ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿರೀಕ್ಷೆ’ ಹೊತ್ತು ಬಂದರು; ‘ಗುರಿ’ಯೊಂದಿಗೆ ಹೊರಟರು...

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಕಾಲೇಜ್ ಕನೆಕ್ಟ್‌ ಎಜು ಎಕ್ಸ್‌ಪೋ
Last Updated 10 ಜನವರಿ 2020, 15:27 IST
ಅಕ್ಷರ ಗಾತ್ರ

ವಿಜಯಪುರ: ಗುಮ್ಮಟನಗರಿಯಲ್ಲಿ ಬೆಳಗಿನ ಜಾವ ಚುಮುಚುಮು ಚಳಿ ದಿನಕ್ಕಿಂತ ಕೊಂಚ ಹೆಚ್ಚಾಗಿಯೇ ಇತ್ತು. ಆ ಚಳಿಯನ್ನು ಲೆಕ್ಕಿಸದೇ ವಿದ್ಯಾರ್ಥಿಗಳು ತಂಡೋಪತಂಡವಾಗಿ ಹರಿದು ಬಂದರು. ‘ಎಸ್ಸೆಸ್ಸೆಲ್ಸಿ ನಂತರ ಮುಂದೇನು?’ ಎಂಬ ಸ್ಪಷ್ಟ ‘ಗುರಿ’ ಇಲ್ಲದೆ ಒಳಬಂದ ವಿದ್ಯಾರ್ಥಿಗಳು, ಕಾರ್ಯಕ್ರಮದ ಬಳಿಕ ದೃಢ ‘ನಿರ್ಧಾರ’, ನಿಗದಿತ ‘ಗುರಿ’, ಹೊಸ ‘ಕನಸು’ಗಳೊಂದಿಗೆ ಹೊರನಡೆದರು.

ಇವು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಶುಕ್ರವಾರ ಕಂಡು ಬಂದ ದೃಶ್ಯಗಳು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಪತ್ರಿಕಾ ಬಳಗದಿಂದ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ‘ಕಾಲೇಜ್ ಕನೆಕ್ಟ್‌ ಎಜು ಎಕ್ಸ್‌ಪೋ’ದಲ್ಲಿ 9 ಮತ್ತು 10ನೇ ತರಗತಿಯ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

ರಂಗಮಂದಿರದೊಳಕ್ಕೆ ಬರುವಾಗ ವಿದ್ಯಾರ್ಥಿಗಳ ಮೊಗದಲ್ಲಿ ಅಚ್ಚರಿ, ಕಾತರ, ಹಿಂಜರಿಕೆ ಕಂಡು ಬಂದರೆ, ಕಾರ್ಯಕ್ರಮ ಮುಗಿಸಿಕೊಂಡು ಮನೆಯತ್ತ ಹೆಜ್ಜೆ ಹಾಕುವಾಗ ಅವರೆಲ್ಲರೂ ಉತ್ಸಾಹದ ಬುಗ್ಗೆಗಳಾಗಿದ್ದರು. ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸಿಕೊಳ್ಳಬೇಕು, ತಮ್ಮ ಇಷ್ಟದ ಕೋರ್ಸ್‌ ಅನ್ನೇ ಓದಬೇಕು ಎಂಬ ಆತ್ಮವಿಶ್ವಾಸ ಅವರ ಮುಖದಲ್ಲಿ ಎದ್ದು ಕಂಡಿತು.

ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ವಿದ್ಯಾರ್ಥಿಗಳು ತಜ್ಞರ ಪ್ರೇರಣಾದಾಯಕ ಮಾತುಗಳು, ಉಪನ್ಯಾಸವನ್ನು ತದೇಕ ಚಿತ್ತದಿಂದ ಆಲಿಸಿದರು. ‘ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು’, ‘ಪ್ರಯತ್ನ, ಶ್ರಮ ಇದ್ದರೆ ಸಾಧನೆ ಸಾಧ್ಯ’ ಎಂಬ ಡಾ.ಓಂಕಾರ ಕಾಕಡೆ ಅವರ ಮಾತುಗಳನ್ನು ಕೆಲ ವಿದ್ಯಾರ್ಥಿಗಳು ನೋಟ್‌ ಪುಸ್ತಕದಲ್ಲಿ ಬರೆದಿಟ್ಟುಕೊಂಡರು. ‘ಆಕರ್ಷಣೆಗೆ ಒಳಗಾಗಬೇಡಿ, ನಿಮ್ಮ ಬದುಕಿನ ಜವಾಬ್ದಾರಿಯನ್ನು ನೀವೆ ತೆಗೆದುಕೊಳ್ಳಿ’ ಎಂದು ಮನೋವೈದ್ಯ ಡಾ.ಆದಿತ್ಯ ಪಾಂಡುರಂಗಿ ಅವರು ಒತ್ತಿ ಹೇಳಿದಾಗ ವಿದ್ಯಾರ್ಥಿಗಳು ‘ಹೌದಲ್ಲವೇ?’ ಎಂದು ತಮ್ಮತಮ್ಮಲ್ಲೇ ಚರ್ಚಿಸಿದರು.

‘ಇಲ್ಲಿಗೆ ಬಂದಿದ್ದು ಅನುಕೂಲವಾಯಿತು, ಎಸ್ಸೆಸ್ಸೆಲ್ಸಿ ನಂತರ ಏನು ಮಾಡಬೇಕು ಎಂಬ ಗೊಂದಲಕ್ಕೆ ಪರಿಹಾರ ಸಿಕ್ಕಿತು, ನಮ್ಮ ಇಷ್ಟದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಮನದಟ್ಟಾಯಿತು’ ಎಂದು ವಿದ್ಯಾರ್ಥಿಗಳು ಮಾತನಾಡಿಕೊಂಡರು.

ಇದಕ್ಕೂ ಮುನ್ನ ಪ್ರಾಯೋಜಕರ ಮಳಿಗೆಗಳಿಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ನಂತರ ಮುಂದೇನು, ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು, ಯಾವ ವಿಭಾಗದಲ್ಲಿ ಓದಿದರೆ ಅನುಕೂಲ, ತಮ್ಮ ಇಷ್ಟದ ವಿಭಾಗಗಳಲ್ಲಿ ಪ್ರವೇಶ ಪಡೆಯುವುದು ಹೇಗೆ ಎಂಬುದರ ಕುರಿತು ಮಾಹಿತಿ ಪಡೆದುಕೊಂಡರು.

ಪ್ರಾಯೋಜಕರು: ವಿಜಯಪುರದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳು, ಬಿಎಲ್‌ಡಿಇ ಅಸೋಸಿಯೇಶನ್‌, ಪ್ರಾರ್ಥನಾ ಪಬ್ಲಿಕ್ ಸ್ಕೂಲ್, ಸೇಂಟ್ ಜೋಸೆಫ್ ಸಂಯುಕ್ತ ಪದವಿಪೂರ್ವ ಕಾಲೇಜ್, ಶಾಹಿನ್‌ ಸ್ವತಂತ್ರ ಪದವಿಪೂರ್ವ ಕಾಲೇಜ್, ಸಿಂದಗಿ ತಾಲ್ಲೂಕು ಮೋರಟಗಿಯ ಕಲ್ಪವೃಕ್ಷ ವಿದ್ಯಾ ಸಂಕೀರ್ಣ, ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ಪ್ರೇರಣಾ ಪಿಯು ಕಾಲೇಜ್, ಅವಂತಿ ಐಐಟಿ–ಜೆಇಇ, ನೀಟ್ ಫೌಂಡೇಷನ್, ಧಾರವಾಡದ ಬೇಂದ್ರೆ ಪಿಯು ವಿಜ್ಞಾನ ಕಾಲೇಜ್, ದಿ ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ, ದಾವಣಗೆರೆಯ ಸಿದ್ಧಗಂಗಾ ಮಠ ಶಿಕ್ಷಣ ಸಂಸ್ಥೆ ಹಾಗೂ ಸಂಜಯ್ ಘೋಡಾವತ್ ಯುನಿವರ್ಸಿಟಿಯವರು ಪ್ರಾಯೋಜಕತ್ವ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT