ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020: ಗದಗ ಜಿಲ್ಲೆಗೆ ಕಹಿಯೇ ಹೆಚ್ಚು

ಕಷ್ಟಗಳು ಕಳೆದು ಹೊಸ ಭರವಸೆ ಮೂಡಲಿ... ಹೊಸ ವರ್ಷದ ಸ್ವಾಗತಕ್ಕೆ ಸಜ್ಜು
Last Updated 1 ಜನವರಿ 2021, 2:40 IST
ಅಕ್ಷರ ಗಾತ್ರ

ಗದಗ: ಮಧ್ಯ ಕರ್ನಾಟಕದಲ್ಲಿರುವ ಗದಗ ಜಿಲ್ಲೆಗೆ 2020ನೇ ವರ್ಷ ಸಿಹಿಗಿಂತ ಕಹಿಯನ್ನೇ ಹೆಚ್ಚು ಉಣಬಡಿಸಿತು. ಜಗತ್ತನ್ನೇ ಸಂಕಷ್ಟಕ್ಕೆ ದೂಡಿದ ಕೊರೊನಾ ವೈರಸ್‌ ಹಾವಳಿ ಜಿಲ್ಲೆಯ ಜನರನ್ನೂ ಕಾಡಿತು. ಗಾಯದ ಮೇಲೆ ಬರೆ ಎಳೆದಂತೆ ಬಂದ ಅತಿವೃಷ್ಟಿ ನರಗುಂದ ಹಾಗೂ ರೋಣ ತಾಲ್ಲೂಕಿನ ನದಿ ತೀರದ ಜನರ ಜೀವ ಹಿಂಡಿತು. ಅಪಾರ ಪ್ರಮಾಣದ ಬೆಳೆ, ಆಸ್ತಿ ನಾಶವಾಯಿತು.

ಜಿಲ್ಲೆಯಲ್ಲಿ ಬೃಹತ್‌ ಪ್ರತಿಭಟನೆಯ ಕಾವಿನೊಂದಿಗೆ ವರ್ಷದ ಮೊದಲ ತಿಂಗಳು ಆರಂಭಗೊಂಡಿತು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟಿಸಿದರು. ಇದಕ್ಕೆ ಪ್ರತಿಯಾಗಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ನೇತೃತ್ವದಲ್ಲಿ ಜನಜಾಗೃತಿ ಅಭಿಯಾನ ನಡೆಸಿದರು. ವಿವಿಧ ತಾಲ್ಲೂಕುಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಬಿಜೆಪಿಗರು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದರು. ಲಕ್ಷ್ಮೇಶ್ವರದಲ್ಲಿ ಜ.4ರಂದು ಗಣವೇಷಧಾರಿಗಳ ಆಕರ್ಷಕ ಪಥ ಸಂಚಲನ ನಡೆದಿತ್ತು.

ಫೆಬ್ರುವರಿಯಲ್ಲಿ ಕೊರೊನಾ ವೈರಸ್‌ ಆತಂಕ ಭಾರತಕ್ಕೂ ಕಾಲಿಟ್ಟಿತು. ಜನರಲ್ಲಿ ಆತಂಕ ಸೃಷ್ಟಿಸಿ ಹಬ್ಬ ಹರಿದಿನಗಳ ಸಂಭ್ರಮ ಕಸಿಯಿತು. ಭಗವಾನ್ ಮಹಾವೀರ ಜೈನ್ ಮೆಡಿಕಲ್ ಕಾಲೇಜಿನ ವಾರ್ಷಿಕೋತ್ಸವ, ಫೆ.14ರಿಂದ ಫೆ.16ರವರೆಗೆ ಗಜೇಂದ್ರಗಡದಲ್ಲಿ 2ನೇ ಬಾರಿ ರಾಜ್ಯ ಮಟ್ಟದ ಯುವಜನ ಮೇಳ ನಡೆಯಿತು. ಹಿರೇ ದುರ್ಗಾದೇವಿ ರಥೋತ್ಸವ, ಸೂಡಿಯಲ್ಲಿ ಜಾನಪದ ಜಾತ್ರೆ, ಕುಂಬಾರ ಸಮುದಾಯದಿಂದ ಸರ್ವಜ್ಞ ಜಯಂತಿ ನಡೆಯಿತು.

