ಹುಬ್ಬಳ್ಳಿ: ‘ನೆಲದಗುಡ ನೆಲ ಆಗಿ ದವಸ-ಧಾನ್ಯ ಒಕ್ಕುವಂಥ ರೈತ ಮತ್ತ ಶಾಸ್ತ್ರೀಜಿ ತರಹದ ದೊಡ್ಡ ಮನುಷ್ಯರನ್ನ ತಯಾರು ಮಾಡುವಂಥ ಶಿಕ್ಷಕ, ಇವರಿಬ್ಬರ ಮ್ಯಾಲ ದೇಶದ ಭವಿಷ್ಯ ನಿಂತೈತಿ’ ಎಂದು ವಿಜಾಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.ದ್ಯಾವಪ್ಪನವರ-ವಳಸಂಗ ಅಕಾಡೆಮಿಯಿಂದ ಆರಂಭಿಸಲಾದ ಚೇತನ ಪಬ್ಲಿಕ್ ಶಾಲೆ ಮತ್ತು ಸಚೇತನ ಪಿಯು ಕಾಲೇಜು ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಗೃಹಮಂತ್ರಿ ಆಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಅವ್ರಿಗೆ ಇರಾಕ ಒಂದ್ ಸ್ವಂತ ಮನಿ ಇದ್ದಿಲ್ಲ. ಇಂದಿನ ಕಾಲದಾಗ ಇಂತಹ ಘಟನೆ ಸಾಧ್ಯ ಐತೇನು? ನೂರಾರು ಶಾಸ್ತ್ರಿಗಳು ತಯಾರಾದ್ರ ಸುವರ್ಣ ಭಾರತದ ಕನಸು ಕೈಗೂಡ್ತದ. ಕೃಷಿಕನಿಗಿಂತ ದೊಡ್ಡವ್ರ ಯಾರೂ ಇಲ್ಲ. ಆತ ಬೆಳೀದಿದ್ರ ಯಾವ ದಿಲ್ಲೆನೂ ಉಳಿಯಂಗಿಲ್ಲ, ಬೆಂಗಳೂರೂ ಉಳಿಯಂಗಿಲ್ಲ. ಬದುಕೇ ನಿಂತು ಹೋಗ್ತದ. ಆದ್ರ ಯಾರೂ ತಮ್ ಮಕ್ಳು ಒಕ್ಕಲಿಗ ಆಗ್ಲಿ ಅಂತ ಬಯಸೂದಿಲ್ಲ’ ಎಂದು ಅವರು ವಿಷಾದಿಸಿದರು. ‘ಈಗಿನ ಜನ ಆದಾಯ ಹತ್ತು ಸಾವಿರ ಇರ್ತೈತಿ. ಕೋಟಿ ರೂಪಾಯಿ ಮನಿ ಕಟ್ಟೀರ್ತಾರ. ಇದೆಲ್ಲ ಹೆಂಗ್ ಸಾಧ್ಯ ಆಕ್ಕೈತಿ ಅಂತ ನನ್ಗ ಸೋಜಿಗ ಆಗ್ತದ. ಇದ್ರ ಬಗ್ಗೆ ನಾ ಹೆಚ್ಗಿ ಹೇಳಂಗಿಲ್ಲ’ ಎಂದರು.

‘ನಮ್ಗ ನಮ್ ಮಕ್ಳು 98 ಮಾರ್ಕು ತೊಗೊಂಡ್ರೂ ಸಮಾಧಾನ ಇಲ್ಲ. ಬರೀ 98 ಮಾರ್ಕ್ ತೊಗೊಂಡಿ ಅಂತ ಬೈಯ್ತಿವಿ. ದಡ್ಡ ಅದಿ ಅಂತ ತಿವಿತೀವಿ. ಅದ್ರ ಬದ್ಲಿ ಎಷ್ಟೊಂದು ಮಾರ್ಕ್ ತೊಗೊಂಡಿಯಲ್ಲೋ ಭೇಷ್ ಅನ್ನೂದಿಲ್ಲ. ಒಂದು ಎತ್ತದ, ಮತ್ತೊಂದು ಕೆಡವ್ತದ; ಅಷ್ಟ ವ್ಯತ್ಯಾಸ. ಮಾರ್ಕಿಗೆ ಗಂಟುಬಿದ್ದ ಹುಡ್ಗ ಬದುಕಿಗೆ ಗಂಟು ಬೀಳಂಗಿಲ್ಲ. ಗಾಂಧೀಜಿ ಬರೀ 35 ಮಾರ್ಕ್ ತಗೊಂಡಿದ್ರು. ಅವ್ರ ಮಹಾತ್ಮರಾಗಿ ಬೆಳಗಲಿಲ್ಲೇನು’ ಎಂದು ಸ್ವಾಮೀಜಿ ಪ್ರಶ್ನಿಸಿದರು.

‘ಹುಲ್ಲು ಎಂದೂ ತನ್ನ ಹತ್ರ ದೊಡ್ಡದಾಗಿ ಬೆಳ್ದುನಿಂತ ಮರದ ಜೊತೆ ಹೋಲ್ಕಿ ಮಾಡ್ಕೋಳೂದಿಲ್ಲ. ಇನ್ನೊಬ್ರ ಕಡೆ ನೋಡೂದಿಲ್ಲ. ಅದ್ಕ ಅದು ಯಾವಾಗ್ಲೂ ಆನಂದದಿಂದ ಇರ್ತದ. ಆದ್ರ ನಾವು, ಮನುಷ್ಯರು, ಇನ್ನೊಬ್ರ ಬಟ್ಟಿ-ಬರಿ ಬಗ್ಗೆ, ವಾಹನದ ಬಗ್ಗೆ ಹೋಲ್ಕಿ ಮಾಡ್ಕೊಂತ ಕುಂದ್ರುತೀವಿ. ಅದ್ಕ ನೋಡ್ರಿ ನಮ್ಗ ಸಂತೋಷ ಇರಂಗಿಲ್ಲ. ಹೋಲ್ಕಿ ಮಾಡಿ ಮಕ್ಳ ಶ್ರದ್ಧಾನ ಎಂದಿಗೂ ನಾಶ ಮಾಡಬಾರ್ದು. ಆದಷ್ಟು ಪ್ರೋತ್ಸಾಹ ನೀಡ್ಬೇಕು. ಜನ ಏನಂತಾರ ಅನ್ನೂದು ಮಹತ್ವದ್ದಲ್ಲ. ನಮ್ ಗುರಿ ಕಡೀಗೆ ಹೆಂಗ್ ಹೊಂಟೀವಿ ಅನ್ನೂದು ಮಹತ್ವದ್ದು’ ಎಂದು ಅವರು ಹೇಳಿದರು.

‘ನಾವು ಏನನ್ನಾದ್ರೂ ಸಾಧಿಸಲು ಮೂಲ ಬೇಕಾಗಿದ್ದು ಶ್ರದ್ಧೆ. ಈ ಭಾವ ಇದ್ರ ಸಾಮಾನ್ಯ ಮನುಷ್ಯ ಸಹ ಅಸಾಮಾನ್ಯ ಸಿದ್ಧಿ ಪಡೀತಾನ. ಎದಿ ಛೊಲೊ ಇದ್ರ ಛೊಲೊ ಕನಸು ಬೀಳ್ತಾವ. ಸಮುದ್ರದೊಳಗ, ಆಕಾಶದ ಮ್ಯಾಗ ಹೋಗಿ ಸಾಧನ ಮಾಡಿ ಬಂದವ್ರ ಏನು ಆಕಾಶದಿಂದ ಧುತ್ ಅಂತ ಇಳಿದು ಬಂದವ್ರೇನು. ಇಲ್ಲೇ ಹುಟ್ಟಿ ಬೆಳೆದವ್ರ ಅಂತ ಸಾಧನ ಮಾಡ್ಯಾರ. ಮನಸ್ಸು ಮಾಡಿದ್ರ ಯಾವ್ದೆ ಅಸಾಧ್ಯ ಅಲ್ಲ. ಬೀಜ ಬೆಳಿಬೇಕು ಅಂತ ಮನಸ್ಸು ಮಾಡಿದ್ರ ಹೆಬ್ಬಂಡೆಯನ್ನೂ ಸೀಳಿಕೊಂಡು ಬೇರು ತೂರಿಸ್ತದ. ಮನಸ್ಸು ಬೇಕಷ್ಟ’ ಎಂದು ಸ್ವಾಮೀಜಿ ತಿಳಿಸಿದರು.

‘ನಿಮ್ಗ ಒಂದ್ ಇರುವೆ ಕತಿ ಹೇಳ್ತೀನಿ. ಅದು ನಡಕೋತ ಹೊಂಟಿತ್ತು. ಯಾಕ್ಪಾ ಎಲ್ಲಿ ಹೊಂಟಿ ಅಂತ ಮೊಲ ಇರುವೆಯನ್ನ ಕೇಳ್ತು. ‘ನಾ ಹಿಮಾಲಯಕ್ಕ ಹೊಂಟೇನೋ’ ಅಂತು ಇರುವೆ. ಅಲ್ಪಾ ಸಿಕ್ಕಂಗ ಓಡಾಕ್ ಬರುವ ನಾವ ಹಿಮಾಲಯಕ್ಕ ಹೋಗಾಕ ಮನ್ಸು ಮಾಡಿಲ್ಲ. ನೀ ಹೆಂಗ್ ಹೊಂಟಿಯಪಾ ಅಂತ ಮೊಲ ಹೊಳ್ಳಿ ಪ್ರಶ್ನೆ ಹಾಕ್ತು. ನಾ ಹೊರಟು ಆಗ್ಲೇ ಒಂದ್ ವರ್ಷ ಆತು. ಯಾವಾಗ ಹೋಗಿ ಸೇರ್ತೀನಿ ಗೊತ್ತಿಲ್ಲ. ಆದ್ರ ಹೊಂಟಿನಲ್ಲ ಅದ ಮುಖ್ಯ. ತೇನ್ಸಿಂಗ್ ಏರ್ಯಾನ ಅಂದ್ರ ನನ್ಗ ಯಾಕ್ ಆಗಬಾರ್ದು. ನಾ ಹೋಗೇ ಹೊಕ್ಕಿನಿ. ಬೆಟ್ಟ ಏರೇ ಏರ್ತೀನಿ ಅಂತ ಇರುವೆ ಮುಂದ ಹೊರಡ್ತು. ನೋಡ್ರಿ ಮನಸ್ಸು ಮಾಡಿದ್ರ ಯಾವ್ದೆ ಅಸಾಧ್ಯ ಅಲ್ಲ ಅನ್ನೂದಕ್ಕ ಇದಕ್ಕಿಂತ ಉದಾಹರಣೆ ಬ್ಯಾರೆ ಯಾವ್ದ ಬೇಕು’ ಎಂದು ಸ್ವಾಮೀಜಿ ಹೇಳಿದರು.

‘ಮೇಡಂ ಕ್ಯುರಿ ಗೊತ್ತಲ್ಲ. ಎರ್ಡು ಸರ್ತೆ ನೊಬೆಲ್ ಪ್ರಶಸ್ತಿ ಪಡದೋರು. ಆ ಮಾಹಾತಾಯಿ ಗಂಡ ಮತ್ತ ಮಗಳೂ ನೊಬೆಲ್ ಪ್ರಶಸ್ತಿ ಪಡೆದ್ರು. ಒಂದ್ ಮನ್ಯಾಗ ಐದು ನೊಬೆಲ್ ಪಾರಿತೋಷಕ ಅಂದ್ರ ಸುಮ್ನ ಏನು. ನಮ್ ದೇಶಕ್ಕ ಎಷ್ಟ್ ಬಂದಾವ ಲೆಕ್ಕ ಹಾಕ್ರಿ. ಥಾಮಸ್ ಅಲ್ವಾ ಎಡಿಸನ್ ಎಷ್ಟು ಸಮಸ್ಯೆ ಬಂದ್ರೂ ಬಿಡಿಸ್ತೀನಿ ಅಂತಿದ್ದ. ಆತನ ಹತ್ರ ಹೋದ್ ಮಂದಿ ಬರಿಗೈಯೊಳಗ ಹೊಳ್ಳಿ ಬರ್ತಿದ್ದಿಲ್ಲ. ಆತ ಏನು ಜಗ್ ಓದಿದ ಮನುಷ್ಯಾ ಅಲ್ಲ. ಆದ್ರ ಯಾವ ದಾರ್ಶನಿಕರಿಗೂ ಕಡ್ಮಿ ಇಲ್ದಾಂಗ ಸಮಸ್ಯೆ ಬಗೆಹರಿಸ್ತಿದ್ದ. ಶ್ರದ್ಧೆ ಐತಿ ಅಂದ್ರ ಎಂತಹ ಚಮತ್ಕಾರ ಆಗ್ತಾವ ನೋಡ್ರಿ’ ಎಂದು ಅವರು ತಿಳಿಸಿದರು.

‘ಪಾಟಿ ಇಲ್ದ ಸಾಲಿ ಕಲ್ತವ್ರ, ಊಟ ಇಲ್ದ ಸಾಲಿ ಕಲ್ತವ್ರ, ಮೋಟಾರು ಇಲ್ದ ಸಾಲಿ ಕಲ್ತವ್ರ, ಸ್ಕೂಟರ್ ಇಲ್ದ ಸಾಲಿ ಕಲ್ತವ್ರ ಅದಾರ ಈ ದೇಶದಾಗ. ಬಹಳಷ್ಟು ದೊಡ್ಡ ಮನುಷ್ಯರ ಹಿನ್ನೆಲೆ ಹಿಂಗ ಐತಿ. ಅವ್ರ ದೇಶಾ ಕಟ್ಯಾರ. ಹೋಗ್ಲಿ, ಸಣ್ಣ ಜೀವಕೋಶ ಆಗಿದ್ದ ನೀವು ಇಷ್ಟು ದೊಡ್ಡವರಾಗಿ ಬೆಳದಿಲ್ಲೇನು. ನಮ್ಮ ಶಕ್ತಿಯನ್ನ ಭಾಳಷ್ಟು ವಿಷಯದಾಗ ಹಾಕ್ಕೊಂಡು ವಿನಾಕಾರಣ ಚೆಲ್ಲಾಡಬಾರ್ದು. ಶ್ರದ್ಧೆಯಿಂದ ಜ್ಞಾನ, ಜ್ಞಾನದಿಂದ ಶಾಂತಿ. ಇದ ಜೀವನ. ಜಗತ್ತನ್ನ ತಿಳ್ಳೊಳ್ಳೋದು, ಶಾಂತಿ ಅನುಭವಿಸೋದು ಇದ ನೋಡ್ರಿ ಜೀವನದ ಗುರಿ’ ಎಂದು ಹೇಳಿದರು.

‘ಮಕ್ಳು ಸಾಲಿ ಕಲ್ತು ಏಕ್ದಂ ವಾಶಿಂಗ್ಟನ್ಗೆ ಹಾರಿ ಹೋಗ್ಬೇಕು ಅಂತ ಎಲ್ಲ ತಾಯಿ-ತಂದೆ ಬಯಸ್ತಾರ. ಹಿಂಗ್ ಆದ್ರ ಸುಂದರ ಭಾರತ ಕಟ್ಟೋದು ಹೆಂಗ್. ನಮ್ ದೇಶ್ದಾಗ ಕೆಲ್ಸಾ ಮಾಡೂದು ಏನ್ ಕಷ್ಟ ಐತಿ ಹೇಳ್ರಿ. ಮಕ್ಳನ್ನ ನೀ ಏನ್ ಆಕ್ಕಿ ಅಂದ್ರ ಡಾಕ್ಟರ್, ಎಂಜಿನಿಯರ್ ಅಂತಾರ. ನಾವು ಆಗ್ ಆಗು ಅಂತೀವಿ. ಆದ್ರ ಯಾವ್ದಾದ್ರೂ ಹುಡ್ಗ ನಾ ರೈತ ಆಕ್ಕೀನಿ ಅಂದ್ರ ಸುಮ್ನ ಇರ್ತೀರೇನು. ಬ್ಯಾಡ್ಬ್ಯಾಡ್ ಅಂತೀರಿ. ಮಕ್ಳನ್ನ ಕೃಷಿಕ ಇಲ್ಲಾ ಶಿಕ್ಷಕನ್ನ ಮಾಡ್ರಿ. ಆ ಕೆಲ್ಸದಾಗ ಇರೋ ಸಂತೋಷ ಬ್ಯಾರೆ ಕಡೆ ಇಲ್ಲ. ಹಣ ಗಳಿಸೋದು ಒಂದ ಜೀವ್ನ ಅಲ್ಲ’ ಎಂದು ಕಿವಿಮಾತು ಹೇಳಿದರು.

‘ನಿಸರ್ಗದ ಜೊತೆ ಒಂದಾಗಿ ಬಾಳೂವಂತ ಶಿಕ್ಷಣ ಕೊಡಬೇಕು. ಉಗುರು ಬೆಳಿಸಿದ್ರ ಬಹುಮಾನ ಕೊಡುವ ಬದ್ಲು ಹೂವಿನ ಗಿಡ ಬೆಳಿಸಿದ ಹುಡುಗ್ರೀಗೆ ಬಹುಮಾನ ಕೊಡಬೇಕು. ದುಡದಷ್ಟು ಫಲ ಅನ್ನೂದನ್ನ ಅವ್ರಿಗೆ ಸಾಲಿಯೊಳಗ ಹೇಳಿ ಕೊಡಬೇಕು. ಪಂಚತಾರಾ ಹೊಟೆಲ್ಲಿನ ಕಾಫಿಗಿಂತ ಮನಿಯೊಳಗಿನ ರೊಟ್ಟಿ-ಪುಂಡಿಪಲ್ಯ ತಿನ್ನೂದ್ರಾಗ ಸ್ವರ್ಗ ಐತಿ ಅಂತ ಅವ್ರಿಗೆ ಮನವರಿಕಿ ಮಾಡಿ ಕೊಡಬೇಕು. ಅಂದ್ರ ಮಕ್ಳು ನೀತಿವಂತರಾಗಿ ಮಸ್ತ್ ಬೆಳೀತಾರ’ ಎಂದು ಮಾತು ಮುಗಿಸಿದರು ಸ್ವಾಮೀಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.