿತ್ತು.

(ಲೇಖಕರು: ರಂಗಕರ್ಮಿ)

ಯಶವಂತ ಸರದೇಶಪಾಂಡೆ ನಿಧನ

ಹುಬ್ಬಳ್ಳಿ: ರಂಗಕರ್ಮಿ ಹಾಸ್ಯ ಕಲಾವಿದ ಯಶವಂತ ಸರದೇಶಪಾಂಡೆ (60) ಹೃದಯಾಘಾತದಿಂದ ಸೋಮವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ ಕಲಾವಿದೆ ಮಾಲತಿ ಸರದೇಶಪಾಂಡೆ ಹಾಗೂ ಪುತ್ರಿ ಕಲ್ಪಶ್ರೀ ಇದ್ದಾರೆ. ಮಂಗಳವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದ ಸಂಸ ಬಯಲು ರಂಗಮಂದಿರದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ನಂತರ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ 1965ರಲ್ಲಿ ಜನಿಸಿದ್ದ ಅವರು ಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಹುಬ್ಬಳ್ಳಿಯಲ್ಲಿ ಪೂರೈಸಿದ್ದರು. ಹೆಗ್ಗೋಡಿನ ನೀನಾಸಂ ನಾಟಕ ಸಂಸ್ಥೆಯಿಂದ ಡಿಪ್ಲೋಮಾ ಪೂರ್ಣಗೊಳಿಸಿದ್ದರು. ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ನಾಟಕ ರಚನೆ ಚಲನಚಿತ್ರ ಸಂಭಾಷಣೆ ಕುರಿತು ವಿಶೇಷ ತರಬೇತಿ ಪಡೆದಿದ್ದರು. ಅಂಧಯುಗ ಇನ್ಸ್ಪೆಕ್ಟರ್ ಜನರಲ್ ಬಾಡಿಗೆ ಮನೆ ಸೇರಿ ನೂರಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶಿಸಿದ್ದರು. ದ.ರಾ. ಬೇಂದ್ರೆ ಅವರ ನಾಟಕಗಳನ್ನೂ ರಂಗಭೂಮಿಗೆ ಪರಿಚಯಿಸಿದ್ದರು. ಮರಾಠಿ ಮೂಲದ ‘ರಾಶಿ ಚಕ್ರ’ ಏಕವ್ಯಕ್ತಿ ಅಭಿನಯದ ಹಾಸ್ಯ ನಾಟಕ ಎರಡು ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ’ ಎಂದು ಯಶವಂತ ಸರದೇಶಪಾಂಡೆ ಅವರ ಬಾಲ್ಯಸ್ನೇಹಿತ ನಾರಾಯಣ ಪಾಂಡುರಂಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.