ಮಾರ್ಚ್‌ ವೇಳೆಗೆ ಕೋವಿಡ್‌–19 ಭೀತಿ ಉತ್ತುಂಗ ತಲುಪಿತ್ತು. ಜಿಲ್ಲೆಯಲ್ಲಿ ಸೋಂಕಿತರ ಚಿಕಿತ್ಸೆಗಾಗಿ ಜಿಮ್ಸ್‌ನಲ್ಲಿ ಪ್ರತ್ಯೇಕ ವಾರ್ಡ್‌ ತೆರೆಯಲಾಯಿತು. ಇತಿಹಾಸದಲ್ಲಿಯೇ ಎಂದೂ ಬಾಗಿಲು ಮುಚ್ಚದ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಲಕ್ಷ್ಮೇಶ್ವರ ತಾಲ್ಲೂಕಿನ ಸೋಮೇಶ್ವರ ದೇವಸ್ಥಾನ ಮತ್ತು ದೂದಪೀರಾಂ ಮಹಾತ್ಮರ ದರ್ಗಾ ಬಾಗಿಲು ಎರಡು ತಿಂಗಳವರೆಗೆ ಬಂದ್ ಆಗಿದ್ದವು. ಮಾರ್ಚ್‌ 23ಕ್ಕೆ ಲಾಕ್‌ಡೌನ್‌ ಘೋಷಣೆಯಾಯಿತು.

ಏಪ್ರಿಲ್‌ನಲ್ಲಿ ದಾಖಲಾದ ಕೋವಿಡ್‌–19 ಪ್ರಕರಣಗಳಿಂದಾಗಿ ಮೇನಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಣೆ ಆಯಿತು. ವಲಸಿಗರು, ಕಾರ್ಮಿಕರು ತೀವ್ರ ತೊಂದರೆ ಅನುಭವಿಸಿದರು. ಉದ್ಯಮಗಳು ನೆಲಕಚ್ಚಿದವು. ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿತು. ಜನರು ದಿಕ್ಕು ತೋಚದಂತಾದರು. ಜೀವನ ಅಸ್ತವ್ಯಸ್ತಗೊಂಡಿತು. ಅನೇಕರು ಕೆಲಸ ಕಳೆದುಕೊಂಡು, ಸ್ವಗ್ರಾಮಕ್ಕೆ ಮರಳಿದರು. ಐಟಿ ಕಂಪನಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ನಿರ್ವಹಣೆ ಆರಂಭಿಸಿದರು.

ಮನುಷ್ಯನ ಬದುಕಿಗೆ ಎಲ್ಲ ಆಯಾಮದಿಂದಲೂ ಮರ್ಮಾಘಾತ ನೀಡಿದ್ದ ಕೋವಿಡ್‌–19 ಒಂದೆಡೆಯಾದರೆ; ಮಳೆ ಮತ್ತೊಂದು ರೀತಿಯ ಒಳೇಟು ನೀಡಿತು. ಮುಂಗಾರು ಮಳೆ ಆರ್ಭಟಿಸಿತು. ಮೂಲಸೌಕರ್ಯಗಳು ಅಪಾರ ಪ್ರಮಾಣದಲ್ಲಿ ಹಾನಿಗೊಳಗಾದವು. ಮಲಪ್ರಭೆ ಮುನಿಸಿನಿಂದಾಗಿ ಲಖಮಾಪುರ, ಕೊಣ್ಣೂರು, ವಾಸನಾ ಗ್ರಾಮಗಳು ಅಕ್ಷರಶಃ ನಲುಗಿದವು. ಬೆಣ್ಣೆಹಳ್ಳ ರೋಣ ತಾಲ್ಲೂಕಿನ ಕೆಲವು ಗ್ರಾಮಗಳ ನೆಮ್ಮದಿ ಕಸಿಯಿತು. ಮುಂಗಾರು ಮುಗಿಯಿತು. ನಂತರ ಹಿಂಗಾರು ಮಳೆ ಕೂಡ ಜಿಲ್ಲೆಗೆ ನಷ್ಟ ತಂದೊಡ್ಡಿತು. ಮಳೆ, ಅತಿವೃಷ್ಟಿಯಿಂದಾಗಿ ಜನರು ನಲುಗಿದರು.

ಕೋವಿಡ್‌–19 ಭೀತಿ ನಡುವೆಯೂ ವಿಧಾನ ಪರಿಷತ್‌ ಚುನಾವಣೆ ನಡೆಯಿತು. ಪಶ್ಚಿಮ ಪದವೀಧರರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್‌.ವಿ.ಸಂಕನೂರ ಮತ್ತೇ ಗೆಲುವಿನ ನಗು ತುಳುಕಿಸಿದರು. ನವೆಂಬರ್‌ನಲ್ಲಿ ನಾಗಾವಿ ಗುಡ್ಡದ ಸುಂದರ ಪರಿಸರದಲ್ಲಿ ನಿರ್ಮಾಣಗೊಂಡ ಸಾಬರಮತಿ ಆಶ್ರಮವನ್ನು ಸಚಿವ ಕೆ.ಎಸ್‌.ಈಶ್ವರಪ್ಪ ಲೋಕಾರ್ಪಣೆ ಮಾಡಿದರು. ಗ್ರಾಮ ಪಂಚಾಯ್ತಿ ಚುನಾವಣೆಗೆ ಅಧಿಸೂಚನೆ ಪ್ರಕಟಗೊಂಡ ನಂತರ, ಚುನಾವಣೆ ರಂಗು ಡಿಸೆಂಬರ್‌ ತಿಂಗಳಪೂರ್ತಿ ಇತ್ತು. ಜಿಲ್ಲೆಯ 117 ಗ್ರಾಮ ಪಂಚಾಯ್ತಿಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆದು, ಡಿ.30ರಂದು ಫಲಿತಾಂಶ ಪ್ರಕಟಗೊಂಡಿತು. ಹೀಗೆ ಹಲವು ಕಹಿನೆನಪು; ಕೆಲವೇ ಸಿಹಿ ನೆನಪುಗಳೊಂದಿಗೆ 2020ನೇ ವರ್ಷ ಕೊನೆಗೊಂಡಿತು.

2021 ವರ್ಷಾಚರಣೆಗೆ ಸಿದ್ಧತೆ

ಕಷ್ಟಗಳು ಹಲವಿದ್ದರೂ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಬೇಕು ಎಂಬ ಆಶಯದಿಂದ ಜಿಲ್ಲೆಯ ಜನತೆ ಡಿ.31ರಂದು ಭರ್ಜರಿ ಸಿದ್ಧತೆ ನಡೆಸಿದ್ದು ಕಂಡು ಬಂತು. ತಂಪು ಪಾನೀಯ, ಕೇಕ್‌, ಸಿಹಿ ತಿನಿಸುಗಳ ವ್ಯಾಪಾರ ಜೋರಾಗಿತ್ತು. ಚಿಕನ್‌, ಮಟನ್‌ ಮತ್ತು ಮದ್ಯಕ್ಕೂ ಬೇಡಿಕೆ ಹೆಚ್ಚಾಗಿತ್ತು. ಅನೇಕರು ಪ್ರವಾಸಿಗಳಿಗೆ ತೆರಳಿ ಹೊಸ ವರ್ಷ ಸ್ವಾಗತಿಸುವ ಯೋಜನೆ ರೂಪಿಸಿಕೊಂಡಿದ್ದರು.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ನಾಗರಾಜ ಎಸ್‌.ಹಣಗಿ, ಬಸವರಾಜ ಹಲಕುರ್ಕಿ, ಶ್ರೀಶೈಲ ಕುಂಬಾರ, ಕಾಶೀನಾಥ ಬಿಳಿಮಗ್ಗದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT