ಶನಿವಾರ, ಸೆಪ್ಟೆಂಬರ್ 18, 2021
29 °C
ಬಂಡಾಯ ಶಮನಗೊಳಿಸಲು ಮುಖಂಡರ ಹರಸಾಹಸ

ಬಿಸಿ ತುಪ್ಪವಾಗಿರುವ ಭಿನ್ನಮತೀಯರು

ಎಂ.ರಾಘವೇಂದ್ರ Updated:

ಅಕ್ಷರ ಗಾತ್ರ : | |

Prajavani

ಸಾಗರ: ಇಲ್ಲಿನ ನಗರಸಭೆಯ 31 ವಾರ್ಡ್‌ಗಳಿಗೆ ಮೇ 29ರಂದು ಚುನಾವಣೆ ನಡೆಯಲಿದ್ದು ನಾಮಪತ್ರ ಸಲ್ಲಿಸಲು ಮೇ 16 ಕೊನೆಯ ದಿನವಾಗಿದೆ.

ನಾಮಪತ್ರ ಸಲ್ಲಿಕೆಗೆ ಎರಡು ದಿನಗಳು ಮಾತ್ರ ಬಾಕಿ ಇದ್ದರೂ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು ಇರುವುದರಿಂದ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವುದು ಉಭಯ ಪಕ್ಷಗಳ ಮುಖಂಡರಿಗೆ ಕಷ್ಟಸಾಧ್ಯವಾಗುತ್ತಿದೆ.

ಬಿಜೆಪಿ ಯಾವ ವಾರ್ಡ್‌ನಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವ ಬಗ್ಗೆ ಒಂದು ಕೋರ್ ಕಮಿಟಿಯನ್ನು ರಚಿಸಿದೆ. ಕಾಂಗ್ರೆಸ್‌ನಲ್ಲೂ ಇಂತಹದ್ದೇ ಸಮಿತಿ ರಚನೆಯಾಗಿದ್ದು, ಪ್ರತಿ ವಾರ್ಡ್‌ನಲ್ಲೂ ಯಾರ ಪರ ಒಲವು ಇದೆ ಎಂದು ಸಮೀಕ್ಷೆ ನಡೆಸಿ ವರದಿ ಪಡೆದು ಟಿಕೆಟ್ ಹಂಚುವ ಪ್ರಕ್ರಿಯೆ ನಡೆದಿದೆ.

ನಗರದ 5ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದ ಎಸ್.ಎಲ್.ಮಂಜುನಾಥ್ ಅವರಿಗೆ 12ನೇ ವಾರ್ಡ್‌ನಿಂದ ಟಿಕೆಟ್ ನೀಡಲಾಗಿದೆ ಎನ್ನುವ ಸುದ್ದಿ ಇದೆ. ಇದರಿಂದ ಕೆರಳಿರುವ ಈ ವಾರ್ಡ್‌ನ ಬಿಜೆಪಿ ಟಿಕೆಟ್ ಆಕಾಂಕ್ಷಿ ತುಕಾರಾಂ ಅವರು ಸೋಮವಾರ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿ ಬಂಡಾಯದ ಬಾವುಟ ಹಾರಿಸಿದ್ದಾರೆ.

16ನೇ ವಾರ್ಡ್‌ನಲ್ಲಿ ವಿ.ಮಹೇಶ್ ಅವರಿಗೆ ಬಿಜೆಪಿ ಟಿಕೆಟ್ ಖಚಿತ ಎನ್ನುವುದು ತಿಳಿಯುತ್ತಿದ್ದಂತೆ ಅದೇ ಪಕ್ಷದ ಎಸ್.ವಿ.ಕೃಷ್ಣಮೂರ್ತಿ, ಅರವಿಂದ ರಾಯ್ಕರ್ ಕೂಡ ಸ್ಪರ್ಧೆಗೆ ಮುಂದಾಗಿರುವುದು ಬಿಜೆಪಿಯ ಮುಖಂಡರಿಗೆ ತಲೆನೋವು ತಂದಿದೆ.

18ನೇ ವಾರ್ಡ್‌ನಲ್ಲಿ ತಮಗೆ ಟಿಕೆಟ್ ಸಿಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಗಣೇಶ್ ಗಟ್ಟಿ ಈಗಾಗಲೇ ನರೇಂದ್ರ ಮೋದಿ ಭಾವಚಿತ್ರದ ಎದುರು ತಮ್ಮ ಸಂಕಟವನ್ನು ತೋಡಿಕೊಂಡ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ತಮ್ಮ ಪ್ರತಿಭಟನೆ ದಾಖಲಿಸಿದ್ದಾರೆ.

11ನೇ ವಾರ್ಡ್‌ನಲ್ಲಿ ಬಿಜೆಪಿ ಟಿಕೆಟ್‌ಗೆ ಹಲವು ಆಕಾಂಕ್ಷಿಗಳಿದ್ದು ಯಾರಿಗೆ ಟಿಕೆಟ್ ನೀಡಿದರೆ ಗೆಲುವು ಸಾಧ್ಯ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಮುಖಂಡರು ತೊಡಗಿದ್ದು ಕೊನೆಯ ಘಳಿಗೆಯಲ್ಲಿ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

29ನೇ ವಾರ್ಡ್‌ನಲ್ಲಿ ಲೋಕೇಶ್ ಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ಅಂತಿಮವಾಗಿದೆ ಎಂಬ ಸುದ್ದಿ ಕೇಳಿ ಬಿಜೆಪಿಯ ವಿರೂಪಾಕ್ಷ, ರಾಯಕೋಟಿ ಚಂದ್ರು ಅಸಮಾಧಾನಗೊಂಡಿದ್ದು ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದಾರೆ.

ಕಾಂಗ್ರೆಸ್‌ನಲ್ಲೂ ಪರಿಸ್ಥಿತಿ ಬಿಜೆಪಿಗಿಂತ ಭಿನ್ನವಾಗಿಲ್ಲ. 5ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಸುಂದರ್ ಸಿಂಗ್ ಹಾಗೂ ತಾರಾಮೂರ್ತಿ ನಡುವೆ ಪೈಪೋಟಿ ನಡೆದಿದೆ.

ಟಿಕೆಟ್ ಘೋಷಣೆಯಾಗುವ ಮೊದಲೇ ತಾರಾಮೂರ್ತಿ ತಾವು ಆಕಾಂಕ್ಷಿ ಎಂದು ಕರಪತ್ರ ಮುದ್ರಿಸಿ ಹಂಚುತ್ತಿದ್ದಾರೆ. ಎರಡು ಬಾರಿ ನಗರಸಭೆ ಸದಸ್ಯರಾಗಿರುವ ಸುಂದರ್ ಸಿಂಗ್ ತಾವೇ ಗೆಲ್ಲುವ ಅಭ್ಯರ್ಥಿಯಾಗಿದ್ದರಿಂದ ಟಿಕೆಟ್ ಕೊಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

11ನೇ ವಾರ್ಡ್‌ನಲ್ಲಿ ವಿ.ಶಂಕರ್ ಹಾಗೂ ಡಿ.ದಿನೇಶ್, 22ನೇ ವಾರ್ಡ್‌ನಲ್ಲಿ ನಾದಿರಾ ಹಾಗೂ ಭವ್ಯಾ ಕೃಷ್ಣಮೂರ್ತಿ, 18ನೇ ವಾರ್ಡ್‌ನಲ್ಲಿ ಎನ್.ಶ್ರೀನಾಥ್ ಹಾಗೂ ರವಿ ಲಿಂಗನಮಕ್ಕಿ ಅವರ ನಡುವೆ ಕಾಂಗ್ರೆಸ್ ಟಿಕೆಟ್‌ಗೆ ತೀವ್ರ ಪೈಪೋಟಿ ನಡೆದಿದೆ. 6ನೇ ವಾರ್ಡ್‌ನಲ್ಲೂ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದು ಅದನ್ನು ಬಗೆಹರಿಸುವುದು ಕಾಂಗ್ರೆಸ್‌ಗೆ ಕಗ್ಗಂಟಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.