ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನರಿಗೆ ಅವಕಾಶಗಳಷ್ಟೇ, ಸವಾಲುಗಳಿವೆ: ವೆಂಕಯ್ಯ ನಾಯ್ಡು

Last Updated 2 ಫೆಬ್ರುವರಿ 2020, 10:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಉದಾರೀಕರಣ, ಜಾಗತಿಕರಣ ಹಾಗೂ ಖಾಸಗೀಕರಣದ ಯುಗದಲ್ಲಿ ಯುವಜನರಿಗೆ ಎಷ್ಟು ಅವಕಾಶಗಳಿವೆಯೋ, ಅಷ್ಟೇ ಸವಾಲುಗಳೂ ಇವೆ’ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅಭಿಪ್ರಾಯಟ್ಟರು.

ಹುಬ್ಬಳ್ಳಿಯಲ್ಲಿ ಭಾನುವಾರ ದೇಶಪಾಂಡೆ ಫೌಂಡೇಷನ್‌ನ ಕೌಶಲ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಜಾಗತಿಕರಣದ ಸವಾಲುಗಳನ್ನು ಎದುರಿಸಲು ಯುವಜನರಿಗೆ ವಿದ್ಯಾರ್ಹತೆಯಷ್ಟೇ ಸಾಲದು. ಅದಕ್ಕೆ ಅಗತ್ಯ ಕೌಶಲ ಬೆಳೆಸಿಕೊಳ್ಳಬೇಕು. ಜಗತ್ತಿನ ಓಟಕ್ಕೆ ತಮ್ಮನ್ನು ತಾವು ಅಣಿಗೊಳಿಸಿಕೊಳ್ಳಬೇಕು’ ಎಂದರು.

‘ಜ್ಞಾನ ವೃದ್ಧಿಸುವ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸುವ ಶಿಕ್ಷಣವನ್ನು ಮಕ್ಕಳಿಗೆ ನಾವು ನೀಡಬೇಕಿದೆ. ಸ್ಕೂಲಿಂಗ್ ಜತೆಗೆ ಸ್ಕಿಲ್ಲಿಂಗ್ ಕಡ್ಡಾಯವಾಗಬೇಕಿದೆ. ನಾವು ಓದುವಾಗ ಶಿಕ್ಷಣದ ಜತೆಗೆ ಕೌಶಲ ತರಬೇತಿಯಂತಹ ಕಾರ್ಯಕ್ರಮಗಳಿದ್ದವು. ಆದರೆ, ಇಂದು ಮಕ್ಕಳನ್ನು ಪುಸ್ತಕಕ್ಕೆ ಸೀಮಿತಗೊಳಿಸಲಾಗುತ್ತಿದೆ’ ಎಂದು ಹೇಳಿದರು.

‘ಪ್ರಕೃತಿಯ ವಿಷಯದಲ್ಲಿ ನಾವು ಹಲವು ತಪ್ಪುಗಳನ್ನು ಎಸಗಿದ್ದೇವೆ. ಅದನ್ನು ತಿದ್ದಿಕೊಳ್ಳುವ ಸಮಯ ಬಂದಿದೆ. ನಾವು ಪ್ರಕೃತಿಯನ್ನು ಕಾಪಾಡಿದರೆ, ಅದು ನಮ್ಮನ್ನು ರಕ್ಷಿಸುತ್ತದೆ ಎಂಬುದನ್ನು ಅರಿಯಬೇಕು. ಹಾಗಾಗಿ, ಎಲ್ಲರಲ್ಲೂ ಪರಿಸರ ಪ್ರಜ್ಞೆ ಮೂಡಿಸಿಕೊಂಡು, ಪ್ರಕೃತಿ ಸಂಪತ್ತು ರಕ್ಷಣೆಗೆ ಪಣ ತೊಡಬೇಕಿದೆ’ ಎಂದು ಕಿವಿಮಾತು ಹೇಳಿದರು.

ದೇಶಪಾಂಡೆ ಫೌಂಡೇಷನ್‌ಗೆ ಮೆಚ್ಚುಗೆ:‘ವಿದೇಶದಲ್ಲಿದ್ದರೂ ಗುರುರಾಜ ದೇಶಪಾಂಡೆ ಅವರ ಕುಟುಂಬ, ಫೌಂಡೇಷನ್‌ ಮೂಲಕ ಒಳ್ಳೆಯ ಕಾರ್ಯ ಮಾಡುತ್ತಾ ತಾವು ಹುಟ್ಟಿ ಬೆಳೆದ ನೆಲದ ಋಣ ತೀರಿಸುತ್ತಿದೆ. ಕೌಶಲ ತರಬೇತಿ, ನವೋದ್ಯಮಿಗಳಿಗೆ ಹಾಗೂ ರೈತರಿಗೆ ಉತ್ತೇಜನದಂತಹ ಕೆಲಸಗಳು ಪರಿಣಾಮಕಾರಿಯಾಗಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸರ್ಕಾರವೇ ಎಲ್ಲವನ್ನೂ ಮಾಡುತ್ತದೆ ಎಂದು ಕೂರಬಾರದು. ಅಭಿವೃದ್ಧಿಗೆ ಜನರ ಸಹಭಾಗಿತ್ವವೂ ಅಷ್ಟೇ ಮುಖ್ಯ. ಹಾಗಾಗಿ, ಸಂಘ–ಸಂಸ್ಥೆಗಳು ಹಾಗೂ ಉದ್ಯಮಿಗಳು ದೇಶಪಾಂಡೆ ಫೌಂಡೇಷನ್ ಮಾದರಿಯಲ್ಲಿ ಈ ಸಮಾಜಕ್ಕೆ ಏನಾದರೂ ಕೊಡುಗೆಯನ್ನು ನೀಡಬೇಕು’ ಎಂದು ಸಲಹೆ ನೀಡಿದರು.

ಐತಿಹಾಸಿಕ ವ್ಯಕ್ತಿಗಳ ಸ್ಮರಣೆ:ತಮ್ಮ ಭಾಷಣದಲ್ಲಿ ಬಸವಣ್ಣ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಭಗತ್ ಸಿಂಗ್, ಝಾನ್ಸಿ ರಾಣಿ ಲಕ್ಷ್ಮಿಬಾಯಿ ಮುಂತಾದವರನ್ನು ಸ್ಮರಿಸಿದ ನಾಯ್ಡು, ‘ನಮ್ಮ ಮಕ್ಕಳಿಗೆ ಇಂದಿಗೂ ಬ್ರಿಟಿಷ್ ಇತಿಹಾಸವನ್ನೇ ಬೋಧಿಸುತ್ತಿದ್ದೇವೆ. ಅದರ ಬದಲಿಗೆ, ನಮ್ಮ ಇತಿಹಾಸ, ಸಂಸ್ಕೃತಿ, ನಾಗರಿಕತೆ, ಮಹಾನ್ ವ್ಯಕ್ತಿಗಳ ಇತಿಹಾಸವನ್ನು ಬೋಧಿಸಬೇಕಿದೆ’ ಎಂದರು.

ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ಜಗದೀಶ ಶೆಟ್ಟರ್ ಮಾತನಾಡಿದರು. ದೇಶಪಾಂಡೆ ಫೌಂಡೇಷನ್‌ನ ಗುರುರಾಜ ದೇಶಪಾಂಡೆ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕರಾದ ಅರವಿಂದ ಬೆಲ್ಲದ, ಶಂಕರಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯ ಎಸ್‌.ವಿ. ಸಂಕನೂರ, ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಇದ್ದರು.

‘ಸಾಲಮನ್ನಾ ಶಾಶ್ವತ ಪರಿಹಾರವಲ್ಲ’
‘ಸಾಲ ಮನ್ನಾ ಸೇರಿದಂತೆ ಯಾವುದೇ ಜನಪ್ರಿಯ ಯೋಜನೆಗಳು ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಲಾರವು. ಕೃಷಿಯನ್ನು ಉತ್ತೇಜಿಸುವ ಜತೆಗೆ, ರೈತರಿಗೆ ಆತ್ಮವಿಶ್ವಾಸ ತುಂಬುವ ಕೆಲಸಗಳು ಇಂದು ಆಗಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿಗೆ ಅಗತ್ಯವಾದ ನೀರಾವರಿ, ಸೂಕ್ತ ಮಾರುಕಟ್ಟೆ ಸೌಲಭ್ಯ, ಸಕಾಲದಲ್ಲಿ ಬೆಳೆ ಸಾಲ, ರೈತರಿಗೆ ಆಧುನಿಕ ಬೇಸಾಯ ತರಬೇತಿಯನ್ನು ನೀಡಿದರೆ, ಶೇ 60ರಷ್ಟು ಜನರು ಅವಲಂಬಿಸಿರುವ ಕೃಷಿ ಕ್ಷೇತ್ರ ಲಾಭದಾಯಕವಾಗುವುದರಲ್ಲಿ ಎರಡು ಮಾತಿಲ್ಲ’ ಎಂದು ನಾಯ್ಡು ಹೇಳಿದರು.

ನಾಯ್ಡು ಮಾತಿನ ಝಲಕ್‌ಗಳು...
* ಹಿಂದೆ ಕೇಂದ್ರ ಸರ್ಕಾರ ₹100 ಬಿಡುಗಡೆ ಮಾಡಿದರೆ, ಅದು ತಳಮಟ್ಟ ತಲುಪುವ ಹೊತ್ತಿಗೆ ₹15 ಆಗಿರುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ದೆಹಲಿಯಿಂದ ₹100 ಕಳಿಸಿದರೆ, ಯಾವುದೇ ವ್ಯತ್ಯಾಸವಾಗದೆ ಗಲ್ಲಿ ತಲುಪುತ್ತದೆ.

* ಪ್ರಜಾಪ್ರಭುತ್ವದಲ್ಲಿ ಬದಲಾವಣೆ ಎಂಬುದು ಬ್ಯಾಲೆಟ್‌ನಿಂದ ಆಗಬೇಕೇ ಹೊರತು ಬುಲೆಟ್‌ನಿಂದಲ್ಲ.

* ಗೂಗಲ್ ಮುಂದೆ ಗುರು ಯಾಕೆ ಬೇಕು ಎನ್ನಬೇಡಿ. ಗೂಗಲ್‌ನಲ್ಲಿ ದೋಷ ಕಾಣಿಸಿಕೊಂಡರೆ, ಅದನ್ನು ಸರಿಪಡಿಸಲು ಗುರುವೇ ಬೇಕು.

* ಧರ್ಮಾಚರಣೆ ವೈಯಕ್ತಿಕವಾಗಿರಲಿ. ಸಂಸ್ಕೃತಿ ಸಾರ್ವತ್ರಿಕವಾಗಿರಲಿ. ವಿವಿಧತೆಯಲ್ಲಿ ಏಕತೆ ನಮ್ಮ ಮಂತ್ರವಾಗಿರಲಿ.

* ನೀವು ಆನ್‌ಲೈನ್‌ ಮೂಲಕ ಹೋಗದಿದ್ದರೆ, ನಿಮಗೆ ಲೈನ್‌ ಸಿಗುವುದಿಲ್ಲ. ಡಿಜಿಟಲ್ ಯುಗಕ್ಕೆ ಹೊಂದಿಕೊಳ್ಳದಿದ್ದರೆ ಉಳಿಗಾಲವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT